ಚಿತ್ತಾ ಮಳೆ ತಲೆ ಚಿಟ್ಟು ಹಿಡಿಸುತ್ತೆ…ಆದರೆ ಈ ಬಾರಿ ಚಿಂತೆಗೀಡುಮಾಡಿದೆ. ಇನ್ನೂ ಜಲಾಘಾತದ ಹೊಡೆದಿಂದ ನಡಲುಗಿದ ಗ್ರಾಮಸ್ಥರು ಮನೆ ರಿಪೇರಿ ಮಾಡಿಕೊಂಡು ತಮಗೆ ಸರ್ಕಾರದಿಂದ ಬರಬೇಕಾದ ಹಣವನ್ನು ಕಾಯುತ್ತ ಕುಳಿತಿದ್ದರು. ಈಗ ಮತ್ತೊಮ್ಮೆ ಜಲಾಘಾತ ಎದುರಾಗಿದೆ..
ಕಳೆದ ಮೂರು ನಾಲ್ಕು ದಿನಗಳಿಂದ ಸತತ ಮಳೆಯಿಂದ ಹಳೆಯ ಮನೆಗಳು ಬೀಳಲಾರಂಭಿಸಿದವು. ಸರ್ಕಾರಿ ಅಧಿಕಾರಿಗಳು ನವಿಲುತೀರ್ಥ ಡ್ಯಾಂ ನಿಂದ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತಾರೆ ಎಂದ ಕೂಡಲೇ ನದಿ ಪಾತ್ರದ ಜನರು ಗ್ರಾಮಗಳನ್ನು ತೊರೆಯಲು ಆರಂಭಿಸಿದರು. ಹೌದು ಈ ಬಾರಿ ಹೇಳುವ, ಡಂಗುರ ಸಾರುವ ಅವಶ್ಯಕತೆಯಿಲ್ಲ. ಅವರಿಗೆ ಅನುಭವ ಆಗಿಬಿಟ್ಟಿದೆ. ಇದರಿಂಧ ಬೆಳಗಾವಿ, ಧಾರವಾಡ ಹಾಗೂ ಗದಗ್ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ನೀರು ಹರಿದು ಬಂತು. ರಾಮದುರ್ಗ, ನಿಪ್ಪಾಣಿ, ಅಥಣಿ ಹಾಗೂ ಚಿಕ್ಕೋಡಿಗಳಲ್ಲಿ ಮಳೆಯಿಂದ ನದಿ ನೀರಿನ ಹರಿವು ಹೆಚ್ಚಾಗಿ ಗ್ರಾಮಗಳು ತೇಲಿಕೊಂಡು ಹೋದಂತೆ ಭಾಸವಾದವು.
ಬೆಳಗಾವಿ ಜಿಲ್ಲೆಯ ಕಿತ್ತೂರ ಹಾಗೂ ಬೈಲಹೊಂಗಲ ತಾಲೂಕುಗಳಲ್ಲಿ ಭಾನುವಾರ ಇಡೀ ದಿನ ಸುರಿದ ಮಳೆಯಿಂದ ಬೆಳಗಾವಿ ರಾಮದುರ್ಗ ಸಂಚಾರ ಸಂಪರ್ಕ ಕಡಿತಗೊಂಡಿತು. ಹಲವು ಸೇತುವೆಗಳು ಮುಳುಗಡೆಯಾದವು. ಅಥಣಿ ತಾಲೂಕಿನ ಕೊಕಟನೂರ ಯೆಲ್ಲಮ್ಮ ದೇವಸ್ಥಾನದಲ್ಲಿ ನೀರು ಆರೆಂಟು ಅಡಿಯಷ್ಟು ನಿಂತಿದ್ದು ಸುತ್ತ ಮುತ್ತ ಇದ್ದ ಸುಮಾರು 20 ಗೂಡಂಗಡಿಗಳು ತೇಲಿಕೊಂಡು ಹೋಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೋಮವಾರ ಬೆಳಿಗ್ಗೆ 26 ಗೇಟ್ ಗಳನ್ನು ತೆರೆಯಲಾಗಿದ್ದು 1.30 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ಜಲಾಶಯದ ಎತ್ತರ 519.60 ಮೀ. ಇದ್ದು 519.50 ನೀರು ಸಂಗ್ರಹವಾಗಿದೆ. ಹುಕ್ಕೇರಿ ತಾಲೂಕಿನ ಪಣಗುತ್ತಿ ಬಳಿ ರಸ್ತೆ ಕುಸಿತವಾಗಿತ್ತು ಬಸ್ ಒಂದು ರಸ್ತೆ ಕುಸಿತಕ್ಕೆ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯ ಧಾಮನೆ, ಯಳ್ಳುರು, ಕಾಕರತಿ, ಬಾಳೆಕುಂದ್ರಿ, ಕಂಗ್ರಾಳಿ ಮುಂತಾದ ಕಡೆಗೆ ಮುಂಗಾರ ಬೆಳೆಗಳೆಲ್ಲ ಜಲಾವೃತಗೊಂಡಿವೆ. ಅಳಿದುಳಿದ 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ, ಶೇಂಗಾ, ಭತ್ತ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳು ನಾಶವಾಗಿವೆ. ಈ ಬಾರಿ ಕೃಷಿಕರಿಗೆ ಮಳೆಯೂ ಕೈಕೊಟ್ಟಿದ್ದು, ಜಲಾಘಾತ ಭಾರೀ ನಷ್ಟ ಉಂಟು ಮಾಡಿತು ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಮಖಂಡಿ ಮುಧೋಳ ಭಾಗದಲ್ಲಿ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ. ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಮುಧೋಳ ನಗರದ ಮಂಟೂರು ರಸ್ತೆಯಲ್ಲಿರುವ ಕೋಳಿ ಫಾರ್ಮ್ ಒಂದರಲ್ಲೇ ಮೂರು ಸಾವಿರ ಕೋಳಿಗಳು ಸತ್ತಿವೆ.
ಹುಬ್ಬಳ್ಳಿ ಧಾರವಾಡದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವಳಿ ನಗರದ ಹಲವು ಮಾರ್ಗಗಳಲ್ಲಿ ಸಂಚಾರ ಬಂದ್ ಆಗಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಹಾಗೂ ಶಿಸುವಿನಹಳ್ಳಿ ನಡುವಿನ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ 10 ಜನ ಕಾರ್ಮಿಕರು ಹಳ್ಳದ ಮಧ್ಯೆ ಸಿಲುಕಿ ಹಾಕಿಕೊಂಡಿದ್ದರು. ಐದು ತಾಸಿನ ಕಾರ್ಯಾಚರಣೆ ನಂತರ ಅವರನ್ನು ರಕ್ಷಿಸಲಾಯಿತು.
ಹಾವೇರಿಯಲ್ಲಿ, ದೇವದುರ್ಗ, ಹಾಗೂ ರಾಮದುರ್ಗದಲ್ಲಿ ಜೀವ ಹಾನಿ:
ಹಾವೇರಿ ಜಿಲ್ಲೆಯ ಹಿರೇಕೆರೂರು ರಾಮನಕೆರೆಯಿಂದ ದುರ್ಗಾದೇವಿ ಕೆರೆಗೆ ಹರಿದು ಹೋಗುವ ಕಾಲುವೆಯಲ್ಲಿ ಸೈಯದ್ ರಾಣೆಬೆನ್ನೂರು (13) ಎಂಬ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಹಾವೇರಿಯ ತೆಂಗಿನಕಾಯಿ ವ್ಯಾಪಾರಸ್ಥ ಬಸವರಾಜ ಹತ್ತಿಮತ್ತೂರ (65) ಚರಂಡಿ ನೀರಿನಲ್ಲಿ ತೇಲಿಹೋಗಿದ್ದಾರೆ. ಹಾವೇರಿ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ಅಪರಿಚಿರತ ಶವವೊಂದು ತೇಲಿಬಂದಿದ್ದು, ಮುಖ ಗುರುತು ಸಿಗಲಾರದಷ್ಟು ಕೊಳೆತಿದೆ. ದೇವದುರ್ಗ ತಾಲೂಕಿನ ಚಿಂಚೋಳಿಯ ಸಂತೋಷ ದೇವೇಗೌಡ (16) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ರಂಕಲ್ಕೊಪ್ಪ ಗ್ರಾಮದ ಬಳಿ ಹಳ್ಳ ದಾಟಲು ಹೋಗಿ ಅಲ್ಲಾಭಕ್ಷ ಹುದ್ದಾರ (55) ಕೊಚ್ಚಿಹೋಗಿದ್ದಾರೆ.
ಇನ್ನು ಗದಗ್ ಜಿಲ್ಲೆಯ ನರಗುಂದ ತಾಲೂಕಿನ ಮಲಪ್ರಭೆ ಹರಿದು ಹಳ್ಳಕೊಳ್ಳಗಳು ಭರ್ತಿಯಾಗಿವೆ. ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನು ಎರಡನೆಯ ಬಾರಿ ಅಗೆಯಲಾಗಿದೆ. ರಸ್ತೆ ಅಗೆದರೆ ನೀರಿನ ಹರಿವು ಬೇರೆಡೆ ತಿರುಗಿ ಗ್ರಾಮ ಉಳಿಯುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ.
ಇನ್ನೂ ಮಳೆಯ ಜೊತೆಗೆ ಬೆಣ್ಣೆ ಹಳ್ಳವೂ ತುಂಬಿದ್ದು ಹೊಳೆಆಲೂರು, ಹೊಳೆಮಣ್ಣೂರು ಹಾಗೂ ಇನ್ನಿತರ ಗ್ರಾಮಗಳು ಜಲಾವೃತವಾಗಿವೆ. ಯಮನೂರು ಹಾಗೂ ಶಲವಡಿ ಸೇತುವೆಗಳು ತುಂಬಿದ್ದು ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ. ನರಗುಂದ ಹಾಗೂ ರೋಣ ನಡುವೆ ಸಂಪರ್ಕ ಕಡಿತಗೊಂಡಿದ್ದು ಈಗ ಜನರು 20 ಕಿಮಿ ಸುತ್ತು ಪ್ರಯಾಣಿಸಿ ಅಂದರೆ ನವಲಗುಂದದ ಮೂಲಕ ರೋಣ್ಕಕೆ ತೆರಳುತ್ತಿದ್ದಾರೆ. ಸೋಮವಾರ ಮುಂಜಾನೆ ಸುರಕೋಡ ಹಾಗೂ ಲಖಮಾಪುರ ಗ್ರಾಮಗಳು ಸಂಪರ್ಕ ಕಡಿದುಕೊಂಡವು. ನರಗುಂದದ ಹತ್ತಿ ಬನಹಟ್ಟಿ ಗ್ರಾಮದ ಸೇತುವೆ ಕಡಿದಹೋಗಿದ್ದು, ಸಾರಿಗೆ ಸಂಪರ್ಕ ಇಲ್ಲ. ಬೆಣ್ಣೆಹಳ್ಳ ಅಪಾಯ ಮಟ್ಟ ಮೀರಿ ಹರಿದಿರುವುದರಿಂದ ಯಾವಗಲ್ ಸೇತುವೆ ಮುಳುಗಡೆಯಾಗಿದೆ ರಸ್ತೆ ಯಾವುದು ಸೇತುವೆ ಯಾವುದು ಎಂಬುದೇ ತಿಳಿಯದಾಗಿದೆ.
ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪರಿಸರ ಸಚಿವರಾದ ಸಿ ಸಿ ಪಾಟೀಲರು ಹೇಳುವ ಪ್ರಕಾರ, “ಮಲಪ್ರಭಾ ಡ್ಯಾಂ ನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಟ್ಟಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮೂರನೆಯ ಬಾರಿಗೆ ಈ ರೀತಿ ಆಗಿದ್ದು ಜನರು ಹಾಗೂ ಜಾನುವಾರುಗಳನ್ನು ನದಿಯ ಹತ್ತಿರ ತೆಗೆದುಕೊಂಡು ಹೋಗಬಾರದು ಹಾಗೂ ಎಲ್ಲ ಅಧಿಕಾರಿಗಳು ಜನರ ಜೊತೆಗೆ ಹೃದಯವಂತಿಕೆ ಯಿಂದ ಸ್ಪಂದಿಸಿ ನೆರವಾಗಬೇಕೆಂದು ಸೂಚಿಸಿದ್ದೇನೆ”.
ದ್ಯಾಮಣ್ಣ ಮ್ಯಾಗಲಮನೆ, ಕೊಣ್ಣೂರಿನ ರೈತ ಹೇಳುವ ಹಾಗೆ, “ಇಲ್ಲಿ ಜನಪ್ರತಿನಿಧಿಗಳು ಬಂದು ಪರಿಹಾರದ ಬಗ್ಗೆ ಮಾತನಾಡುತ್ತಾರೆ. ಪರಿಹಾರ ತೆಗೆದುಕೊಂಡವರು ಯಾರೋ, ತ್ರಾಸ ಪಡುತ್ತಿರುವವರು ಯಾರೋ. ನಾನೊಬ್ಬ ಮುಳ್ಳು ಹೆಜ್ಜೆ ಕುಣಿತದ ಕಲಾವಿದ. ಈ ಕಲೆಯನ್ನು ದೆಹಲಿವರೆಗೂ ಹಬ್ಬಿಸಿದ ಕಲಾತಂಡದ ಸದಸ್ಯ. ನನ್ನ ಹೆಸರು ಸಂತ್ರಸ್ತರ ಪಟ್ಟಿಯ್ಲಲ್ಲೇ ಇಲ್ಲ. ಇದೇ ಗ್ರಾಮದಲ್ಲಿ ಹುಟ್ಟಿದವನು ನಾನು. ಇದೇ ಗ್ರಾಮದ ಪ್ರತಿಯೊಬ್ಬರ ಹೆಸರನ್ನು ಹೇಳುವವನು ನಾನು. ನನಗೇ ಈ ಗ್ರಾಮದವರಾ ಎಂದು ಕೇಳಿದರು. ಪರಿಹಾರವೇ ಬೇಡ ಎಂದು ಸುಮ್ಮನಾಗಿದ್ದೇನೆ. ಈಗ ಮೂರನೆಯ ಬಾರಿಗೆ ಪ್ರವಾಹ. ಬರಲಿ. ಬಂದ ಮೇಲೆ ಏನು ಮಾಡಲಾಗುವುದು, ಕೈಲಾದಷ್ಟು ಜನರಿಗೆ ಸಹಾಯ ಮಾಡುವುದು ಅಷ್ಟೇ”.
ಇನ್ನೂ ಐದು ದಿನ ಮಳೆಯಂತೆ!
ಈಗಾಗಲೇ ಜಲಾಘಾತದಿಂದ ತತ್ತರಿಸಿದ ಜನರಿಗೆ ಇನ್ನೊಂದು ಬೆಚ್ಚಿ ಬೀಳಿಸುವ ಸುದ್ದಿಯೆಂದರೆ ಮಳೆ ಇನ್ನೂ ಐದು ದಿನ ಹೀಗೆ ಇರುವುದಂತೆ. ಹೀಗೆಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದ್ದು ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್ ಹಾಗೂ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.