ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆ ಆಗುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಪರಿಣಾಮ ಹಾಸನ, ಮೈಸೂರು ಮತ್ತು ಬೆಂಗಳೂರು ಮಹಾನಗರಗಳನ್ನು ಸಂಪರ್ಕಿಸುವ ಮೂರು ಪ್ರಮುಖ ಘಾಟಿ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರಾಂತಕವಾಗಿದ್ದರೂ, ಶುಕ್ರವಾರ ಅಪರಾಹ್ನ ಉದನೆ-ಶಿರಾಡಿ ನಡುವೆ ರಸ್ತೆಗೆ ನೀರು ನುಗ್ಗಿದ ಪರಿಣಾಮ ವಾಹನ ಸಂಚಾರ ಸ್ಥಗಿತವಾಗಿದೆ. ಶಿರಾಡಿ ಗ್ರಾಮದಿಂದ 26 ಕಿ.ಮೀ. ಮೇಲೆ ಕಾಂಕ್ರೀಟ್ ರಸ್ತೆ ಮುಗಿದ ನಂತರ ಎತ್ತಿನಹಳ್ಳ ಎಂಬ ಸ್ಥಳದಲ್ಲಿ ಹೆದ್ದಾರಿಗೆ ಗುಡ್ಡ ಕುಸಿದು ಬಿದ್ದಿದೆ. ಬೃಹತ್ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದು, ಅದರೊಂದಿಗೆ ಮರಗಳು ಕೂಡಾ ರಸ್ತೆಗೆ ಬಿದ್ದಿವೆ.
ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿತವುಂಟಾಗಿ ಹೆದ್ದಾರಿಗೆ ಮಣ್ಣು ಜರಿದು ಬಿದ್ದು ಹೆದ್ದಾರಿ ತಡೆಯುಂಟಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೆದ್ದಾರಿಗೆ ಜರಿದು ಬಿದ್ದ ಮಣ್ಣನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಗುತ್ತಾ ಇದೆ. ಕಂಟ್ರೋಲ್ ರೂಂ ನಿಂದ ಆಗಲೇ ಶಿರಾಡಿ ಘಾಟಿಯಲ್ಲಿ ಸಂಚಾರ ಅಲ್ಪಕಾಲದ ಮಟ್ಟಿಗೆ ತಡೆಹಿಡಿಯಬೇಕು ಎನ್ನುವ ಆದೇಶ ಬಂದಿದೆ.
ಶುಕ್ರವಾರ ರಾತ್ರಿಯವರೆಗೂ ಮಣ್ಣಿನ ತೆರವು ಗೊಳಿಸುವ ಕಾರ್ಯ ಮುಂದುವರಿಯಲಿದೆ.
ಆಗಸ್ಟ್ 14ರ ತನಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಈ ಬಾರಿಯ ಮಳೆಯಲ್ಲಿ ಮೊದಲ ಬಾರಿಗೆ ಶಿರಾಡಿ ಘಾಟಿಯಲ್ಲಿ ಆಗಸ್ಟ್ 12ರ ತನಕ ವಾಹನ ಸಂಚಾರ ನಿಷೇಧಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತದಿಂದ ವಾಹನ ಸಂಚಾರ ಅಡಚಣೆ ಆಗಿತ್ತು.
ಬೆಂಗಳೂರು ಸಂಪರ್ಕಿಸುವ ಮತ್ತೊಂದು ಹೆದ್ದಾರಿ ಚಾರ್ಮಾಡಿ -ಕೊಟ್ಟಿಗೆಹಾರ ರಸ್ತೆ ಒಂದು ವಾರದಿಂದ ಬಂದ್ ಆಗಿದೆ. ಮಂಗಳೂರಿನಿಂದ ಮಡಿಕೇರಿ ಮೈಸೂರು ಮೂಲಕ ಬೆಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕೂಡ ವಾಹನ ಸಂಚಾರ ಅಡಚಣೆಯಾಗಿದೆ. ಕಳೆದ ವರ್ಷ ಸುಳ್ಯ ಮಡಿಕೇರಿ ನಡುವೆ ಸಂಪಾಜೆ ಸಮೀಪ ಭಾರಿ ಪ್ರಮಾಣದ ಭೂಕುಸಿತದಿಂದ ಮೂರು ವಾರಗಳ ಕಾಲ ವಾಹನ ಸಂಚಾರ ನಿಲುಗಡೆ ಆಗಿತ್ತು.


ಶಿವಮೊಗ್ಗ ಮೂಲಕ ಬಯಲುಸೀಮೆ ಮತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಸಂಪರ್ಕ ರಸ್ತೆ ಚಾರ್ಮಾಡಿಯಲ್ಲಿ ಅಗಲ ಕಿರಿದಾಗಿರುವುದರಿಂದ ಪರಿಹಾರ ಕಾರ್ಯ ವಿಳಂಬ ಆಗುತ್ತದೆ. ಅಪಾಯಕಾರಿ ತಿರುವುಗಳಿರುವ ಚಾರ್ಮಾಡಿ ಘಾಟಿಯಲ್ಲಿ ತುರ್ತು ಕೆಲಸಗಳು ನಡೆದಿವೆ.
ರಾಜಧಾನಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಮೂರು ಘಾಟಿ ರಸ್ತೆಗಳು ಬಂದ್ ಆಗಿರುವುದರಿಂದ ಜನಸಂಚಾರ ಮತ್ತು ವ್ಯಾಪಾರ ವಹಿವಾಟಿಗೆ ಹಿನ್ನಡೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 9ರ ಬೆಳಗ್ಗಿನ ತನಕ ಒಂದೇ ದಿನ 69 ಎಂಎಂ ಮಳೆಯಾಗಿದೆ. ಕಳೆದ ಎಂಟು ದಿವಸಗಳಲ್ಲಿ 500 ಎಂಎಂ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 233ಎಂಎಂ ಮಳೆ ಸುರಿದಿದ್ದರೆ, ಆಗಸ್ಟ್ ತಿಂಗಳ ಸರಾಸರಿ 856 ಎಂಎಂ ಆಗಿತ್ತು.
ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಕೆಂಪುಹೊಳೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿದ್ದು, ಉದನೆ ಪೇಟೆಯಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ನದಿ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ.
ಇನ್ನೊಂದೆಡೆ, ಚಾರ್ಮಾಡಿ ತಪ್ಪಲಿನ ಸಮೀಪದ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಮನೆ, ಕೃಷಿ ತೋಟಗಳು ಜಲಾವೃತವಾಗಿದೆ. ಅರೆಮಲೆನಾಡು ಸುಳ್ಯ ಮತ್ತು ಬೆಳ್ತಂಗಡಿ ಪ್ರದೇಶದಲ್ಲಿಯೂ ಅತಿ ಹೆಚ್ಚಿನ ಮಳೆ ಆಗುತ್ತಿದೆ.
ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ , ಸರಕಾರಿ , ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ , ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಶನಿವಾರವೂ ರಜೆಯನ್ನು ವಿಸ್ತರಿಸಲಾಗಿದೆ. ನಿರಂತರವಾಗಿ ಮೂರನೇ ದಿನ ಕರಾವಳಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇದೇ ಮೊದಲ ಬಾರಿಗೆ ರಜೆ ನೀಡಲಾಗುತ್ತಿದೆ. ಭಾನುವಾರ ವಾರದ ರಜೆ ಆಗಿದ್ದು, ಸೋಮವಾರ ಬಕ್ರೀದ್ ಇರುವುದರಿಂದ ನಿರಂತರ ಐದು ದಿನ ರಜೆ ದೊರೆದಂತಾಗಿದೆ. ಪುತ್ತೂರು ಉಪವಿಭಾಗದ ಶಾಲಾ ಕಾಲೇಜುಗಳಿಗೆ ಒಂದು ದಿನ ಮೊದಲೇ ರಜೆ ನೀಡಲಾಗಿತ್ತು. ನೀರು ಇರುವ ತಗ್ಗು ಪ್ರದೇಶ, ಕೆರೆ ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪೋಷಕರು ಜಾಗ್ರತೆ ವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚಿಸಿದ್ದಾರೆ.