ಅದಿರು ಸಾಗಾಣಿಕೆಗೆ conveyer belt ನಿರ್ಮಿಸುವಾಗ ಜಿಂದಾಲ್ ಕಂಪನಿ ರೈತರ 6.25 sq ft ಕೃಷಿ ಜಮೀನು ಬಳಕೆಗೆ ರೂ 2.5 ಲಕ್ಷ ಪರಿಹಾರ ನೀಡಿದೆ. ಅಂದರೆ ಒಂದು ಚದರ ಅಡಿಗೆ ರೂ 40,000. ಆದರೆ, ಜಿಂದಾಲ್ ಕಂಪನಿಗೆ ತನ್ನ ಭೂಮಿ ಮಾರುವಾಗ ಸರ್ಕಾರ ಒಂದು ಚದರ ಅಡಿಗೆ ರೂ 2.80-4 ಉದಾರ ಬೆಲೆಯಲ್ಲಿ ಮಾರುತ್ತಿದೆ.
ಜಿಂದಾಲ್ ಕಂಪನಿಗೆ 3,666 ಎಕರೆ ಭೂಮಿ ಮಾರುವ ಬೆಲೆಯಲ್ಲಿಯೇ ನಮಗೂ ಜಮೀನು ನೀಡಿ ಎಂದು ಕಬ್ಬು ಬೆಳಗಾರರ ಸಂಘ ಹೇಳಿರುವುದು ಸೂಕ್ತವಾಗಿಯೇ ಇದೆ. ಕೆಲವು ದಿನಗಳ ಹಿಂದೆ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಿ, ರಾಜ್ಯದ ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಒಂದು ಗುಂಟೆ ಜಮೀನು ಕೊಡಲು ಸರ್ಕಾರ ಹಿಂದೆ ಮುಂದೆ ನೋಡುತ್ತದೆ. ಆದರೆ, ಜಿಂದಲ್ ಕಂಪೆನಿಗೆ ಧಾರಾಳವಾಗಿ ಜಮೀನು ಮಾರಲು ಮುಂದಾಗಿದೆ ಎಂದು ಹೇಳಿದ್ದರು.
ಜಿಂದಾಲ್ ಕಂಪನಿಗೆ 3,666 ಎಕರೆ ಭೂಮಿ ಮಾರುವ ಸಂಬಂಧ ಸರ್ಕಾರ ನಿಗದಿಗೊಳಿಸಿರುವ ಬೆಲೆಯ ಬಗ್ಗೆ ಹಾಗೂ ಈ ವಿವಾದದ ಇನ್ನಿತರ ವಿವಾದಗಳ ಬಗ್ಗೆ ಪ್ರತಿಧ್ವನಿ ಹಲವಾರು ವರದಿಗಳನ್ನು ಮಾಡಿದೆ. ಕಬ್ಬು ಬೆಳೆಗಾರರ ಈ ಸಹಜ ಒತ್ತಾಯದ ಹಿನ್ನೆಲೆಯಲ್ಲಿ ಇನ್ನೊಂದು ಬೆಳವಣಿಗೆ ಸರ್ಕಾರದ ನಿರ್ಧಾರವನ್ನು ಮತ್ತೆ ಪ್ರಶ್ನಿಸುವಂತಿದೆ. ಅದೇನೆಂದರೆ, ಜಿಂದಲ್ ಕಂಪೆನಿ ತಾನು ನಿರ್ಮಿಸಿರುವ conveyer belt ಪಿಲ್ಲರ್‌ಗೆ ಬಳಸುವ ಭೂಮಿಗೆ ನೀಡಿರುವ ಪರಿಹಾರ.
ಪರಿಸರ ಹಾನಿ ತಡೆಯುವ ದೃಷ್ಟಿಯಿಂದ ಗಣಿಗಾರಿಕೆ ಸ್ಥಳದಿಂದ ಸ್ಟೀಲ್ ಪ್ಲಾಂಟ್ ಗೆ ಕಡ್ಡಾಯವಾಗಿ conveyer belt ಬಳಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ, ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಅತಿ ಶೀಘ್ರವಾಗಿ conveyer belt ನಿರ್ಮಿಸುವಂತೆ ನಿರ್ದೇಶನ ನೀಡಿತ್ತು. 2017ರಲ್ಲಿ conveyer belt ನಿರ್ಮಾಣ ಆರಂಭಿಸಿದ ಜಿಂದಲ್ ಈ ಬಗ್ಗೆ 2.5X2.5 ft ನ 800 ಪಿಲ್ಲರ್ ಗಳ ನಿರ್ಮಾಣ ಕಾರ್ಯ ಆರಂಭಿಸಿತು. ಈ ಪಿಲ್ಲರ್ ಗಳು ನಂದಿಹಳ್ಳಿ ಯಾರ್ಡ್ ನಿಂದ ಜಿಂದಲ್ ಪ್ಲಾಂಟ್ ಗೆ 24 ಕಿ.ಮಿ ವರೆಗೆ ನಿರ್ಮಾಣವಾಗಿವೆ.

ಸಂಡೂರು ತಾಲೂಕಿನ 5 ಗ್ರಾಮಗಳ ಕೃಷಿ ಜಮೀನಿನಲ್ಲಿ (ನಂದಿಹಳ್ಳಿ, ಭುಜಂಗನಗರ, ಸಂಡೂರು, ತಾರಾನಗರ, ಬನ್ನಿಹಟ್ಟಿ ಮತ್ತು ಗಂಗಲಾಪುರ) ಹಾದು ಹೋಗಿರುವ ಈ ಪಿಲ್ಲರ್ ಗಳಿಗಾಗಿ ಜಿಂದಲ್ ಕಂಪೆನಿ ರೈತರಿಗೆ ರೂ. 2.50 ಲಕ್ಷ ಪರಿಹಾರ ನೀಡಿದೆ. ಈ ಬಗ್ಗೆ ಪ್ರತಿಧ್ವನಿ ಕೆಲವು ರೈತರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, “ಗಣಿಗಾರಿಕೆ ಆರಂಭವಾದಾಗಿನಿಂದ ಕೃಷಿ ಮಾಡುವುದೇ ಒಂದು ಗೋಳಾಗಿತ್ತು. ನಿತ್ಯ ಧೂಳು ತುಂಬಿದ ಲಾರಿಗಳು ಸಂಚರಿಸಿದರೆ ಕೃಷಿ ಹೇಗೆ ಸಾಧ್ಯ. ಅಷ್ಟರಲ್ಲಿ ಈ conveyer belt ನಿರ್ಮಾಣ ಆರಂಭಗೊಂಡಾಗ ನಾವು ಒಪ್ಪಿಗೆ ಸೂಚಿಸಿದೆವು. ಜಿಂದಲ್ ಕಂಪೆನಿಯ ಅಗ್ರೀಮೆಂಟ್ ನಲ್ಲಿ ಹಣದ ಉಲ್ಲೇಖವಿಲ್ಲ. ಆದರೆ, ಪರಿಹಾರ ಚೆಕ್ ಮೂಲಕವೇ ಕೊಡಲಾಗಿದೆ,’’ ಎಂದು ಅವರು ಹೇಳಿದರು.
ಜಿಂದಾಲ್ ಕಂಪನಿ ರೈತರ 6.25 sq ft ಕೃಷಿ ಜಮೀನು ಬಳಕೆಗೆ (2.5X2.5 ft ನ ಒಂದು ಪಿಲ್ಲರ್) ರೂ 2.5 ಲಕ್ಷ ಪರಿಹಾರ ನೀಡಿದೆ. ಈ ಲೆಕ್ಕಾಚಾರದಲ್ಲಿ ಜಿಂದಲ್ ಪಾವತಿಸಿರುವುದು ಒಂದು ಚದರ ಅಡಿಗೆ ರೂ 40,000. ಆದರೆ, ಜಿಂದಲ್ ಕಂಪೆನಿಗೆ ಸರ್ಕಾರ ಭೂಮಿ ಮಾರುವಾಗ ಒಂದು ಚದರ ಅಡಿಗೆ ರೂ 2.80 – ರೂ 4 ಉದಾರ ಬೆಲೆಯಲ್ಲಿ ಮಾರುತ್ತಿದೆ.
ಕೆಲವು ಕೃಷಿ ಭೂಮಿಯಲ್ಲಿ ಜಿಂದಾಲ್‌ನ conveyer belt ನ ಒಂದಕ್ಕೂ ಹೆಚ್ಚಿನ ಪಿಲ್ಲರ್ ಹಾದುಹೋಗಿದೆ. ಕೆಲವು ರೈತರು ಜಿಂದಾಲ್‌ನ conveyer belt ಪಿಲ್ಲರ್ ನಿರ್ಮಾಣಕ್ಕೆ ಸಹಕಾರ ನೀಡದೇ ಇದ್ದ ಪ್ರಕರಣವೂ ನಡೆದಿತ್ತು. ನಂತರ, ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳ ನೆರವು ಪಡೆದ ಜಿಂದಲ್ ಕಾಮಗಾರಿಯನ್ನು ಮುಂದುವರಿಸಿತ್ತು.
ಜಿಂದಾಲ್‌ಗೆ ಶುದ್ಧ ಕ್ರಯಪತ್ರ ನೀಡಲು ಉದ್ದೇಶಿಸಿರುವ ಭೂಮಿ ಬಳ್ಳಾರಿ ತಾಲೂಕಿನ ಸಂಡೂರು ತಾಲೂಕಿನ ತೋರಣಗಲ್ಲು, ಕುರೇಕುಪ್ಪ, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿದೆ. ಈ ಪೈಕಿ ತೋರಣಗಲ್ಲು, ಕುರೇಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಭೂಮಿಯನ್ನು ಸರ್ಕಾರ ಒಂದು ಎಕರೆಗೆ ರೂ 1.22 ಲಕ್ಷ ಹಾಗೂ ಸಂಡೂರು ತಾಲೂಕಿನ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳ 1666.73 ಎಕರೆ ಭೂಮಿಯನ್ನು ಎಕರೆಯೊಂದಕ್ಕೆ ರೂ 1.50 ಲಕ್ಷಕ್ಕೆ ಮಾರಲು ನಿರ್ಧರಿಸಿದೆ.