ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ರಾಜಿನಾಮೆ ಪ್ರಕರಣವು ನಿದ್ದೆಗೆ ಜಾರಿದ್ದ ಚರ್ಚೆಯೊಂದನ್ನು ಬಡಿದೆಬ್ಬಿಸಿದೆ. ಮನಸ್ಸಿಗೆ ಬಂದಂತೆ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಜೊತೆ ಏಗಲಾರದೆ ತಜ್ಞರೆಲ್ಲ ರಾಜಿನಾಮೆ ಕೊಡುತ್ತಿದ್ದಾರೆ ಎಂಬ ಆರೋಪಕ್ಕೆ ವಿರಲ್ ಪ್ರಸಂಗ ಪುಷ್ಟಿ ನೀಡುವಂತಿದೆ. ತಮ್ಮ ರಾಜಿನಾಮೆಗೆ ‘ವೈಯಕ್ತಿಕ ಕಾರಣ’ ಎಂಬ ಸಹಜ ಸ್ಲೋಗನ್ ಅನ್ನು ವಿರಲ್ ಹಿಡಿದಿದ್ದಾರಾದರೂ, ಆರ್‌ಬಿಐ ರೆಪೋ ದರ ನಿಗದಿ ವಿಷಯದಲ್ಲಿನ ಭಿನ್ನಾಭಿಪ್ರಾಯವೇ ನೈಜ ಕಾರಣ ಎಂಬುದು ಆರ್‌ಬಿಐ ಒಳಗಿನ ಬೆಳವಣಿಗೆಗಳನ್ನು ಬಲ್ಲವರ ಮಾತು.
ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಾಕ್ಷಣ ಪ್ರಮಾಣವಚನಕ್ಕಿಂತ ಮೊದಲೇ ಯೋಚಿಸುವ ಮೊದಲ ಕೆಲಸವೆಂದರೆ, ಯಾವ್ಯಾವ ಅಧಿಕಾರಿಗಳನ್ನು ತಮ್ಮ ಸುತ್ತಮುತ್ತ ಇಟ್ಟುಕೊಳ್ಳಬೇಕೆಂಬುದು. 2014ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅದೇ ರೀತಿ ಯೋಚಿಸಿತ್ತು. ಆದರೆ, ಅದಕ್ಕೂ ಒಂದಷ್ಟು ಹೆಜ್ಜೆ ಮುಂದೆ ಹೋಗಿ, ಆರ್‌ಬಿಐ ಅನ್ನು ತನ್ನ ಆರ್ಥಿಕ ನಿರ್ಧಾರಗಳನ್ನು ಅನುಮೋದಿಸುವ ಸಂಸ್ಥೆಯನ್ನಾಗಿ ಮಾಡಿಕೊಂಡಿತು ಎಂಬುದು ಸ್ವತಃ ಎನ್‌ಡಿಎ ಸರ್ಕಾರ ನೇಮಿಸಿದ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜಿನಾಮೆ ಭಾಷಣದ ತಾತ್ಪರ್ಯ.
ಒಂದು ಕಾಲದಲ್ಲಿ ರಿಲಯನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಒಂದು ಆರೋಪದ ಪ್ರಕಾರ ಗವರ್ನರ್ ಆದ ನಂತರವೂ ರಿಲಯನ್ಸ್ ಸಂಸ್ಥೆಯ ಅಧಿಕಾರಿಯಂತೆಯೇ ಕೆಲಸ ಮಾಡಿದ ಊರ್ಜಿತ್, ಡಿಮಾನಿಟೈಸೇಷನ್ ಘೋಷಣೆ ಮತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ದಿನದ ನಡುವಿನ ಅವಧಿಯಲ್ಲಿ ಅಕ್ಷರಶಃ ನಾಪತ್ತೆ ಆಗಿದ್ದರು. ಆರ್‌ಬಿಐ ರೆಪೋ ದರ ಕಡಿತ ಮಾಡಿದಾಗಲೊಮ್ಮೆ ಮಾಧ್ಯಮಗಳ ಎದುರು ಕಾಣಿಸಿಕೊಂಡು, ಡಿಮಾನಿಟೈಸೇಷನ್ ಕುರಿತ ಪ್ರಶ್ನೆಗಳಿಗೆ ಉತ್ತರಿಸದೆ ಹೊರನಡೆದಿದ್ದ ಅವರು, ಕೊನೆಗೆ ರಾಜಿನಾಮೆ ನೀಡುವ ಮುನ್ನ, “ಆರ್‌ಬಿಐ ಸ್ವಾಯತ್ತತೆ ವಿಷಯದಲ್ಲಿ ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದು ಖಡಾಖಂಡಿತವಾಗಿ ಹೇಳಿದ್ದರು. ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರೊಡನೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿ ಕುರಿತ ಬಿಸಿಬಿಸಿ ಮಾತುಕತೆಯ ನಂತರವೇ ಊರ್ಜಿತ್ ಈ ಮಾತು ಹೇಳಿದ್ದರು ಮತ್ತು ತಮ್ಮ ಅವಧಿ ಇನ್ನೂ 9 ತಿಂಗಳು ಇರುವಂತೆಯೇ ರಾಜಿನಾಮೆ ನೀಡಿ ಎದ್ದುಹೋಗಿದ್ದರು. ಆರ್‌ಬಿಐ ಸ್ವಾಯತ್ತತೆಗೆ ಭಂಗ ತರುವುದು ಎಂದರೆ, ಆರ್‌ಬಿಐ ನಿರ್ಧರಿಸಬೇಕಾದ ವಿಷಯಗಳನ್ನು ಆ ಸಂಸ್ಥೆಯ ಗಮನಕ್ಕೆ ತಾರದೆ ಅಥವಾ ಸಂಸ್ಥೆಯ ಅಭಿಪ್ರಾಯಗಳಿಗೆ ಮನ್ನಣೆ ಕೊಡದೆ ಕೇಂದ್ರ ಸರ್ಕಾರವೇ ನಿರ್ಧರಿಸುವುದು ಎಂದರ್ಥ.
ಸರ್ಕಾರದೊಂದಿಗೆ ಯಾವಾಗಲೂ ಅಂತರ ಕಾಯ್ದುಕೊಂಡು, ದೇಶದ ಆರ್ಥಿಕ ವಿಷಯಗಳಲ್ಲಿ ಖಡಕ್ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರನ್ನು ಎರಡನೇ ಅವಧಿಗೆ ಮುಂದಿವರಿಸದೆ ಇದ್ದಾಗಲೇ ಮೋದಿ ಸರ್ಕಾರ ಆರ್ಥಿಕ ವಿಷಯಗಳಲ್ಲಿ ಸ್ವಂತ ನಿರ್ಧಾರಗಳನ್ನೇ ಜಾರಿಗೆ ತರಲಿದೆ ಎಂಬ ಸೂಚನೆ ಸಿಕ್ಕಿತ್ತು. ಅದಕ್ಕೆ ತಕ್ಕಂತೆ ಡಿಮಾನಿಟೈಸೇಷನ್ ಘೋಷಣೆ ಹೊರಬಿದ್ದಿತ್ತು. ನಂತರದಲ್ಲಿ ಭಿನ್ನಾಭಿಪ್ರಾಯಗಳ ಹಗ್ಗಜಗ್ಗಾಟಕ್ಕೆ ಸಿಕ್ಕಿದ್ದ ಜಿಎಸ್‌ಟಿ ನಿರ್ಧಾರ ಹೊರಬಿದ್ದಿತು. ರೆಪೋ ದರ ಕಡಿತ ವಿಷಯ ಕೂಡ ಆರ್‌ಬಿಐ ಹೇಳಿದಂತೆ ನಡೆಯಲಿಲ್ಲ ಎಂಬುದು ಊರ್ಜಿತ್ ಪಟೇಲ್ ಅಸಮಾಧಾನಕ್ಕೆ ಒಂದು ಕಾರಣವಾಗಿತ್ತು. ಎರಡನೇ ಅವಧಿಗೆ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬಂದಾಗ, ಆರ್ಥಿಕ ತಜ್ಞರ ಅಭಿಪ್ರಾಯಗಳಿಗೆ ಸರ್ಕಾರ ಬೆಲೆ ಕೊಡಬೇಕೆಂಬ ಒತ್ತಾಯ ಕೇಳಿಬಂದಿದ್ದು ಇವೇ ಕಾರಣಗಳಿಗೆ.
ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ ಪನಗರಿಯಾ ತಮ್ಮ ಅವಧಿ ಮುಕ್ತಾಯಕ್ಕೆ ಆರು ತಿಂಗಳು ಇದ್ದಾಗಲೇ ರಾಜಿನಾಮೆ ನೀಡಿದ್ದರು. ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ರಜೆ ವಿಸ್ತರಣೆ ಆಗದ ಕಾರಣ ಹುದ್ದೆಯಲ್ಲಿ ಮುಂದುವರಿಯಲು ಆಗುತ್ತಿಲ್ಲ ಎಂಬ ಕಾರಣ ನೀಡಿದರು. ಆದರೆ, ಅಸಲಿ ಕಾರಣ ಬೇರೆಯೇ ಇದೆ ಎಂಬ ಗಾಳಿಮಾತು ತೇಲಿದ್ದವು. ನಂತರದಲ್ಲಿ ರಾಜಿನಾಮೆ ನೀಡಿ ಚರ್ಚೆ ಹುಟ್ಟುಹಾಕಿದವರು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್. ಸುಮಾರು ಹನ್ನೊಂದು ತಿಂಗಳ ಅಧಿಕಾರಾವಧಿ ಬಾಕಿ ಇದ್ದಾಗಲೇ ‘ವೈಯಕ್ತಿಕ ಕಾರಣ’ ಮುಂದೊಡ್ಡಿ ರಾಜಿನಾಮೆ ನೀಡಿದ್ದರು. ಹಾಗೆಯೇ, ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯಲ್ಲಿ ಅರೆಕಾಲಿಕ ಸದಸ್ಯರಾಗಿದ್ದ ಅರ್ಜಿತ್ ಭಲ್ಲಾ ಕೂಡ ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಾಜಿನಾಮೆ ನೀಡಿ ಹೊರನಡೆದಿದ್ದರು. ಊರ್ಜಿತ್ ಪಟೇಲ್ ರಾಜಿನಾಮೆ ನೀಡಿದ್ದು ಇದೇ ಹೊತ್ತಿಗೆ. ಈಗ ಆರ್‌ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಸರದಿ.
ವಿರಲ್ ಆಚಾರ್ಯ ರಾಜಿನಾಮೆ ಲೋಕಸಭೆಯಲ್ಲೂ ಪ್ರತಿಧ್ವನಿಸಿ ಈ ಚರ್ಚೆ ಕಾವೇರುವಂತೆ ಮಾಡಿದೆ. ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಈ ವಿಷಯವನ್ನು ಕೇರಳ ಕಾಂಗ್ರೆಸ್ ಸಂಸದ ಸಿ ಥಾಮಸ್ ಪ್ರಸ್ತಾಪಿಸಿದ್ದಾರೆ. “ನಿಜವಾದ ಅರ್ಥಶಾಸ್ತ್ರಜ್ಞರು ಯಾರೂ ಈ ಸರ್ಕಾರದೊಂದಿಗೆ ಕೆಲಸ ಮಾಡಲು ಬಯಸುತ್ತಿಲ್ಲ. ಏಕೆಂದರೆ, ಸರ್ಕಾರಕ್ಕೆ ಜನರ ಬಗೆಗೆ ಕಾಳಜಿ ಇರುವ ಆರ್ಥಿಕ ನೀತಿಗಳಲ್ಲಿ ನಂಬಿಕೆ ಇಲ್ಲ,” ಎಂದು ಅವರು ಆರೋಪಿಸಿದ್ದಾರೆ (ಜೂ.25).
ಸ್ವಾರಸ್ಯವೆಂದರೆ, ಜೂನ್ ತಿಂಗಳ ಆರ್ಥಿಕ ನೀತಿಯ ಹೇಳಿಕೆಯಲ್ಲಿ ಪ್ರಖ್ಯಾತ ಬರಹಗಾರ ಅರ್ನೆಸ್ಟ್ ಹೆಮಿಂಗ್ವೆಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ಪುಸ್ತಕದ ಮಾತನ್ನು ಉಲ್ಲೇಖಿಸಿ ಗಮನ ಸೆಳೆದಿದ್ದರು. ಇನ್ನು, ನೂತನ ಹಣಕಾಸು ಸಚವೆ ನಿರ್ಮನಾ ಸೀತಾರಾಮನ್ ಅವರಿಗೆ ಪರೋಕ್ಷವಾಗಿ ಒಂದು ಸಲಹೆಯನ್ನೂ ವಿರಲ್ ನೀಡಿದ್ದರು: “ಮುಂದಿನ ವರ್ಷ (2020) ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಡುವ ಕಾರಣ ಇತರ ಕ್ಷೇತ್ರಗಳಲ್ಲಿನ ವೆಚ್ಚವನ್ನು ಆದಷ್ಟು ತಗ್ಗಿಸಿ, ಕೃಷಿ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಬೇಕು.”
ಕಳೆದ ಅವಧಿಯ ಎನ್‌ಡಿಎ ಸರ್ಕಾರದ ಆರ್ಥಿಕ ವಿಷಯಗಳ ಕುರಿತ ಬಹುತೇಕ ಎಲ್ಲ ಸಭೆಗಳಲ್ಲೂ ವಿರಲ್ ಆಚಾರ್ಯ ತಮ್ಮ ಖಡಕ್ ಅಭಿಪ್ರಾಯಗಳಿಂದ ಗಮನ ಸೆಳೆದಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ವಿರಲ್ ಅವರ ಅಧಿಕಾರಾವಧಿ 2020ರ ಜನವರಿ 20ರವರೆಗೆ ಇತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ನಡುವೆ ಬಿರುಸಿನ ವಾಗ್ವಾದ ನಡೆಯುತ್ತಿದ್ದಾಗ ವಿರಲ್ ಅವರು ಊರ್ಜಿತ್ ಪರ ನಿಂತಿದ್ದರು. ಹಾಗಾಗಿಯೇ, ಊರ್ಜಿತ್ ರಾಜಿನಾಮೆ ನೀಡಿದಾಗಲೇ ವಿರಲ್ ಕೂಡ ಹೊರನಡೆಯುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಈಗ ರಾಜಿನಾಮೆ ನೀಡಿರುವ ವಿರಲ್, ‘ವೈಯಕ್ತಿಕ ಕಾರಣ’ ಎಂದು ಹೇಳಿದ್ದು, ನೈಜ ಕಾರಣವನ್ನು ಊಹಿಸಿಕೊಳ್ಳುವ ಕೆಲಸವನ್ನು ಜನತೆಗೆ ಬಿಟ್ಟಿದ್ದಾರೆ.
ಅಸಲಿಗೆ, ವಿರಲ್ ಅವರು ಆರಂಭಕ್ಕೆ ಹೆಚ್ಚು ಜನಕ್ಕೆ ಗೊತ್ತಿರದ ‘ಲೋ ಪ್ರೊಪೈಲ್ ಡೆಪ್ಯುಟಿ ಗವರ್ನರ್’ ಎಂದು ಕರೆಸಿಕೊಂಡವರು. ಆದರೆ ಅವರು ಹೊರನಡೆಯುವಾಗ ಅಂಥದ್ದೊಂದು ಇಮೇಜ್ ಖಂಡಿತ ಕಳಚಿ ಬಿದ್ದಿದೆ. ವಿರಲ್ ಅವರು ಆರ್‌ಬಿಐನಲ್ಲಿ ಮಾನಿಟರಿ ಪಾಲಿಸಿಯ ಜವಾಬ್ದಾರಿ ಹೊತ್ತಿದ್ದವರು. ಸಾಂಪ್ರದಾಯಿಕ ರೀತಿಯಲ್ಲೇ ಅದನ್ನು ನಿಭಾಯಿಸಬೇಕೆಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಊರ್ಜಿತ್ ಪಟೇಲರಂತೆ ಎಲ್ಲದಕ್ಕೂ ಮೌನ ವಹಿಸದ ವಿರಲ್, ಖಚಿತ ತೀರ್ಮಾನಗಳಿಂದ ಸರ್ಕಾರಕ್ಕೆ ತಲೆನೋವಾಗಿದ್ದರು ಎಂಬುದು ಸ್ಪಷ್ಟ. ಇದೀಗ ಅವರ ನಿರ್ಗಮನದಿಂದಾಗಿ ಆರ್‌ಬಿಐನ ರೆಪೋ ದರ ಕಡಿತ ಮತ್ತಿತರ ಆರ್ಥಿಕ ನಿರ್ಧಾರಗಳನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸುವಂಥವರು ಯಾರೂ ಇಲ್ಲದಂತಾಗಿದೆ.