ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದರಲ್ಲೂ ಗ್ರಾಮೀಣ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2013-14ರಲ್ಲಿ ಗ್ರಾಮೀಣ ಭಾರತದ ನಿರುದ್ಯೋಗದ ಪ್ರಮಾಣ ಶೇ.2.9 ರಷ್ಟಿದ್ದರೆ, 2017-18ರ ವೇಳೆಗೆ ಈ ಪ್ರಮಾಣ ಬಹುತೇಕ ದ್ವಿಗುಣವಾಗಿದೆ. ಅಂದರೆ, ಶೇ.5.3 ರಷ್ಟು ಗ್ರಾಮೀಣ ಭಾರತೀಯರು ನಿರುದ್ಯೋಗಿಗಳಾಗಿದ್ದಾರೆ.
ಇನ್ನು ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚಾಗಿದೆ. ನಗರ ಪ್ರದೇಶದ ಪುರುಷ ನಿರುದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. 2015-16 ನೇ ಹಣಕಾಸು ವರ್ಷದಲ್ಲಿ ಪುರುಷ ನಿರುದ್ಯೋಗಿಗಳು ಶೇ. 3 ರಷ್ಟಿದ್ದರೆ ಅದರ ಮುಂದಿನ ವರ್ಷ ಅಂದರೆ 2017-18 ನೇ ಸಾಲಿನಲ್ಲಿ ಶೇ.6.9 ರಷ್ಟಿದ್ದಾರೆ. ಈ ಆಘಾತಕಾರಿ ಅಂಕಿಅಂಶಗಳನ್ನು ಸ್ವತಃ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದೆ.
ಒಂದು ಕಡೆ ಆರ್ಥಿಕ ಹಿಂಜರಿಕೆ ಮತ್ತೊಂದು ಕಡೆ ನಿರುದ್ಯೋಗ ಸಮಸ್ಯೆಗಳು ದೇಶದ ಪ್ರಗತಿಗೆ ಮಾರಕವಾಗುತ್ತಿವೆ. ಪ್ರಸಕ್ತ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಶೇ.4.9ರಷ್ಟಿದ್ದ ನಿರುದ್ಯೋಗ ಪ್ರಮಾಣ ಇದೀಗ ಶೇ.7.7 ರಷ್ಟಕ್ಕೆ ಏರಿಕೆಯಾಗಿದೆ.
ಈ ನಿರುದ್ಯೋಗದ ಬಗ್ಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು 2017-18 ನೇ ಸಾಲಿನಲ್ಲಿ ನಡೆಸಿರುವ ಪೀರಿಯಾಡಿಕ್ ಫೋರ್ಸ್ ಸರ್ವೆ (ಪಿಎಲ್ಎಫ್ಎಸ್) ಮತ್ತು ಕಾರ್ಮಿಕ ಬ್ಯೂರೋ ನಡೆಸಿರುವ ವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಗಳು ಈ ಅಂಕಿಅಂಶಗಳನ್ನು ಹೊರಹಾಕಿವೆ.
ಈ ಸಮೀಕ್ಷೆಗಳ ಪ್ರಕಾರ ದೇಶದ ಗ್ರಾಮಾಂತರ ಪ್ರದೇಶದಲ್ಲಿ ನಿರುದ್ಯೋಗದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2013-14ರಲ್ಲಿ ಶೇ.2.9ರಷ್ಟು ನಿರುದ್ಯೋಗವಿದ್ದರೆ, 2015-16 ನೇ ಸಾಲಿನಲ್ಲಿ 3.4 ರಷ್ಟು ಮತ್ತು 2017-18 ನೇ ಸಾಲಿನಲ್ಲಿ 5,3 ರಷ್ಟು ಹೆಚ್ಚಳವಾಗಿದೆ.
ನಗರ ಪ್ರದೇಶದಲ್ಲೂ ಗ್ರಾಮೀಣ ಪ್ರದೇಶಕ್ಕಿಂತ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿ 2013-14 ನೇ ಸಾಲಿನಲ್ಲಿ ನಿರುದ್ಯೋಗದ ಪ್ರಮಾಣ 4.9 ರಷ್ಟಿತ್ತು. ಆದರೆ, 2015-16 ನೇ ಸಾಲಿನಲ್ಲಿ ಶೇ.4.4 ಕ್ಕೆ ಕುಸಿಯಿತು. ಇದಾದ ಬಳಿಕ 2017-18 ನೇ ಸಾಲಿನಲ್ಲಿ ಅನಿರೀಕ್ಷಿತ ಮಟ್ಟದಲ್ಲಿ ಮತ್ತೆ ಏರಿಕೆಯಾಗಿ ಶೇ.7.7 ಕ್ಕೆ ತಲುಪಿದೆ.
ಆರ್ಥಿಕ ಹಿಂಜರಿತದ ಪರಿಣಾಮದಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.8.5 ಕ್ಕೆ ಏರಿಕೆಯಾಗಿದೆ. 2015-16 ಮತ್ತು 2017-18 ನೇ ಸಾಲಿನ ಮಧ್ಯದಲ್ಲಿ ಗ್ರಾಮೀಣ ಪುರುಷ ನಿರುದ್ಯೋಗದ ಪ್ರಮಾಣವು ಶೇ.2.9 ರಿಂದ 5.7ಕ್ಕೆ ತಲುಪಿದ್ದರೆ, ಮಹಿಳಾ ನಿರುದ್ಯೋಗ ಪ್ರಮಾಣದಲ್ಲಿ ಶೇ.4.7 ರಿಂದ ಶೇ.3.8ಕ್ಕೆ ಇಳಿಕೆಯಾಗಿದೆ.
ನಗರ ಪ್ರದೇಶದ ಒಟ್ಟಾರೆ ನಿರುದ್ಯೋಗದ ಪ್ರಮಾಣ ಶೇ.4.4 ರಿಂದ ಶೇ.7.7 ಕ್ಕೆ ಹೆಚ್ಚಳವಾಗಿದೆ. ನಗರ ಪ್ರದೇಶದಲ್ಲಿನ ಪುರುಷ ನಿರುದ್ಯೋಗಿಗಳ ಪ್ರಮಾಣವು ಶೇ.3 ರಿಂದ ಶೇ.6.9ಕ್ಕೆ ಏರಿಕೆಯಾಗಿದೆ. ಮಹಿಳಾ ನಿರುದ್ಯೋಗದ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಅಂದರೆ ಶೇ.10.9 ರಿಂದ ಶೇ.10.8 ಕ್ಕಿ ಇಳಿಕೆಯಾಗಿದೆ.
ದೇಶದಲ್ಲಿ ತಲೆದೋರಿರುವ ಆರ್ಥಿಕ ಹಿಂಜರಿತದ ಪರಿಣಾಮ ಐಟಿ-ಬಿಟಿ ಕಂಪನಿಗಳು, ಉತ್ಪಾದನಾ ವಲಯ, ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಸೇರಿದಂತೆ ಬಹುತೇಕ ದುಡಿಯುವ ವರ್ಗದ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಐಟಿ-ಬಿಟಿ ಕಂಪನಿಗಳು ಲಕ್ಷಾಂತರ ಉದ್ಯೋಗಗಳಿಗೆ ಕತ್ತರಿ ಹಾಕಿವೆ. ಇದರ ಪರಿಣಾಮ ಲಕ್ಷಾಂತರ ಮಂದಿ ಯುವಕ-ಯುವತಿಯರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ.
ಪರ್ಯಾಯ ಉದ್ಯೋಗ ಅರಸಿಕೊಂಡು ಹೋದರೆ ನೋ ವೇಕೆನ್ಸಿ ಬೋರ್ಡ್ ಅವರ ಕಣ್ಣೆದುರು ಬಂದು ನಿಲ್ಲುತ್ತಿದೆ. ಒಂದು ವೇಳೆ ಇದ್ದರೂ, ಉದ್ಯೋಗದಾತರು ಅತ್ಯಲ್ಪ ಸಂಬಳ ನೀಡುವ ಭರವಸೆಯೊಂದಿಗೆ ಉದ್ಯೋಗ ಕೊಟ್ಟು ಗರಿಷ್ಠ ಮಟ್ಟದ ದುಡಿಮೆ ತೆಗೆದುಕೊಳ್ಳುವಂತಹ ಪರಿಸ್ಥಿತಿ ದೇಶಕ್ಕೆ ಬಂದೊದಗಿದೆ.
ನಿರುದ್ಯೋಗ ಎಂಬ ಪೆಡಂಭೂತ ನಮ್ಮ ಜನರನ್ನು ಯಾವ ರೀತಿ ಕಾಡುತ್ತಿದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಇಲ್ಲಿದೆ. ತಮಿಳುನಾಡಿನ ಕೊಯಮತ್ತೂರು ನಗರಸಭೆಯ ನೈರ್ಮಲ್ಯ ಕಾರ್ಮಿಕರ ಹುದ್ದೆಗೆ ಅರ್ಜಿ ಕರೆದಿತ್ತು. ಇಲ್ಲಿದ್ದ 549 ಹುದ್ದೆಗಳಿಗೆ ಪದವೀಧರರು, ಇಂಜಿನಿಯರ್ ಗಳು, ಡಿಪ್ಲೋಮಾ ಪಡೆದವರು ಸೇರಿದಂತೆ 7000 ಕ್ಕೂ ಅಧಿಕ ವೃತ್ತಿಪರರು ಅರ್ಜಿ ಸಲ್ಲಿಸಿದ್ದಾರೆ.
ಇದು ನಮ್ಮ ನಿರುದ್ಯೋಗ ಸಮಸ್ಯೆಯ ಅಗಾಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಆಶ್ಚರ್ಯವೆಂದರೆ ಕೆಲವು ಮಂದಿ ಒಂದು ಕಡೆ ಉದ್ಯೋಗದಲ್ಲಿದ್ದರೂ ಉದ್ಯೋಗ ಭದ್ರತೆಗಾಗಿ ಕಡಿಮೆ ಸಂಬಳವಿದ್ದರೂ ಸರ್ಕಾರಿ ಉದ್ಯೋಗವನ್ನು ಬಯಸಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ, ತಮಿಳುನಾಡಿನ ವಿಧಾನಸಭೆ ಸಚಿವಾಲಯದಲ್ಲಿ ಪೌರಕಾರ್ಮಿಕರ 14 ಹುದ್ದೆಗಳಿಗೆ 4,607 ಜನ ಅರ್ಜಿ ಹಾಕಿದ್ದರು. ಇವರಲ್ಲಿಯೂ ಸಹ ಪದವೀಧರರು, ಇಂಜಿನಿಯರ್ ಗಳು ಮತ್ತು ಇನ್ನಿತರೆ ವೃತ್ತಿಪರರು ಇದ್ದರೆಂಬುದು ನಮ್ಮ ದೇಶದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.