ಆರ್ಥಿಕ ಮುಗ್ಗಟ್ಟು ಮೊದಲು ತಟ್ಟಿದ್ದೇ ರೈತರಿಗೆ. ಇದು ಇಂದಿನ ಸುದ್ದಿಯಲ್ಲ. ಕಳೆದ ಎರಡು ವರ್ಷಗಳಿಂದ ಗ್ರಾಮೀಣರ ಬದುಕು ದಿವಾಳಿಯಾಗಿದೆ. 2016 ನವೆಂಬರ್ 8ರಂದು ಘೋಷಿಸಲಾದ ನೋಟು ಅಮಾನ್ಯ ಅಥವ ಡಿಮನಿಟೈಸೇಶನ್ ಮೊದಲು ಆಪೋಶನ ತೆಗೆದುಕೊಂಡದ್ದೇ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು.
500, 1000 ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಕೂಡಿಡಲು ಸುಲಭವಾಗುವ ಎರಡು ಸಾವಿರ ಮುಖ ಬೆಲೆಯ ಕಳಪೆ ಕೆಂಪು ಬಣ್ಣದ ನೋಟುಗಳನ್ನು ಚಲಾವಣೆ ತರಲಾಯಿತು. ಇದಾದ ಕೆಲವೇ ತಿಂಗಳುಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗಿತ್ತು. ನೋಟು ಅಮಾನ್ಯದ ಯಾವ ಉದ್ದೇಶಗಳು ಈಡೇರಲಿಲ್ಲ. ಇಂದು ಅದೇ ವಾಟ್ಸಪ್ ಸಂದೇಶಗಳಲ್ಲಿ 2000 ಕೆಂಪು ನಕಲಿ ನೋಟುಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.
ದೇಶದ ಶೇಕಡ 70ರಷ್ಟು ಜನಸಂಖ್ಯೆ ಗ್ರಾಮೀಣ ಆರ್ಥಿಕತೆಯನ್ನು ಹೊಂದಿದೆ. ಹಣಕಾಸಿನ ಗಾತ್ರ ಕಡಿಮೆ ಇರಬಹುದು. ಆದರೆ ಮುಕ್ಕಾಲು ಪಾಲು ಜನರು ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಬರುತ್ತಾರೆ. ಈ ಬಹುಸಂಖ್ಯಾತ ಕೃಷಿಕ, ಕೃಷಿ ಕೂಲಿ ಕಾರ್ಮಿಕ, ಗುಡಿ ಕೈಗಾರಿಕೆ, ಕಿರು ಕೈಗಾರಿಕೆಗಳು, ಇತರ ಕಾರ್ಮಿಕ ವರ್ಗದ ಸಂಕಷ್ಟ ಬರೆಯಲು ಯಾವ ಮಾಧ್ಯಮಗಳೂ ಇರಲಿಲ್ಲ. ಇದೀಗ ಆಟೋಮೊಬೈಲ್ ಮತ್ತಿತರ ಉದ್ಯಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ದೊಡ್ಡ ಸುದ್ದಿ ಆಗುತ್ತಿದೆ. ಒಳ್ಳೆಯದೇ. ಈ ಆಟೋ ಮೊಬೈಲ್ ಕ್ಷೇತ್ರದಲ್ಲಿ ಬೇಡಿಕೆ ಕುಸಿಯಲು ಗ್ರಾಮೀಣ ಪ್ರದೇಶದ ಜನರಲ್ಲಿ ಕೊಂಡು ಕೊಳ್ಳುವ ಶಕ್ತಿ ಸಂಪೂರ್ಣ ಕಡಿಮೆ ಆಗಿರುವುದು ಕೂಡ ಒಂದು ಕಾರಣ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ಈ ಸಹಸ್ರಮಾನದ ಯುವ ಜನಾಂಗದ ಆದ್ಯತೆಗಳು ಕಾರಣ ಅಲ್ಲ.
ನೋಟು ಅಮಾನ್ಯ ಆದ ಅನಂತರ ಜನರಲ್ಲಿ ಹಣದ ಓಡಾಟ ಕಡಿಮೆ ಆಯಿತು. ರೈತರ ಬೆಳೆಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯಲಿಲ್ಲ. ಹಲವೆಡೆ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುವ ಕೃಷಿ ಉತ್ಪನ್ನಗಳನ್ನು ಗಟಾರಕ್ಕೆ ಚೆಲ್ಲಿ ಹೋದರು ರೈತರು. ಮತ್ತೊಂದು ಸುತ್ತಿನ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದ ಮೂರು ಮುಂಗಾರು ಮತ್ತು ಹಿಂಗಾರು ಕಣ್ಣ ಮುಚ್ಚಾಲೆ ಆಡಿಸಿತ್ತು. ಒಂದೆಡೆ ಸರಕಾರ ಕೈ ಹಿಡಿಯಲಿಲ್ಲ. ಇನ್ನೊಂದೆಡೆ ವರುಣನೂ ಹರಸಲಿಲ್ಲ.

ಬೃಹತ್ ಉದ್ಯಮಿಗಳಿಗಾಗಿ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿ ದೊಡ್ಡ ಮೊತ್ತದ ಸಾಲ ನೀಡಲು ಮುಂದಾಗಿರುವ ಸರಕಾರ, ರೈತರ ಸಾಲ ಮನ್ನಾವನ್ನೂ ಮಾಡಲಿಲ್ಲ. ಹೊಸ ಸಾಲವನ್ನು ಕೂಡ ನೀಡಲಿಲ್ಲ. ರೈತರ ಸಾಲ ಮನ್ನಾ ಮಾಡಿದ ರಾಜ್ಯ ಸರಕಾರಗಳ ಬೆನ್ನು ತಟ್ಟದೆ ಟೀಕೆ ಟಿಪ್ಪಣಿ ಮಾಡಿದ್ದೇ ಹೆಚ್ಚು.ಅದು ಹಾಗಿರಲಿ, ಇದೀಗ ಕೈಗಾರಿಕಾ ಕ್ಷೇತ್ರದಲ್ಲಿ ಉಂಟಾಗಿರುವ ತಳಮಳ ಉಪಶಮನ ಆಗಲು ದೀರ್ಘ ಕಾಲ ಬೇಕಾಗಿರುವ ಕಾಯಿಲೆಗೆ ಸರಕಾರ ಪಾರಸಿಟಮಲ್ ನೀಡಿ ಸಂತೈಸುತ್ತಿದೆ. ಆದರೆ, ಗ್ರಾಮೀಣ ಜನತೆಗೆ ಅದೂ ಕೂಡ ಇಲ್ಲ.
ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿರುವ ದಲ್ಲಾಳಿಗಳು ಮತ್ತು ವ್ಯಾಪಾರಿಗಳು ಲಾಭ ಮಾಡಿಕೊಂಡಿದ್ದಾರೆ. ಸೂಕ್ತ ಆದಾಯ ದೊರೆಯದ ಹಿನ್ನೆಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ, ಗ್ರಾಮೀಣ ಪ್ರದೇಶದ ಇತರ ಕಾರ್ಮಿಕರಿಗೆ ಉದ್ಯೋಗ ಕಡಿಮೆ ಆಗಿದೆ ಅಥವ ವೇತನದಲ್ಲಿ ಕಡಿತ ಆಗಿದೆ. ಅದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಇಲ್ಲದ ಕಾರ್ಮಿಕರು ಕೂಡ ಕೃಷಿ ಕ್ಷೇತ್ರಕ್ಕೆ ಹಿಂತಿರುಗಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಉದ್ಯೋಗ ಖಾತರಿ ಯೋಜನೆಗೆ ಬೇಡಿಕೆಗೆ ತಕ್ಕಷ್ಟು ಅನುದಾನ ನೀಡಲಿಲ್ಲ. ಮಂಜೂರು ಮಾಡಿದಷ್ಟು ಅನುದಾನವನ್ನು ಸಕಾಲಕ್ಕೆ ಬಿಡುಗಡೆಯನ್ನೂ ಮಾಡಲಿಲ್ಲ.
ಕಾಸಿಲ್ಲದೆ ಕೈಲಾಸ್
ಡಿಮೊನಿಟೈಶೇಷನ್ ನಂತರ ದೇಶದಲ್ಲಿ ನಗದು – ಕ್ಯಾಶ್ ಕೈಯಲ್ಲಿ ಇಲ್ಲದೆ ಉದ್ಯಮಿಗಳು ಮತ್ತು ಇತರರು ಕೂಡ ಸಮಸ್ಯೆ ಎದುರಿಸತೊಡಗಿದ್ದಾರೆ. ಈ ಕೈಯಲ್ಲಿ ಕಾಸಿಲ್ಲದ ಸಮಸ್ಯೆ ಈಗಲೂ ಮುಂದುವರಿದಿದೆ. ನೋಟ್ ಅಮಾನ್ಯದ ಹೊಡೆತವನ್ನು ತಾಳಿಕೊಳ್ಳುವ ಮೊದಲೇ ಬಂದಿದ್ದು ಅಂದಾದುಂಧಿಯ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿ ಎಸ್ ಟಿ). ಅಲ್ಲಿಗೆ ವ್ಯಾಪಾರಿಗಳು, ಉದ್ಯಮಿಗಳು ಮಾತ್ರವಲ್ಲದೆ ಇಡೀ ದೇಶಕ್ಕೆ ಬರಗಾಲ ಬಡಿದಂತಾಯಿತು.
ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್ ಸಾಲ ರೂಪದ ಬೆಂಬಲ ಬೇಕಾಗಿತ್ತು. ಉಳಿದವರಿಗೆ ಕ್ಯಾಶ್, ಹಾರ್ಡ್ ಕ್ಯಾಶ್ ಬೇಕಾಗಿತ್ತು. ಎಲ್ಲಿದೆ ಕ್ಯಾಶ್, ಎಲ್ಲಿದೆ ಬ್ಯಾಂಕ್ ಸಾಲ. ಬ್ಯಾಂಕ್ ಉದ್ಯಮ ಅದಾಗಲೇ ವಂಚನೆ ಪ್ರಕರಣಗಳಿಂದ ಕುಖ್ಯಾತಿ ಗಳಿಸಿ, ಅರಗಿಸಿಕೊಳ್ಳಲಾಗದಷ್ಟು ನಷ್ಟ ಮಾಡಿಕೊಂಡಿತ್ತು. ಇತ್ತ ವ್ಯಾಪಾರಿಗಳು ಜಿ ಎಸ್ ಟಿ ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದರು.ಮತ್ತೊಂದೆಡೆ ರಫ್ತು ವಹಿವಾಟು ನಡೆಸುವರಿಗೆ ನಿಗದಿತ ಸಮಯದಲ್ಲಿ ಪಾವತಿ ದೊರೆಯಲಿಲ್ಲ. ಕೆಲವೊಂದು ಕ್ಷೇತ್ರಗಳಿಗೆ ಅವೈಜ್ಞಾನಿಕವಾಗಿ ವಿಧಿಸಲಾದ ಅತಿಯಾದ ತೆರಿಗೆಯಿಂದ ಅಂತಹ ಉದ್ಯಮಗಳು ನೆಲಕಚ್ಚತೊಡಗಿದವು. ಉದಾಹರಣೆಗೆ ಬಿಸ್ಕೆಟ್. ಹಾಗೆಂದು ಹೇಳಿಕೊಳ್ಳುವಂತಹ ಮಟ್ಟದಲ್ಲಿ ಜಿ ಎಸ್ ಟಿ ಸಂಗ್ರಹ ಆಗುತ್ತಿಲ್ಲ. ಇದರ ಪರಿಣಾಮ ರಾಜ್ಯಗಳ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ.

ಯಾವಾಗ ದೇಶದ ಮುಕ್ಕಾಲು ಪಾಲು ಜನತೆ ತಮ್ಮ ಆರ್ಥಿಕತೆಯಲ್ಲಿ ಹಿನ್ನಡೆ ಕಂಡರೋ ಆಗಲೇ ಇದು ನಿಧಾನವಾಗಿ ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಇಂದೂ ಕೂಡ ಸರಕಾರಕ್ಕೆ ಹೆಚ್ಚಿನ ಹಣಕಾಸಿನ ಚಲಾವಣೆ ಸಾಧ್ಯವಾಗುತ್ತಿಲ್ಲ. ಬ್ಯಾಂಕುಗಳ ಬಡ್ಡಿ ಕಡಿತ, ಬ್ಯಾಂಕುಗಳಿಗೆ ಸಂಪನ್ಮೂಲ ಪೂರೈಕೆಯಿಂದ ಆರ್ಥಿಕತೆ ಮಿಸುಕಾಡುವುದಿಲ್ಲ. ಬ್ಯಾಂಕುಗಳು ಸಾಲ ನೀಡಲು ಸಿದ್ಧರಿದ್ದರೂ ಸಾಲ ಪಡೆಯುವವರು ಇಲ್ಲ. ಸಾಲ ಪಡೆದು ಹೂಡಿಕೆ ಮಾಡುವ ದಿಟ್ಟತನ ಇಂದಿನ ಪರಿಸ್ಥಿತಿಯಲ್ಲಿ ಯಾವ ಉದ್ಯಮಿಗೂ ಇಲ್ಲ. ಏಕೆಂದರೆ, ವ್ಯವಸ್ಥೆಯಲ್ಲಿ ಯಾವುದೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರಕಾರದ ನೀತಿಗಳನ್ನು ನಂಬುವಂತಿಲ್ಲ. ದೇಶದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಬೃಹತ್ ನೀರಾವರಿ ಇತ್ಯಾದಿಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಶಕ್ತಿ ಕೂಡ ಸರಕಾರದಲ್ಲಿ ಇಲ್ಲ. ಸರಕಾರವೇ ಖರ್ಚು ಮಾಡಲು ಹಣವಿಲ್ಲದೆ ಕುಳಿತಾಗ ಹಣಕಾಸು ಓಡಾಟ ಹೇಗಾಗುತ್ತದೆ.
ಕೇಂದ್ರ ಸರಕಾರ ಗ್ರಾಮೀಣ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಗಂಭೀರ ಕಾರ್ಯಕ್ರಮಗಳನ್ನು ಕೈಗೊಂಡಾಗ ಮಾತ್ರ ದೇಶದ ಆರ್ಥಿಕತೆ ನಿಧಾನವಾಗಿ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಈ ಬಾರಿಯ ಆರ್ಥಿಕ ಸಂಕಷ್ಟ ಅಂದಾಜಿಗಿಂತಲೂ ಕಠಿಣವಾದುದು ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿರುವ ಹೊರತಾಗಿಯೂ ಸರಕಾರ ಕೈಗೊಂಡಿರುವ ಉಪಕ್ರಮ ಗಂಭೀರ ಸ್ವರೂಪದಲ್ಲ. ಮೊದಲು ರೋಗ ಪತ್ತೆ ಮಾಡಬೇಕು. ಅದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಅನಂತರ ತಕ್ಷಣದ ಮತ್ತು ದೂರಗಾಮಿ ಚಿಕಿತ್ಸೆ ನೀಡಬೇಕಾಗುತ್ತದೆ. ಅಂತಹ ಕೆಲಸಕ್ಕೆ ಸರಕಾರ ಮುಂದಾಗಬೇಕಾಗಿದೆ. ಆದರೆ, ಸರಕಾರ ಆರ್ಥಿಕ ಮುಗ್ಗಟ್ಟನ್ನು ಒಪ್ಪಿಕೊಳ್ಳಲೇ ನಾಚಿಕೊಳ್ಳುತ್ತಿದೆ.