ಕೆ ಆರ್ ನಗರದ ತಾಲ್ಲೂಕು ಆಸ್ಪತ್ರೆಯ ಬಿ ಆರ್ ಶೆಟ್ಟಿ ಡಯಾಲಿಸಿಸ್ ಕೇಂದ್ರದಲ್ಲಿ ಡಯಾಲಿಸಿಸ್‍ಗೆ ಒಳಗಾದ ರೋಗಿಗಳಲ್ಲಿ `ಹೆಪಟೈಟಿಸ್ ಸಿ’ ವೈರಸ್ ಪತ್ತೆಯಾಗಿ ತಿಂಗಳಾಗುತ್ತಾ ಬಂದರೂ ಈ ಪ್ರಕರಣದ ವಿವಾದಗಳು ಇನ್ನೂ ಬಗೆಹರಿದಿಲ್ಲ. ಘಟನೆಯ ಸುತ್ತಲಿರುವ ಅನೇಕ ಗೊಂದಲಗಳು ಇನ್ನೂ ನಿವಾರಣೆಯಾಗದೆ, ಈ ಡಯಾಲಿಸಿಸ್ ಘಟಕ ಮತ್ತು ಪ್ರಕರಣ ಎರಡರ ಬಿಕ್ಕಟ್ಟು ದಿನೇ ದಿನೇ ಜಟಿಲವಾಗುತ್ತಿದೆ.
ಏನಿದು ಘಟನೆ:
ಕೆ ಆರ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಗುತ್ತೆದಾರ ಬಿ ಆರ್. ಶೆಟ್ಟಿ ಕಂಪನಿ ನಡೆಸುತ್ತಿರುವ ಈ ಡಯಾಲಿಸಿಸ್ ಕೇಂದ್ರವಿದೆ. 2018 ಫೆಬ್ರವರಿಯಲ್ಲಿ 2 ಡಯಾಲಿಸಿಸ್ ಯಂತ್ರಗಳೊಂದಿಗೆ ಆರಂಭಿಸಲ್ಪಟ್ಟ ಈ ಘಟಕ, 2019ರ ವೇಳೆಗೆ ನಾಲ್ಕು ಯಂತ್ರಗಳೊಂದಿಗೆ ಕಾರ್ಯ ನಿರ್ವಹಿಸಲಾರಂಭಿಸಿತ್ತು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತವಾಗಿ ಲಭ್ಯವಿದ್ದ ಈ ಚಿಕಿತ್ಸೆಗೆ ಹಣವನ್ನು ಸರ್ಕಾರವೇ ಭರಿಸುತ್ತದೆ. ಪ್ರತೀ ಡಯಾಲಿಸಿಸ್‍ಗೆ ರೂ 1,100ನ್ನು ಸರ್ಕಾರ ಬಿ ಆರ್ ಶೆಟ್ಟಿ ಕಂಪನಿಗೆ ಚಿಕಿತ್ಸಾ ವೆಚ್ಚವನ್ನಾಗಿ ಭರಿಸುತ್ತಿತ್ತು.
“ವಾರಕ್ಕೆ ಎರಡು ಬಾರಿ ಸುಮಾರು 36 ರೋಗಿಗಳು ಇಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ನಡೆಯುತ್ತಿರುವ ಈ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಬಿ. ಆರ್. ಶೆಟ್ಟಿ ಕಂಪನಿಯೇ ನೇಮಿಸಿತ್ತು. ಮೈಸೂರಿನ ಖಾಸಗಿ ಆಸ್ಪತೆಯಲ್ಲಿರುವ ಮೂತ್ರಪಿಂಡ ಶಾಸ್ತ್ರಜ್ಞರೊಬ್ಬರು ಇಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಈ ಘಟಕದಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ರೋಗಿಗಳಿಗೂ ಎಚ್‍ಸಿವಿ, ಹೆಚ್‍ಬಿಎಸ್‍ಎಜಿ, ಎಚ್‍ಐವಿ ಪರೀಕ್ಷೆಗಳನ್ನು ಎಲಿಸಾ ವಿಧಾನದ ಮೂಲಕ ಕಡ್ಡಾಯವಾಗಿ ಮಾಡಲಾಗುತ್ತಿತ್ತು’’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಲಭ್ಯವಿರುವ ಕಡತಗಳು ಹೇಳುತ್ತವೆ.
ಜೂನ್ 26 ರಂದು ಈ ಡಯಾಲಿಸಿಸ್ ಘಟಕದಲ್ಲಿ ಚಿಕಿತ್ಸೆ ಪಡೆದ ಒರ್ವ ರೋಗಿ ಸಾವನ್ನಪ್ಪುತ್ತಾರೆ. ಈ ಸಾವು ಡಯಾಲಿಸಿಸ್ ಕೇಂದ್ರದಲ್ಲಿ ತಗುಲಿರಬಹುದಾದ ಸೋಂಕಿನಿಂದ ಸಂಭವಿಸಿದೆ ಎಂದು ಶಂಕೆ ವ್ಯಕ್ತವಾಗುತ್ತದೆ. ಆ ಕೂಡಲೇ ಇಲ್ಲಿ ಚಿಕಿತ್ಸೆ ಪಡೆದ ಎಲ್ಲಾ ರೋಗಿಗಳನ್ನೂ ತಪಾಸಣೆಗೆ ಒಳಪಡಿಸಿದಾಗ ಸುಮಾರು 32 ರೋಗಿಗಳಿಗೂ ಹೆಪಟೈಟಿಸ್ `ಸಿ’ ಸೋಂಕು ತಗುಲಿರುವುದು ಪತ್ತೆಯಾಗುತ್ತದೆ. ಈ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದಾಗಿ ಇಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲಾ ರೋಗಿಗಳಿಗೂ ಈ ಸೋಂಕು ತಗುಲಿದೆ ಎಂದು ರೋಗಿಗಳು ಪ್ರತಿಭಟನೆ ನಡೆಸುತ್ತಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಪ್ರಕರಣದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನಿಖೆ ಆರಂಭಿಸಿದೆ.
ಏನಿದು ಗೊಂದಲ?
ಡಯಾಲಿಸಿಸ್ ಕೇಂದ್ರದ ಸೋಂಕಿನಿಂದಾಗಿ ಸಂಭವಿಸಿದ ಸಾವಿನಿಂದಾಗಿ ಗಾಬರಿಗೊಳಗಾದ ಇತರ ರೋಗಿಗಳು, ಡಯಾಲಿಸಿಸ್ ಕೇಂದ್ರದ ಸಲಹಾಧಿಕಾರಿಯ ಸೂಚನೆಯ ಮೇರೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯ ರಕ್ತ ತಪಾಸಣಾ ಘಟಕದಲ್ಲಿ ಹಾಗು ಕೆ ಆರ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ರಕ್ತ ಮಾದರಿಗಳಲ್ಲಿ 30 ಮಾದರಿಗಳು ಹೆಪಟೈಟಿಸ್ `ಸಿ’ ಸೋಂಕು ತಗುಲಿರುವುದನ್ನು ದೃಢ ಪಡಿಸುತ್ತವೆ. ಕೆ ಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಎಲಿಸಾ ಪರೀಕ್ಷೆ ಕೇವಲ ಮೂರು ಮಾದರಿಗಳಿಗೆ ಮಾತ್ರ ಹೆಪಟೈಟಿಸ್ `ಸಿ’ ಸೋಂಕು ತಗುಲಿದೆ ಎನ್ನುತ್ತದೆ.
ಈ ನಡುವೆ ಜಿಲ್ಲಾ ವಿಚಕ್ಷಣಾಲಾಯ 33 ರಕ್ತದ ಮಾದರಿಗಳನ್ನು ಮಣಿಪಾಲದ ವೈರಾಲಜಿ ವಿಭಾಗಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡುತ್ತದೆ. ವೈರಾಲಜಿ ವಿಭಾಗ 28 ಮಾದರಿಗಳಿಗೆ ಹೆಪಟೈಟಿಸ್ `ಸಿ’ ಸೋಂಕು ತಗುಲಿರುವುದನ್ನು ದೃಢಪಡಿಸುತ್ತದೆ. ಆದರೆ ಆಶ್ಚರ್ಯವೆಂಬಂತೆ ಕೇವಲ ಕೆಲವೇ ದಿನಗಳ ಅಂತರದಲ್ಲಿ, ಇಲ್ಲಿಗೆ ಭೇಟಿ ನೀಡುವ ಇದೇ ವಿಭಾಗದ ಪ್ರೊಫೆಸರ್ ಅರುಣ್ ಕುಮಾರ್ ನೀಡುವ ವರದಿ ಈ ಪ್ರಕರಣದಲ್ಲಿ ಯಾರಿಗೂ ಸೋಂಕು ತಗುಲಿಯೇ ಇಲ್ಲ ಎನ್ನುತ್ತದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಮತ್ತೊಮ್ಮೆ ಇದೇ ವಿಭಾಗದಿಂದ ಜೆನೆಟಿಕ್ ಅಧ್ಯಯನದ ವರದಿಯನ್ನು ನಿರೀಕ್ಷಿಸುತ್ತಿದೆ.
ಅದೇ ವಿಭಾಗದಿಂದ ಬಂದಿರುವ ವರದಿ ಸೋಂಕು ತಗುಲಿಲ್ಲ ಎಂದು ವರದಿ ನೀಡಿರುವಾಗ ಮತ್ತೆ ಏಕೆ ಈ ಅಧ್ಯಯನ ಎಂದು ಕೇಳಿದರೆ, `ವರದಿಗಳು ಬೇರೆ ಬೇರೆ ಫಲಿತಾಂಶಗಳನ್ನು ನೀಡಿವೆ. ನಿಖರ ಫಲಿತಾಂಶಕ್ಕಾಗಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದೇವೆ’ ಎನ್ನುತ್ತಾರೆ ವೆಂಕಟೇಶ್. ಈಗಾಗಲೇ ಮಾಡಿರುವ ಹಲವು ತಪಾಸಣೆಗಳಲ್ಲಿ ಯಾವ ಪರೀಕ್ಷೆಯ ಫಲಿತಾಂಶ ನಿಖರ ಎನ್ನುವುದು ಆರೋಗ್ಯ ಇಲಾಖೆಗೆ ಇನ್ನೂ ಖಚಿತವಾಗಿಲ್ಲ.