ಅದು 2004 ರ ಏಪ್ರಿಲ್-ಮೇ ತಿಂಗಳು. ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಅಂದಿನ ರಾಜ್ಯ ಗುಪ್ತ ದಳದ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ಡಾ. ಡಿ ವಿ ಗುರುಪ್ರಸಾದ್ ಎಕಾನಮಿ ವರ್ಗದ ಮೊದಲ ಸಾಲಿನಲ್ಲಿ ಕುಳಿತಿದ್ದರು. ಅವರನ್ನು ಕಂಡ ರಾಜ್ಯ ಕಾಂಗ್ರೆಸ್ ರಾಜಕಾರಿಣಿ ನಫಿಸಾ ಫಜಲ್ ಅವರು ಗುರುಪ್ರಸಾದ್ ರನ್ನು ಕರೆದು ಬಿಸಿನೆಸ್ ಕ್ಲಾಸ್ ನಲ್ಲಿ ಕುಳಿತಿದ್ದ ರಾಜ್ಯದ ಸೆಲೆಬ್ರಿಟಿ ಜ್ಯೋತಿಷಿ ದ್ವಾರಕಾನಾಥ್ ಮುಂದೆ ಕರೆದು ನಿಲ್ಲಿಸಿ, “ಇಂದಿನ ನಿಮ್ಮ ಲೆಕ್ಕದಲ್ಲಿ ನಮ್ಮ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು’’ ಅಂತ ಕೇಳಿದರಂತೆ. ಗುರುಪ್ರಸಾದ್ ಥಟ್ ಅಂತ 84 ಎಂಬ ಉತ್ತರ ಕೊಟ್ಟರು. ಅದಕ್ಕೆ ದ್ವಾರಕಾನಾಥ್ `ನಿಮ್ಮ ವರದಿ ಸುಳ್ಳಾಗುವುದು ಖಂಡಿತ’’ ಎಂದರಂತೆ.
ಇದು ಇತ್ತೀಚೆಗೆ ಬಿಡುಗಡೆಗೊಂಡ ಡಾ. ಗುರುಪ್ರಸಾದ್ ಅವರ “ಗೂಢಚರ್ಯೆಯ ಆ ದಿನಗಳು’’ (ಇಂಗ್ಲಿಷ್ ನಲ್ಲಿ Corridors of Intelligence – Revealing Politics) ಪುಸ್ತಕದಲ್ಲಿ ಅಡಕವಾಗಿರುವ ವಿಷಯ. 2019 ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಎಷ್ಟೋ Exit Poll ಗಳು ಪ್ರಕಟಗೊಂಡಿವೆ. ಚುನಾವಣೆಗೂ ಮೊದಲು ಕೂಡ ಚುನಾವಣಾ ಪೂರ್ವ ಸಮೀಕ್ಷೆಗಳು ಬಂದಿದ್ದವು. ಹಲವು ಚುನಾವಣೆಗಳನ್ನು ಸಮೀಪದಿಂದ ಕಂಡಿರುವ ಅನೇಕ ಹಿರಿಯ ಅಧಿಕಾರಿಗಳ ಪ್ರಕಾರ, `ಪರಿಣಿತ’, `ವೃತ್ತಿಪರ’ ಎಂದು ಕರೆಸಿಕೊಳ್ಳುವ ಖಾಸಗಿ ಏಜೆನ್ಸಿಗಳು ಅಣಬೆಗಳಂತೆ ತಲೆ ಎದ್ದಿದ್ದರೂ, ಇಂದಿಗೂ ರಾಜಕಾರಣಿಗಳು ನೆಚ್ಚುವ, ಚಾತಕ ಪಕ್ಷಿಗಳಂತೆ ಕಾಯುವ ವರದಿ ಅಂದರೆ ಅದುವೇ `ಗುಪ್ತಚರ ವರದಿ’ (Intelligence Report on Elections).
ಗುರುಪ್ರಸಾದ್ ಅವರ ಪುಸ್ತಕಕ್ಕೆ ಮತ್ತೆ ಬರೋಣ. 2004ರ ಚುನಾವಣೆಯ ಬಗ್ಗೆ ಪುಸ್ತಕದಲ್ಲಿ ಗುರುಪ್ರಸಾದ್ ವಿವರಿಸಿದಂತೆ, ಅವರ ವರದಿ ಸುಳ್ಳಾಗಿತ್ತು. ಕಾರಣ, ಫಲಿತಾಂಶ ಪ್ರಕಟಗೊಂಡಾಗ ಕಾಂಗ್ರೆಸ್ 65 ಸ್ಥಾನಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಮುಂದೇನಾಯಿತು ಎಂಬುದು ಎಲ್ಲರಿಗೂ ತಿಳಿದೇ ಇದೆ. 58 ಸ್ಥಾನಗಳನ್ನು ಗೆದ್ದ ಜೆಡಿಎಸ್, ಕಾಂಗ್ರೆಸ್ ಜೊತೆ ಸೇರಿ ರಾಜ್ಯದಲ್ಲಿ ಮೊದಲ ಮೈತ್ರಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. 79 ಸ್ಥಾನಗಳನ್ನು ಗೆದ್ದು ದೊಡ್ಡ ಸಾಧನೆಯನ್ನೇ ಮಾಡಿದ್ದ ಬಿಜೆಪಿ ಮುಂದೆ ಇದೇ ಜೆಡಿಎಸ್ ಜೊತೆ 20 ತಿಂಗಳುಗಳ ಮತ್ತೊಂದು ಮೈತ್ರಿ ಸಾಧಿಸಿತು.
ಗುರುಪ್ರಸಾದ್ ಅವರ ಪುಸ್ತಕ ಹಲವು ಆಯಾಮಗಳನ್ನು ತೆರೆದಿಡುತ್ತದೆ. ನಮ್ಮಲ್ಲಿ (ಜನರಲ್ಲಿ) ಹಲವರಿಗೆ ಗುಪ್ತಚರ ಇಲಾಖೆಯೆಂಬ ಪೊಲೀಸ್ ಇಲಾಖೆಯ ವೃತ್ತಿಪರ ವಿಭಾಗವನ್ನು ಚುನಾವಣೆ ಸಂದರ್ಭಗಳಲ್ಲಿ ವರದಿ ಪಡೆಯಲು ಉಪಯೋಗಿಸಲಾಗುತ್ತದೆ ಎಂಬುದೇ ಸ್ಪಷ್ಟವಿಲ್ಲ. ಗುಪ್ತಚರ ಇಲಾಖೆ ಚುನಾವಣೆಯ ವರದಿ ಮಾಡಿಯೇ ಮಾಡುತ್ತದೆ ಎಂಬುದು ಒಂದು ಈ ಪುಸ್ತಕದಿಂದ ಅಧಿಕೃತವಾದರೆ, ಅದು ವಿಧಾನ ಸಭೆ ಅಥವಾ ಲೋಕಸಭೆಯಂತಹ ದೊಡ್ಡ ಚುನಾವಣೆಗಳಿಗೆ ಮಾತ್ರ ಸೀಮಿತವಲ್ಲ ಎಂಬ ಸತ್ಯವೂ ತಿಳಿದಿದೆ. ಒಂದೇ ಒಂದು ಸಣ್ಣ ಉಪ ಚುನಾವಣೆಗೂ ಗುಪ್ತಚರ ಇಲಾಖೆ ಸಮೀಕ್ಷೆ, ವರದಿ ಮಾಡುತ್ತದೆ. ಆದರೆ, ಅದು `ಗುಪ್ತ ವರದಿ’.
2003 ರಿಂದ ಸುಮಾರು 34 ತಿಂಗಳುಗಳವರೆಗೆ ಗುರುಪ್ರಸಾದ್ ಅವರು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲಿ ಅವರ ನೇತೃತ್ವದಲ್ಲಿ ನಡೆದ ಅತಿ ಮುಖ್ಯ ಚುನಾವಣಾ ಸಮೀಕ್ಷೆ, ವರದಿ ಎಂದರೆ ಅದು 2004ರ ಚುನಾವಣೆಯದ್ದು. ಇದಕ್ಕೂ ಮೊದಲು ಹಾಗೂ ಇದಕ್ಕೂ ನಂತರ ಉಪ ಚುನಾವಣೆಗಳಲ್ಲಿ ಗುರುಪ್ರಸಾದ್ ನೇತೃತ್ವದ ತಂಡ ವರದಿ ಮಾಡಿತ್ತು. ಇವುಗಳೆಂದರೆ 2003 ರಲ್ಲಿ ಹುನಗಂದ ಹಾಗೂ ವೇಮಗಲ್ (ಎಸ್ ಆರ್ ಕಾಶಪ್ಪನವರ್ ಹಾಗೂ ಭೈರೇಗೌಡ ಮೃತರಾದ್ದರಿಂದ), 2004 ರಲ್ಲಿ 96 ವರ್ಷದ ಬೀದರ್ ನ ಬಿಜೆಪಿ ಸಂಸದ ರಾಮಚಂದ್ರಪ್ಪ ವೀರಪ್ಪ ತೀರಿಕೊಂಡಾಗ ಹಾಗೂ 2005 ರಲ್ಲಿ ಎಸ್ ಎಂ ಕೃಷ್ಣರಿಂದ ತೆರವಾದ ಚಾಮರಾಜಪೇಟೆ ಕ್ಷೇತ್ರ ಹಾಗೂ ಶಿವಮೊಗ್ಗ ಸಂಸದ ಸ್ಥಾನಕ್ಕೆ ನಡೆದ ಉಪ ಚುನಾವಣೆಗಳು. ಇದರ ವಿವರಗಳು ಸಾಕಷ್ಟು ಗುರುಪ್ರಸಾದ್ ಅವರ ಪುಸ್ತಕದಲ್ಲಿವೆ.

ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಗುಪ್ತಚರ ವರದಿಗಾಗಿ ಕಾಯುವುದು ಈಗಲೂ ನಡೆದೇ ಇದೆ. ಆದರೆ, ಈಗೀಗ ಖಾಸಗಿ ಸಮೀಕ್ಷೆಗಳನ್ನೇ ರಾಜಕಾರಣಿಗಳು ಹೆಚ್ಚು ಬಯಸುತ್ತಾರೆ. ಇದು 2004ರಲ್ಲೂ ಇತ್ತು ಎಂಬುದಕ್ಕೆ ಗುರುಪ್ರಸಾದ್ ಅವರ ಪುಸ್ತಕ ಪುಷ್ಟಿ ನೀಡುತ್ತದೆ. ವಿಧಾನ ಸಭೆಯನ್ನು 6 ತಿಂಗಳಿಗೂ ಮೊದಲೇ ವಿಸರ್ಜಿಸಿ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆಗೂ ಅವಧಿ ಪೂರ್ವ ಚುನಾವಣೆಗೆ ಅಣಿಯಾಗುವ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿರ್ಧಾರಕ್ಕೆ ಗುಪ್ತಚರ ವರದಿ ವ್ಯತಿರಿಕ್ತ ಅಭಿಪ್ರಾಯ ನೀಡಿತ್ತು. ಆ ವರದಿಯ ಬಗ್ಗೆ ಅಂದಿನ ಸಚಿವ ಸಂಪುಟದ ಕೆಲವು ಸದಸ್ಯರು (ಸಚಿವರು) ಮುಸಿ ಮುಸಿ ನಕ್ಕ ಘಟನೆಯನ್ನು ಗುರುಪ್ರಸಾದ್ ವಿವರಿಸುತ್ತಾರೆ. ಅದಕ್ಕೆ ಕಾರಣ ಇಲ್ಲದಿಲ್ಲ. ಅಂದು 135 ಸಂಖ್ಯಾ ಬಲದ ಕಾಂಗ್ರೆಸ್, ಅವಧಿಗೂ ಮುನ್ನ ಚುನಾವಣೆ ಎದುರಿಸುವುದರಿಂದ 83ಕ್ಕೆ ಕುಸಿಯುತ್ತದೆ ಎಂಬ ಗುರುಪ್ರಸಾದ್ ಅವರ ಗುಪ್ತಚರ ದಳದ ಮಾಹಿತಿ ಸಹಜವಾಗಿಯೇ ಅವರಲ್ಲಿ ನಗು ತರಿಸಿತ್ತು. ಸಚಿವರುಗಳ ಈ ಪ್ರತಿಕ್ರಿಯೆಗೆ ಇನ್ನೊಂದು ಕಾರಣವೂ ಇದೆ ಎಂದು ಪುಸ್ತಕದಲ್ಲಿ ಗುರುಪ್ರಸಾದ್ ವಿವರಿಸುತ್ತಾರೆ. ಅದೇನೆಂದರೆ, ಗುಪ್ತಚರ ವರದಿಗೂ ಮೊದಲೇ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದು ಕಾಂಗ್ರೆಸ್ ಗೆ 124 ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ ಎಂಬ ವರದಿ ನೀಡಿತ್ತು.
ಗುಪ್ತಚರ ವರದಿಗಳ ನಿಖರತೆ ಬಗ್ಗೆ, ಅದರ ನೈತಿಕತೆಯ ಬಗ್ಗೆ `ಪ್ರತಿಧ್ವನಿ’ ಪುಸ್ತಕದ ಲೇಖಕ ಗುರುಪ್ರಸಾದ್ ಅವರನ್ನೇ ಮಾತಾಡಿಸಿತು. “ಗುಪ್ತಚರ ಇಲಾಖೆಯಲ್ಲಿ ಅನೇಕ ವಿಭಾಗಗಳು ಇರುತ್ತವೆ. ಅವುಗಳಲ್ಲಿ ರಾಜಕೀಯವೂ ಒಂದು. ಈ ಎಲ್ಲಾ ವಿಭಾಗಗಳ ಮುಖ್ಯ ಉದ್ದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು. ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಕೇಳಲಿ, ಬಿಡಲಿ, ಗುಪ್ತಚರ ವಿಭಾಗ ಚುನಾವಣಾ ಸಮೀಕ್ಷೆ ನಡೆಸಿಯೇ ನಡೆಸುತ್ತದೆ. ಇದು ಹಿಂದೆಯೂ ಇತ್ತು, ಮುಂದೆಯೂ ಇರಲಿದೆ. ಇನ್ನು ನಿಖರತೆಯ ಬಗ್ಗೆ ನನಗೆ ಗುಪ್ತಚರ ವರದಿಯ ಬಗ್ಗೆ ಬಹಳ ವಿಶ್ವಾಸವಿದೆ. ಅದಕ್ಕೆ ಕಾರಣ ಪೊಲೀಸ್ ಇಲಾಖೆಯ ಮೂಲ ಸೌಕರ್ಯ ಹಾಗೂ ಸ್ಥಳೀಯ ಮಾಹಿತಿಗಳ ಇಂಚಿಂಚೂ ಮಾಹಿತಿ. ಒಂದು ಪೊಲೀಸ್ ಸ್ಟೇಷನ್ ನ ಅನುಭವಿ ಪೇದೆಯಷ್ಟು ನಿಖರ ಮಾಹಿತಿ, ನನ್ನ ಅಭಿಪ್ರಾಯದಲ್ಲಿ, ಬೇರೆ ಯಾರೂ ಕೊಡಲಾರರು.’’

ಮೈತ್ರಿ ಸರ್ಕಾರ ಮತ್ತು ಆಡಳಿತ ವೈಖರಿ:
ನಿವೃತ್ತ ಅಧಿಕಾರಿಗಳು, ಐಎಎಸ್ ಆಗಲಿ ಐಪಿಎಸ್ ಆಗಲಿ, ಈ ರೀತಿಯ ಪುಸ್ತಕಗಳನ್ನು ಬರೆಯುವುದು ಜನರಲ್ಲಿ ರಾಜರಕಾರಣಿಗಳ ಅಂತರಂಗ-ಬಹಿರಂಗಗಳ ಬಗೆಗಿನ ಅನೇಕ ಭ್ರಮೆಗಳನ್ನು ದೂರ ಮಾಡುವಲ್ಲಿ ಸಹಾಯ ಮಾಡುತ್ತದೆ. ಗುರುಪ್ರಸಾದ್ ಅವರ ಪುಸ್ತಕ ಇಂತಹ ಸಾಕಷ್ಟು ಒಳನೋಟಗಳನ್ನು ನೀಡುತ್ತದೆ.
ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳುವುದರಿಂದ ರಾಜ್ಯದ ಜನತೆಗೆ ಸದ್ಯ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಕೆಲವು ಕಟು ಸತ್ಯಗಳನ್ನು ತಿಳಿದುಕೊಳ್ಳಲು ನೆರವಾಗಬಹುದು. “ಸಮ್ಮಿಶ್ರ ಸರ್ಕಾರ ನಡೆಸುವ ಬವಣೆ ಏನು ಎಂದು ನಿಧಾನವಾಗಿ ಅರ್ಥವಾಗುತ್ತಾ ಬಂತು’’ ಎಂದು ಗುರುಪ್ರಸಾದ್ ತಮ್ಮ ಪುಸ್ತಕದಲ್ಲಿ ಒಂದು ಕಡೆ ಹೇಳುತ್ತಾರೆ. ಈ ಹೇಳಿಕೆಯನ್ನು ಪುಷ್ಟೀಕರಿಸುವ ಕೆಲವು ಘಟನೆಗಳನ್ನು ಪುಸ್ತಕದಲ್ಲಿ ಹೇಳಲಾಗಿದ್ದು, ಅದನ್ನೇ ಇಲ್ಲಿ ನೀಡಲಾಗಿದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಧರ್ಮ ಸಿಂಗ್ ಮುಖ್ಯಮಂತ್ರಿ ಆದ ನಂತರ, ದಿನಕ್ಕೆ ಎರಡು ಮೂರು ಬಾರಿಯಾದರೂ ದೇವೇ ಗೌಡರ ಫೋನ್ ಬರುತ್ತಿತ್ತಂತೆ. ಈ ಫೋನ್ ಕರೆಯಲ್ಲಿ ಗೌಡರು ಒಂದಲ್ಲಾ ಒಂದು ಸೂಚನೆ ನೀಡುತ್ತಿದ್ದರು. ಇದಲ್ಲದೇ ಮುಖ್ಯಮಂತ್ರಿ ಮನೆಗೆ ಬೆಳಿಗ್ಗೆ ಬರುತ್ತಿದ್ದುದು ಎಚ್ ಡಿ ರೇವಣ್ಣ ಹಾಗೂ ಎಚ್ ಡಿ ಕುಮಾರಸ್ವಾಮಿ (ಆಗ ಕುಮಾರಸ್ವಾಮಿ ಮಂತ್ರಿಯೂ ಆಗಿರಲಿಲ್ಲ). ಸಹೋದರರ ಪೈಕಿ ರೇವಣ್ಣ ಯಾವಾಗಲೂ ಒಂದಲ್ಲಿಂದು ಕಡತ ತರುತ್ತಿದ್ದರು ಹಾಗೂ ಮುಖ್ಯಮಂತ್ರಿಗಳ ಸಹಿ ಪಡೆಯದೇ `ಅನುಗ್ರಹ’ದಿಂದ ತೆರಳುತ್ತಿರಲಿಲ್ಲ.

ಪುಸ್ತಕದಲ್ಲಿ ಉಲ್ಲೇಖಗೊಂಡಿರುವ ಇನ್ನೊಂದು ಪ್ರಮುಖ ಅಂಶ, ಕುಮಾರಸ್ವಾಮಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಸಾಧಿಸಿದ್ದು. ಗುರುಪ್ರಸಾದ್ ಪ್ರಕಾರ, ಕೊನೆಯ ಕ್ಷಣದವರೆಗೂ ದೇವೇಗೌಡರು ಎಲ್ಲವೂ ಸರಿ ಇದೆ, ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾತಾಡುತ್ತೇನೆ ಎಂದು ಧರ್ಮ ಸಿಂಗ್ ಅವರಿಗೆ ಭರವಸೆ ನೀಡುತ್ತಲೇ ಬಂದರು. ಕೊನೆಯಲ್ಲಿ, ಜನವರಿ 18, 2006 ರಂದು ಒಂದು ಕಡೆ ಸಚಿವ ಸಂಪುಟ ಸಭೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಶಾಸಕರು ರಾಜಭವನಕ್ಕೆ ತೆರಳಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದರು. ದೇವೇಗೌಡರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ತಾವೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಎಂ ಪಿ. ಪ್ರಕಾಶ್ ಶಾಸಕಾಂಗ ಪಕ್ಷದ ನಾಯಕ. ಅಲ್ಲದೇ, ಕುಮಾರಸ್ವಾಮಿಗೆ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲ ಎಂದರು. ಕೊನೆಯಲ್ಲಿ ಸಂಜೆಗೆ ಒಂದು ಹೇಳಿಕೆ ನೀಡಿ, ತಮ್ಮ ಜೀವನದ ಅತಿ ಶೋಕದ ದಿನ ಎಂದರು. ಆದರೆ, ಅದೇ ಸಂಜೆ ರಾಜಭವನದಿಂದ ಬರಲಿರುವ ಶಾಸಕರನ್ನು ಸ್ವಾಗತಿಸಲು ದೇವೇಗೌಡರ ಮನೆ ಎದುರು ಶಾಮಿಯಾನ ಹಾಕಿದ್ದಾರೆ ಎಂಬ ವರದಿ ಪಡೆದ ಗುರುಪ್ರಸಾದ್, ಗೌಡರ ಸಾರ್ವಜನಿಕ ಹೇಳಿಕೆಯ ಅಂತರಂಗ-ಬಹಿರಂಗ ತಿಳಿದರು.
ರಾಜ್ಯದ ಮೊದಲ ಮೈತ್ರಿ ಸರ್ಕಾರವನ್ನು ಅತೀ ಹತ್ತಿರದಿಂದ ಕಂಡ ಗುರುಪ್ರಸಾದ್ ಅವರಲ್ಲಿ ಪ್ರತಿಧ್ವನಿ ಈ ಬಗ್ಗೆ ಅಭಿಪ್ರಾಯ ಕೇಳಿತು. “ನನ್ನ ಪ್ರಕಾರ ದೇಶದ/ರಾಜ್ಯದ ಜನರ ಹಿತ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಹೆಚ್ಚೆಚ್ಚು ಸಾಧಿಸಬೇಕು. ಇಲ್ಲದೇ ಹೋದರೆ, ನಮ್ಮ ರಾಜ್ಯದಲ್ಲಾದಂತೆ ಚುನಾವಣೋತ್ತರ ಮೈತ್ರಿ ರಾಜ್ಯಕ್ಕೂ ಮಾರಕ, ರಾಜಕಾರಣಕ್ಕೂ ಮಾರಕ. ನನ್ನ ಪುಸ್ತಕದಲ್ಲಿ ಈ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದೇನೆ. ಮೈತ್ರಿ ಸರ್ಕಾರಗಳು ಸ್ವಲ್ಪ ಮಟ್ಟಿಗಾದರೂ ಜನಪರ ಕಾರ್ಯಕ್ರಮ ನಡೆಸಲು ಚುನಾವಣಾ ಪೂರ್ವ ಮೈತ್ರಿ ಸಹಾಯಕ. ಇದರಿಂದ ಪಕ್ಷಗಳ ನಡುವಿನ ಸಮನ್ವಯ ಮೊದಲೇ ನಿರ್ಧರಿತವಾಗಿರುತ್ತದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಈಗ ಮೈತ್ರಿ ಸರ್ಕಾರಗಳೇ ಅಧಿಕಾರ ನಡೆಸುತ್ತಿವೆ.’’