ಮಹಾತ್ಮಾ ಗಾಂಧೀಜಿಯವರ ತತ್ವ ಆದರ್ಶಗಳು ನಮಗೆಲ್ಲಾ ಮಾದರಿ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು, “ಗ್ರಂಥ ಜೋಳಿಗೆ -ಮೋದಿಯ ಬಳಿಗೆ ” ಎಂಬ ಧ್ಯೇಯ ವಾಕ್ಯದೊಂದಿಗೆ ಮಹಾತ್ಮ ಗಾಂಧಿ ವೇಷಧಾರಿಯಾಗಿ, ವ್ಯಕ್ತಿಯೋರ್ವರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಜನತೆಗೆ ಒಳಿತಾಗುವ ಸಂದೇಶಗಳನ್ನು ಮುದ್ರಿಸಿರುವ ಒಂದು ಚಿಕ್ಕ ಫಲಕ ಹಿಡಿದು ಹೆಗಲಿಗೆ ಜೋಳಿಗೆ ತೊಟ್ಟು ಹಳ್ಳಿ ಹಳ್ಳಿಗಳಿಗೆ ಹೋಗಿ, ಮನೆಮನೆಗೆ ತೆರಳಿ ನಿಮ್ಮ ಮನೆಯಲ್ಲಿರುವ, ಓದದೆ ದೂಳು ಹಿಡಿದಿರುವ, ಪುಸ್ತಕಗಳನ್ನು” ನನ್ನ ಈ ಜೋಳಿಗೆಯಲ್ಲಿ ಹಾಕ್ರಿ ಎವ್ವಾ,” ಎಂದು ಹೇಳುತ್ತಿದ್ದಾರೆ. ಸಂಗ್ರಹಿಸಿದ ಪುಸ್ತಕಗಳನ್ನು ಒಂದು ಮನೆಯ ಕಟ್ಟೆ ಇಲ್ಲವೆ ದೇವಸ್ಥಾನದ ಒಂದು ಮೂಲೆಯ ಸ್ಥಳದಲ್ಲಿ ಒಂದು ಟೇಬಲ್ ದೇಣಿಗೆ ಪಡೆದು, ಒಂದು ಚಿಕ್ಕ ಗ್ರಂಥಾಲಯ ಮಾಡುತ್ತಾರೆ. ಆ ಗ್ರಂಥಾಲಯಕ್ಕೆ ಮಹಾತ್ಮರ ಹೆಸರಿಡುತ್ತಾರೆ. ಈ ರೀತಿ ಮಹಾತ್ಮಾ ಗಾಂಧೀಜಿ ವೇಷಧಾರಿಯಾಗಿ ಹಳ್ಳಿಯಿಂದ ದೆಹಲಿಯವರೆಗೆ ಪಾದಯಾತ್ರೆಯ ಮೂಲಕ ಏಕಾಂಗಿಯಾಗಿ ಜಾಗೃತಿ ಮೂಡಿಸುವ ಪ್ರಯತ್ನ ಪಡುತ್ತಿದ್ದಾರೆ ಗದಗ ಜಿಲ್ಲೆಯ ರೋಣ ತಾಲೂಕಿನ ಕರಕಿಕಟ್ಟಿ ಎನ್ನುವ ಒಂದು ಚಿಕ್ಕ ಕುಗ್ರಾಮದ ಮತ್ತಣ್ಣ ಚೆನ್ನಬಸ್ಸಪ್ಪಾ ತಿರ್ಲಾಪೂರರವರು.

ಗದಗ ಜಿಲ್ಲೆ ಪುಣ್ಯ ಪವಿತ್ರ ಹಾಗೂ ಭಕ್ತಿಯತೆಯ ಭವ್ಯಪರಂಪರೆಯುಳ್ಳ, ಐತಿಹಾಸಿಕ ಗತವೈಭವದ ನಾಡಿಗೆ ಹೆಸರುವಾಸಿಯಾಗಿದೆ. ಅಂತಹ ಗದಗ ಜಿಲ್ಲೆಯ ರೋಣ ತಾಲೂಕಿನಿಂದ ಸುಮಾರು 30 ಕಿ.ಮೀ ಅಂತರದಲ್ಲಿ ಕೊಣ್ಣೂರ ಮಾರ್ಗವಾಗಿ ಹೋದರೆ ನಮಗೆ ಕರಕಿಕಟ್ಟಿ ಎನ್ನುವ ಒಂದು ಚಿಕ್ಕ ಗ್ರಾಮ ಸಿಗುವುದು . ಕೃಷಿ ಈ ಗ್ರಾಮದ ಮುಖ್ಯ ಕಸಬು. ಇಲ್ಲಿ ಊರ ಅಗಸಿಯ ಒಂದು ಕಿರಿದಾದ ಭೋಳಿನಲ್ಲಿ ಹನಮಂತದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಗುಡಿಸಲು ಇದೆ. ಆ ಗುಡಿಸಲೊಳಗೆ ಹೋಗಿ ನೋಡಿದರೆ ಎಂತಹವರೂ ಆಶ್ಚರ್ಯ ಚಕಿತರಾಗುವರು. ಗೋಡೆ, ಬಾಗಿಲು, ಕಿಟಗಿ, ಎಲ್ಲವೂ ಅಕ್ಷರಮಯ.
ಈ ಮನೆಯನ್ನು ಎಲ್ಲರೂ ಮುತ್ತಣ್ಣನ “ಅಕ್ಷರ ಮನೆ” ಎಂದು ಕರೆಯುತ್ತಾರೆ. ಅಷ್ಟೆ ಅಲ್ಲದೆ ಕೊಡುಗೆಯಾಗಿ ಬಂದ ಪುಸ್ತಕಗಳನ್ನು ಸೇರಿಸಿ ಅಷ್ಟರಲ್ಲಿಯೇ ಒಂದು ಚಿಕ್ಕ ಗ್ರಂಥಾಲಯವನ್ನು ಮಾಡಿಕೊಂಡಿದ್ದಾರೆ. ಉಪಜೀವನಕ್ಕಾಗಿ ಒಂದು ಚಿಕ್ಕ ಉಪಹಾರಕೂಟವನ್ನು ಮಾಡಿಕೊಂಡು ರುಚಿರುಚಿಯಾದ ಬಡಂಗ ಭಜ್ಜಿ ಕೊಟ್ಟು ಬಿಸಿಬಿಸಿಯಾದ ಚಹಾ ಕಪ್ಪು ಕೈಯಲ್ಲಿಟ್ಟು ಶರಣು ಶರಣಾರ್ಥಿಗಳನ್ನು ತಿಳಿಸುತ್ತಾ, ವಚನಗಳನ್ನು ಪಠಿಸುತ್ತಾ ಎಲ್ಲರಿಗೂ ಪ್ರೀತಿಯ ಮುತ್ತಣ್ಣನೆನಿಸಿಕೊಂಡಿದ್ದಾರೆ.
ಇವರ ಈ ಅಕ್ಷರ ಮನೆಗೆ ದೊಡ್ಡ ದೊಡ್ಡ ಗಣ್ಯಾತಿಗಣ್ಯರು, ಪೂಜ್ಯರು, ಸಾಧಕರು, ಬಂದು ಮುತ್ತಣ್ಣನ ಪ್ರೀತಿಪೂರ್ವಕ ಆತಿಥ್ಯಕ್ಕೆ ಭಾಜನರಾಗಿದ್ದಾರೆ. ಈ ಕರೋನಾ ಸಮಯದಲ್ಲಂತು ಶಾಲಾ ಮಕ್ಕಳನ್ನು ಸಂಬಾಳಿಸುವುದು ಮನೆಯ ಪಾಲಕರಿಗೆ ದೊಡ್ಡ ತಲೆನೋವಾಗಿತ್ತು ಆ ಸಮಯದಲ್ಲಿ ಈ ಮುತ್ತಣ್ಣ ಬಿಡುವು ಮಾಡಿಕೊಂಡು ಓಣಿಯಲ್ಲಿರು ಮಕ್ಕಳನ್ನು ಒಂದು ದೇವಸ್ಥಾನದ ಕಟ್ಟೆಯ ಮೇಲೆ ಸಾಮಾಜಿಕ ಅಂತರದೊಂದಿಗೆ ಕುಳ್ಳರಿಸಿ ಒಳ್ಳೆಯ ನೀತಿಕಥೆಗಳನ್ನು, ಮಹಾತ್ಮರ ವಚನಗಳನ್ನು , ನಾಣ್ಣುಡಿಗಳನ್ನು,ಹೇಳುತ್ತಾ ಮಕ್ಕಳ ಪ್ರೀತಿಯನ್ನ ಸಂಪಾದಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಂತಹ ಸಾಮಾಜಿಕ ಕಳಕಳಿ ಇರುವ ಮುತ್ತಣ್ಣ ಕರೋನಾ ಬಗ್ಗೆ ಭಯ ನಿಲ್ಲಿಸಿ ಜಾಗೃತಿ ಮೂಡಿಸುತ್ತಾ, ದೇಶಭಕ್ತಿ, ಪರಿಸರ ಪ್ರೇಮ ಹಾಗೂ ಪ್ರಜ್ಞಾವಂತಿಕೆಯ ದ್ಯೇಯೋದ್ದೇಶಗಳನ್ನು ಹೊತ್ತು ಹಳ್ಳಿಯಿಂದ ದೆಹಲಿವರೆಗೆ ಕಾಲ್ನಡಿಗೆಯ ಮೂಲಕ ಸಂಕಲ್ಪಯಾತ್ರೆಯನ್ನು ಸಪ್ಟಂಬರ್ 5 ನೇ ರಂದು ಪ್ರಾಂಭಿಸಿದರು. ಕರಕಿ ಕಟ್ಟಿಯಿಂದ ಗಾಂಧೀಜಿ ವೇಷಧಾರಿಯಾಗಿ ಹೊರಟ ಇವರ ಪಾದಯಾತ್ರೆ ಹುಬ್ಬಳ್ಳಿ ಧಾರವಾಡ ಮೂಲಕ ಕಿತ್ತೂರು ತಲುಪುವಷ್ಟರ ಹೊತ್ತಿಗೆ ಅಲ್ಲಲ್ಲಿ ಗ್ರಾಮಸ್ತರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಬೈಲಹೊಂಗಲ ತಾಲೂಕಿನ ಗಿರಿಯಾಲ (ಕೆ.ಬಿ) ಎನ್ನುವ ಗ್ರಾಮದ ಜನ ಇವರನ್ನು ಭವ್ಯ ಸ್ವಾಗತ ನೀಡಿ ಗ್ರಾಮಕ್ಕೆ ಆಹ್ವಾನಿಸಿಕೊಂಡು ,ಜೈಕಾರ ಹಾಕುತ್ತಾ ,ಮುತ್ತಣ್ಣನವರು ಕೈಗೊಂಡ ಕಾರ್ಯವನ್ನು ಕೊಂಡಾಡಿದರು.
ಪಲ್ಲಕ್ಕಿ ಉತ್ಸವದ ಹಾಗೆ ತುಂಬಿದ ಬಿಂದಿಗೆ ತಂದು, ನೀರು ಹಾಕಿ ಆರತಿ ಬೆಳಗಿ ಹರಸಿ ಹಾರೈಸಿದರು. ಹಳೆಯ ಪುಸ್ತಕಗಳನ್ನು ಜೋಳಿಗೆಯಲ್ಲಿ ಹಾಕಿ ಕೈಮುಗಿದು ನಮಸ್ಕರಿಸಿದರು. ಅಲ್ಲಿಂದ ಗೋಕಾಕ ಮಾರ್ಗವಾಗಿ ಹೊರಟ ಇವರ ಪಾದಯಾತ್ರೆಯ ಸುದ್ದಿ ತಿಳಿದ ಶಿಕ್ಷಣಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಸಿ ಶಿಕ್ಷಕರಿಂದೊಡಗೂಡಿ ಭವ್ಯವಾಗಿ ಸ್ವಾಗತಿಸಿ ಜಾಗೃತಿಗಾಗಿ ಕೈಜೋಡಿಸಿ ಬಗೆಬಗೆಯ ಪುಸ್ತಕಗಳಿಂದ ಮುತ್ತಣ್ಣನವರ ಗ್ರಂಥಜೋಳಿಗೆಯನ್ನು ತುಂಬಿಸಿ ಅಲ್ಲಲ್ಲಿ ಶಾಲಾ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಆ ಸಸಿಗೆ ಬಾಪೂಜಿ ಎಂದು ಹೆಸರಿಟ್ಟು ಮುತ್ತಣ್ಣನವರ ಕಾರ್ಯಕ್ಕೆ ಬಲ ತುಂಬಿದ್ದಾರೆ .

“ಇಂದು ದೆಹಲಿವರೆಗೆ ನನ್ನ ಈ ಗ್ರಂಥ ಜೋಳಿಗೆಯ ಪಾದಯಾತ್ರೆ ಬಂದು ತಲುಪಬೇಕಾದರೆ ಅದಕ್ಕೆ ಬಲ ಮತ್ತು ಮಾರ್ಗ ತೋರಿಸಿದವರು ಗೋಕಾಕ ತಾಲೂಕಿನ ಅತ್ಯಂತ ಕ್ರೀಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಿ.ಬಳಗಾರವರು,” ಎಂದು ಮುತ್ತಣ್ಣ ಹೇಳುತ್ತಾರೆ. ಈ ರೀತಿಯಲ್ಲಿ ಜನತೆಯಿಂದ ಒಳ್ಳೆಯ ಪ್ರೇರಣೆ ಪಡೆದುಕೊಂಡರೆ ಇನ್ನು ಕೆಲವು ಕಡೆ ಹಾಸ್ಯಾಸ್ಪದವಾಗಿ ನೋಡಿ ನಕ್ಕು ಮನರಂಜನೆ ಪಡೆದುದ್ದು ಉಂಟು.
ಮದ್ಯಪಾನ ಸೇವಿಸಬೇಡಿ ಅದು ಜೀವಕ್ಕೆ ಹಾನಿಕರ ,ದೇಶದ ಕಾನೂನನ್ನು ಎಲ್ಲರೂ ಗೌರವಿಸೋಣ ಮತ್ತು ಪಾಲಿಸೋಣ,ನಾವೆಲ್ಲರೂ ಶೌಚಾಲಯ ನಿರ್ಮಿಸಿಕೊಂಡು ಬಹಿರ್ದೆಸೆ ಮುಕ್ತ ಸ್ವಚ್ಛ ಭಾರತ ,ಸಮೃದ್ಧ ಭಾರತ ಮತ್ತು ಭವ್ಯ ಭಾರತವನ್ನಾಗಿಸೋಣ, ಮಹದಾಯಿ ನದಿ ಜೋಡಣೆಯಾಗಿ ರೈತರ ಗೋಳು ನಿಲ್ಲಿಸೋಣ ಮತ್ತು ಕರೋನಾ ಮಹಾಮಾರಿ ಬಗ್ಗೆ ಭಯಬಿಟ್ಟು ಎಲ್ಲರೂ ಸಾಮಾಜಿಕ ಅಂತರದಿಂದ ಮಾಸ್ಕ್ ತೊಟ್ಟು ಜಾಗೃತರಾಗಿರೋಣ ಎಂದು ಬರೆದಿರುವ ಇವರ ಕೈಯಲ್ಲಿರುವ ಫಲಕ ಓದಿದ್ರೆ ಇವರೆಂತಹ ಸಾಮಾಜಿಕ ಕಳಕಳಿತೊಟ್ಟು ಈ ಪಾದಯಾತ್ರೆ ಮಾಡುತ್ತಿದ್ದಾರೆಂದು ತಿಳಿಯುವದು.
ಎಷ್ಟೋ ಜನ ಈ ಕರೋನಾ ಮಹಾಮಹಾರಿಗೆ ಹೆದರಿ ಜೀವನವೇ ಅಂತ್ಯವಾಯಿತೆಂದು ಮಾನಸಿಕ ಸ್ಥಿತಿಯಲ್ಲಿದ್ದಾರೆ ಮತ್ತು ಭಯದಲ್ಲಿದ್ದಾರೆ. ಅಂತಹವರಿಗೆ ದೈರ್ಯ ತುಂಬಿ ಆರೋಗ್ಯವಾಗಿ, ಸಧೃಡತೆಯಿಂದ ಬದುಕು ಸಾಗಿಸುವ ಇವರ ಜಾಗೃತಿ ಕಾರ್ಯ ಶ್ಲಾಘನಿಯ.