ಗದುಗಿಗೆ ಬರುವ ಹಲವರ ಹಸಿವು ನೀಗಿಸಲು ಜನರಿಂದ ಜನರಿಗಾಗಿ ಎಂಬ ವಿಶಿಷ್ಟ ಯೋಜನೆಯ ಪ್ರಯತ್ನಯೊಂದು ಸಮಾನ ಮನಸ್ಕರಿಂದ ಶುರುವಾಯಿತು. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ ಯೋಜನೆ ಸಿದ್ಧಗೊಂಡಿತು. ಹಾಗಾದರೆ ನಮ್ಮ ನಮ್ಮ ಕೈಯಿಂದ ಸ್ವಲ್ಪದುಡ್ಡು ಹಾಕಿ ಶುಭ ಕಾರ್ಯ ಪ್ರಾರಂಭ ಮಾಡೋಣ ಮುಂದೆನಾಗುತ್ತೋ ನೋಡೋಣ ಎಂದು ಶುರು ಮಾಡಿಯೇ ಬಿಟ್ಟರು.
ಇದು ಮೂರುವರೆ ವರ್ಷಗಳ ಹಿಂದಿನ ಮಾತು. ಇಂದು ಆ ಒಂದು ಚಿಕ್ಕ ಪ್ರಯತ್ನ ನೂರಾರು ಜನರಿಗೆ ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದೆ. ಇದರ ಹೆಸರು ಅನ್ನಪೂರ್ಣ ಪ್ರಸಾದ ನಿಲಯ. ಅಂದು ಧೈರ್ಯ ಮಾಡಿ ಶುರು ಮಾಡಿದ ಈ ಪ್ರಯತ್ನವನ್ನು ಮೆಚ್ಚಿಕೊಂಡ ಕೆಲವರು ತಾವೇ ಖುದ್ದು ಮುಂದೆ ಬಂದ ಸಹಾಯ ಧನ ನೀಡತೊಡಗಿದರು. ಪ್ರತಿದಿನ ನೂರಾರು ಜನರು ಇಲ್ಲಿ ಊಟ ಮಾಡುತ್ತಿದ್ದಾರೆ. ಆಶಕ್ತ ವೃದ್ಧರು ಬಂದರೆ ಇಲ್ಲಿ ಊಟ ಉಚಿತ, ಚಿಕ್ಕ ಮಕ್ಕಳು ಹಾಗೂ ಶಾಲಾ ಮಕ್ಕಳು ಬಂದರೆ ಕೇವಲ 2 ರೂಪಾಯಿ.
ಹೌದು ಇದು ನಿಜ. ಗದುಗಿನ ಪತ್ರಕರ್ತರಾದ ಮಂಜುನಾಥ ಬೊಮ್ಮನಕಟ್ಟಿ, ಕಳಸಾಪೂರ ಶೆಟ್ಟರು ಮತ್ತು ಕೆಲವರು ಸೇರಿ ಈ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಗದುಗಿನ ಹಳೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯುವ ಈ ಅನ್ನ ಸಂತರ್ಪಣೆ ಗದುಗಿನ ಜನರನ್ನು ಮಂತ್ರಮುಗ್ಧಗೊಳಿಸಿದೆ. ಇಂದು ಮಿನೆರಲ್ ವಾಟರ್ ಬಾಟಲ್ ಗೆ 20 ರೂ ತೆತ್ತಬೇಕು, ಬೇರೆ ಬೇರೆ ಹೊಟೆಲ್‍ಗಳಲ್ಲಿ 10 ರೂ ಗೆ ಕಾಫಿ, ಟೀ ಅಂದರೆ ಒಂದು ಸಣ್ಣ ಕಪ್ ನಲ್ಲಿ ಅದೂ ಅರ್ಧದ ಮೇಲಿರುವಂತೆ ಕೊಡುತ್ತಾರೆ. ಕೆಲವು ಪ್ರತಿಷ್ಠಿತ ಹೋಟೆಲ್ ಗಳಿಗೆ ಕಾಲಿಟ್ಟರೆ ಅನ್ನ ಸಾಂಬಾರಗೆ 40 ರೂ ತೆತ್ತಬೇಕು. ಇಂತಹ ಕಾಲದಲ್ಲಿ ಬರಿ ಐದೇ ರೂಪಾಯಿಗೆ ಹೊಟ್ಟೆ ತುಂಬಿಸುವ ಈ ಯೋಜನೆ ಶ್ಲಾಘನೀಯ.

ಹಾಗಂತ ಗುಣಮಟ್ಟ ಕಡಿಮೆಯೇನಿಲ್ಲ:
ಬರೀ 5 ರೂಪಾಯಿಗೆ ಕೊಡಬೇಕು ಅಂಥ ಅನ್ನ ಸಾಂಬಾರಿನ ಗುಣಮಟ್ಟ ಕಡಿಮೆ ಇರುವುದಿಲ್ಲ. ಉತ್ತಮ ಗುಣಮಟ್ಟದ ಅಕ್ಕಿ, ಬೇಳೆಯನ್ನು ಬಳಸುತ್ತಾರೆ. ಜೊತೆಗೆ ಒಂದು ಉಪ್ಪಿನಕಾಯಿಯೂ ಇರುತ್ತದೆ. ಇವರ ಬಿನ್ನಹವಿಷ್ಟೇ. ತಟ್ಟೆಯಲ್ಲಿ ಅನ್ನ ಬಿಡುವಂತಿಲ್ಲ, ಸ್ವಲ್ಪ ಸ್ವಲ್ಪ ದಂತೆ ನಾಲ್ಕೈದು ಬಾರಿ ಹಾಕಿಸಿಕೊಂಡರೂ ಪರವಾಗಿಲ್ಲ, ಆದರೆ, ಅನ್ನ ಬಿಡುವಂತಿಲ್ಲ.
ಸರಿಯಾಗಿ 1 ಗಂಟೆಗೆ ಆರಂಭವಾಗುವ ಈ ಸೇವೆ ಮಧ್ಯಾಹ್ನ 3 ರ ವರೆಗೂ ನಡೆಯುತ್ತದೆ. ಪ್ರತಿದಿನ 200 ರಿಂದ 300 ಜನರು ಇಲ್ಲಿ ಊಟ ಮಾಡುತ್ತಾರೆ.
ಜನರ ಮತ್ತು ಜನಪ್ರತಿನಿಧಿಗಳ ಪ್ರೀತಿಪೂರ್ವಕ ದೇಣಿಗೆ ಇವರಿಗೆ ಸಹಾಯ ಹಸ್ತ ಚಾಚಿದೆ. ಹಸಿದು ಬಂದ ಜನರ ಹಸಿವು ತೀರಿಸುವ ಇವರ ಕಾರ್ಯ ನಿಜಕ್ಕೂ ಅಭಿನಂದನಾರ್ಹ.
ಈ ಯೋಜನೆಯನ್ನು ಅನ್ನಪೂರ್ಣೇಶ್ವರಿ ಪ್ರಸಾದ ನಿಲಯವು ಜನವರಿ 2016 ರಲ್ಲಿ ಆರಂಭಿಸಿತು. ಅಂದಿನಿಂದ ಇವತ್ತಿನವರೆಗೂ ನಿತ್ಯ ತಪ್ಪದೇ ಅನ್ನ ದಾಸೋಹ ನಡೆಯುತ್ತಿದೆ. ಆಸ್ಪತ್ರೆಯಲ್ಲಿರುವ ರೋಗಿಗಳ ಸಹವರ್ತಿಗಳು ಸಂಬಂಧಿತ ರಸೀದಿಗಳನ್ನು ತೋರಿಸಿದರೆ ರೋಗಿಗಳಿಗೆ ಮತ್ತು ಸಹವರ್ತಿಗಳಿಗೆ ಉಚಿತ ಪಾರ್ಸಲ್ ಊಟವನ್ನು ನೀಡಲಾಗುವುದು. ಇಲ್ಲಿಯವರೆಗೆ ಅಂದಾಜು ಮುನ್ನೂರಕ್ಕೂ ಹೆಚ್ಚಿನ ಜನರು ಸ್ವಯಂ ಪ್ರೇರಣೆಯಿಂದ ಈ ಒಳ್ಳೆಯ ಕೆಲಸಕ್ಕೆ ದಾನ ಮಾಡಿದ್ದಾರೆ. ಪ್ರತಿದಿನ ಸುಮಾರು 600 ಜನರು ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ ಎಂಬುದು ಪ್ರಸಾದ ನಿಲಯದ ಸೇವಕರ ಅಂಬೋಣ.
“ವೃತ್ತಿಯಿಂದ ನಾನೊಬ್ಬ ಪತ್ರಕರ್ತ, ಪ್ರವೃತ್ತಿಯಿಂದ ಸಮಾಜ ಸೇವಕ, ಮೊದಲಿನಿಂದಲೂ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿದ್ದೇನೆ. ಏನಾದರೊಂದು ವಿನೂತನ ಸಮಾಜ ಸೇವೆಯನ್ನು ಮಾಡುವ ತುಡಿತ ನನ್ನ ಮನದಲ್ಲಿತ್ತು. ಹೀಗಾಗಿ ಸಮಾನ ಮನಸ್ಕರ ಜೊತೆಗೆ ಈ ಕಾರ್ಯವನ್ನು ಪ್ರಾರಂಭಿಸಿದೆ. ಜನರ ಬೆಂಬಲ ಮತ್ತು ಹಾರೈಕೆಯೂ ಸಿಕ್ಕಿತು. ನಿತ್ಯ ಜನರು ಇಲ್ಲಿ ಊಟ ಮಾಡಿ ನಮ್ಮನ್ನು ಹರಸಿ ಹೋಗುತ್ತಾರೆ. ಇದಕ್ಕಿಂತ ಹೆಚ್ಚಿನದೇನು ಬೇಕು,’’ ಎನ್ನುತ್ತಾರೆ ಪತ್ರಕರ್ತ ಮಂಜುನಾಥ ಬೊಮ್ಮನಕಟ್ಟಿ.
ಈ ಕೆಲಸದಲ್ಲಿ ಇವರಿಗೆ ಇಬ್ಬರು ಮಹಿಳೆಯರು – ಸುಭದ್ರಕ್ಕ ಮತ್ತು ಶೈಲಜಾ – ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅನ್ನ ಮತ್ತು ಸಾರು ನೀಡಲು ಪ್ರತಿದಿನ ಬರುತ್ತಾರೆ.
ಇಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಹಿರಿಯರ ಪುಣ್ಯಸ್ಮರಣೆ, ಗೃಹಪ್ರವೇಶ ಹಾಗೂ ಇನ್ನಿತರ ಆಚರಣೆಗಳನ್ನು ಆಚರಿಸಬಹುದು. ಒಂದು ದಿನದ ಪ್ರಸಾದ ವ್ಯವಸ್ಥೆಗೆ 9,000 ಸಾವಿರ ರೂಪಾಯಿ. ಸಿಹಿ ಪ್ರಸಾದಕ್ಕೆ 11,500 ರೂಪಾಯಿ ನೀಡಬಹುದು. ಇಲ್ಲಿ ಇಷ್ಟೇ ಕೊಡಬೇಕು ಎಂಬುದಿಲ್ಲ. ನಿಮ್ಮ ಮನದಿಚ್ಛೆ ಹಾಗೂ ಶಕ್ತ್ಯಾನುಸಾರ 5 ರೂ ಯಿಂದ ಎಷ್ಟಾದರೂ ಕೊಡಬಹುದು ಮತ್ತು ವಸ್ತುಗಳ ರೂಪದಲ್ಲಿಯೂ ದಾನ ಮಾಡಬಹುದು.
“ನನ್ನ ಹೆಂಡತಿ ಆಸ್ಪತ್ರೆಯಲ್ಲಿದ್ದಾಳೆ. ನಾನು ಅವಳೊಡನೆ ಇಲ್ಲೇ ವಾರದಿಂದ ಇದ್ದೇನೆ. ಬೇರೆ ಹೋಟೆಲ್ ಹೋದರೆ ರೂ 50 ರವರೆಗೂ ಊಟಕ್ಕಾಗಿ ಕೊಡಬೇಕು. ಇಲ್ಲಿ ಬರೀ 5 ರೂ ಗೆ ಹೊಟ್ಟೆ ತುಂಬಾ ಊಟ ಸಿಗುತ್ತೆ. ನನ್ನ ಹೆಂಡತಿಗೂ ಇಲ್ಲಿಂದಲೇ ಪಾರ್ಸಲ್ಲು ಒಯ್ಯುತ್ತೇನೆ,’’ ಎನ್ನುತ್ತಾರೆ ಮಲ್ಲಪ್ಪ ಎಂಬ ಮುಳಗುಂದದ ನಿವಾಸಿ.
“ಇಲ್ಲಿ ಮೊದಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದನ್ನು ನೋಡುತ್ತಿದ್ದೆ. 5 ರೂಗೆ ಇವರೆಂಥ ಊಟ ಕೊಡಬಹುದು ಎಂದು ಒಂದು ಸಾರಿ ರುಚಿ ನೋಡಲು ಬಂದಿದ್ದೇನೆ. ತಿಂದ ಮೇಲೆ ಅನಿಸಿತು ಇದು ನಿಜಕ್ಕೂ ಚೆನ್ನಾಗಿದೆ,’’ ಎನ್ನುತ್ತಾರೆ ಹಾತಲಗೇರಿಯ ಮಾರುತಿ ಬೇಲೇರಿ.
ಇಷ್ಟೆಲ್ಲ ವಿವಿರಗಳನ್ನರಿತ ಮೇಲೆ ಇದು ಎಲ್ಲಿದೆ ಎಂಬ ಕಾತುರವೇ – ಗದುಗಿನ ಗಾಂಧೀ ವೃತ್ತದ ಹತ್ತಿರವಿರುವ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬಣ್ಣ ಬಣ್ಣದ ಆಸನಗಳು ಕಾಣಿಸುತ್ತವೆ. ಇದೇ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ.