ಈ ಹಳ್ಳಿಯಲ್ಲಿ ಎಲ್ಲೆಂದರೆ ಅಲ್ಲಿ ಕಾಣಸಿಗುವುದು ಕೌದಿ ಹೊಲೆಯುತ್ತ ಕುಳಿತಿರುವ ಮಹಿಳೆಯರು. 200ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ಕೌದಿ ಹೊಲೆಯುವುದನ್ನೇ ಕಾಯಕವಾಗಿರಿಸಿಕೊಂಡಿದ್ದಾರೆ. ಇದು ಇಲ್ಲಿನ ವಿಶಿಷ್ಟ ಕಲೆ ಇದು.
ಊರಿನ ಎಲ್ಲ ಮಹಿಳೆಯರು ಕೌದಿ ಹೊಲೆಯುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. ಈ ಕಸುಬು ಇವರ ಪೂರ್ವಜರಿಂದ ಬಂದಿದೆ. ಇಂದಿಗೆ 150 ವರ್ಷಗಳಿಂದ ಕೌದಿ ಹೊಲೆಯುತ್ತಿದ್ದಾರೆ ಇಲ್ಲಿನ ಮಹಿಳೆಯರು. ಇಲ್ಲಿನ ಕೌದಿ ಗದಗ, ಹುಬ್ಬಳ್ಳಿಯಲ್ಲಷ್ಟೇ ಅಲ್ಲ, ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲೂ ಬೇಡಿಕೆ ಹೊಂದಿದೆ. ವರ್ಷ ತುಂಬಾ ಕೌದಿ ಹೊಲೆಯುವ ಆರ್ಡರ್‌ಗಳು ಇಲ್ಲಿನ ಮಹಿಳೆಯರಿಗೆ ಲಭ್ಯ. ಹಲವು ಜನರು ಕೌದಿಗೆಂದೇ ಈ ಚಿಕ್ಕ ಹಳ್ಳಿಗೆ ಧಾವಿಸುತ್ತಾರೆ.
ಈ ಹಳ್ಳಿಯ ಹೆಸರು ಜಂತ್ಲಿ-ಶಿರೂರ. ಇವು ಎರಡು ಹಳ್ಳಿಗಳಾದರೂ, ಹಲವು ಕಾಲದಿಂದಲೂ ಇವುಗಳನ್ನು ಅವಳಿ ಹಳ್ಳಿಗಳೆಂದೇ ಕರೆಯುವುದರಿಂದ ಜಂತ್ಲಿ-ಶಿರೂರ ಎಂದೇ ಕರೆಯಲಾಗುತ್ತದೆ. ಆದರೆ, ಕೌದಿ ಹೊಲೆಯುವವರು ಜಂತ್ಲಿಯಲ್ಲಿ ಮಾತ್ರ ಸಿಗುತ್ತಾರೆ. ಗದಗದಿಂದ 28 ಕಿಮೀ ದೂರವಿರುವ ಈ ಹಳ್ಳಿಯ ಕೌದಿ ಗುಣಮಟ್ಟಕ್ಕಾಗಿ ಪ್ರಸಿದ್ಧಿ ಪಡೆದಿದೆ. ಕೌದಿ ಹೊಲೆಯಲು ಇಂದಿಗೂ ಗುಣಮಟ್ಟದ ‘ನೂಲು ದಾರ’ವನ್ನೇ ಬಳಸುತ್ತಾರೆ. ಇಲ್ಲಿ ಹೊಲಿಗೆ ಯಂತ್ರಗಳಿಲ್ಲ. ಇಂದಿಗೂ ಇವರೆಲ್ಲ ತಮ್ಮ ಕೈಯಿಂದಲೇ ಹೊಲಿಯುವುದರಿಂದ ಇಲ್ಲಿಯ ಕೌದಿಗಳು ಗಟ್ಟಿಯಾಗಿರುತ್ತವೆ ಹಾಗೂ 10 ವರ್ಷಗಳ ಕಾಲ ಬಾಳಿಕೆ ಬರುತ್ತವೆ.
ಕೌದಿ ಅಂದರೆ ಏನು?
ಇದು ಹಳೆಯ ಕಾಲದ ಜನರು ಚಳಿಗಾಲಕ್ಕೆಂದೇ ಬಳಸುವ ಹಲವು ಪದರುಗಳುಳ್ಳ ಹೊದಿಕೆ. ನಾಲ್ಕರಿಂದ ಆರು ಪದರುಗಳ ಬಟಗಟೆಯನ್ನು ಒಂದರ ಮೇಲೊಂದು ಸಮವಾಗಿ ಜೋಡಿಸಿ ಹೊಲಿಯುತ್ತಾರೆ. ಒಂದರ ಮಧ್ಯೆ ಒಂದು ಹೆಚ್ಚೂಕಡಿಮೆಯಾಗದಂತೆ ಸಣ್ಣ ಸಣ್ಣ ಅಂತರಗಳಲ್ಲಿ ಕೈಯಿಂದ ಹೊಲಿಗೆ ಹಾಕುವುದರಿಂದ ಹೆಚ್ಚು ಬಾಳಿಕೆ ಬರುತ್ತವೆ. ಎಷ್ಟೇ ಚಳಿಯಿರಲಿ, ಒಂದು ಕೌದಿ ಹೊದ್ದುಕೊಂಡರೆ ಬೆಚ್ಚನೆಯ ಅನುಭವ ಪಡೆಯಬಹುದು. ಉತ್ತರ ಕರ್ನಾಟಕದ ಬಹುತೇಕ ಮನೆಗಳಲ್ಲಿ ಈ ಕೌದಿಗಳನ್ನು ಸಾಮಾನ್ಯವಾಗಿ ಕಾಣಬಹುದು.
ಇಲ್ಲಿ ಯಾಕೆ ಪ್ರಸಿದ್ಧ?
ಈ ಊರಿನ ಮಹಿಳೆಯರಿಗೆ ಕೌದಿ ಹೊಲೆಯುವ ಕಲೆ ಪೂರ್ವಜರಿಂದ ಬಂದಿದೆ. ಯಾವುದೇ ಯಂತ್ರವನ್ನು ಬಳಸದೆ ಕೈಯಿಂದ ಹೊಲೆಯುವ ಈ ಕೌದಿಗೆ ಇಬ್ಬರಿಂದ ಮೂರು ಜನರ ಶ್ರಮ ಬೇಕಾಗುತ್ತದೆ. ಒಂದೇ ಕೌದಿ ಹೊಲೆಯಲು ಇಬ್ಬರಿಂದ ಮೂರು ಮಹಿಳೆಯರು ಮೂರು ದಿನಗಳ ಕಾಲ ತೆಗೆದುಕೊಳ್ಳುತ್ತಾರೆ. ಆರರಿಂದ ಎಂಟು ಅಡಿಗಳಷ್ಟು ಉದ್ದವಿರುವ ಬಟ್ಟೆಗಳ ನಾಲ್ಕರಿಂದ ಆರು ಪದರಗಳನ್ನು ಸೇರಿಸಿ ಸಮವಾಗಿ ಜೋಡಿಸಿ ಹೊಲೆಯುವುದೇ ಒಂದು ದೊಡ್ಡ ಸವಾಲು. 600ರಿಂದ 800 ರೂ.ಗಳಿಗೆ ಕೌದಿಗಳು ಇಲ್ಲಿ ಲಭ್ಯ.
ಮಾಮೂಲಿ ಹೊಸ ಬಟ್ಟೆಯ ಕೌದಿಗಳ ಹೊರತಾಗಿ ಈ ಊರಿನ ಮಹಿಳೆಯರು ಹಳೆಯ ಬಟ್ಟೆಗಳನ್ನು ಸೇರಿಸಿಯೂ ಕೌದಿಗಳನ್ನು ಹೊಲಿಯುತ್ತಾರೆ. ಹಲವು ಜನರು ತಮ್ಮ ಮನೆಯಲ್ಲಿ ಹಳೆಯ ಚಾದರ, ಅಂಗಿ, ಲುಂಗಿಗಳನ್ನು ಸೇರಿಸಿ ಇವರಿಗೆ ಒಪ್ಪಿಸಿಹೋಗುತ್ತಾರೆ. ಒಂದು ವಾರದೊಳಗೆ ಅವರ ಕೌದಿ ರೆಡಿ. ಇದಕ್ಕೆ ಇವರು 300ರಿಂದ 400 ರೂ. ನೀಡುತ್ತಾರೆ.
ಹೇಗೆ ಪ್ರಸಿದ್ಧಿ ಪಡೆದುಕೊಂಡಿತು?
150 ವರ್ಷಗಳ ಹಿಂದೆ ಗದಗ ಭಾಗದಲ್ಲಿ ಅನೇಕರು ಕೌದಿಗಳನ್ನು ಹೊಲೆಯುತ್ತಿದ್ದರು. ಸ್ವಲ್ಪ ಕಾಲದಲ್ಲಿಯೇ ಹಲವರು ವ್ಯಾಪಾರಿ ಮನೋಭಾವದಿಂದ ತಮ್ಮ ಗ್ರಾಹಕರನ್ನು ಕಳೆದುಕೊಂಡರು. ಆಗ ಬರಗಾಲದಿಂದ ತತ್ತರಿಸಿದ್ದ ಈ ಊರಿನ ಮಹಿಳೆಯರು ಹೊಟ್ಟೆಗೆ ಹಿಟ್ಟು ಸಿಕ್ಕರೆ ಸಾಕು ಎಂದು ಉತ್ತಮ ಗುಣಮಟ್ಟದ ಕೌದಿಯನ್ನು ಜನರಿಗೆ ಕೊಟ್ಟರು. ಅಂದಿನಿಂದ ಇಂದಿನವರೆಗೆ ಇವರ ಬೆಲೆ ಏರಿಸದೆ ಗುಣಮಟ್ಟದ ಕೌದಿಗಳನ್ನು ಜನರಿಗೆ ಕೊಡುತ್ತಿದ್ದಾರೆ. ಆದ್ದರಿಂದ ಈ ಕೌದಿಗಳಿಗೆ ಬೇಡಿಕೆ ಹೆಚ್ಚಾಗುತ್ತ ಹೋಯಿತು.
ಬಸಮ್ಮ ಆಲೂರು ಹೇಳುವ ಪ್ರಕಾರ, “ನಮಗೆ ಬೇರೆ ಊರುಗಳಿಂದ ಆರ್ಡರ್ ಬರುತ್ತವೆ. ಒಂದು ಸಾರಿ ಐವತ್ತು ಅಥವಾ ಎಪ್ಪತ್ತು ಕೌದಿಗಳನ್ನು ಹೊಲೆಯುವ ಕೆಲಸ ಬರುತ್ತೆ. ಆಗ ಹಗಲು-ರಾತ್ರಿ ಎನ್ನದೆ ಎಲ್ಲರೂ ಕಾಯಕದಲ್ಲಿ ತೊಡಗುತ್ತೇವೆ. ಅವರು ಹೇಳಿದ ಸಮಯಕ್ಕೆ ಅಷ್ಟೂ ಕೌದಿಗಳನ್ನು ಹೊಲಿದುಕೊಡುತ್ತೇವೆ.”
ಆರ್ಡರ್ ಹೇಗೆ ಬರುತ್ತವೆ?
ಈ ಹಳ್ಳಿಯ ಕೆಲ ಮಹಿಳೆಯರು ಸುತ್ತಮುತ್ತಲ ಪಟ್ಟಣಗಳಲ್ಲಿರುವ ಕಾಯಂ ಗ್ರಾಹಕರ ಮನೆಗಳಿಗೆ ತೆರಳುತ್ತಾರೆ. ಅವರು ತೆರಳುವ ದಿನಾಂಕವನ್ನು ಮೊದಲೇ ಹೇಳಿರುತ್ತಾರೆ. ಆ ಕಾಯಂ ಗ್ರಾಹಕರ ಮನೆಯಲ್ಲಿ ಒಂದಿಷ್ಟು ಕೌದಿ ಹೊಲೆಸಬೇಕೆಂದು ಇಚ್ಛಿಸುವವರು ಸೇರಿರುತ್ತಾರೆ. ಅವರ ಮನೆಯಿಂದ ಹೊಸ ಅಥವಾ ಹಳೆ ಬಟ್ಟೆಗಳನ್ನು ತೆಗೆದುಕೊಂಡು ಊರಿಗೆ ಮರಳಿ ಕೌದಿಗಳನ್ನು ಹೊಲೆದು ಮತ್ತೆ ಅವರವರ ಮನೆಗೆ ಹೋಗಿ ಕೌದಿಗಳನ್ನು ಕೊಡುತ್ತಾರೆ. ಇವರ ಈ ಡೋರ್ ಟು ಡೋರ್ ಸೇವೆಯಿಂದ ಗ್ರಾಹಕರು ಹೆಚ್ಚುತ್ತಲೇ ಇದ್ದಾರೆ. ಈ ಸೇವೆಗೆ ನೂರು ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಾರೆ ಅಷ್ಟೆ.
ಇನ್ನು, ಇವರ ಕೌದು ಮಾರು ವ್ಯಾಪಾರಸ್ಥರು ಕೂಡ, ಭೇಟಿಯಾಗಿ ಮುಂಗಡ ಹಣವನ್ನು ಕೊಟ್ಟು ಹೋಗುವುದುಂಟು. ಬಾಕಿಯಂತೆ, ಕೌದಿ ಖರೀದಿಸಲೆಂದೇ ಈ ಹಳ್ಳಿಗೆ ಬಂದು ತಮಗೆ ಬೇಕಾದಷ್ಟು ಕೌದಿ ಆರ್ಡರ್ ನೀಡಿ ಬಟ್ಟೆಯನ್ನು ಕೊಟ್ಟು ಹೋಗುತ್ತಾರೆ.
ಇಷ್ಟೆಲ್ಲ ಪ್ರಸಿದ್ಧವಾದರೂ ಆದಾಯ ಅಷ್ಟಕ್ಕಷ್ಟೆ!
ಇವರಿಗೆ ಕೈತುಂಬ ಕೆಲಸ ನಿಜ. ಆದರೆ, ಒಂದು ಕೌದಿ ರೂ. 600 ಕ್ಕೆ ಮಾರಾಟವಾಗುತ್ತದೆ. ಅನ್ನು ಮೂರು ಮಂದಿ ಹೊಲೆಯುತ್ತಾರೆ. ಅಂದರೆ, ಒಬ್ಬರಿಗೆ ದಿನದ ಕೂಲಿ ರೂ. 200ರಷ್ಟಾಯಿತು. ಹೆಚ್ಚು ದುಡಿದರೂ ತಿಂಗಳಿಗೆ ರೂ.8000 ದಾಟುವುದಿಲ್ಲ. ಈಗ ಬರವಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆ. ಆದ್ದರಿಂದ ಗಂಡಸರು ಪರ ಊರಿಗೆ ದುಡಿಮೆ ಅರಸಿ ಹೋಗುತ್ತಿದ್ದಾರೆ. ಮಹಿಳೆಯರು ರೂ.8000 ದುಡಿದರೆ ಗಂಡಸರು, 4000ರಿಂದ 6,000 ರೂ. ದುಡಿಯುತ್ತಾರೆ. ಇಷ್ಟರಲ್ಲೇ ಇವರ ಮಕ್ಕಳ ಶಾಲೆಯ ಖರ್ಚು, ಸಂಸಾರದ ಖರ್ಚು. ದಿನವಿಡೀ ದುಡಿದರೂ ಉಳಿತಾಯವಾಗುವುದಿಲ್ಲ. ರೂ.800ರಿಂದ 1000 ರೂ.ಗಳಿಗೆ ಇಲ್ಲಿ ಕೊಂಡು ಇವುಗಳನ್ನು ಮಹಾನಗರಗಳ ಮಾಲ್‌ಗಳಲ್ಲಿ ರೂ.2000ದಿಂದ 3000 ರೂ.ಗಳವರೆಗೆ ಮಾರಾಟ ಮಾಡುತ್ತಾರೆ. ಪ್ರತಿಧ್ವನಿ ತಂಡ ಇವರನ್ನು ಮಾತನಾಡಿಸಿದಾಗ ಇವರು ಹೇಳಿಕೊಂಡಿದ್ದು, ತಮಗೆ ಕೌದಿಗಳನ್ನು ಮಾರಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕೆಂದು. ಇಂದು ಅಂಗೈಯಲ್ಲಿ ಗೂಗಲ್ ಇದೆ. ಆದರೆ ಇಲ್ಲಿನ ಜನರು ಮುಗ್ಧರು. ತಂತ್ರಜ್ಞಾನ ಬಳಕೆ ಸರಿಯಾಗಿ ಗೊತ್ತಿಲ್ಲ. ಆದ್ದರಿಂದ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಇವರಿಗೆ ಸಹಾಯ ಮಾಡಬಹುದೇನೋ ಎಂದು ಆಸೆಕಂಗಳಿಂದ ಕಾಯುತ್ತಿದ್ದಾರೆ.
ಈ ಊರಿನ ಕೆಲವು ಯುವತಿಯರು ಮದುವೆಯಾಗಿ ಬೇರೆ ಊರಿಗೆ ಹೋಗುತ್ತಿದ್ದಾರೆ. ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪರ ಊರುಗಳಿಗೆ ತೆರಳುತ್ತಿದ್ದಾರೆ. ಕೆಲವರು ಕೌದಿ ಹೊಲಿಯುವುದರಿಂದ ಕೈ ತುಂಬಾ ಸಂಪಾದನೆಯಿಲ್ಲ ಎಂದು ಬೇಸತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಹಿಳೆಯರು ಈ ಕಲೆ ಅಳಿವಿನಂಚಿಗೆ ಬರಬಾರದು ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.