“ಗಣನೀಯ ಪ್ರಮಾಣದಲ್ಲಿ ಸರ್ಕಾರದ ಆರ್ಥಿಕ ನೆರವು ಪಡೆಯುವ ಸರ್ಕಾರೇತರ ಸಂಸ್ಥೆಗಳೂ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತವೆ” ಎಂಬ ಮಹತ್ವದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ.
ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರದ ಆರ್ಥಿಕ ನೆರವು ಪಡೆಯುವ ಸರ್ಕಾರೇತರ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆ 2005 ರ 2(ಎಚ್) ವಿಧಿ ಅಡಿ ‘ಸಾರ್ವಜನಿಕ ಪ್ರಾಧಿಕಾರ’ ಎಂಬ ವ್ಯಾಪ್ತಿಗೆ ಬರುತ್ತವೆ ಎಂಬುದಾಗಿ ಡಿಎವಿ ಕಾಲೇಜು ಟ್ರಸ್ಟ್ ಮತ್ತು ಆಡಳಿತ ಸಂಸ್ಥೆ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.
“ಸರ್ಕಾರೇತರ ಸಂಸ್ಥೆ ಅಥವಾ ಯಾವುದೇ ಸಂಸ್ಥೆಗೆ ನೀಡಲಾಗುವ ತನ್ನ ತೆರಿಗೆ ಹಣವನ್ನು ಅಗತ್ಯ ಉದ್ದೇಶಕ್ಕೆ ಬಳಸಲಾಗಿದೆಯೇ, ಇಲ್ಲವೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ” ಎಂದು ನ್ಯಾಯಪೀಠ ಆದೇಶ ನೀಡಿದೆ.
‘ಗಣನೀಯ ಪ್ರಮಾಣದ ಆರ್ಥಿಕ ನೆರವು’ ಎಂಬ ಅಂಶದ ಕುರಿತೂ ಪೀಠ ವಿವರಣೆ ನೀಡಿದೆ. “ಗಣನೀಯ ಎಂದರೆ ಒಂದು ಸಂಸ್ಥೆಯ ಒಟ್ಟು ಬಂಡವಾಳದ ಬಹುಪಾಲು ಅಥವಾ ಶೇಕಡ 50 ಕ್ಕಿಂತ ಹೆಚ್ಚು ಎಂದು ಪರಿಗಣಿಸಬೇಕಾಗಿಲ್ಲ. ಗಣನೀಯ ಆರ್ಥಿಕ ನೆರವು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು. ಉದಾಹರಣೆಗೆ, ಯಾವುದೇ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಅಥವಾ ಮತ್ತಾವುದಾದರು ಸಂಸ್ಥೆಗೆ ಭೂಮಿಯನ್ನು ಉಚಿತವಾಗಿ ಅಥವಾ ಭಾರೀ ರಿಯಾಯಿತಿ ದರದಲ್ಲಿ ನೀಡಿದ್ದರೆ ಅದನ್ನು ಗಣನೀಯ ಪ್ರಮಾಣದ ಆರ್ಥಿಕ ನೆರವು ಎಂಬುದಾಗಿ ಪರಿಗಣಿಸಬಹುದು. ಯಾವುದೇ ಸಂಸ್ಥೆಯು ಸರ್ಕಾರದಿಂದ ಉದಾರವಾಗಿ ಕಡಿಮೆ ಬೆಲೆಯಲ್ಲಿ ಪಡೆದ ಭೂಮಿಯಿಂದ ಅವಲಂಬಿತವಾಗಿದ್ದರೆ, ಅಂತಹ ಸಂಸ್ಥೆಯು ಗಣನೀಯ ಆರ್ಥಿಕ ನೆರವು ಪಡೆದಿದೆ ಎನ್ನಬಹುದು. ಸರ್ಕಾರದಿಂದ ಪಡೆದಿರುವ ಭೂಮಿಯ ಮೌಲ್ಯವನ್ನು ಅದನ್ನು ಮಂಜೂರು ಮಾಡಿದ ದಿನಕ್ಕೆ ಹೋಲಿಸಿ ಲೆಕ್ಕಹಾಕುವ ಅಗತ್ಯವಿಲ್ಲ. ಒಂದು ಸಂಸ್ಥೆಯು ಸರ್ಕಾರದಿಂದ ಗಣನೀಯ ಆರ್ಥಿಕ ನೆರವು ಪಡೆದಿದೆಯೇ, ಇಲ್ಲವೆ ಎಂಬ ಪ್ರಶ್ನೆ ಮಾಡುವ ದಿನದ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಬೆಲೆ ಕಟ್ಟಬಹುದು” ಎಂದು ವಿವರವಾಗಿ ತಿಳಿಸಿದೆ.

“ಕೆಲವೊಮ್ಮೆ ಒಂದು ಸಂಸ್ಥೆಯ ಒಟ್ಟು ಬಂಡವಾಳದ ಶೇಕಡ 50 ಕ್ಕಿಂತ ಹೆಚ್ಚಿನ ಆರ್ಥಿಕ ನೆರವು ನೀಡಲಾಗಿದ್ದರೂ, ಅದನ್ನು ‘ಗಣನೀಯ’ ಎಂದು ಪರಿಗಣಿಸಲಾಗದು. ಉದಾಹರಣೆಗೆ, ಒಂದು ಸಂಸ್ಥೆಯ ಒಟ್ಟು ಬಂಡವಾಳ 10 ಸಾವಿರ ರೂ.ಗಳಷ್ಟಿದ್ದು, ಸರ್ಕಾರದಿಂದ 5 ಸಾವಿರ ರೂ.ಗಳಷ್ಟು ಆರ್ಥಿಕ ನೆರವು ಪಡೆದಿದ್ದರೂ ಅದನ್ನು ‘ಗಣನೀಯ ನೆರವು’ ಎಂದು ಪರಿಗಣಿಸಲಾಗದು. ಆದರೆ, ಯಾವುದಾದರೂ ಸಂಸ್ಥೆಯು ನೂರಾರು ಕೋಟಿ ರೂ.ಗಳ ಅನುದಾನ ಪಡೆದಿದ್ದು, ಅದು ಆ ಸಂಸ್ಥೆಯ ಒಟ್ಟು ಬಂಡವಾಳದ ಶೇ.50 ಕ್ಕಿಂತ ಕಡಿಮೆ ಇದ್ದರೂ ಅದನ್ನು ‘ಗಣನೀಯ ಆರ್ಥಿಕ ನೆರವು’ ಎಂದು ಪರಿಗಣಿಸಬೇಕಾಗುತ್ತದೆ” ಎಂಬುದಾಗಿ ಪೀಠ ಸ್ಪಷ್ಟಪಡಿಸಿದೆ.
“ಸಂಸ್ಥೆ, ಪ್ರಾಧಿಕಾರ ಅಥವಾ ಸರ್ಕಾರೇತರ ಸಂಸ್ಥೆಯು ಸರ್ಕಾರಿ ಹಣಕಾಸು ನೆರವಿನಿಂದ ಕಾರ್ಯಾಚರಿಸುತ್ತಿದ್ದರೆ, ಅದು ‘ಗಣನೀಯ ಆರ್ಥಿಕ ನೆರವು’ ಎಂದು ಪರಿಗಣಿಸುವುದರಲ್ಲಿ ಅನುಮಾನವೇ ಬೇಡ” ಎಂಬುದಾಗಿ ಸಹ ನ್ಯಾಯಪೀಠ ಹೇಳಿದೆ.
ಎನ್ ಜಿ ಒ ಎಂದರೆ ಏನು?
ಸರ್ಕಾರೇತರ ಸಂಸ್ಥೆ ಅಥವಾ ಎನ್ ಜಿ ಒ ಎಂದರೆ ಏನು ಎಂಬ ಕುರಿತಾಗಿಯೂ ನ್ಯಾಯಪೀಠವು ವಿವರಣೆ ನೀಡಿದೆ. “ಮಾಹಿತಿ ಹಕ್ಕು ಕಾಯ್ದೆಯಲ್ಲಾಗಲೀ ಅಥವಾ ಇನ್ನಾವುದೇ ಕಾಯ್ದೆಯಲ್ಲಾಗಲಿ ಎನ್ ಜಿ ಒ ಎಂದರೇನು ಎಂಬ ಕುರಿತ ವ್ಯಾಖ್ಯಾನ ಇಲ್ಲ. ಕಾನೂನುಬದ್ಧವಾಗಿ ರಚಿಸಲಾದ, ಆದರೆ ಕಾರ್ಯಾಚರಣೆ ವಿಧಾನದಲ್ಲಿ ಸರ್ಕಾರೇತರವಾದ ಅಂತರರಾಷ್ಟ್ರೀಯ ಸಂಸ್ಥೆಯನ್ನು ವರ್ಣಿಸಲು ಮೊದಲ ಬಾರಿಗೆ ಎನ್ ಜಿ ಒ ಎಂಬ ಪದ ಬಳಕೆಯಾಗಿದೆ. ಕಾನೂನುಬದ್ಧ ಸಂಸ್ಥೆಗಳಿಂದ ರಚನೆಗೊಳ್ಳುವ ಎನ್ ಜಿ ಒ ಗಳಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆ ಅಥವಾ ಪ್ರಾತಿನಿಧಿತ್ವ ಇರುವುದಿಲ್ಲ. ಸರ್ಕಾರದಿಂದ ಸಂಪೂರ್ಣ ಅಥವಾ ಭಾಗಶಃ ಅನುದಾನ ಪಡೆದರೂ ಕೆಲ ಎನ್ ಜಿ ಒ ಗಳು ತಮ್ಮ ಎಲ್ಲಾ ಸಂಸ್ಥೆಗಳಲ್ಲಿ ಸರ್ಕಾರದ ಪ್ರಾತಿನಿಧಿತ್ವವನ್ನು ಹೊರಗಿಟ್ಟು ಎನ್ ಜಿ ಒ ಸ್ಥಾನಮಾನ ಕಾಪಾಡಿಕೊಂಡಿರುತ್ತವೆ. ಕೆಲವೊಮ್ಮೆ ಅವುಗಳನ್ನು ನಾಗರಿಕ ಸಮಾಜ ಸಂಸ್ಥೆಗಳು ಎಂಬುದಾಗಿಯೂ ಪರಿಗಣಿಸಲಾಗುತ್ತದೆ” ಎಂದು ತಿಳಿಸಿದೆ.
ಆದರೆ, “ಯಾವುದೇ ಸಂಘ-ಸಂಸ್ಥೆ, ಅದು ಎನ್ ಜಿ ಒ ಆಗಿದ್ದರು ಸಹ, ಸರ್ಕಾರದ ಮಾಲೀಕತ್ವ ಅಥವಾ ನಿಯಂತ್ರಣ ಇಲ್ಲದಿದ್ದರೂ, ಸರ್ಕಾರದಿಂದ ಗಣನೀಯ ಪ್ರಮಾಣದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನೆರವು ಪಡೆದಿದ್ದರೆ, ಅದು ಮಾಹಿತಿ ಹಕ್ಕು ಕಾಯ್ದೆಯ ಉಪವಿಧಿ (ii) ರ ವ್ಯಾಪ್ತಿಗೆ ಬರುತ್ತದೆ” ಎಂಬುದಾಗಿ ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಇನ್ನಾದರೂ ಪಾರದರ್ಶಕತೆ ಬರುವುದೇ?
ಸರ್ಕಾರಿ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳು, ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಸರ್ಕಾರದಿಂದ ಭೂಮಿ ಪಡೆದುಕೊಳ್ಳುವ ಸಂಘ-ಸಂಸ್ಥೆಗಳು ಸಾರ್ವಜನಿಕರಿಗೆ ಉತ್ತರದಾಯಿತ್ವ ಇಲ್ಲದಂತೆ ಆಡಳಿತ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇತ್ತೀಚೆಗಂತೂ ಸರ್ಕಾರಗಳು ವಿವಿಧ ಸಮುದಾಯಗಳನ್ನು ಒಲಿಸಿಕೊಳ್ಳಲು ಆಯಾ ಸಮುದಾಯಗಳ ಮಠಗಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯನ್ನು ಅಗ್ಗದ ಬೆಲೆಗೆ ಮಂಜೂರು ಮಾಡಿರುವುದು ಸರ್ಕಾರಿ ದಾಖಲೆಗಳಲ್ಲಿದೆ. ಅಲ್ಲದೆ, ವಿವಿಧ ಮಠಗಳಿಗೆ ಕಡಲೆಪುರಿ ಹಂಚಿದಂತೆ ಸಾರ್ವಜನಿಕರ ತೆರಿಗೆ ಹಣವನ್ನು ಕೋಟ್ಯಂತರ ರೂ.ಗಳ ಪ್ರಮಾಣದಲ್ಲಿ ನೀಡಿರುವುದನ್ನು ನೋಡಿದ್ದೇವೆ. ಆದರೆ ಆ ಹಣವನ್ನು ಹೇಗೆ ಖರ್ಚು ಮಾಡಲಾಯಿತು ಎಂಬ ಬಗ್ಗೆ ಇದುವರೆಗೂ ಯಾವ ಮಠವೂ ಲೆಕ್ಕ ಕೊಟ್ಟಿಲ್ಲ. ಅದನ್ನು ಕೇಳುವ ಧೈರ್ಯವೂ ಭಕ್ತರಿಗಿಲ್ಲ.
ಭ್ರಷ್ಟಾಚಾರ ತಡೆ ಕಾಯ್ದೆ ಏನು ಹೇಳುತ್ತದೆ?
ಸುಪ್ರೀಂ ಕೋರ್ಟ್ ನ ಈ ಆದೇಶವನ್ನು ಇನ್ನೊಂದು ರೀತಿಯಲ್ಲಿ ತಿಳಿಯುವುದಕ್ಕೆ ನೆರವಾಗುವುದು ಭ್ರಷ್ಟಾಚಾರ ತಡೆ ಕಾಯ್ದೆ 1988. ಈ ಕಾಯ್ದೆಯ ಸೆಕ್ಷನ್ 2 ಅನುಚ್ಛೇದ 12 ರ ವ್ಯಾಖ್ಯಾನದಂತೆ (definition), ಸರ್ಕಾರದಿಂದ ಯಾವುದೇ ರೀತಿಯ ಅನುದಾನ, ಅಥವಾ ನೆರವು ಪಡೆಯುವ ಯಾವುದೇ ಸಂಸ್ಥೆಯ ಪದಾಧಿಕಾರಿಯೂ ಸರ್ಕಾರಿ ನೌಕರ ಎಂದೇ ಪರಿಗಣಿಸಲಾಗುತ್ತದೆ. ಈ ಅನುಚ್ಛೇದ ಹೀಗೆ ಹೇಳುತ್ತದೆ, “ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಅಥವಾ ಇತರ ಸಾರ್ವಜನಿಕ ಪ್ರಾಧಿಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಸ್ವೀಕರಿಸುತ್ತಿರುವ ಅಥವಾ ಸ್ವೀಕರಿಸಿರುವ ಯಾವುದೇ ರೀತಿಯಲ್ಲಿ ಸ್ಥಾಪಿತವಾಗಿರುವ ಶಿಕ್ಷಣ, ವೈಜ್ಞಾನಿಕ, ಸಾಮಾಜಿಕ, ಸಾಂಸ್ಕ್ರತಿಕ, ಅಥವಾ ಇತರ ಸಂಸ್ಥೆಯ ಪದಾಧಿಕಾರಿ ಅಥವಾ ಅದರಿಂದ ನಿಯೋಜಿತನಾಗಿರುವ ಯಾವನೇ ವ್ಯಕ್ತಿ.’’
ಈ ಹಿಂದೆ, ಲೋಕಾಯುಕ್ತ ವಿಶೇಷ ನ್ಯಾಯಾಲಯಗಳಲ್ಲಿ ಕೆಲವು ಮಠ ಹಾಗೂ ಅವುಗಳ ಮೂಲಕ ಸರ್ಕಾರದ ಅನುದಾನ ಹಾಗೂ ನೆರವಿನಿಂದ ನಡೆಸುವ ಶೈಕ್ಷಣಿಕ ವಿದ್ಯಾಲಯಗಳಲ್ಲಿನ ಹಣಕಾಸು ದುರುಪಯೋಗ ಸಂಬಂಧ ಖಾಸಗಿ ದೂರು ದಾಖಲಿಸುವಾಗ ಈ ಬಗ್ಗೆ ಜಿಜ್ಞಾಸೆ ನಡೆದಿತ್ತು. ಆಗ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 2 ಅನುಚ್ಛೇದ 12ರ ಚರ್ಚೆ ನಡೆದಿತ್ತು. ಆದರೂ, ಈ ಬಗ್ಗೆ ಅರಿವು ಮೂಡಿರಲಿಲ್ಲ.
ಸರ್ವೋಚ್ಚ ನ್ಯಾಯಾಲಯದ ಈ ಮಹತ್ವಪೂರ್ಣ ತೀರ್ಪಿನಿಂದಲಾದರೂ ಸರ್ಕಾರದ ಅನುದಾನ ಪಡೆಯುವ ಮತ್ತು ಉಚಿತ ಅಥವಾ ಕಡಿಮೆ ಬೆಲೆಗೆ ಭೂಮಿ ಪಡೆದಿರುವ ಸಂಸ್ಥೆಗಳು ಮತ್ತು ಮಠಗಳ ಆಡಳಿತದಲ್ಲಿ ಪಾರದರ್ಶಕತೆ ಕಂಡುಬರುತ್ತದೆ ಎಂದು ನಿರೀಕ್ಷಿಸಬಹುದೇ?