ಕೋವಿಡ್ 19: ಆತಂಕಕ್ಕೆ ಕಾರಣವಾಯ್ತು ವೈದ್ಯರ ಸಾವು

ಮೊದಲ ಬಾರಿಗೆ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 24 ಗಂಟೆಗಳಲ್ಲಿ 3 ಸಾವಿರ ಗಡಿ ದಾಟಿದೆ. ಬುಧವಾರ ರಾಜ್ಯಾದ್ಯಂತ 3176 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 87 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದರೆ, ಕರ್ನಾಟಕದ ಒಟ್ಟು ಸಂಖ್ಯೆಯಲ್ಲಿ ಬೆಂಗಳೂರು ಒಂದರಲ್ಲೇ 1975 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೇ 60 ಜನರು ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಖ್ಯೆ ಬೆಂಗಳೂರಿಗರು ಮಾತ್ರವನ್ನು ಆರೋಗ್ಯ ತಜ್ಞರು ಕಂಗಾಲಾಗುವಂತೆ ಮಾಡಿದ್ದಾರೆ. ಕೇಂದ್ರ ತಂಡ ಭೇಟಿ ಕೊಟ್ಟು ಜೀವ ಉಳಿಸಲು ಸಾಕಷ್ಟು ಸಲಹೆಗಳನ್ನು ನೀಡಿದ ಬಳಿಕ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳಿಗೇ ಸೋಂಕು ಬರುತ್ತಿರುವುದು ಸಾಕಷ್ಟು ಚಿಂತೆ ಮೂಡುವಂತೆ ಮಾಡಿದೆ.

ಸಾವು ಮತ್ತು ಸೋಂಕು ಹೆಚ್ಚಳ ಒಂದು ಕಡೆ ಆತಂಕ ಮೂಡುವಂತೆ ಮಾಡಿದರೆ, ಇನ್ನೊಂದು ಕಡೆ ಡಿಸ್ಚಾರ್ಜ್‌ ಆದವರ ಸಂಖ್ಯೆಗಿಂತ ಸಕ್ರಿಯ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗಿರುವುದು ಸ್ವತಃ ಸರ್ಕಾರವನ್ನೇ ದಿಗುಲು ಬೀಳುವಂತೆ ಮಾಡಿದೆ. ರಾಜ್ಯದ ಜನರಿಗೆ ಮತ್ತೊಂದು ಆಘಾತಕಾರಿ ವಿಚಾರವೆಂದರೆ ಸ್ವತಃ ಆರೋಗ್ಯ ಸಚಿವರ ಮಾತು. ಮುಂದಿನ ಒಂದೆರಡು ತಿಂಗಳಲ್ಲಿ ಕರೋನಾ ಸೋಂಕು ಹೆಚ್ಚಳವಾಗುವುದು ಖಚಿತ. ಜನರನ್ನು ಆ ದೇವರೇ ಕಾಪಾಡಬೇಕು ಎಂದಿದ್ದಾರೆ. ಅಂದರೆ ಸರ್ಕಾರ ಜನರನ್ನು ಕಾಪಾಡುತ್ತೇವೆ ಎನ್ನುವ ಭರವಸೆಯನ್ನೂ ಕೊಡುವುದಕ್ಕೂ ಸಾಧ್ಯವಾಗ್ತಿಲ್ಲ ಎನ್ನುವುದು ಆರೋಗ್ಯ ಇಲಾಖೆಗೂ ಗೊತ್ತಾಗುತ್ತಿದೆ. ಸಿಎಂ ಕೂಡ ಕರೋನಾ ಕೈ ಮೀರಿ ಹೋಗುತ್ತಿದೆ ಎನ್ನುವ ಮೂಲಕ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎನ್ನು ಸಂಜ್ಞೆ ಕೊಟ್ಟಿದ್ದರು. ಇದೀಗ ಆರೋಗ್ಯ ಸಚಿವರು ಸಿಎಂ ಹೇಳಿಕೆಯನ್ನು ಅಧಿಕೃತ ಮಾಡಿದ್ದಾರೆ.

https://pages.razorpay.com/pl_ELm1SpwajvYePk/view

ಕರೋನಾ ವಾರಿಯರ್ಸ್‌ಗೆ ಶುರುವಾಯ್ತು ಸಂಕಷ್ಟ..!

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ 6 ಮಂದಿ ಸಿಬ್ಬಂದಿಗೆ ಕೋವಿಡ್‌ 19 ಪಾಸಿಟಿವ್ ದೃಢಪಟ್ಟಿದೆ. ಫೈನಾನ್ಸ್ ಆಫೀಸರ್ ಹಾಗೂ 4 ವಿದ್ಯಾರ್ಥಿಗಳು ಸೇರಿ 6 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ರಾಜೀವ್ ಗಾಂಧಿ ವಿವಿಯ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಕ್ವಾರಂಟೈನ್ ಆಗಿದ್ದಾರೆ. ಇನ್ನೂ ಸಂಜಯ ಗಾಂಧಿ ಅಸ್ಪತ್ರೆಯ 35 ಮಂದಿ ಡಾಕ್ಟರ್‌ಗೂ ಕರೋನಾ ಸೋಂಕು ಇರುವುದು ಖಚಿತವಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ 35 ಡಾಕ್ಟರ್‌ಗೂ ತಗುಲಿರುವುದು ಆತಂಕ ಸೃಷ್ಟಿಸಿದೆ. ಅಸ್ವತ್ರೆಯಲ್ಲಿ ಡಾಕ್ಟರ್‌ಗಳು ಇಲ್ಲದೆ ರೋಗಿಗಳು ಪಡದಾಡುವ ಪರಿಸ್ಥಿತಿ ಉಂಟಾಗಿದೆ. ಸದ್ಯ ಸೋಂಕು ಬಂದಿರುವ ಡಾಕ್ಟರ್‌ಗಳು ಅಸ್ವತ್ರೆಯಲ್ಲಿ ದಾಖಲಾಗಿದ್ದಾರೆ.

ಇದೀಗ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲೇ ನಿಮ್ಹಾನ್ಸ್‌ನಲ್ಲಿ ನಾಲ್ಕೈದು ಜನರಿಗೆ ಸೋಂಕು ಬಂದಿತ್ತು. ಕೆಲವು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೂ ಸೋಂಕು ಬಂದಿತ್ತು. ಸ್ವತಃ ಕೋವಿಡ್ 19 ಲ್ಯಾಬ್‌ನಲ್ಲಿ ಕೆಲಸ ಮಾಡುವ ಟೆಕ್ನೀಷಿಯನ್‌ಗೂ ಸೋಂಕು ಬಂದಿತ್ತು. ಕೆಲವು ದಿನಗಳ ಕಾಲ ಲ್ಯಾಬ್‌ ಮುಚ್ಚಲಾಗಿತ್ತು. ಆಸ್ಪತ್ರೆಯ 11 ಮಂದಿ ನರ್ಸ್‌ಗಳಿಗೂ ಸೋಂಕು ಬಂದಿತ್ತು. ಕೆಲವು ವಿದ್ಯಾರ್ಥಿಗಳಲ್ಲೂ ಕೋವಿಡ್‌ 19 ಕಾಣಿಸಿಕೊಂಡಿತ್ತು.

ಈಗಾಗಲೇ 500ಕ್ಕೂ ಪೊಲೀಸರಲ್ಲಿ ಕರೋನಾ ಮಹಾಮಾರಿ ಕಾಣಿಸಿಕೊಂಡಿದೆ. ಐವರು ಪೊಲೀಸರು ತಮ್ಮ ಜೀವನವನ್ನೇ ಕರೋನಾ ವಾರಿಯರ್ಸ್‌ ಆಗಿ ಅರ್ಪಿಸಿದ್ದಾರೆ. ಒಟ್ಟಾರೆ ಕರೋನಾ ಸೋಂಕು ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್‌ಗಳನ್ನು ಬಿಟ್ಟು ಬಿಡದೆ ಕಾಡುತ್ತಿದೆ ಕರೋನಾ.

ಸೋಂಕಿಗೆ ಕಾರಣ ಹುಡುಕಿದೆಯಾ ಸರ್ಕಾರ..?

ರಾಜ್ಯದಲ್ಲಿ ಜನರು ಸಾವನ್ನಪ್ಪುತ್ತಿರುವುದರ ಬಗ್ಗೆ ಸರ್ಕಾರ ಕಿಂಚಿತ್ತು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಾವು ಮಾಡುತ್ತಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಜನರು ಸಾಯುತ್ತಿದ್ದರೆ ನಾವು ಏನು ಮಾಡಲು ಸಾಧ್ಯ ಎನ್ನುವಂತೆ ಸರ್ಕಾರದ ನಡೆ ಇದೆ. ಆದರ ನಡುವೆ ಕರೋನಾ ವಾರಿಯರ್ಸ್‌ ಸಾವು ಸೋಂಕಿನ ಬಗ್ಗೆಯೂ ಸರ್ಕಾರ ತಲೆಗೆ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ.

ರಾಜ್ಯದ ವಿವಿಧೆಡೆ ಈಗಾಗಲೇ ಕರೋನಾ ವಾರಿಯರ್ಸ್‌ಗೆ ಸೋಂಕು ಕಾಣಿಸಿಕೊಂಡರೂ ಸರ್ಕಾರ ಕಣ್ಮುಚ್ಚಿ ಕುಳಿತಂತಿದೆ. ಕರೋನಾ ವಾರಿಯರ್ಸ್‌ ಪಿಪಿಇ ಕಿಟ್‌ ಹಾಕಿಕೊಂಡು ಕೆಲಸ ಮಾಡುತ್ತಾರೆ. ಹಾಗಿದ್ದರೂ ಸೋಂಕು ಹರಡುವುದಕ್ಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದುರಾಗುವುದು ಸರಿಯಷ್ಟೆ. ಆದರೆ ಸರ್ಕಾರ ಕೊಡುತ್ತಿರುವ ಪಿಪಿಇ ಕಿಟ್‌ ಧರಿಸಿದರೂ ಕರೋನಾ ಸೋಂಕು ಎಗ್ಗಿಲ್ಲದೆ ಹರಡುತ್ತಿದೆ.

ಕಳಪೆ ಪಿಪಿಇ ಕಿಟ್‌ ಬಳಕೆ ರಾಜ್ಯಕ್ಕೆ ಆಗ್ತಿದೆ ದುಬಾರಿ..!?

ಕರೋನಾ ಸೋಂಕು ಹರಡುವ ಆರಂಭದಲ್ಲಿ ಚೀನಾದಿಂದ ಪಿಪಿಇ ಕಿಟ್‌ ತರಿಸಲಾಗಿದೆ ಎನ್ನುವ ಸುದ್ದಿ ಬಂದಿತ್ತು. ಆ ಪಿಪಿಇ ಕಿಟ್‌ಗಳನ್ನು ವಾಪಸ್‌ ಕಳುಹಿಸುತ್ತೇವೆ ಎಂದು ಸ್ವತಃ ಸಚಿವರು ತಿಳಿಸಿದ್ದರು. ಆದರೆ ಇದೀಗ ಕರೋನಾ ಸೋಂಕು ವಾರಿಯರ್ಸ್‌ಗೂ ಹರಡುತ್ತಿರುವುದನ್ನು ಗಮನಿಸಿದಾಗ ಸರ್ಕಾರ ಅದೇ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಳಕೆಗೆ ಕೊಟ್ಟಿದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡುವುದು ಸಹಜವಾಗಿದೆ.

ಕಳಪೆ ಗುಣಮಟ್ಟದ ಪಿಪಿಇ ಕಿಟ್‌ ಧರಿಸಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸ್ವತಃ ವೈದ್ಯರೇ ಹೆದರುವಂತಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಮುಂದೆ ಬಾರದಿದ್ದರೆ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಯಾರು..? ಇದೇ ಕಾರಣದಿಂದ ಕರೋನಾ ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಸಾಗಿದೆ. ಸರ್ಕಾರ ಮಾತ್ರ ಕೋವಿಡ್‌ ಹೆಸರಲ್ಲಿ ದುಡ್ಡು ಮಾಡುವಲ್ಲಿ ತಲ್ಲೀನವಾಗಿದೆ ಎನ್ನುವುದು ವಿರೋಧ ಪಕ್ಷಗಳ ಮಾತಾಗಿದೆ. ಇನ್ನಾದರೂ ಕೋವಿಡ್‌ 19 ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.

Please follow and like us:

Related articles

Share article

Stay connected

Latest articles

Please follow and like us: