ಎಂಥ ಎಂಟೆದೆಯವರಲ್ಲೂ ಒಂದು ಕ್ಷಣ ಭೀತಿ ಮೂಡಿಸುವ ವಿಚಾರಗಳಲ್ಲಿ ಈ ವೈರಾಣುಗಳಿಂದ ಹರಡುವ ಸಾಂಕ್ರಾಮಿಕ ರೋಗವೂ ಒಂದು. ಹೀಗೆ ಹೇಳುತ್ತಿದ್ದಂತಯೇ ನಾನು ಯಾವ ವಿಚಾರದ ಬಗ್ಗೆ ಹೇಳಲು ಹೊರಟಿದ್ದೇನೆ ಎಂಬುದು ನಿಮಗೆ ಗೊತ್ತಗಿರಬಹುದು. ಸದ್ಯದ ಮಟ್ಟಿಗೆ ಇಡಿಯ ಮನುಕುಲವನ್ನೇ ತಲ್ಲಣಗೊಳಿಸಿರುವ ನಾವೆಲ್ ಕೊರೋನಾ ವೈರಸ್ ಪೀಡಿತರು ಪಡುವ ಪಾಡು ಯಾವ ಮಟ್ಟಿಗೆ ಇರುತ್ತದೆ ಎಂದು ಸಾಕ್ಷಾತ್ ವಿವರಗಳು ಇವು..
ವೈರಾಣುಗಳು ಅಂಟಿಕೊಳ್ಳುವುದರಿಂದ recovery ಆಗುವವರೆಗೂ ಇದೊಂದು ಜೀವನ್ಮಾನದ ದುಃಸ್ವಪ್ನ ಎಂದರೂ ಕಡಿಮೆ. ಕೊರೋನಾ ವೈರಾಣು ಪೀಡಿತನಾದ ಚೀನಾದ ವುಹಾನ್ ವೂ ಚಾಂಗ್ (ಹೆಸರು ಬದಲಿಸಲಾಗಿದೆ) ಚೀನಾದ ಕೇಂದ್ರ ಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ. ಈ ವೈರಾಣುಗಳ ಬಗ್ಗೆ ಜಗತ್ತಿಗೆ ಮೊದಲ ಬಾರಿಗೆ ಜನವರಿ 21ರಂದು ತಿಳಿದಾಗ ಖುದ್ದು ವುಹಾನ್‌ನಲ್ಲಿದ್ದ ಜನರಿಗೆ ಈ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ.
ಬರೀ ಊಟ ಮಾಡಲೂ ಸಹ ತೀರಾ ಅಶಕ್ತನಾಗಿ ಕಂಡಾದ ತನ್ನ ದೇಹದ ತಾಪಮಾನ ಪರಿಶೀಲನೆ ಮಾಡಿಕೊಂಡ ಚಾಂಗ್, ತನಗೆ ಈ ವೈರಾಣು ಅಂಟಿಕೊಂಡಿದೆ ಎಂಬ ಸುಳಿವು ಸಿಕ್ಕಿತ್ತು. 2019-nCov ವೈರಾಣುಗಳ ಕುರಿತು ವಾಸ್ತವಿಕ ಮಾಹಿತಿಗಳು ಜನರಿಗೆ ಇನ್ನೂ ಸಿಗುವ ಮುನ್ನವೇ ಅವುಗಳ ಬಗ್ಗೆ ಸಾಕಷ್ಟು ಭಯ ಹಾಗೂ ಹುಸಿ ಸುದ್ದಿಗಳು ಬಹಳ ಹಬ್ಬಿಬಿಟ್ಟಿದ್ದವು. 1.1 ಕೋಟಿ ಜನಸಂಖ್ಯೆಯ ಈ ನಗರವು ಇಂಥದ್ದೇ ಭೀತಿಯಿಂದ ಗೊಂದಲದ ಗೂಡಾಗಿಬಿಟ್ಟಿತ್ತು.
ಮಧ್ಯ ರಾತ್ರಿಯಂದು ನಗರದ ಟಾಪ್ ಕ್ಲಾಸ್ ಟೋಂಗ್ಜೀ ಆಸ್ಪತ್ರೆಗೆ ಆಗಮಿಸಿದ ಚಾಂಗ್‌ಗೆ, ತನ್ನಂತೆಯೇ ಇನ್ನಷ್ಟು ಜನರ ಅಲ್ಲಿ ಇದ್ದದ್ದು ಕಂಡು ಬಂದಿದೆ. ನೋಡ ನೋಡುತ್ತಿದ್ದಂತೆಯೇ ಲೆಕ್ಕವಿಲ್ಲದಷ್ಟು ಅಂಥದ್ದೇ ಕಂಪ್ಲೇಂಟ್‌ನೊಂದಿಗೆ ಜನರು ಆಸ್ಪತ್ರೆಗೆ ದಾಖಲಾಗತೊಡಗಿದರು. ಆಸ್ಪತ್ರೆಯಲ್ಲಿದ್ದ ಪ್ರತಿಯೊಬ್ಬ ವೈದ್ಯರೂ ಸಹ ವಿಶೇಷ ಗ್ಲೌಸ್‌ಗಳು ಹಾಗೂ ಮಾಸ್ಕ್‌ಗಳನ್ನು ಧರಿಸುತ್ತಿದ್ದದ್ದನ್ನು ಕಂಡು ಆತ ದಂಗು ಬಡಿದಿದ್ದಾನೆ.

ಮುಂದಿನ ಎರಡು ವಾರಗಳ ಕಾಲ ಉಸಿರು ಬಿಗಿ ಹಿಡಿದುಕೊಂಡು ಕಳೆದ ಚಾಂಗ್ ತನಗೆ ನ್ಯೂಮೋನಿಯಾಗೆ ಕಾರಣವಾಗುವ ವೈರಾಣುಗಳು ಅಟಕಾಯಿಸಿಕೊಂಡಿವೆಯೇ ಹಾಗೂ ಅದರ ರೋಗಲಕ್ಷಣಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕೇ ಎಂದು ಖಾತ್ರಿ ಮಾಡಿಕೊಳ್ಳಲು ಕಾತರನಾಗಿದ್ದ. ಚಾಂಗ್ ತಂದೆ ಖುದ್ದು ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ವುಹಾನ್ ಜನತೆಗೆ ರೋಗದ ಬಗ್ಗೆ ತಿಳಿಯುವ ಮುನ್ನವೇ ತನಗೆ ಬಂದಿದ್ದ ಪರಿಸ್ಥಿತಿಯ ಅರಿವು ಮೂಡಿದ ಕಾರಣ ಆತ ಈ ವಿಚಾರದಲ್ಲಿ ಲಕ್ಕಿ ಎಂದೇ ಹೇಳಬೇಕು.
ವುಹಾನ್ ನಗರ ರಾಜಧಾನಿಯಾದ ಹುಬೇಯ್ ಪ್ರಾಂತ್ಯದಲ್ಲಿ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ವ್ಯಾಪಕವಾಗಿ ಹರಡಿದ ವೈರಾಣುಗಳ ಕಾರಣ ಆಸ್ಪತ್ರೆಯ ಬೆಡ್‌ಗಳೆಲ್ಲಾ ತುಂಬಿ ಹೋಗಿ, ರಕ್ತದ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳ ಮುಂದೆ ಸಾಲು ಸಾಲಾಗಿ ಜನ ನಿಂತುಕೊಳ್ಳುತ್ತಿದ್ದರು. ಕೆಲವರು ವೈದ್ಯರನ್ನು ಕಾಣುವ ಮುನ್ನವೇ ಪ್ರಾಣ ಬಿಟ್ಟಿದ್ದರು. ಹುಬೇಯ್ ಪ್ರಾಂತ್ಯ ಉದ್ದಗಲಕ್ಕೂ ತೀವ್ರ ತಪಾಸಣಾ ಕೇಂದ್ರಗಳನ್ನು (ಕ್ವಾರಂಟೈನ್) ತೆರೆದ ಚೀನಾ, ಈ ವೈರಾಣುಗಳ ಕಾರಣ ತನ್ನ ಆರ್ಥಿಕತೆಯೇ ಸ್ಥಬ್ಧವಾಗುವ ಪರಿಸ್ಥಿತಿ ಎದುರಿಸಬೇಕಾಯಿತು. ಈ ವೈರಾಣುಗಳ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳತೊಡಗಿದರು.
ಚಿಕಿತ್ಸೆ ಪಡೆದ ರಾತ್ರಿ ಚಾಂಗ್‌ಗೆ ಪಕ್ಕದ ಚಿಕ್ಕ ಆಸ್ಪತ್ರೆಯೊಂದರಲ್ಲಿ ಔಷಧ ಖರೀದಿ ಮಾಡುವುದು ಸುಲಭವಾಗಿತ್ತು. ಆತನಿಗೆ ಅಟಕಾಯಿಸಿಕೊಂಡ ರೋಗ ಲಕ್ಷಣಗಳು ಅಷ್ಟೊಂದು ತೀವ್ರವಾಗಿರಲಿಲ್ಲ. ಹೀಗಾಗಿ, ಮನೆಗೆ ಹೋಗಿ ತನ್ನನ್ನು ತಾನು ಬಂಧಿಯಾಗಿಸಿಟ್ಟುಕೊಳ್ಳಲು ಚಾಂಗ್‌ಗೆ ವೈದ್ಯರು ಸಲಹೆ ನೀಡಿದ್ದರು. ಜ್ವರ ಬಂದ ಮೊದಲ ನಾಲ್ಕು ದಿನಗಳು ತೀವ್ರವಾಗಿದ್ದವು.
“ನನ್ನ ದೇಹದ ಪ್ರತಿಯೊಂದು ಅಂಗವನ್ನೂ ಟಾರ್ಚರ್ ಮಾಡುವಂಥ ಜ್ವರ ಹಾಗೂ ನೋವಿನಿಂದ ನರಳುತ್ತಿದ್ದೆ. ಸತ್ತೇ ಹೋಗುತ್ತೇನೇನೋ ಎಂಬಂತೆ ಕೆಮ್ಮುತ್ತಿದ್ದೆ,” ಎಂದು ತನ್ನ ಅನುಭವ ಹೇಳಿಕೊಳ್ಳುತ್ತಾನೆ ಚಾಂಗ್.

ಇದೇ ಚಾಂಗ್ ನಾಲ್ಕು ದಿನಗಳ ಬಳಿಕ ಆಸ್ಪತ್ರೆಗೆ ಮತ್ತೆ ಹೋಗಬೇಕಾಗಿ ಬಂದಾಗ, ವುಹಾನ್ ಆಡಳಿತವು ನಗರವನ್ನು ಲಾಕ್ ಡೌನ್ ಮಾಡಿಬಿಟ್ಟಿತ್ತು. ವೈರಾಣುಗಳು ಹಬ್ಬುವುದನ್ನು ತಡೆಗಟ್ಟಲು ನಗರದಿಂದ ಯಾರೂ ಹೋಗುವಂತಿಲ್ಲ ಹಾಗೂ ಬರುವಂತಿಲ್ಲ ಎಂಬಂತೆ ಮಾಡಲಾಗಿತ್ತು. ರಸ್ತೆಗಳೆಲ್ಲಾ ಖಾಲಿ ಖಾಲಿ, ಫ್ರೆಶ್ ಹಣ್ಣುಗಳು ಹಾಗೂ ತರಕಾರಿ ಬೆಲೆಗಳು ಏರಲು ಶುರುವಾಯಿತು. ಜನಗಳು ತಮ್ಮ ಅಪಾರ್ಟ್‌ಮೆಂಟ್‌ಗಳಿಂದ ಹೊರ ಬರುವಂತಿರಲಿಲ್ಲ.
ಸಾಕಷ್ಟು ಸಿಟಿ ಸ್ಕ್ಯಾನ್‌ಗಳನ್ನು ಮಾಡಿದ ಬಳಿಕ ಚಾಂಗ್‌ಗೆ ನಾವೆಲ್ ಕೊರೋನಾ ವೈರಾಣುಗಳು ಶ್ವಾಸಕೋಶಕ್ಕೆ ಅಂಟಿಕೊಂಡಿವೆ ಎಂದು ತಿಳಿದುಬಂದಿದೆ. ಆದರೆ ಆತನಿಗೆ ಅಂಟಿದ ಈ ಕೇಸ್ ತೀವ್ರವಾಗಿ ಇರದ ಕಾರಣ, ವೈರಾಣುಗಳ ವಂಶವಾಹಿಗಳ ಚಲನೆಯನ್ನು ಪರೀಕ್ಷೆ ಮಾಡಬೇಕೋ ಬೇಡವೋ ಎಂದು ವೈದ್ಯರು ಯೋಚನೆ ಮಾಡಲು ಶುರುವಿಟ್ಟುಕೊಂಡರು.
ವೈರಾಣುಗಳ ಭೀತಿಯಿಂದ ಬರತೊಡಗಿದ ರೋಗಿಗಳ ಸಂಖ್ಯೆ ಸಿಕ್ಕಾಪಟ್ಟೆ ಜೋರಾಗತೊಡಗಿದ ಕಾರಣ ಹುಬೇಯ್‌ನಲ್ಲಿದ್ದ ಆಸ್ಪತ್ರೆಗಳ ಸಾಮರ್ಥ್ಯ ತೀರಾ ಚಿಕ್ಕದಾಗತೊಡಗಿತು. CT ಇಮೇಜಿಂಗ್ ಮೂಲಕ ಡಯಾಗನೈಸ್ ಮಾಡಲಾದ ರೋಗಿಗಳು ನ್ಯೂಕ್ಲಿಯಿಕ್ ಆಸಿಡ್ ಕಿಟ್‌ಗಳನ್ನು ಬಳಸಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಆಗಿ ಕಂಡು ಬಂದ ರೋಗಿಗಳ ಸಂಖ್ಯೆ ಅದಾಗಲಲೇ 50,000 ದಾಟಿತ್ತು!
ತನಗೆ ವೈರಾಣುಗಳು ಅಂಟಿಕೊಂಡಿವೆಯೋ ಇಲ್ಲವೋ ಎಂದು ಇನ್ನೂ ಖಾತ್ರಿಯಾಗುವ ಮುನ್ನವೇ ಎರಡನೇ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ಚಾಂಗ್‌ನ ಸಹೋದರ ಹಾಗೂ ಅಜ್ಜಿಗೂ ಸಹ ಅಂಥದ್ದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದ್ದವು. ಚಾಂಗ್ ಸತ್ತೇ ಹೋಗಿಬಿಡಬಹುದು ಎನ್ನುವ ಮಟ್ಟಿಗೆ ಪರಿಸ್ಥಿತಿ ಕ್ಷೀಣಿಸುತ್ತ ಸಾಗಿತು. “ನಾನು ನರಕದ ಬಾಗಿಲು ತಟ್ಟುತ್ತಿದ್ದೇನೆ,” ಎಂದು ನನಗೆ ಅನಿಸತೊಡಗಿತು ಎಂದು ಆ ಕರಾಳ ದಿನಗಳನ್ನು ಸ್ಮರಿಸುತ್ತಾನೆ ಚಾಂಗ್.
ತನ್ನ ದೇಹದ ತಾಪಮಾನ 39 ಡಿಗ್ರೀ ಸೆಲ್ಸಿಯಸ್‌ನಷ್ಟು ಏರಿಕೆ ಕಂಡ ಬಳಿಕ ಚಾಂಗ್ ಮತ್ತೆ ಆಸ್ಪತ್ರೆಗೆ ತೆರಳಿದ್ದಾನೆ. ಈ ವೇಳೆ HIVಗೆ ಟ್ರೀಟ್ ಮಾಡಲು ಬಳಸುವ ಚಿಕಿತ್ಸಾ ವಿಧಾನವನ್ನು ಬಳಸಿದ ವೈದ್ಯರು ವೈರಾಣುವಿನ ವಿರುದ್ಧ ಹೋರಾಡುವ ಯತ್ನ ಮಾಡಿದ್ದಾರೆ. ಆ ದಿನದ ಅಂತ್ಯಕ್ಕೆ ದೇಹದ ತಾಪಮಾನವನ್ನು 37 ಡಿಗ್ರೀಗೆ ಇಳಿಸಲು ತಕ್ಕ ಮಟ್ಟಿಗೆ ವೈದ್ಯರು ಸಫಲರಾಗಿದ್ದರು.
ವಾರದ ನಂತರದಿಂದ ಚಾಂಗ್ ಎಂಬ 21 ವರ್ಷದ ವಿದ್ಯಾರ್ಥಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳತೊಡಗಿತು. ಇದಾದ ಬಳಿಕ ಆತನಿಗೆ ಆಲಿವಿಯಾ ಎಂಬ ವೈರಾಣು ನಿರೋಧಕ ಡ್ರಗ್‌ಅನ್ನು ವೈದ್ಯರು ಆತನಿಗೆ ಐದು ದಿನಗಳ ಮಟ್ಟಿಗೆ ನೀಡಿ ಮೂರು ಬೆಡ್ ರೂಂಗಳಿದ್ದ ಅಪಾರ್ಟ್‌ಮೆಂಟ್ ಒಂದರಲ್ಲಿ ಆತನನ್ನು ಕ್ವಾರಂಟೈನ್ ಮಾಡಲಾಯಿತು. ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‌ಗಳಿಲ್ಲದ ಕಾರಣ ಅಪಾರ್ಟ್‌ಮೆಂಟ್‌ಗಳನ್ನೇ ಕ್ವಾರಂಟೈನ್ ಸೌಲಭ್ಯಗಳನ್ನಾಗಿ ಮಾಡಿಕೊಳ್ಳಲಾಗಿತ್ತು.
ಇದಾದ 9 ದಿನಗಳ ಬಳಿಕ, ಫೆಬ್ರವರಿ 7ರಂದು ಚಾಂಗ್‌ಗೆ ಮಾಡಿದ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಕಂಡುಬಂದರೂ ಸಹ ಚಾಂಗ್ ಇನ್ನೂ ಸಾಕಷ್ಟು ನಿತ್ರಾಣದ ಸ್ಥಿತಿಯಲ್ಲೇ ಇದ್ದ. ನೆಗೆಟಿವ್ ಎಂದು ಕಂಡು ಬಂದ ರೋಗಿಗಳೂ ಸಹ ತೀವ್ರ ಅನಾರೋಗ್ಯಪೀಡಿತರಾಗುತ್ತಿದ್ದ ಕಾರಣ ಸ್ಥಳೀಯ ಆಡಳಿತವು, ಹೊಟೇಲ್ ಒಂದನ್ನು ಕ್ವಾರಂಟೈನ್ನ ಸೌಲಭ್ಯವನ್ನಾಗಿ ಮಾಡಿ, ಚಾಂಗ್‌ನಂಥ ಅನೇಕರನ್ನು ಅಲ್ಲಿ ತೀವ್ರ ನಿಗಾದಲ್ಲಿ ಇಡಿಸಿತ್ತು. ಇಲ್ಲಿಂದ ಯಾರೂ ಹೊರಹೋಗದಂತೆ ಹಾಗೂ ಅಲ್ಲಿಗೆ ಯಾರೂ ಬಾರದಂತೆ ನೋಡಿಕೊಳ್ಳಲು ಪೊಲೀಸರು ಕಾವಲಿದ್ದರು.
ಇದಾದ ಐದು ದಿನಗಳ ಬಳಿಕಮ ಚಾಂಗ್‌ಗೆ ಮನೆಗೆ ಹೋಗಲು ಅನುಮತಿ ನೀಡಲಾಯಿತು. ಇಲ್ಲಿಗೆ ಆತನ 21 ದಿನಗಳ ನರಕವಾಸ ಅಂತ್ಯವಾಗಿತ್ತು. ತಾನು ಉಳಿದುಕೊಳ್ಳಲು ನೆರವಾದ ವೈದ್ಯರು ಹಾಗೂ ನರ್ಸ್‌ಗಳು ಖುದ್ದು ತಮ್ಮದೇ ಜೀವಗಳನ್ನು ರಿಸ್ಕ್‌ನಲ್ಲಿಟ್ಟುಕೊಂಡು ಸಹಾಯ ಮಾಡಿದ್ದಕ್ಕಾಗಿ ಚಾಂಗ್ ಧನ್ಯವಾದ ತಿಳಿಸುತ್ತಿದ್ದಾನೆ. ಖುದ್ದು ತಮಗೇ ಈ ವೈರಾಣುಗಳು ಬಂದಿರಬಹುದು ಎಂಬ ಸಂಶಯವಿದ್ದುದ್ದಾಗಿ ಆತನಿಗೆ ತಿಳಿಸಿದ್ದ ಕೆಲ ವೈದ್ಯರು ತಮ್ಮ ಕಾಯಕವನ್ನು ಮುಂದುವರೆಸಿಕೊಂಡೇ ಸಾಗಿದ್ದರು.
ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತವಾಗದ ಕಾರಣ ಹುಬೇಯ್ ಪ್ರಾಂತ್ಯದಲ್ಲಿ ಈ ವೈರಾಣುಗಳು ನರಕ ಸೃಷ್ಟಿಸಿಬಿಟ್ಟಿದ್ದವು. ಕೈಮೀರಿ ಹೋಗುತ್ತಿದ್ದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಿರುವ ಬೀಜಿಂಗ್, ಈ ಸಂಬಂಧ ಹುಬೇಯ್ ಪ್ರಾಂತ್ಯದ ಇಬ್ಬರು ಕಮ್ಯೂನಿಸ್ಟ್ ನಾಯಕರನ್ನು ವಜಾಗೊಳಿಸಿದೆ.
“ಆರಂಭಿಕ ದಿನಗಳಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಮುಚ್ಚಿಡದೇ, ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಪರಿಸ್ಥಿತಿಗಳು ಈ ಮಟ್ಟಕ್ಕೆ ಬರುತ್ತಿರಲಿಲ್ಲ,” ಎಂದು ನಿಟ್ಟುಸಿರು ಬಿಡುತ್ತಾನೆ ಚಾಂಗ್.