ಕೊನೆಗೂ ಸಾಂಪ್ರದಾಯಿಕ ಜಲಸಂರಕ್ಷಣಾ ಪದ್ಥತಿಗೆ ಮೊರೆ ಹೋದ ಸರಕಾರ

ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈ ವರ್ಷ ನೀರಿನ ಸಮಸ್ಯೆ ಸಂಕಷ್ಟಕಾರಿ ಆಗಲಿರುವ ಸೂಚನೆ ಈಗಾಗಲೇ ಲಭ್ಯವಾಗಿದೆ. ಕಳೆದ ವಾರ ತಮಿಳುನಾಡಿನ ಚೆನ್ನೈ ಮಹಾನಗರಕ್ಕೆ ಪಕ್ಕದ ಬೇರೆ ಜಿಲ್ಲೆಯಿಂದ ರೈಲಿನಲ್ಲಿ ಕುಡಿಯುವ ನೀರಿನ ಸಾಗಾಟ ಆಗಿರುವುದು ಪರಿಸ್ಥಿತಿಯ ತೀವ್ರತೆಗೊಂದು ಉದಾಹರಣೆ.

ನೀರಿನ ಕೊರತೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಕೇಂದ್ರ ಸರಕಾರ ಹೊಸ ಇಲಾಖೆಯನ್ನೇ ಸೃಷ್ಟಿಸಿದೆ. ಸಮಯ ನಿಗದಿತ ಜಲಶಕ್ತಿ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಅಭಿಯಾನದ ಅನ್ವಯ ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿರುವ 256 ಜಿಲ್ಲೆಗಳಿಗೆ ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳು ಈಗಾಗಲೇ ಭೇಟಿ ನೀಡುತ್ತಿದ್ದಾರೆ. ರಾಜ್ಯದ ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಜಲ ಭದ್ರತೆಗಾಗಿ ಆರಂಭಿಸಲಾದ ಜಲಶಕ್ತಿ ಅಭಿಯಾನ ಮುಂಗಾರು ಮತ್ತು ಹಿಂಗಾರು ಎಂದು ಎರಡು ಭಾಗಗಳಲ್ಲಿ ಜುಲೈ 01ರಿಂದ ಸೆಪ್ಟೆಂಬರ್‌ 15ರವರೆಗೆ, ಅನಂತರ ಅಕ್ಟೋಬರ್ 2ರಿಂದ ನವೆಂಬರ್ 30ರ ತನಕ ನಡೆಯಲಿದೆ. ಈ ಅಭಿಯಾನಕ್ಕೆ ಯಾವುದೇ ಅನುದಾನವನ್ನು ನಿಗದಿ ಮಾಡಿಲ್ಲ. ಬೇರೆ ಇಲಾಖೆಗಳ ಅನುದಾನವನ್ನೇ ಈ ಅಭಿಯಾನಕ್ಕೆ ಉಪಯೋಗಿಸಬೇಕು.

ಈ ಅಭಿಯಾನ ಮಹತ್ವ ಪಡೆದುಕೊಂಡಿರುವುದೇ ಮೊದಲ ಬಾರಿಗೆ ಸರಕಾರವೊಂದು ಪ್ರಾಚೀನ ಕಾಲದಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಮತ್ತು ಸುಸ್ಥಿರ ಜಲ ಸಂರಕ್ಷಣೆ ಪದ್ಧತಿಯನ್ನು ಅನುಸರಿಸಲು ದೊಡ್ಡ ಮನಸ್ಸು ಮಾಡಿರುವುದರಿಂದ.

ಜಲಶಕ್ತಿ ಅಭಿಯಾನ ಐದು ಮುಖ್ಯ ಅಂಶಗಳನ್ನು ಹೊಂದಿರುತ್ತದೆ. ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಾನಯನ ಪ್ರದೇಶಗಳ ಅಭಿವೃದ್ಧಿ, ನೀರಿನ ಮರು ಬಳಕೆ ಮತ್ತು ನೀರು ಇಂಗಿಸುವ ರಚನೆ, ಜಲಾನಯನ ಅಭಿವೃದ್ಧಿ ಹಾಗೂ ದಟ್ಟ ಅರಣ್ಯೀಕರಣ.

ನಮ್ಮ ರಾಜ್ಯ ಸೇರಿದಂತೆ ದೇಶದ ಎಲ್ಲೆಡೆ ಸಾಂಪ್ರದಾಯಿಕ ಜಲ ಶೇಖರಣಾ ಮತ್ತು ಜಲ ಮರುಪೂರಣ ವ್ಯವಸ್ಥೆಗಳಾದ ಕೆರೆ ಕಟ್ಟೆ, ಮದಕ, ಜೊಹಾಡ್ ಮುಂತಾದುವುಗಳನ್ನು ನಾಶ ಮಾಡಲಾಗಿದೆ. ಅಂತರ್ಜಲವನ್ನು ಕಾಪಾಡುತ್ತಿದ್ದ ಸಣ್ಣ ಕೆರಗಳನ್ನು ಸಂಪೂರ್ಣ ನುಂಗಿ ಹಾಕಲಾಗಿದ್ದರೆ, ಮಧ್ಯಮ ಮತ್ತು ದೊಡ್ಡ ಗಾತ್ರದ ಕೆರೆಗಳನ್ನು ನಗರೀಕರಣ ಕಬಳಿಸಿದೆ. ಇದು ಕೇವಲ ಪಟ್ಟಣ ಮತ್ತು ನಗರಗಳ ಸಮಸ್ಯೆ ಆಗಿರದೆ, ಗ್ರಾಮಾಂತರ ಪ್ರದೇಶಗಳಲ್ಲೂ ಇಂತಹ ಮಳೆಗಾಲದಲ್ಲಿ ನೀರು ಸಂಗ್ರಹಿಸಿಡುವ ಸುಸ್ಥಿರ ಜಲ ಸಂರಕ್ಷಣಾ ಪದ್ಧತಿಗಳು ನಾಶ ಆಗಿವೆ.

ಸರಕಾರದ ಇಲಾಖೆಗಳು ಕಡಿಮೆ ಖರ್ಚಿನ ಹೆಚ್ಚು ಪರಿಣಾಮಕಾರಿಯಾದ ಜಲಸಂವರ್ಧನ ವಿಧಾನಗಳನ್ನು ಕಡೆಗಣಿಸಿ ದೊಡ್ಡ ವೆಚ್ಚದ ಬೃಹತ್ ಅಣೆಕಟ್ಟುಗಳಿಗೆ ಆದ್ಯತೆ ನೀಡಿದ್ದವು. ಸರಕಾರಗಳು ಕೆರೆ ಅಭಿವೃದ್ಧಿ ಕೈಗೊಂಡಾಗಲೇ ಕೆರೆಗಳು ಮಾಯವಾಗಿದ್ದು ಅಧಿಕಾರಿಗಳ ಗಮನಕ್ಕೆ ಬಂದಿದ್ದು.

ಈಗ ಕೇಂದ್ರ ಸರಕಾರ ರಾಜಸ್ತಾನ, ಗುಜರಾತ್, ಕರ್ನಾಟಕ, ಕೇರಳ, ಓಡಿಶಾ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿದ್ದ ಹಳೆಯ ಕಾಲದ ಜಲಸಂರಕ್ಷಣಾ ಪದ್ಧತಿಗಳನ್ನು (ಟಂಕ, ಝಲರ, ಜೋಹಾಡ್, ಮದಕ, ಚೌಡಿ ಇತ್ಯಾದಿ) ಮತ್ತೆ ಪುನರುಜ್ಜೀವನಗೊಳಿಸಲು ಮನಸ್ಸು ಮಾಡಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರಕಾರದ ವಿವಿಧ ಇಲಾಖೆಗಳ 400 ಕ್ಕೂ ಹೆಚ್ಚು ಅಪರ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಏಕ ಕಾಲಕ್ಕೆ ದೇಶದ 255ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ ಅಂಕಿ ಅಂಶ ಸಂಗ್ರಹಿಸುತ್ತಿದ್ದಾರೆ.

ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ನೀರಿನ ಮದಕಗಳು ಜನಪ್ರಿಯ ಆಗಿತ್ತು. ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಕೆಲವು ತಿಂಗಳ ಕಾಲ ಮಳೆ ನೀರು ಸಂಗ್ರಹಿಸಿಡುವ ಮದಕಗಳು ಬಹಳಷ್ಟು ಕಾಣ ಸಿಗುತ್ತಿದ್ದವು. ಈಗ ಅವುಗಳ ಸಂಖ್ಯೆ ತುಂಬಾ ಕಡಿಮೆ ಆಗಿವೆ. ಕಳೆದ ಐದಾರು ದಶಕಗಳ ನಡುವೆ ಮದಕಗಳ ಮಹತ್ವವನ್ನು ಜನರು ಮರೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಪಂಚಾಯತ್ ವತಿಯಿಂದ ಕೆಲವು ಮದಕ ಮತ್ತು ಪಳ್ಳ (ಹಳ್ಳ)ಗಳನ್ನು ಪುನರುಜ್ಜೀವನಗೊಳಿಸಲಾಗಿದೆ.

ಮದಕ ಅಂದರೆ ಕರ್ನಾಟಕ ಹಾಗೂ ಕೇರಳದ ಕರಾವಳಿಯ ಜಂಬುಮಣ್ಣಿನ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮಳೆನೀರು ಸಂಗ್ರಹಿಸುವ ರಚನೆಗಳಾಗಿದ್ದು, ರಾಜಸ್ತಾನ ರಾಜ್ಯದ ಜೋಹಾಡ್ ಮಾದರಿಗಳನ್ನು ಹೋಲುತ್ತದೆ.

ನೈಸರ್ಗಿಕವಾದ ಮೂರು ಬದಿಗಳಲ್ಲಿ ಎತ್ತರದ ಪ್ರದೇಶವಿದ್ದು, ಸುತ್ತಲಿನ ಇಳಿಜಾರುಗಳಿಂದ ಇಳಿಯುವ ಮಳೆನೀರು ತಗ್ಗಿರುವ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಈ ಮಳೆನೀರು ಇಳಿಜಾರುಗಳಿಂದ ಹರಿದು ಹೋಗದಂತೆ ಮಾಡಲು, ನಾಲ್ಕನೆಯ ತೆರೆದ ಬದಿಗೆ ಬದುಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಇಂತಹ ಬದುಗಳ ಉದ್ದ ಸಾಧಾರಣವಾಗಿ ಕಡಿಮೆ ಇರುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಲಾಗುವ ಮಳೆನೀರು ಕೊಯ್ಲು ಮಾದರಿ ಇದಾಗಿರುತ್ತದೆ.

ಕಾಸರಗೋಡು ಮಾದರಿ:

ಕಾಸರಗೋಡಿನ ಏಣ್ಮಕಜೆ ಗ್ರಾಮದ ಬೆದ್ರಂಪಳ್ಳ ಮದಕಕ್ಕೆ ಜೀವಂತ ಉದಾಹರಣೆ. ಜಂಬುಮಣ್ಣಿನ ಪ್ರದೇಶಗಳಲ್ಲಿ ನೀರಿನ ವೇಗವಾದ ಹೀರುವಿಕೆ ಹಾಗೂ ಸೋರುವಿಕೆ ಆಗುತ್ತದೆ ಹಾಗೂ ಮದಕಗಳು ಬಿರುಕುಗಳ ಮೂಲಕ ನೀರು ನಿಧಾನವಾಗಿ ಜಿನುಗುತ್ತದೆ; ಹಾಗಾಗಿ, ಅನೇಕ ಬಾರಿ ಮದಕಗಳನ್ನು ಜಿನುಗು ಕೊಳಗಳಿಗೆ ಹೋಲಿಸಲಾಗುತ್ತದೆ. ಇದರಿಂದ ಅಂತರ್ಜಲದ ಮರುಪೂರಣವಾಗಿ, ಮದಕಗಳ ಬಳಿ ಇರುವ ನೀರಿನ ಬುಗ್ಗೆಗಳು ಅಥವಾ ಇತರ ಹೊರಗಿಂಡಿಗಳ ಮೂಲಕ, ಮಾನವ-ನಿರ್ಮಿತ ಕೆರೆಗಳು ಅಥವಾ ಬಾವಿಗಳನ್ನು ಸೇರುತ್ತದೆ.

ಎತ್ತರದ ಪ್ರದೇಶದಲ್ಲಿನ ಅವುಗಳ ಜಲಾನಯನ ಪ್ರದೇಶಗಳಿಂದ ಹರಿವ ನೀರನ್ನು ಹಿಡಿದಿಡುವುದಾಗಿದೆ. ಆರರಿಂದ ಏಳು ತಿಂಗಳವರೆಗೂ ನೀರಿನ ಶೇಖರಣೆ ಮಾಡುವುದರೊಂದಿಗೆ, ಬೇಸಿಗೆ ತಿಂಗಳುಗಳಲ್ಲಿ ಒಣಗಿದರೂ, ಕೆಳಗಿರುವ ನೀರಿನ ಮೂಲಗಳಿಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಮದಕಗಳನ್ನು ಎತ್ತರದಲ್ಲಿ ಕಟ್ಟುವುದರಿಂದ, ಬೇಸಿಗೆಯ ಕೊನೆಯವರೆಗೂ ತಗ್ಗಿನ ಪ್ರದೇಶಗಳಲ್ಲಿ ನೀರು ಇರುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಬದುಗಳ ಮೇಲಿನಿಂದ ಹರಿದು ಬರುವ ಹೆಚ್ಚುವರಿ ನೀರನ್ನು ಹೊಲಗಳಿಗೆ ನೀರಾವರಿ ಒದಗಿಸಲು ಬಳಸಬಹುದು. ಬಹುತೇಕವಾಗಿ ಮದಕಗಳನ್ನು ನೀರಾವರಿಗಾಗಿ ಬಳಸಲಾಗುತ್ತದೆ, ಆದರೆ, ಅದರ ನಿಜವಾದ ಉಪಯೋಗ ಜಲ ಮರುಪೂರಣ. ಈ ವಿಚಾರ ಬಹಳ ಜನಗಳಿಗೆ ತಿಳಿದಿಲ್ಲ.

ಕರ್ನಾಟಕ ಕರಾವಳಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮದಕಗಳು ಇದ್ದುವು ಎಂದು ಅಂದಾಜು ಮಾಡಲಾಗಿದೆ. ಮದಕಗಳ ಬಗ್ಗೆ ಯಾವುದೇ ರೀತಿಯ ದಾಖಲೀಕರಣ ಇದುವರೆಗೆ ನಡೆದಿಲ್ಲ ಎನ್ನುತ್ತಾರೆ ಜಲತಜ್ಞ ಪತ್ರಕರ್ತ ಶ್ರೀಪಡ್ರೆ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೆಲವು ಮಂದಿ ಕೃಷಿಕರು ಸ್ವಂತ ಮದಕಗಳನ್ನು ಈಗಲೂ ಬಳಸುತ್ತಿದ್ದಾರೆ. ಮಂಗಳೂರಿನ ಸನಿಹದ ಕಾವೂರು ಕೆರೆ ಎಂಬ ಮದಕವನ್ನು ಕೆಲವು ವರ್ಷಗಳ ಹಿಂದೆ ಪುನರುಜ್ಜೀವನ ಮಾಡಲಾಗಿತ್ತು. ಮದಕಗಳ ಪುನರುಜ್ಜೀನಕ್ಕೆ ಯಾವುದೇ ಪ್ರತ್ಯೇಕ ಯೋಜನೆ ಇಲ್ಲ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು.

ಮದಕ ರೀತಿಯಲ್ಲೇ ಇತ್ತೀಚೆಗೆ ಕೆಂಪು ಕಲ್ಲಿನ ಕೋರೆಗಳಲ್ಲಿ ಮಳೆ ನೀರು ಸಂಗ್ರಹ ಆಗುತ್ತಿರುವುದರಿಂದ ಅಂತರ್ಜಲ ಮರುಪೂರಣ ಆಗುತ್ತದೆ. ಮದಕಗಳ ಬಗ್ಗೆ ಜನಜಾಗೃತಿಯಾಗಿ ಮದಕಗಳ ಪುನರುಜ್ಜೀವನವಾದರೆ ಸರಕಾರದ ಜಲ ಶಕ್ತಿ ಅಭಿಯಾನಕ್ಕೊಂದು ಅರ್ಥ ಬರಬಹುದು.

ಇನ್ನುಳಿದ ಮಳೆ ನೀರು ಕೊಯ್ಲು, ನೀರಿನ ಮರು ಬಳಕೆ ಮತ್ತು ನೀರಿಂಗಿಸುವ ರಚನೆ, ಜಲಾನಯನ ಅಭಿವೃದ್ಧಿ ಹಾಗೂ ದಟ್ಟ ಅರಣ್ಯೀಕರಣ ಇತ್ಯಾದಿ ಜಾರಿಯಲ್ಲಿರುವ ಕಾರ್ಯಕ್ರಮಗಳೇ ಆಗಿದ್ದರೂ ಅವುಗಳನ್ನು ಸುಸ್ಥಿರವಾಗಿ ಅನುಷ್ಠಾನ ಮಾಡಬೇಕಾಗಿದೆ. ಇಂತಹ ಯೋಜನೆಗಳಲ್ಲಿ ಜನರ ಸಹಭಾಗಿತ್ವ ಬಹುದೊಡ್ಡ ಪ್ರಮಾಣದಲ್ಲಿ ಇದ್ದಾಗ ಮಾತ್ರ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಆಗುತ್ತದೆ. ಬಹಳಷ್ಟು ಇಂತಹ ಕಾರ್ಯಕ್ರಮಗಳು ವಿಫಲ ಮತ್ತು ಅನುಷ್ಠಾನ ಆಗದಿರಲು ಜನಸಹಭಾಗಿತ್ವದ ಕೊರತೆಯೇ ಕಾರಣ ಆಗಿರುತ್ತದೆ ಎಂದು ಸರಕಾರ ಮನಗಾಣಬೇಕು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...