ಬಹುದಿನಗಳಿಂದ ರಾಜ್ಯದಲ್ಲಿ ಚರ್ಚೆಯಲ್ಲಿದ್ದ ಸಂಪುಟ ಪುನರಾಚನೆ ವಿಷಯಕ್ಕೆ ಸಂಬಂಧಿಸಿ ಹೊಸ ತಿರುವು ಲಭಿಸಿದೆ. ದೆಹಲಿಯಲ್ಲಿ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಕೊನೆಗೊಂಡಿದ್ದು, ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಮಾಡುವುದಿಲ್ಲ ಎಂದು ಯಡಿಯೂರಪ್ಪನವರು ತಿಳಿಸಿದ್ದಾರೆ. ಇನ್ನು ಮೂರು ದಿನಗಳ ಗಡುವು ನೀಡಿರುವ ಯಡಿಯೂರಪ್ಪ, ಬೆಂಗಳೂರಿನಲ್ಲಿ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿ, ಮುಖಂಡರ ಮನವೊಲಿಕೆಯ ನಂತರ ಸಂಪುಟ ವಿಸ್ತರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಹೈಕಮಾಂಡ್ ಭೇಟಿಗಾಗಿ ಕಾದು ಕುಳಿತಿದ್ದ ಯಡಿಯೂರಪ್ಪನವರಿಗೆ ಇಂದು ಆ ಭಾಗ್ಯ ಒದಗಿ ಬಂತು. ಇಂದು ಸಂಜೆ ನಾಲ್ಕು ಗಂಟೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪನವರು ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತಾಗಿ ಅಮಿತ್ ಶಾ ಮನವೊಲಿಸಲು ಸಫಲರಾದರು. ಆದರೆ, ಯಡಿಯೂರಪ್ಪನವರ ಪಟ್ಟಿಯಲ್ಲಿದ್ದ ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಸೂಕ್ತವಲ್ಲ ಎಂದು ಬಿಜೆಪಿ ಹೈಕಮಾಂಡ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದಂತಹ ಶಾಸಕರಿಗೆ ನಿರಾಸೆಯನ್ನು ತಂದಿದೆ.
ಗೆದ್ದಿರುವ ಎಲ್ಲರಿಗೂ ಸಚಿವ ಸ್ಥಾನ ನೀಡ್ತೀರಾ ಎಂದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ಇನ್ನೊಂದು ಎರಡು ದಿನಗಳು ಕಾಯುವಂತೆ ಸೂಚಿಸಿದ್ದಾರೆ. ಅವರ ಮಾತಿನಲ್ಲಿ ಎಲ್ಲರಿಗೂ ಸಚಿವ ಸ್ಥಾನ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಸೋತವರ ಕಥೆ ಏನು ಎಂದಿದ್ದಕ್ಕೂ ಸಿಎಂ ಯಡಿಯೂರಪ್ಪ ಉತ್ತರ ಕೊಟ್ಟಿಲ್ಲ. ಇನ್ನು ಡಿಸಿಎಂ ಪೋಸ್ಟ್ ಕೊಡ್ತೀರಾ ಎಂದಿದ್ದಕ್ಕೆ ಮಾತ್ರ ಖಡಕ್ ಉತ್ತರ ಕೊಟ್ಟಿರುವ ಸಿಎಂ ಯಡಿಯೂರಪ್ಪ, ಈಗಿರುವ ಮೂವರು ಉಪಮುಖ್ಯಮಂತ್ರಿಗಳನ್ನು ಬಿಟ್ಟು ಮತ್ತೆ ಡಿಸಿಎಂ ಪೋಸ್ಟ್ ಕೊಡುವುದಿಲ್ಲ ಎಂದಿದ್ದಾರೆ. ಒಟ್ಟಾರೆ ಯಡಿಯೂರಪ್ಪ ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಹೈಕಮಾಂಡ್ ಮುಖ ತಿರುಗಿಸಿದ್ದು, ಕೆಲವರ ಹೆಸರನ್ನು ಕೈಬಿಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಇನ್ನು ನೂತನವಾಗಿ ಗೆದ್ದವರಲ್ಲಿ ಕೇವಲ 6 ಮಂದಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟು ಉಳಿದವರನ್ನು ಸಮಾಧಾನ ಮಾಡಲು ಸೂಚನೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಯಾರಿಗೆ ಕೊಡೋದು ಯಾರನ್ನು ಸಮಾಧಾನ ಮಾಡೋದು ಅನ್ನೋ ಯೋಚನೆಯಲ್ಲಿ ಯಡಿಯೂರಪ್ಪ ಬೆಂಗಳೂರು ಕಡೆಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ.
ದೆಹಲಿ ದೊರೆಗಳ ದರ್ಬಾರ್‌ಗೆ ಕಂಗಾಲಾದ ಯಡಿಯೂರಪ್ಪ! ಉಳಿದ ಮಾರ್ಗ ರಾಜೀನಾಮೆ..?
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕರ್ನಾಟಕ ಮಾಧ್ಯಮಗಳಲ್ಲಿ ರಾಜಾಹುಲಿ ಹುಲಿ ಎಂಬ ಬಿರುದು ಪಡೆದಿದ್ದಾರೆ. ಆದ್ರೆ ದೆಹಲಿಯ ಬಿಜೆಪಿ ನಾಯಕರ ಮನೆ ಮುಂದೆ ಬೆಕ್ಕಿನ ಮರಿಯಂತೆ ಅತ್ತಿಂದ ಇತ್ತಿಂದ ಓಡಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಆಗುತ್ತಿರುವ ಅವಮಾನವನ್ನು ರಾಜ್ಯದ ಜನರೇ ಸಹಿದ ರೀತಿಯಲ್ಲಿ ಸ್ವಪಕ್ಷೀಯರಿಂದ ಭಾರೀ ಅಪಮಾನಕ್ಕೆ ತುತ್ತಾಗುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಹಿರಿಯ ವಯಸ್ಸಿನಲ್ಲಿ ಯಡಿಯೂರಪ್ಪ ಇಷ್ಟೊಂದು ಅವಮಾನ ಅನುಭವಿಸಬೇಕೆ ಎಂದು ಓರ್ವ ಸಾಮಾನ್ಯ ನಾಗರಿಕ ಪ್ರಶ್ನಿಸುವ ಹಾಗಿದೆ ಯಡಿಯೂರಪ್ಪ ಅವರ ಇಂದಿನ ಪರಿಸ್ಥಿತಿ. ದೆಹಲಿಗೆ ಬರಬೇಡಿ ಎಂಬ ಸಂದೇಶವಿದ್ದರೂ ದೆಹಲಿಗೆ ತೆರಳಿದ ಯಡಿಯೂರಪ್ಪ ಮಾಧ್ಯಮಗಳ ಎದುರು ಬರಲು ಸಾಧ್ಯವಾಗದೆ ಕರ್ನಾಟಕ ಭವನದ ಕೊಠಡಿಯಲ್ಲಿ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿತ್ತು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಉದ್ದೇಶದಿಂದ ನಿನ್ನೆ ಬೆಳಗ್ಗೆ ಇಬ್ಬರು ಮಕ್ಕಳ ಸಮೇತ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡಿದ್ದರು. ಕೇಂದ್ರ ಸಚಿವ ಧಮರ್ೇಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ರಾಜ್ಯದ ಕೆಲವೊಂದು ಯೋಜನೆಗಳು ಹಾಗು ರಾಜ್ಯಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಆ ಬಳಿಕ ರಾತ್ರಿ 9 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ನಿವಾಸಕ್ಕೆ ತೆರಳಿದ ಯಡಿಯೂರಪ್ಪಗೆ ಜೆ.ಪಿ ನಡ್ಡಾ ಸಿಗಲಿಲ್ಲ. ಜೆ.ಪಿ ನಡ್ಡಾ ಮನೆಗೆ ವಾಪಸ್ ಬರುವ ತನಕ ಕಾದು ಕುಳಿತ ಯಡಿಯೂರಪ್ಪ ಮೈಸೂರು ಪೇಟ ತೊಡಿಸಿ, ಪುಷ್ಪಗುಚ್ಚ ಕೊಟ್ಟು ರಾಷ್ಟ್ರೀಯ ಅಧ್ಯಕ್ಷ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಭೇಟಿಯಾದ ಸಿಎಂ ಯಡಿಯೂರಪ್ಪ ಕೆಲವೇ ನಿಮಿಷಗಳಲ್ಲಿ ಭೇಟಿ ಮುಗಿಸಿ ಮನೆಯಿಂದ ವಾಪಸ್ ಆಗಿದ್ದಾರೆ. ಆದರೆ ಅಮಿತ್ ಶಾ ಭೇಟಿಗೆ ನಿನ್ನೆ ಅವಕಾಶ ಕೊಟ್ಟಿರಲಿಲ್ಲ. ಆದರೂ ಯಡಿಯೂರಪ್ಪ ಅಮಿತ್ ಶಾ ನಿವಾಸಕ್ಕೆ ತೆರಳಲು ಯತ್ನಿಸಿ ವಿಫಲರಾದರು ಎನ್ನಲಾಗಿದೆ. ಅಷ್ಟಕ್ಕೂ ಜೆ.ಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಹಾಗಿದ್ದ ಮೇಲೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಜೆ.ಪಿ ನಡ್ಡಾ ಬಳಿಯೇ ಚರ್ಚೆ ಮಾಡಬೇಕಿತ್ತು. ಅಮಿತ್ ಷಾ ಬಳಿ ಹೋಗುವ ಅವಶ್ಯಕತೆಯೇ ಇರಲಿಲ್ಲ. ಅಮಿತ್ ಶಾ ಜೊತೆ ಚರ್ಚೆ ಮಾಡುವುದಾಗಿದ್ದರೆ, ಅಮಿತ್ ಷಾ ಬೆಂಗಳೂರಿಗೆ ಬಂದಾಗಲೇ ಚರ್ಚೆ ಮಾಡಬಹುದಿತ್ತು. ಅಮಿತ್ ಷಾ ಹುಬ್ಬಳ್ಳಿಗೆ ಬಂದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಅವಕಾಶ ಸಿಗದೆ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಬಂದಿದ್ದರು.
ಇವೆಲ್ಲಾ ಬೆಳವಣಿಗೆಗಳನ್ನು ನೋಡಿದರೆ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದು ಬಿಜೆಪಿ ಹೈಕಮಾಂಡ್‌ಗೇ ಸುತರಾಂ ಇಷ್ಟವಿಲ್ಲ ಎನ್ನುವ ಸಂದೇಶವನ್ನು ನೀಡುತ್ತವೆ. ಹೀಗಾಗಿ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಅವಕಾಶವನ್ನೂ ಈವರೆಗೆ ನೀಡಿರಲಿಲ್ಲ. ಇಂದು ನಡೆದ ಸಭೆಯೂ ಸಂಪುಟ ವಿಸ್ತರಣೆಯ ಪೂರ್ವಭಾವಿ ಸಭೆಯಾಗಿ ಕಾಣುತ್ತಷ್ಟೇ ಹೊರತು, ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟು ಅವರ ಪಟ್ಟಿಯನ್ನು ಪುರಸ್ಕರಿಸುವ ಶಿಷ್ಟಾಚಾರ ಬಿಜೆಪಿ ಹೈಕಮಾಂಡ್ ತೋರಲಿಲ್ಲ.