ಭಾರೀ ಪ್ರಚಾರದ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡು ದಿನಗಳ ಭಾರತ ಭೇಟಿ ಅಂತ್ಯವಾಗಿದೆ. ಭಾರೀ ನಿರೀಕ್ಷೆಯ ವ್ಯಾಪಾರ-ವಹಿವಾಟು ಒಪ್ಪಂದ ಪ್ರಸ್ತಾಪವಿಲ್ಲದೆ ಈ ಭೇಟಿ ಮುಕ್ತಾಯವಾಗಿದ್ದು, ಉಭಯ ರಾಷ್ಟ್ರಗಳ ಪಾಲಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬಂತಾಗಿದೆ.
ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ವಿಧಿಸಿರುವ ಅಧಿಕ ತೆರಿಗೆ ತಗ್ಗಿಸುವ ಮತ್ತು ಮುಖ್ಯವಾಗಿ ವಾಣಿಜ್ಯ ವ್ಯಾಪಾರದ ವಲಯದಲ್ಲಿ ಭಾರತವನ್ನು ಆದ್ಯತಾ ರಾಷ್ಟ್ರ ಎಂಬ ಸ್ಥಾನಮಾನದಿಂದ ಕೈಬಿಟ್ಟ ನಿರ್ಧಾರವನ್ನು ರದ್ದು ಮಾಡುವ ನಿರೀಕ್ಷೆಗಳನ್ನು ಭಾರತದ ಕಡೆಯಿಂದ ಹೊಂದಾಗಿತ್ತು. ಹಾಗೇ ಅಮೆರಿಕ ಕೂಡ ಭಾರತದಲ್ಲಿ ಪ್ರಮುಖವಾಗಿ ತನ್ನ ಹೈನುಗಾರಿಕಾ ಉತ್ಪನ್ನ ಸೇರಿದಂತೆ 28 ಉತ್ಪನ್ನಗಳ ಮೇಲೆ ಹೇರಿರುವ ಅಧಿಕ ತೆರಿಗೆ ಕಡಿತ ಕೈಬಿಡುವಂತೆ ಈ ಭೇಟಿಯಲ್ಲಿ ಒಮ್ಮತಕ್ಕೆ ಬರುವ ನಿರೀಕ್ಷೆ ಹೊಂದಿತ್ತು. ಆದರೆ, ಸುಮಾರು 21 ಸಾವಿರ ಕೋಟಿ ರೂ.(3 ಬಿಲಿಯನ್ ಡಾಲರ್) ಮೊತ್ತದ ಸೇನಾ ಹೆಲಿಕಾಪ್ಟರ್ ಮತ್ತಿತರ ಯುದ್ಧ ಸಾಮಗ್ರಿ ಖರೀದಿ ಒಪ್ಪಂದದ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. 5 ಜಿ ತಂತ್ರಜ್ಞಾನದ ಸುರಕ್ಷತೆ ವಿಷಯದಲ್ಲಿ ಪರಸ್ಪರ ಸಹಕಾರಕ್ಕೆ ತೀರ್ಮಾನಿಸಲಾಗಿದೆ. ಎಲ್ ಪಿಜಿ ಆಮದಿಗೆ ಸಂಬಂಧಿಸಿದಂತೆ ಐಒಸಿ ಮತ್ತು ಅಮೆರಿಕದ ಎಕ್ಸಾನ್ ಮೊಬೈಲ್ ಕಂಪನಿ ನಡುವೆ ಒಪ್ಪಂದ ಘೋಷಿಸಲಾಗಿದೆ. ಇನ್ನುಳಿದಂತೆ ಈ ಭೇಟಿ ಕೇವಲ ನಾಳೆಯ ದಿನಗಳ ಕನಸುಗಳೊಂದಿಗೆ ಮುಕ್ತಾಯ ಕಂಡಿದೆ.
ಹಾಗೆ ನೋಡಿದರೆ, ಭೇಟಿಯಲ್ಲಿ ಹೊಸ ಒಪ್ಪಂದವಾಗಲೀ, ಹೊಸ ಒಡಂಬಡಿಕೆಗಳಾಗಲೀ ಘೋಷಣೆಯಾಗಿಲ್ಲ. ಈಗಾಗಲೇ ಮಾತುಕತೆ ಹಂತದಲ್ಲಿದ್ದ ಕೆಲವನ್ನು ಅಧಿಕೃತವಾಗಿ ಘೋಷಿಸಲಾಗಿದೆ ಅಷ್ಟೇ. ಅದರಲ್ಲೂ ಒಂದಿಷ್ಟು ಅನುಕೂಲವೇನಾದರೂ ಆಗಿದ್ದರೆ ಅದು 21 ಸಾವಿರ ಕೋಟಿ ರೂ. ಸೇನಾ ಹೆಲಿಕಾಫ್ಟರ್ ಮತ್ತು ಯುದ್ಧ ಸಾಮಗ್ರಿ ಖರೀದಿಯಿಂದಾಗಿ ಅಮೆರಿಕದ ಬೊಕ್ಕಸಕ್ಕೆ ಭಾರತದ ಹಣ ಹರಿಯವುದು ಮಾತ್ರ. ಇನ್ನುಳಿದಂತೆ ಪ್ರಮುಖ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಈ ಭೇಟಿಯಲ್ಲಿ ಯಾವುದೇ ಅಂತಿಮ ಒಪ್ಪಂದ ಸಾಧ್ಯವಾಗಲಾರದು ಎಂಬ ತಮ್ಮ ಪ್ರವಾಸಪೂರ್ವ ಹೇಳಿಕೆಗೆ ಟ್ರಂಪ್ ಜೋತುಬಿದ್ದಿದ್ದು, ವರ್ಷಾಂತ್ಯದ ತಮ್ಮ ಅಧ್ಯಕ್ಷೀಯ ಚುನಾವಣೆಯ ಬಳಿಕವಷ್ಟೇ ಆ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರಬಹುದು ಎಂದಿದ್ದಾರೆ.
ಇನ್ನುಳಿದಂತೆ ರಾಜಕೀಯವಾಗಿ ಕೂಡ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ನಡುವಿನ ಮಾತುಕತೆಯಲ್ಲಿ ಯಾವುದೇ ಪ್ರಮುಖ ಪ್ರಸ್ತಾಪಗಳಾಗಲೀ, ಚರ್ಚೆಗಳಾಗಲೀ ನಡೆದಿಲ್ಲ ಎಂಬುದನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ವಿಶೇಷವಾಗಿ ಸಿಎಎ ಮತ್ತು ಮುಸ್ಲಿಂ ವಿರೋಧಿ ನೀತಿಯ ವಿಷಯದಲ್ಲಿ ಟ್ರಂಪ್ ಮೋದಿಯವರೊಂದಿಗೆ ಚರ್ಚಿಸಬಹುದು ಎಂಬ ನಿರೀಕ್ಷೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಕ್ತವಾಗಿತ್ತು. ಆದರೆ, ಅಂತಹ ಯಾವುದೇ ವಿಷಯ ಚರ್ಚೆಗೆ ಬರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಸಿಎಎ ವಿಷಯದಲ್ಲಿ ಮೋದಿಯವರೊಂದಿಗೆ ಹೆಚ್ಚೇನೂ ಚರ್ಚಿಸಲಿಲ್ಲ. ಅದು ಭಾರತದ ಆಂತರಿಕ ವಿಷಯವಾಗಿರುವುದರಿಂದ ಮೋದಿಯವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಆದರೆ, ಸರ್ಕಾರದ ಮುಸ್ಲಿಂ ವಿರೋಧಿ ನೀತಿಯ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ, ಟ್ರಂಪ್, ‘ಆ ಬಗ್ಗೆ ಸಾಕಷ್ಟು ದೀರ್ಘ ಚರ್ಚೆ ನಡೆಸಿದ್ದೇವೆ. ಆದರೆ, ಮೋದಿಯವರು ತಮ್ಮ ದೇಶದಲ್ಲಿ 20 ಕೋಟಿ ಮುಸ್ಲಿಮರಿದ್ದಾರೆ ಮತ್ತು ಅವರೆಲ್ಲರ ಹಿತ ಕಾಯಲು ತಾವು ಶ್ರಮಿಸುತ್ತಿರುವುದಾಗಿ ಹೇಳಿದ್ಧಾರೆ’ ಎಂದಿದ್ಧಾರೆ. ಇನ್ನು ಪಾಕಿಸ್ತಾನ ಮತ್ತು ಭಾರತದ ನಡುವಿನ ಬಿಕ್ಕಟ್ಟು ಬಗೆಹರಿಸಲು ತಾವು ಮಧ್ಯಪ್ರವೇಶಿಸಲು ಸಿದ್ಧಎಂದೂ ಮೋದಿಯವರಿಗೆ ತಿಳಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ.
ಆದರೆ, ವಿಪರ್ಯಾಸವೆಂದರೆ, ಟ್ರಂಪ್ ಹಾಗೆ ಮುಸ್ಲಿಮರ ಪರ ಕೆಲಸ ಮಾಡುತ್ತಿರುವುದಾಗಿ ಮೋದಿ ಹೇಳಿದ್ದಾರೆ ಎಂಬ ಮಾತು ಹೇಳುತ್ತಿರುವ ಹೊತ್ತಿಗೆ, ದೆಹಲಿಯ ಒಂದು ಭಾಗದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಭೀಕರ ಮತೀಯ ಅಟ್ಟಹಾಸದಲ್ಲಿ ಮೋದಿಯವರ ಪ್ರಬಲ ಬೆಂಬಲಿಗರಾದ ಹಿಂದುತ್ವವಾದಿ ಗುಂಪುಗಳು ಮುಳುಗಿದ್ದವು ಮತ್ತು ಕಾನೂನು- ಸುವ್ಯವಸ್ಥೆ ಕಾಯಬೇಕಾದ ಮೋದಿಯವರ ಸರ್ಕಾರ(ದೆಹಲಿ ಪೊಲೀಸ್ ವ್ಯವಸ್ಥೆ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ) ಮೂರು ದಿನಗಳ ಕಾಲ ನಡೆಯುತ್ತಿರುವ ಹಿಂಸಾಚಾರಕ್ಕೆ ಮೂಕಪ್ರೇಕ್ಷಕನಾಗಿ ಕೂತಿತ್ತು.
ರಾಜಧಾನಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ವ್ಯಾಪಕ ಹಿಂಸಾಚಾರ ಮತ್ತು ಗಲಭೆಗೆ ಪರೋಕ್ಷವಾಗಿ ಆಳುವ ಸರ್ಕಾರ ಮತ್ತು ಪೊಲೀಸರೇ ಕಾರಣ ಎಂಬ ಗಂಭೀರ ಆರೋಪಗಳು ಕೇಳಬಂದಿವೆ. ಅದರಲ್ಲೂ ಸ್ವತಃ ಮೋದಿಯವರ ಪಕ್ಷದ ನಾಯಕರೇ ಹಿಂಸೆಗೆ ಪ್ರಚೋದನೆ ನೀಡಿರುವುದು ವೀಡಿಯೋ ದಾಖಲೆ ಸಹಿತ ಬಹಿರಂಗವಾಗಿದೆ. ಮುಸ್ಲಿಮರನ್ನು ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನಾಕಾರನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದಲ್ಲಿ ಪತ್ರಕರ್ತರು ಕೂಡ ಬಲಿಪಶುಗಳಾಗಿದ್ದಾರೆ. ಅಂತಹ ಸ್ಥಿತಿಯಲ್ಲಿ ಕೂಡ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ದೇಶ ಎಂಬ ಹೆಗ್ಗಳಿಕೆ ಅಮೆರಿಕದ ಅಧ್ಯಕ್ಷರು, ಆ ಬಗ್ಗೆ ಪ್ರಸ್ತಾಪವನ್ನೇ ಮಾಡದೇ ಮರಳಿದ್ದಾರೆ ಎಂಬುದು ಕೂಡ ಗಮನಾರ್ಹ.
ಹಾಗಾಗಿ, ಈ ಭೇಟಿಯ ಬಹುಪಾಲು ಕಂಡದ್ದು ಟ್ರಂಪ್ ಮತ್ತು ಅವರ ಕುಟುಂಬದ ಐಷಾರಾಮಿ ಪ್ರವಾಸ, ರೋಡ್ ಶೋ, ರ್ಯಾಲಿ, ರಾಷ್ಟ್ರಪತಿ ಭವನದ ಶಿಷ್ಟಾಚಾರದ ರಾಜವೈಭೋಗದ ಕಾರ್ಯಕ್ರಮಗಳು ಮತ್ತು ಟ್ರಂಪ್ ಮತ್ತು ಮೋದಿಯವರ ಪರಸ್ಪರರ ಹೆಗಲು ತಟ್ಟಿಕೊಳ್ಳುವ ಮುಖಸ್ತುತಿಯ ಮಾತುಗಳು!
ಮತ್ತು; ಅಮೆರಿಕದ ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ಕಟ್ಟುವ ಘೋಷಣೆಯೊಂದಿಗೆ 2016ರ ಅಧ್ಯಕ್ಷೀಯ ಚುನಾವಣೆಗಳನ್ನು ಗೆದ್ದಿದ್ದ ಟ್ರಂಪ್, ತಮ್ಮ ಆ ಪರಂಪರೆಯನ್ನು ಮುಂದುವರಿಸಿ, ಗುಜರಾತಿನ ಅಹಮದಾಬಾದಿನ ಹೆದ್ದಾರಿಯಂಚಿನ ಕೊಳಗೇರಿಗಳಿಗೂ ಗೋಡೆ ಕಟ್ಟಿಸಿದ್ದು; ಮತ್ತು ಭಾರತದ ಹಿಂದೂ ಮತ್ತು ಮುಸ್ಲಿಮರ ನಡುವೆ ಈಗಾಗಲೇ ಮಾನಸಿಕವಾಗಿ ಎದ್ದಿರುವ ಗೋಡೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನಗಳಿಗೆ ದೆಹಲಿಯಲ್ಲಿ ಸಾಕ್ಷಾತ್ ಮೂಕಸಾಕ್ಷಿಯಾಗಿದ್ದು ಮತ್ತೊಂದು ವಿಶೇಷ.
ಪ್ರವಾಸದ ಎರಡನೇ ದಿನ, ಒಂದು ಕಡೆ ಟ್ರಂಪ್, ಹಿಂದೂ ಮುಸ್ಲಿಮರು ಪರಸ್ಪರ ಭಾತೃತ್ವದಿಂದ ಸಹಜೀವನ ಮಾಡುವ ಜಾತ್ಯತೀತ ಭಾರತದ ಕನಸು ಕಂಡಿದ್ದ ಮಹಾತ್ಮ ಗಾಂಧಿಯವರ ರಾಜ್ ಘಾಟ್ ಸಮಾಧಿಗೆ ಹೂಗುಚ್ಛ ಇಡುತ್ತಿರುವ ಹೊತ್ತಿಗೆ, ರಾಜಧಾನಿಯ ಮತ್ತೊಂದು ದಿಕ್ಕಿನಲ್ಲಿ ಹೊತ್ತಿ ಉರಿಯುತ್ತಿದ್ದ ಕೋಮು ದಳ್ಳುರಿಯಲ್ಲಿ ಅಮಾಯಕರು ಬೇಯುತ್ತಿದ್ದರು! ಇದು ಜನಾಂಗೀಯ ದ್ವೇಷದ ಮೂಲಕವೇ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಅಮೆರಿಕ ಅಧ್ಯಕ್ಷ ಹಾಗೂ ಕೋಮು ದ್ವೇಷದ ಮೂಲಕವೇ ರಾಜಕೀಯ ಮೆಟ್ಟಿಲು ಏರಿದ ಮೋದಿಯವರ ಮಹತ್ವದ ಭೇಟಿಯ ದೊಡ್ಡ ವಿಪರ್ಯಾಸದಂತೆ ಭಾಸವಾದರೆ, ಅದಕ್ಕೆ ಕಾಲವೇ ಹೊಣೆ!