ರಾಜ್ಯದ ಹಿರಿಯ ರಾಜಕಾರಣಿ, ಸದಾ ವ್ಯವಸ್ಥೆಯ ವಿರುದ್ದವೇ ಮಾತಾಡುತಿದ್ದ, ಸಂಘ ಪರಿವಾರದ ವಿರುದ್ದ ಕೆಂಡ ಕಾರುತ್ತಿದ್ದ ಎ. ಕೆ. ಸುಬ್ಬಯ್ಯ ಇನ್ನಿಲ್ಲ. ಕೊಡಗಿನ ಎ. ಕೆ. ಸುಬ್ಬಯ್ಯ ಅವರನ್ನು ಇಲ್ಲಿನ ಜಮ್ಮಾ ಭೂ ಮಾಲೀಕರು ಮರೆಯುವಂತೆಯೇ ಇಲ್ಲ. ಅವರು ರಾಜ್ಯ ಹೈ ಕೋರ್ಟಿನಲ್ಲಿ ಗೆದ್ದಿರುವ ಮೊಕದ್ದಮೆ ರಿಟ್ ಅರ್ಜಿ ಸಂಖ್ಯೆ 3939/1988 ಮೂಲಕವೇ ಕೊಡಗಿನ ಜಮ್ಮಾ ಭೂ ಮಾಲೀಕರಿಗೆ ಆಸ್ತಿಯ ಮಾಲಿಕತ್ವ ಸಿಕ್ಕಿದೆ.
ಮೊದಲಿಗೆ ಜನಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದ ಅಜ್ಜಿಕುಟ್ಟೀರ ಸುಬ್ಬಯ್ಯ ಅವರು ರಾಜ್ಯ ಬಿಜೆಪಿ ಘಟಕದ ಮೊದಲ ಅದ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಂದು 1980ರಲ್ಲಿ ಕರ್ನಾಟಕ ಬಿಜೆಪಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಅವರ ನಾಯಕತ್ವದಲ್ಲೇ 1983ರ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 18 ಸ್ಥಾನಗಳನ್ನು ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಆ ಕಾಲದಲ್ಲಿ ದಿವಂಗತ ನಾಯಕ ಅಟಲ ಬಿಹಾರಿ ವಾಜಪೇಯಿ ಅವರೊಂದಿಗೆ ಕೊಡಗಿನಲ್ಲೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾಗ ವೇದಿಕೆಯ ಇತರ ಬಿಜೆಪಿ ನಾಯಕರು ಸುಬ್ಬಯ್ಯ ಅವರನ್ನು ರಾಜ್ಯದ ಮುಖ್ಯ ಮಂತ್ರಿಯಾಗಿಯೂ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಯೂ ಮಾಡಬೇಕೆಂದು ಜನತೆಯಲ್ಲಿ ಮತಯಾಚನೆ ಮಾಡುತಿದ್ದರು. ಅಷ್ಟರಮಟ್ಟಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಇವರು ನಂತರ ಬಿಜೆಪಿಯಿಂದಲೇ ಶಾಶ್ವತವಾಗಿ ದೂರಾದರು. ಅಷ್ಟೇ ಅಲ್ಲ ಬದುಕಿನ ಕೊನೆ ಕ್ಷಣದ ತನಕವೂ ಬಿಜೆಪಿ ಹಾಗೂ ಸಂಘ ಪರಿವಾರವನ್ನು ದೂರುತ್ತಲೇ ಬಂದರು.

ಪಾಕಿಸ್ತಾನ ಬಾವುಟ ಹಾರಿಸಿದ ಪ್ರಕರಣ:
ಅದು 1991 ನೇ ಇಸವಿ. ಸೋಮವಾರಪೇಟೆಯ ಜಲಾಲಿಯಾ ಮಸೀದಿಯಲ್ಲಿ ಮುಸ್ಲಿಮರು ಬಹುಶಃ ರಂಜಾನ್ ಹಬ್ಬದ ಸಮಯದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ್ದರು. ವಿಷಯ ಗಂಭೀರ ಸ್ವರೂಪ ಪಡೆದು ಬಿಜೆಪಿ ಕಾರ್ಯಕರ್ತರು ಜಿಲ್ಲಾದ್ಯಂತ ದೊಡ್ಡ ಪ್ರತಿಭಟನೆಯನ್ನು ಮಾಡಿದರು. ಕೂಡಲೇ ಪೋಲೀಸರು ಪೋಲೀಸರು ಮಸೀದಿಯ ಆಡಳಿತ ಮಂಡಳಿಯ 9 ಜನರ ವಿರುದ್ದವೂ ಮೊಕದ್ದಮೆ ದಾಖಲಿಸಿದರು. ಆದರೆ ಆರೋಪಿಗಳ ಪರ ವಕಾಲತ್ತು ವಹಿಸಲು ಯಾವ ವಕೀಲರೂ ಮುಂದೆ ಬರಲಿಲ್ಲ. ಸೋಮವಾರಪೇಟೆ, ವೀರಾಜಪೇಟೆ ಮತ್ತು ಮಡಿಕೇರಿ ಬಾರ್ ಕೌನ್ಸಿಲ್ ಗಳು ನಿರ್ಣಯವನ್ನು ಕೈಗೊಂಡು ಯಾವುದೇ ವಕೀಲರು ವಕಾಲತ್ತು ವಹಿಸಕೂಡದೆಂದು ತೀರ್ಮಾನಿಸಿದ್ದರು. ಆ ಸಮಯದಲ್ಲಿ ಹೈ ಕೋರ್ಟಿಗೆ ಮನವಿ ಸಲ್ಲಿಸಿ ಮೊಕದ್ದಮೆಯನ್ನು ಮೈಸೂರಿನ ಸೆಷನ್ಸ್ ಕೋರ್ಟಿಗೆ ವರ್ಗಾವಣೆ ಮಾಡಿಸಿಕೊಂಡು ಆರೋಪಿಗಳಿಗೆ ಜಾಮೀನು ಕೊಡಿಸಿದವರು ಸುಬ್ಬಯ್ಯ ಅವರು.
2014 ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಾಗ ಇಡೀ ಕೊಡಗು ಜಿಲ್ಲಾದ್ಯಂತ ಜನತೆ ಪಕ್ಷ ಭೇದ ಮರೆತು ಪ್ರತಿಭಟಿಸಿದರು. ಜಿಲ್ಲೆಯ ಎಲ್ಲ 40 ಕ್ಕೂ ಅಧಿಕ ಕೊಡವ ಸಮಾಜಗಳೂ ಆಚರಣೆಯನ್ನು ವಿರೋಧಿಸಿ ನಿರ್ಣಯ ಕೈಗೊಂಡವು. ಅದರೆ ಸುಬ್ಬಯ್ಯ ಅವರು ಎಲ್ಲ ಕೊಡವ ಸಮಾಜದವರನ್ನು `ಬಿಜೆಪಿ ಏಜೆಂಟ್’ ಎಂದು ಕರೆದು ಜಯಂತಿ ಆಚರಣೆಗೆ ಬೆಂಬಲ ಸೂಚಿಸಿದರು.

ಕೊಡವರು ತಮ್ಮ ಕುಲದೈವ ತಲಕಾವೇರಿಗೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ತೀರ್ಥೋದ್ಭವದಲ್ಲಿ ತೀರ್ಥ ಬರುವುದಿಲ್ಲ ಎಂದು ಹೇಳಿಕೆ ನೀಡಿ ಸುಬ್ಬಯ್ಯ ತಮ್ಮವರದ್ದೇ ವಿರೋಧ ಕಟ್ಟಿಕೊಂಡರು. ಒಮ್ಮೆ `ವಕೀಲರೆಲ್ಲ ಜೇಬು ತುಂಬಾ ಹಣ ಮಾಡಿಕೊಳ್ಳುತ್ತಾರೆ’ ಎಂದು ಟೀಕಿಸಿದ್ದ ಸುಬ್ಬಯ್ಯ ಅವರಿಗೆ ಯಾರನ್ನೇ ಅಗಲೀ ಎಷ್ಟೇ ದೊಡ್ಡ ವ್ಯಕ್ತಿತ್ವದವರನ್ನೇ ಆಗಿರಲಿ ಟೀಕಿಸಲು ಹಿಂಜರಿಕೆ ಇರಲಿಲ್ಲ. ಒಮ್ಮೆ ಕನ್ನಡದ ವರನಟ ಡಾ ರಾಜ್ ಕುಮಾರ್ ಅವರನ್ನೂ ಸುಬ್ಬಯ್ಯ ಟೀಕಿಸಿದ್ದರು.
ಏನಿದು ರಿಟ್ ಅರ್ಜಿ ಸಂಖ್ಯೆ 3939/1988?
ಸುಬ್ಬಯ್ಯ ಅವರು ಎಲ್ಲರ ವಿರೋಧವನ್ನು ಕಟ್ಟಿಕೊಂಡಿದ್ದರಿಂದಲೇ ಯಾರೂ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಅದು ಅವರ ಹವ್ಯಾಸ ಎಂದು ನಿರ್ಲಕ್ಷಿಸಿದ್ದೇ ಹೆಚ್ಚು. ಆದರೆ ಕೊಡಗಿನಲ್ಲಿ ಕಂದಾಯ ಇಲಾಖೆ ಭೂಮಿಯನ್ನು 32 ಕ್ಕೂ ಹೆಚ್ಚು ನಮೂನೆಗಳಿಂದ ಗುರುತಿಸಿದೆ. ಇದರಲ್ಲಿ ತಲೆತಲಾಂತರಗಳಿಂದ ಕೊಡವರ ಸ್ವಾಧೀನದಲ್ಲಿರುವ ಜಮ್ಮಾ ಭೂಮಿಯೂ ಇದ್ದು ಸಾವಿರಾರು ಎಕರೆಗಳಷ್ಟಿದೆ. ಆದರೆ ಕಂದಾಯ ಮತ್ತು ಅರಣ್ಯ ಇಲಾಖೆ ಈ ಭೂಮಿಯು ಸರ್ಕಾರದ್ದೆಂದು ಹೇಳುತ್ತಾ ಇಲ್ಲಿ ಕೃಷಿ ಮಾಡಿದ್ದರೂ ಭೂಮಿಯ ಮಾಲೀಕತ್ವದ ಹಕ್ಕನ್ನು ನಿರಾಕರಿಸಿತ್ತು. ಆಗ ಹೈ ಕೋರ್ಟಿನಲ್ಲಿ ರಿಟ್ ಅರ್ಜಿ (3939/1988) ಸಲ್ಲಿಸಿದ ಸುಬ್ಬಯ್ಯ ಜಮ್ಮಾ ಭೂ ಮಾಲೀಕರಿಗೆ ಮಾಲೀಕತ್ವದ ಹಕ್ಕನ್ನು ದೊರಕಿಸಿಕೊಟ್ಟರು. ನಂತರ ರಾಜ್ಯ ಸರ್ಕಾರ ಈ ಭೂಮಿಗಳಿಗೆ ಕಂದಾಯ ನಿಗದಿ ಮಾಡಲು ಆರಂಭಿಸಿತು. ಈ ಮೊಕದ್ದಮೆಯನ್ನು ಗೆದ್ದ ನಂತರ ಸುಬ್ಬಯ್ಯ ಅವರನ್ನು ಕೊಡಗಿನ ಕೆಲವೆಡೆ ಜಮ್ಮಾ ಭೂ ಮಾಲೀಕರ ಸಂಘದವರು ಸನ್ಮಾನಿಸಿದ್ದರು.
ಬೆಂಗಳೂರಿನಲ್ಲೇ ಹೈ ಕೋರ್ಟಿನಲ್ಲಿ ವಕೀಲರಾಗಿದ್ದ ಸುಬ್ಬಯ್ಯ ಅವರು ಸಾಮಾನ್ಯವಾಗಿ ವೀಕೆಂಡ್ ಗಳಲ್ಲಿ ಜಿಲ್ಲೆಗೆ ಭೇಟಿ ನೀಡುತಿದ್ದರು. ಪತ್ರಿಕಾ ಗೋಷ್ಠಿಯನ್ನೂ ಕರೆಯುತಿದ್ದರು. ಸುಬ್ಬಯ್ಯ ಅವರು ಕೊನೆತನಕವೂ ಒಂದು ಪಕ್ಷದ ಅಥವಾ ಸಿದ್ಧಾಂತದ ಪರ ನಿಲ್ಲಲೇ ಇಲ್ಲ. ಅವರದು ಯಾವತ್ತಿಗೂ `ಭಿನ್ನ ಧ್ವನಿ’ ಆಗಿರುತ್ತಿತ್ತು. ತಮ್ಮ ಇಳಿ ವಯಸ್ಸಿನಲ್ಲೂ ಹಾಗೆಯೇ ಇದ್ದ ಸುಬ್ಬಯ್ಯ ನಮ್ಮನ್ನಗಲಿದ್ದಾರೆ. ಬದುಕಿರುವಷ್ಟು ಸಮಯವೂ ಸಂಪ್ರದಾಯದ ವಿರೋಧಿಯೇ ಅಗಿದ್ದ ಸುಬ್ಬಯ್ಯ ಅವರ ಅಂತ್ಯ ಕ್ರಿಯೆ ಕೊಡವ ಸಂಪ್ರದಾಯದಂತೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.