ಕೊಡವ ಜನಾಂಗದವರು ಪ್ರತೀ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಆಚರಿಸುವ ಕೈಲ್
ಮುಹೂರ್ತ (ಕೊಡವ ಭಾಷೆಯಲ್ಲಿ ಕೈಲ್ ಪೊಳ್ದ್) ಹಬ್ಬ ಈ ಬಾರಿ ಸಂಭ್ರಮ ಸಡಗರಗಳಿಲ್ಲದೆ ಸರಳವಾಗಿ ಆಚರಿಸಲಾಯಿತು. ಈ ವರ್ಷ ಸೆಪ್ಟೆಂಬರ್ 3 ರಂದು ಜಿಲ್ಲಾದ್ಯಂತ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗಿದ್ದು, ಇದಕ್ಕೆ ಕೊಡಗಿಗೆ ಸೀಮಿತವಾಗುವಂತೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆಯನ್ನೂ ಘೋಷಿಸಿತ್ತು.
ಕೈಲ್ ಮುಹೂರ್ತ ಹಬ್ಬವನ್ನು ಆಯುಧ ಪೂಜೆಗೆ ಹೋಲಿಸಬಹುದು. ಏಕೆಂದರೆ ಆಯುಧ ಪೂಜೆಯೇ ಈ ಹಬ್ಬದ ವಿಶೇಷ. ಕೊಡಗಿನಲ್ಲಿ ಕೃಷಿ ಕಾರ್ಯ ಮುಗಿದ ನಂತರ, ಬಿಸಿಲು ಆರಂಭವಾಗಿರುತ್ತದೆ. ಕೊಡವ ಜನಾಂಗ ಮೂಲತಃ ಕೃಷಿಕರು ಮತ್ತು ಬೇಟೆಗಾರರು. ಗದ್ದೆ ಕೆಲಸ ಮುಗಿದ ನಂತರ ಕಕ್ಕಡ (ಅಷಾಢ) ಮಾಸದಲ್ಲಿ ತಮ್ಮ ವ್ಯಯಸಾಯದ ಉಪಕರಣಗಳನ್ನೂ, ಬೇಟೆಯಾಡಲು ಬಳಸುತಿದ್ದ ಕತ್ತಿ ಕೋವಿ ಇತ್ಯಾದಿ ಆಯುಧಗಳನ್ನು ದೇವರ ಮನೆಯಲ್ಲಿ ಇಟ್ಟು ಕೈಲ್ ಮುಹೂರ್ತ ದಿನದಂದು ಪೂಜೆ ಸಲ್ಲಿಸಿ ಹೊರ ತೆಗೆಯುತ್ತಾರೆ.

ರಾಜರ ಕಾಲದಲ್ಲಿ ಈ ಹಬ್ಬವನ್ನು ವಿವಿಧ ನಾಡುಗಳಲ್ಲಿ ವಿವಿಧ ದಿನ ಆಚರಿಸುತಿದ್ದರು. ಏಕೆಂದರೆ, ಸೈನಿಕರು ಕರ್ತವ್ಯದಲ್ಲಿರುವಾಗ ಹಬ್ಬ ಆಚರಿಸಲು ಒಂದೇ ದಿನ ರಜೆ ಕೊಟ್ಟರೆ ಶತ್ರುಗಳು ದಾಳಿ ಮಾಡುವ ಅಪಾಯವಿತ್ತು ಈಗ ಒಂದೇ ದಿನ ಆಚರಿಸುತ್ತಾರೆ. ಈ ಹಬ್ಬದಂದು ಜಿಲ್ಲೆಯ ಹೊರಗಿರುವ ಕೊಡವರೂ ಇಲ್ಲಿಗೆ ಆಗಮಿಸಿ ತಮ್ಮ ಕುಟುಂಬಸ್ಥರ ಜತೆ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ವಿವಿಧ ಕ್ರೀಡೆಗಳನ್ನೂ ಜೊತೆಗೆ ತೆಂಗಿನ ಕಾಯಿಗೆ
ಗುಂಡು ಹೊಡೆಯುವ ಸ್ಪರ್ದೆಯನ್ನೂ ಸ್ಥಳೀಯ ಕಡವ ಸಮಾಜಗಳು ಆಯೋಜಿಸುತ್ತವೆ. ಪೂಜೆಯ ನಂತರ ಕಾಡು ಪ್ರಾಣಿಗಳನ್ನು ಬೇಟೆಯಾಡಲು ತೆರಳುವ ಸಂಪ್ರದಾಯವೂ ಇದೆ. ಈ ಹಬ್ಬದಲ್ಲಿ ಹಂದಿ ಮಾಂಸ ಮತ್ತು ಕಡುಬು ಮಾಡಿ ಸೇವಿಸುತ್ತಾರೆ.
ಆದರೆ ಕಳೆದೆರಡು ವರ್ಷಗಳಿಂದ ಕೈಲ್ ಮುಹೂರ್ತ ಸಂಭ್ರಮ , ಸಡಗರ ಜಿಲ್ಲೆಯಲ್ಲಿ ಕಾಣಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಸಂಭವಿಸಿರುವ ಭೀಕರ ಭೂ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ. ಕಳೆದ ೩-೪ ವರ್ಷಗಳಿಂದ ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಫಿ, ಕರಿಮೆಣಸು, ಕಿತ್ತಳೆ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕಾಫಿಯ ಬೆಲೆ 50 ಕೆಜಿ, ಅರೇಬಿಕಾ ಪಾರ್ಚ್‌ಮೆಂಟ್ ಚೀಲವೊಂದಕ್ಕೆ 8 ಸಾವಿರಕ್ಕೂ ಅಧಿಕವಾಗಿದ್ದು ಇದೀಗ 6 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿದೆ. ಕರಿಮೆಣಸು ಒಂದು ಹಂತದಲ್ಲಿ ಕೆಜಿಗೆ 800 ರೂಪಾಯಿ ಇದ್ದಿದ್ದು ಈಗ 300 ರೂಪಾಯಿಗಳಿಗೆ ಕುಸಿದಿದೆ. ಬೆಲೆ ಇಷ್ಟು ಕುಸಿದಿದ್ದರೂ ತೋಟಗಳಿಗೆ ಬಳಸುವ ರಸಾಯನಿಕ ಗೊಬ್ಬರ , ಕ್ರಿಮಿನಾಶಕ , ಹತ್ಯಾರುಗಳ ಬೆಲೆ ಏರುತ್ತಲೇ ಸಾಗಿದೆ.

ಇದು ಸಾಲದೆಂಬಂತೆ ಹೊಸ ವಿಕೋಪವಾಗಿ ವರ್ಷ ವರ್ಷವೂ ಭೂ ಕುಸಿತ ಉಂಟಾಗುತ್ತಿರುವುದು
ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ನಿದ್ದೆ ಗೆಡಿಸಿದೆ. ಪ್ರತೀ ವರ್ಷ ಮಳೆಗಾಲದಲ್ಲೂ ಕೊಡಗಿನ ಕೆಲ ಭಾಗಗಳ ಜನ ಆತಂಕದಿಂದ ರಾತ್ರಿ ಕಳೆಯಬೇಕಿದೆ. “ಮೊದಲು 1962 ರಲ್ಲಿ ಈ ರೀತಿ ಭೂ ಕುಸಿತ ಮತ್ತು ಮಳೆ ಆಗಿತ್ತಂತೆ. ಕಳೆದ ವರ್ಷವೂ ಅಯಿತು. ನಾವು ಇನ್ನು ಹತ್ತಿಪ್ಪತ್ತು ವರ್ಷ ಭೂ ಕುಸಿತ ಆಗಲಾರದು ಎಂದೇ ಭಾವಿಸಿ ನೆಮ್ಮದಿಯಾಗಿದ್ದೆವು. ಆದರೆ ಈ ವರ್ಷವೂ ಭೂ ಕುಸಿತ ಆಗಿರುವುದು ಭವಿಷ್ಯವನ್ನೇ ಡೋಲಾಯಮಾನ ಸ್ಥಿತಿಗೆ ತಂದಿದೆ,’’ ತಾಕೇರಿ ಗ್ರಾಮದ ಗುಡ್ಡದಲ್ಲಿ ತೋಟ ಮತ್ತು ಮನೆ ಹೊಂದಿರುವ ಪುಪ್ಪಯ್ಯ ಹೇಳುತ್ತಾರೆ.
ವಿವಿಧ ಸಂತ್ರಸ್ಥರ ಶಿಬಿರಗಳಲ್ಲಿ ಇನ್ನೂ ಸಾವಿರಾರು ಸಂತ್ರಸ್ತರು ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಲೇ ಇದ್ದಾರೆ. ಅವರಿಗೆ ಹಬ್ಬವೂ ಇಲ್ಲ, ನೆಮ್ಮದಿಯೂ ಇಲ್ಲ. ಕೊಡಗಿನಲ್ಲಿ ಪ್ರತೀ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಕ್ರೀಡಾ ಕೂಟವನ್ನು ಏರ್ಪಡಿಸಲಾಗುತ್ತದೆ. ಸುಮಾರು ಎರಡು ದಶಕಗಳಿಂದಲೂ ಈ ಕ್ರೀಡಾಕೂಟವನ್ನು ವರ್ಷಕ್ಕೊಂದು ಕೊಡವ ಕುಟುಂಬವು ಅದ್ದೂರಿಯಾಗಿ ನಡೆಸುತಿದ್ದು, ಇದು ಗಿನ್ನೆಸ್ ದಾಖಲೆಗೂ ಸೇರ್ಪಡೆಗೊಂಡಿದೆ. ಆದರೆ ಕಳೆದ ವರ್ಷದ ಭೂ ಕುಸಿತದ ನಂತರ ಸುಮಾರು 700-800 ತಂಡಗಳು ಭಾಗವಹಿಸುತಿದ್ದ ಈ ಕ್ರೀಡಾಕೂಟವನ್ನು 20-30 ತಂಡಗಳಿಗೆ ಸೀಮಿತಗೊಳಿಸಿ ವಾರದೊಳಗೆ ಮುಗಿಸಲಾಗುತ್ತಿದೆ. 1997 ರಿಂದ ಸತತವಾಗಿ ಈ ಕ್ರೀಡಾಕೂಟವನ್ನು ಆಚರಿಸಿಕೊಂಡು ಬರಲಾಗುತಿದ್ದು ಒಂದು ತಿಂಗಳ ಕಾಲ ಈ ಕ್ರೀಡಾ ಹಬ್ಬ ನಡೆದು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡುತಿತ್ತು.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಕೊಡವ ಸಂಘಟನೆ ಕೊಡವ ನ್ಯಾಷನಲ್ ಕೌನ್ಸಿಲ್ ಸೆಪ್ಟೆಂಬರ್ ಒಂದರಂದೇ ಮಡಿಕೇರಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿದೆ. ಕೊಡವರ ಬಹುಮುಖ್ಯ ಹಬ್ಬಗಳಲ್ಲೊಂದಾದ ಕೈಲ್ ಪೊವ್ದ್ ನಮ್ಮ ಆಯುಧ ಪೂಜೆಯನ್ನು ಸಿ.ಎನ್.ಸಿ ಸಂಘಟನೆ ಕಳೆದ 24 ವರ್ಷಗಳಿಂದ ಆಚರಿಸುತ್ತಾ ಬಂದಿದೆ. ಮಡಿಕೇರಿ ಜೂನಿಯರ್ ಕಾಲೇಜು ಮೈದಾನದ “ಮಂದ್‍ನಲ್ಲಿ” ಹಬ್ಬ ಆಚರಿಸಲಾಯಿತು. ಸಾಮೂಹಿಕವಾಗಿ ಕೊಡವರ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಲಾಂಛನವಾದ ತೋಕ್ (ಬಂದೂಕ) –ಒಡಿಕತ್ತಿ- ಪೀಚೆ ಕತ್ತಿ ಮತ್ತು ಕೃಷಿ ಉಪಕರಣಗಳಾದ ನೇಂಗಿ – ನೊಗ – ತಾವೆ ಇತ್ಯಾದಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಪ್ರತಿ ವರ್ಷದಂತೆ ವಾಹನಗಳ ಮೆರವಣಿಗೆ ಮೂಲಕ ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಕ್ಯಾಪಿಟಲ್ ವಿಲೇಜ್ ತಲುಪಿತು. ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಾದ ಕಾರೋಣ ಪಾಟ್, ದುಡಿಕೊಟ್ಟ್ ಪಾಟ್, ಪರಿಯಕಳಿ, ತೆಂಗೆ ಬೊಡಿ ಇತ್ಯಾದಿ ಕಾರ್ಯಕ್ರಮ ನಡೆಸಲಾಯಿತು. “ಪ್ರತೀ ವರ್ಷ ಮಳೆ ಬೆಳೆ ಚೆನ್ನಾಗಿ ಆದರೆ ಹಬ್ಬಕ್ಕೆ ಮೆರಗು ತರುತಿತ್ತು. ಆದರೆ ಪ್ರಾಕೃತಿಕ ವಿಕೋಪದಿಂದಾಗಿ ಆಚರಣೆಯಲ್ಲಿ ಸಡಗರವಿಲ್ಲ ಎಂದು ಕೌನ್ಸಿಲ್ ಅಧ್ಯಕ್ಷ ಎನ್ ಯು ನಾಚಪ್ಪ ಹೇಳಿದರು.
ಕೊಡವರ ಪ್ರಮುಖ ಹಬ್ಬಗಳು ಮೂರು. ಕೈಲ್ ಮುಹೂರ್ತ, ಹುತ್ತರಿ ಮತ್ತು ಕಾವೇರಿ ತುಲಾ ಸಂಕ್ರಮಣ, ಪ್ರಾಕೃತಿಕ ವಿಕೋಪದ ಮತ್ತು ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಯ ಸಡಗರ ಕಳೆಗುಂದುತ್ತಿರುವುದು ಖೇದಕರ.