ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇಲ್ಲಿ ಗುಂಪು ಮನೆಗಳು ಕಡಿಮೆ. ಮನೆಗಳಾದರೂ ಕೂಡ ದೂರ ದೂರ ಇರುತ್ತವೆ. ಹಾಗಾಗಿ ಶಾಲೆಗಳನ್ನು ನಿರ್ಮಿಸುವಾಗಲೂ ಎಲ್ಲ ಮಕ್ಕಳಿಗೂ ಅನುಕೂಲವಾಗುವಂತೆ ನಿರ್ಮಿಸಲು ಸಾದ್ಯವಾಗುತ್ತಿಲ್ಲ. ಹೀಗಾಗಿ ಶಾಲೆಗಳು ಕೆಲವರಿಗೆ ಹತ್ತಿರವಾದರೆ ಇನ್ನು ಕೆಲವರಿಗೆ ದೂರ ಅಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ತಲೆ ಎತ್ತುತಿದ್ದು ಸರ್ಕಾರಿ ಶಾಲೆಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಎಲ್ಲ ಪೋಷಕರಿಗೂ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿ ಅರಳು ಹುರಿದಂತೆ ಮಾತಾಡಬೇಕೆಂಬ ಬಯಕೆ ಇದು ಸರ್ಕಾರಿ ಶಾಲೆಯಲ್ಲಿ ಎಲ್ಲಿ ಸಾಧ್ಯ? ಜತೆಗೆ ಖಾಸಗಿ ಶಾಲೆಗಳು ಹಳ್ಳಿ ಹಳ್ಳಿಗಳಿಗೂ ವಾಹನ ಕಳಿಸಿ ತಮ್ಮ ಹಾಜರಾತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ ಮಗದೊಂದೆಡೆ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ.
ಸರ್ಕಾರ ಉಚಿತ ಶಿಕ್ಷಣ, ಊಟ, ಪಾದರಕ್ಷೆ, ಬೈಸಿಕಲ್ ಇತ್ಯಾದಿ ಸವಲತ್ತು ನೀಡಿದ್ದರೂ ಜಿಲ್ಲೆಯಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳ ಸಂಖ್ಯೆ ಬರೋಬ್ಬರಿ 28. ಸೋಮವಾರಪೇಟೆ ತಾಲ್ಲೂಕು ಶಾಂತಳ್ಳಿಯಲ್ಲಿರುವ ಅನುದಾನಿತ ಪ್ರಸಾದ್ ಪ್ರೌಢ ಶಾಲೆ ಕಳೆದ ವರ್ಷ ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿತ್ತು. ಈ ಶಾಲೆ ತಾಲ್ಲೂಕು ಕೇಂದ್ರ ಸೋಮವಾರಪೇಟೆಯಿಂದ 12 ಕಿಲೋಮೀಟರ್ ದೂರದಲ್ಲಿದ್ದು 2010-11 ನೇ ಸಾಲಿನಲ್ಲಿ ಸ್ಥಳೀಯ ದಾನಿಗಳೇ ಹಣ ಹೊಂದಿಸಿ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾಲೆ ತೆರೆದಿದ್ದರು. ಸಮೀಪದ ಕುಂದಳ್ಳಿ ಸರ್ಕಾರೀ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಲ್ಲಿಕಾರ್ಜುನ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕಳೆದ ವರ್ಷದಿಂದ ಬಾಗಿಲು ಮುಚ್ಚಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಶಾಲೆಗಳು ಮುಚ್ಚಲಾಗಿದ್ದರೆ, ವೀರಾಜಪೇಟೆ ತಾಲ್ಲೂಕಿನಲ್ಲಿ 9 ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ 8 ಶಾಲೆಗಳು ಮುಚ್ಚಲ್ಪಟ್ಟಿವೆ.
ದಿನಾಂಕ 1 ನೇ ಜೂನ್ 2016 ರಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆಯೊಂದನ್ನು ಹೊರಡಿಸಿ ಯಾವ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೋ ಆ ಶಾಲೆಯ ಮಕ್ಕಳನ್ನು ಸಮೀಪದ ಒಂದು ಕಿಲೋಮೀಟರ್ ದೂರವಿರುವ ಶಾಲೆಗೆ ಸೇರಿಸಿ ಕಡಿಮೆ ಮಕ್ಕಳಿರುವ ಶಾಲೆಯನ್ನು ಮುಚ್ಚಲು ಆದೇಶಿಸಿದ್ದರು. ಈ ಆದೇಶ ಹೊರ ಬೀಳುತಿದ್ದಂತೆ ಕನ್ನಡ ಪರ ಸಂಘಟನೆಗಳಿಂದ , ಸಾಹಿತಿಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು. ಸರ್ಕಾರೀ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಗುಣಮಟ್ಟದ ಶಿಕ್ಷಣದ ಜತೆಗೇ ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ಪ್ರಾರಂಬಿಸಬೇಕೆಂದು ಒತ್ತಾಯಿಸಿ ಕೆಲವೆಡೆಗಳಲ್ಲಿ ಪ್ರತಿಭಟನೆಯೂ ನಡೆದಿತ್ತು. ನಂತರ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸರ್ಕಾರ ಈ ಸುತ್ತೋಲೆಯನ್ನು ಹಿಂಪಡೆದಿತ್ತು.
ಜಿಲ್ಲೆಯಲ್ಲಿ 28 ಶಾಲೆಗಳನ್ನು ಮುಚ್ಚಿದ ಬೆನ್ನಲ್ಲೇ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜಿಲ್ಲೆಯಲ್ಲಿ ಸುಮಾರು 51 ಸರ್ಕಾರೀ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಪಟ್ಟಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಮುಂಚೂಣಿಯಲ್ಲಿದ್ದು ಇಲ್ಲಿ ಸುಮಾರು 25 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10 ಕ್ಕಿಂತ ಕಡಿಮೆ ಇದ್ದು, ಮಡಿಕೇರಿ ತಾಲ್ಲೂಕಿನಲ್ಲಿ 15 ಸರ್ಕಾರೀ ಶಾಲೆಗಳು ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 11 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10 ಕ್ಕಿಂತ ಕಡಿಮೆ ಇದೆ.
ಸೋಮವಾರಪೇಟೆ ತಾಲ್ಲೂಕಿನ ಅತ್ತೂರು, ಮಣಜೂರು, ಕುಮಾರಳ್ಳಿ, ಜಕ್ಕನಳ್ಳಿ, ಸಂಪಿಗೆದಾಳು ಮತ್ತು ಹರಗ ಸರ್ಕಾರೀ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5 ಕ್ಕಿಂತ ಕಡಿಮೆ ಇದೆ. ವೀರಾಜಪೇಟೆ ತಾಲ್ಲೂಕಿನ ಮಾರ್ಗೊಲ್ಲಿ, ಮೂರ್ಕಲ್ ಮತ್ತು ಮಾಕುಟ್ಟ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 4 ರಿಂದ 5 ರಷ್ಟಿದೆ. ಮಡಿಕೇರಿ ತಾಲ್ಲೂಕಿನ ಕಿರುಂದಾಡು, ಆವಂದೂರು, ಐವತ್ತೊಕ್ಲು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 3 ರಿಂದ 5 ಇದೆ. ಮದೆ, ಹೆರವನಾಡು , ಪನ್ನೋಲ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 8 ಕ್ಕೂ ಕಡಿಮೆ ಇದೆ.
ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ. ಆದರೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಮುಚ್ಚುವದಿಲ್ಲ ಎಂದು ಪೋಷಕರಿಗೆ ಭರವಸೆಯನ್ನು ನೀಡುತ್ತಿದ್ದಾರೆ. ಜೊತೆಗೆ ಸರ್ಕಾರಿ ಪ್ರಾಥಮಿಕ ಶಲೆಗಳಲ್ಲಿ ಆಂಗ್ಲ ಶಿಕ್ಷಣದ ಜತೆಗೇ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನೂ ಆರಂಭಿಸಿರುವುದು ಗ್ರಾಮೀಣ ಬಡ ಮಕ್ಕಳ ಹಿತ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿದೆ.