ಕೊಡಗಿನಲ್ಲಿ ಮುಂಗಾರು ವಿಳಂಬ; ಆತಂಕದಲ್ಲಿ ಅನ್ನದಾತ

ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಾಕೃತಿಕ ಸೌಂದರ್ಯದ ಜತೆಗೇ ಭರಪೂರ ಮುಂಗಾರು ಮಳೆಗೂ ಅಷ್ಟೇ ಹೆಸರುವಾಸಿ ಆಗಿದೆ. ದಶಕಗಳ ಇತಿಹಾಸ ಹೊಂದಿರುವ ನಾಡಿನ ಜೀವನದಿ ಕಾವೇರಿಯ ಜಲವಿವಾದವು ಕೊಡಗಿನಲ್ಲಿ ಬೀಳುವ ಮಳೆಯ ಪ್ರಮಾಣವನ್ನೇ ಅವಲಂಬಿಸಿದೆ. ಕಾವೇರಿ ನದಿಗೆ ಜೀವ ತುಂಬುವ ಜಲಚೈತನ್ಯ ನೀಡುವುದೇ ಇಲ್ಲಿನ ಮುಂಗಾರು. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಇಲ್ಲೂ ಕೂಡ ಮಳೆ ಏರು ಪೇರಾಗುತ್ತಿದೆ.

50 ವರ್ಷಗಳ ಹಿಂದೆ ಕೊಡಗಿನ ಮುಂಗಾರು ಎಂದರೆ ಅದು ಮೂರು ತಿಂಗಳ ಭರ್ತಿ ಜಡಿಮಳೆ. ಕೆಲಸ ಕಾರ್ಯಗಳಿಗೆ ಪೂರ್ಣವಿರಾಮದ ಜತೆಗೇ ವಿದ್ಯುತ್ ಸರಬರಾಜೂ ಸ್ಥಗಿತಗೊಂಡು ಹಳ್ಳಿಗಳಿಗೆ ಹೊರಜಗತ್ತಿನ ಸಂಪರ್ಕವೇ ಕಡಿದು ಹೋಗುತಿತ್ತು ಎಂದು ಹಿರಿಯರು ಈಗಲೂ ನೆನೆಸಿಕೊಳ್ಳುತಿರುತ್ತಾರೆ. ಆದರೆ ಆ ರೀತಿಯ ಮಳೆಗಾಲ ನಿಂತು ಹೋಗಿ ದಶಕಗಳೇ ಉರುಳಿವೆ. ಇಂದಿನ ಮಳೆಗಾಲ ಗಮನಿಸಿದರೆ ಕೊಡಗು ಕೂಡ ಬಯಲು ನಾಡಿನ ಹವಾಮಾನದಂತೆಯೇ ಬದಲಾಗುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಯ ಸುಳಿವೇ ಇಲ್ಲದಾಗಿದ್ದು ಬಿಸಿಲು ಚುರುಕಾಗುತ್ತಿದೆ!

ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯು ಜಿಲ್ಲೆಯ ಸರಾಸರಿಗಿಂತ ದುಪ್ಪಟ್ಟು, ಮೂರು ಪಟ್ಟು ಅಧಿಕವಾಗಿರುತ್ತಾದರೂ ಜಿಲ್ಲೆಯಲ್ಲಿ ಸರಾಸರಿ 60-70 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಸಮಯಕ್ಕೆ ಜಿಲ್ಲೆಯಲ್ಲಿ ಸರಾಸರಿ 2054 ಮಿಮಿ ಮಳೆಯಾಗಿದ್ದರೆ, ಈ ವರ್ಷ ಕೇವಲ ಸರಾಸರಿ 704 ಮಿಮಿ ಮಳೆ ಆಗಿದೆ. ಮೂರು ತಾಲ್ಲೂಕುಗಳಲ್ಲಿ ಕಳೆದ ವರ್ಷದ (ಜುಲೈ 17ರ ತನಕದ ಮಳೆ) ಮಳೆಗೆ ಹೋಲಿಸಿದರೆ ಕಡಿಮೆ ಮಳೆ ಆಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಕಳೆದ ವರ್ಷ 2817.12 ಮಿಮಿ ಮಳೆಯಾಗಿದ್ದರೆ ಈ ವರ್ಷ ಕೇವಲ 885.2 ಮಿಮಿ ಮಳೆ ಆಗಿದೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಳೆದ ವರ್ಷ 1596.3ಮಿಮಿ ಮಳೆ ಆಗಿದ್ದರೆ ಈ ವರ್ಷ ಕೇವಲ 419.23 ಮಿಮಿ ಮಳೆ ಆಗಿದೆ, ವಿರಾಜಪೇಟೆ ತಾಲ್ಲೂಕಿನಲ್ಲಿ ಕಳೆದ ವರ್ಷ 1784ಮಿಮಿ ಮಳೆಯಾಗಿದ್ದರೆ ಈ ವರ್ಷ ಆಗಿರುವುದು ಕೇವಲ 704. 8 ಮಿಮಿ ಮಳೆ.

ಪುಟ್ಟ ಜಿಲ್ಲೆ ಆದರೂ ಕೊಡಗಿನಲ್ಲಿ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಖ್ಯ ಬೆಳೆ ಕಾಫಿಯನ್ನು ಬೆಳೆಯಲಾಗುತಿದ್ದು ಒಟ್ಟು ಉತ್ಪಾದನೆ ಸುಮಾರು 1.20 ಲಕ್ಷ ಟನ್ ಗಳಷ್ಟಿದೆ. ಇದು ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ ಮೂವತ್ತರಷ್ಟಿದೆ. ಒಟ್ಟು ಉತ್ಪಾದನೆ 3.6 ಲಕ್ಷ ಟನ್ ಗಳಷ್ಟಿದೆ. ಮಳೆಯ ತೀವ್ರ ಕೊರತೆಯಿಂದ ಕಾಫಿಗೆ ಹಾನಿ ಆಗುತ್ತಿಲ್ಲ ಎಂಬುದು ಸಮಾಧಾನಕರ ವಿಷಯವಾದರೂ ಹೊಸದಾಗಿ ನೆಟ್ಟಿರುವ ಗಿಡಗಳು ಹಾಗೂ ನೆಡಲಿಕ್ಕಿರುವ ಗಿಡಗಳಿಗೆ ಮಳೆ ಅವಶ್ಯಕತೆ ಇದೆ.

ಜಿಲ್ಲೆಯ ಕೃಷಿ ಬೆಳವಣಿಗೆ ಗಮನಿಸುವುದಾದರೆ ಎರಡನೇ ಮುಖ್ಯ ಬೆಳೆಯಾಗಿರುವ ಭತ್ತವನ್ನು ಸುಮಾರು 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವೀರಾಜಪೇಟೆ ತಾಲ್ಲೂಕಿನಲ್ಲಿ 14,123 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತಿದ್ದು ಈ ತನಕ ಶೇಕಡಾ 10 ರಷ್ಟು ಮಾತ್ರ ಸಸಿ ಮಡಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ ತಾಲ್ಲೂಕಿನ ಒಟ್ಟು 5800 ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಶೇಕಡಾ 20 ರಷ್ಟು ಮಾತ್ರ ಸಸಿಮಡಿ ಆಗಿದೆ. ಸೋಮವಾರಪೇಟೆ ತಾಲ್ಲೂಕಿನ 10,800 ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಈವರೆಗೆ ಶೇಕಡಾ 35ರಷ್ಟು ಮಾತ್ರ ಸಸಿಮಡಿ ಮಾಡಲಾಗಿದೆ. ಕಳೆದ ವರ್ಷ ಇದೇ ವೇಳೆಗೆ ಶೇಕಡಾ 50 ರಷ್ಟು ಸಸಿಮಡಿ ಕಾರ್ಯ ಮುಗಿದಿತ್ತು. ಗದ್ದೆಗಳಿಗೆ ಇನ್ನೂ ಸರಿಯಾಗಿ ಮಳೆಯಾಗದ ಕಾರಣದಿಂದಾಗಿ ಉಳುಮೆ ಕೂಡ ಆಗಿಲ್ಲ ಎಂದು ಸೋಮವಾರಪೇಟೆ ತಾಲ್ಲೂಕು ಯಡೂರಿನ ರೈತ ಪುಪ್ಪಯ್ಯ ಪ್ರತಿಧ್ವನಿಗೆ ತಿಳಿಸಿದರು. ಭತ್ತ ಬೆಳೆಗೆ ಅಪಾರ ಪ್ರಮಾಣದ ನೀರು ಬೇಕಾಗಿದ್ದು, ಬಿತ್ತನೆ ತಡವಾದರೆ ಕೊನೆ ಕೊನೆಗೆ ನೀರೇ ಸಿಗದೆ ಬೆಳೆ ಒಣಗುವ ಸಾಧ್ಯತೆ ಇದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಡಾ ಹೆಚ್ ಎಸ್ ರಾಜಶೇಖರ್ ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ ಜಿಲ್ಲೆಯಲ್ಲಿ ಎಲ್ಲೂ ಈತನಕ ಭತ್ತದ ಬೆಳೆಗೆ ಹಾನಿ ಆಗಿಲ್ಲ ಎಂದರಲ್ಲದೆ ಮುಂಗಾರು ವಿಳಂಬದ ಹಾನಿ ಈ ಮಾಸಾಂತ್ಯದ ವೇಳೆಗೆ ನಿಖರವಾಗಿ ತಿಳಿಯಲಿದೆ ಎಂದರು. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಈ ವರ್ಷ ಸರಾಸರಿ ಮಳೆ ಆಗಲಿದ್ದು ರೈತರು ಆತಂಕ ಪಡಬೇಕಿಲ್ಲ ಎಂದರು. ಕಳೆದ ವರ್ಷವೂ ಆಗಸ್ಟ್ ತಿಂಗಳಿನಲ್ಲೇ ನಾಟಿ ಮಾಡಲಾಗಿದ್ದು ಈ ವರ್ಷವೂ ಆಗಸ್ಟ್ ಅಂತ್ಯದೊಳಗೆ ನಾಟಿ ಕಾರ್ಯ ಪೂರ್ಣಗೊಳ್ಳುವ ವಿಸ್ವಾಸ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಮಳೆಯ ಕಣ್ಣಾ ಮುಚ್ಚಾಲೆ , ಕಾರ್ಮಿಕರ ಕೊರತೆ , ಬೆಳೆಗೆ ದರ ಕುಸಿತ, ಹೋಂಸ್ಟೇಯೆಡೆಗಿನ ಆಸಕ್ತಿಯ ಕಾರಣದಿಂದಾಗಿ ಭತ್ತದ ಗದ್ದೆಗಳನ್ನು ಕಾಫಿ ತೋಟಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ನೀರಿನ ಹಿಂಗುವಿಕೆ ಕಡಿಮೆ ಆಗುತಿದ್ದು ಅಂತರ್ಜಲ ಮಟ್ಟ ಕುಸಿಯುತ್ತಲೇ ಸಾಗಿದೆ. 10 ವರ್ಷಗಳ ಹಿಂದೆ ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಗಳಿಗಿಂತಲೂ ಹೆಚ್ಚು ಭತ್ತದ ಗದ್ದೆಗಳಿದ್ದು ಈಗ 34 ಸಾವಿರ ಹೆಕ್ಟೇರ್ ಗಳಿಗೆ ಕುಸಿದಿರುವುದು ನಿಜಕ್ಕೂ ಆತಂಕದ ಸಂಗತಿ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...