ಕಳೆದ ತಿಂಗಳ ಭೀಕರ ಪ್ರವಾಹ ಮತ್ತು ಭೂ ಕುಸಿತಕ್ಕೆ ಸಿಲುಕಿ ನಿಧಾನವಾಗಿ ಚೇತರಿಸಿಕೊಳ್ಳುತಿದ್ದ ಕೊಡಗಿನಲ್ಲಿ ಮಂಗಳವಾರದಿಂದ ಮಳೆ ಬಿರುಸುಗೊಂಡಿದ್ದು ಗುಡ್ಡ ಗಾಡಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಜನತೆ ಆತಂಕದಲ್ಲಿ ಬದುಕುವಂತಾಗಿದೆ. ಬಿರುಸುಗೊಂಡಿರುವ ಮಳೆಯಿಂದಾಗಿ ಜಿಲ್ಲಾಡಳಿತ ಸೆಪ್ಟೆಂಬರ್ 5 ರಂದು ರಜೆ ಘೋಷಿಸಿದೆ. ಅಷ್ಟೇ ಅಲ್ಲ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬುಧವಾರ ಮತ್ತು ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸರಾಸರಿ 2283.88 ಮಿ. ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3782.88 ಮಿ. ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 3035.57 ಮಿ. ಮೀ. ಕಳೆದ ವರ್ಷಇದೇ ಅವಧಿಯಲ್ಲಿ 5474.43 ಮಿ. ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ 2309.80 ಮಿ. ಮೀ. ಮಳೆ ಆಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 2861.98 ಮಿ. ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 1506.27 ಮಿ. ಮೀ. ಮಳೆ ಆಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 3012.24 ಮಿ. ಮೀ. ಮಳೆಯಾಗಿತ್ತು. ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 7500 ಕ್ಯೂಸೆಕ್ಸ್ ತಲುಪಿದ್ದು ಅಷ್ಟೇ ಪ್ರಮಾಣದ ನೀರನ್ನು ನಾಲೆ ಹಾಗೂ ನದಿ ಮೂಲಕ ಹೊರಗೆ ಹರಿಸಲಾಗುತ್ತಿದೆ.
ಕಳೆದ ತಿಂಗಳ ರಕ್ಕಸ ಮಳೆಗೆ ಸಿಲುಕಿ ಜಿಲ್ಲೆಯಲ್ಲಿ ಸುಮಾರು 579 ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಕಳೆದ ವರ್ಷದ ನಷ್ಟ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕವಾಗಿತ್ತು. ಈ ಬಾರಿಯ ನಷ್ಟದಲ್ಲಿ ಬೆಳೆ ಹಾನಿಗೆ ಸುಮಾರು 266.5 ಕೋಟಿ ರೂಪಾಯಿ, ಮೂಲಭೂತ ಸೌಕರ್ಯಕ್ಕೆ 350.4 ಕೋಟಿ ರೂಪಾಯಿ ಹಾಗೂ ಮನೆಗಳಿಗೆ ಒಟ್ಟು 68.7 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ 56.3 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾನಿ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆಯನ್ನೂ ನಡೆಸಿ ಜಿಲ್ಲೆಗೆ 536 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದು ಅದರಲ್ಲಿ 100 ಕೋಟಿ ರೂಪಾಯಿಗಳನ್ನು ಇದೇ ವಾರ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದರು. ಬುಧವಾರ ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ ಜಿ ಬೋಪಯ್ಯನವರ ಜತೆ ತೆರಳಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಡಿಕೇರಿ ಮಂಗಳೂರು ರಸ್ತೆಗಾಗಿರುವ ಹಾನಿಯನ್ನು ಗಮನಿಸಿ ಹೆಚ್ಚುವರಿಯಾಗಿ 56 ಕೋಟಿ ರೂಪಾಯಿಗಳ ನೆರವನ್ನೂ ಘೋಷಿಸಿದ್ದಾರೆ.
ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಬೇಕು ಎನ್ನುವ ಹೊತ್ತಿನಲ್ಲೇ ಮಳೆ ಬಿರುಸು ಪಡೆದುಕೊಂಡಿರುವುದು ಅಧಿಕಾರಿಗಳನ್ನು ಸಮಸ್ಯೆಗೆ ಸಿಲುಕಿಸಿದೆ. ಕಳೆದ ವರ್ಷದ ಮಳೆಗೆ ಹಾನಿಗೀಡಾದ 1010 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಸಂತ್ರಸ್ತರಿಗೆ ಇನ್ನೂ ಹಂಚಿಕೆ ಆಗಬೇಕಾಗಿದೆ. ಕಳೆದ ವರ್ಷ ಅಧಿಕಾರಿಗಳು 6 ತಿಂಗಳಿನಲ್ಲೇ ನೂತನ ತಂತ್ರಜ್ಞಾನದ ಮೂಲಕ ಭೂಕುಸಿತ ತಾಳಿಕೊಳ್ಳಬಲ್ಲ ಮನೆಗಳನ್ನು ನಿರ್ಮಿಸಿ ಸಂತ್ರಸ್ಥರಿಗೆ ಕೊಡುವುದಾಗಿ ಹೇಳಿದರೂ ಇನ್ನೂ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಇದೀಗ ಮತ್ತೆ ಆರಂಭಗೊಂಡ ಮಳೆ ಮನೆಗಳ ನಿರ್ಮಾಣ ಕಾರ್ಯಕ್ಕೂ ಅಡಚಣೆ ತಂದಿದೆ.

15 ದಿನಗಳ ಹಿಂದೆ ಈ ವರ್ಷ ಜಿಲೆಯಲ್ಲಿ ಸುಮಾರು 549 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿತ್ತು. ಆದರೆ, ಮೊನ್ನೆ ದಿನಾಂಕ 31 ರಂದು ಸಿದ್ದಪಡಿಸಿದ ಅಂದಾಜಿನಂತೆ ಜಿಲ್ಲೆಯಲ್ಲಿ 363 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು ಶೇಕಡಾ 15 ರಿಂದ 75ರವರೆಗೆ 643 ಮನೆಗಳು ಮತ್ತು ಶೇಕಡಾ 15 ರಿಂದ 25 ರವರೆಗೆ ಒಟ್ಟು 1032 ಮನೆಗಳು ಹಾನಿಗೀಡಾಗಿವೆ ಎಂದು ಅಂದಾಜಿಸಿದೆ. ಪೂರ್ಣ ಹಾನಿಗೀಡಾದ ಮನೆಗಳ ಸಂತ್ರಸ್ಥರಿಗೆ ತಲಾ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದು, ಅಲ್ಲಿ ತನಕ ತಿಂಗಳಿಗೆ 5,000 ರೂಪಾಯಿಗಳ ಬಾಡಿಗೆಯನ್ನೂ ಸಂತ್ರಸ್ತರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಶೇಕಡಾ 75 ರವರೆಗೆ ಹಾನಿಯಾದ ಮನೆಗಳ ಸಂತ್ರಸ್ಥರಿಗೆ ಪರಿಹಾರವಾಗಿ ಒಂದು ಲಕ್ಷ ರೂಪಾಯಿಗಳನ್ನೂ, ಅಲ್ಪ ಹಾನಿಗೀಡಾದ ಮನೆಗಳ ಸಂತ್ರಸ್ಥರಿಗೆ ಮನೆ ರಿಪೇರಿ ಮಾಡಿಕೊಳ್ಳಲು 25 ಸಾವಿರ ರೂಪಾಯಿಗಳ ನೆರವನ್ನೂ ಘೋಷಿಸಲಾಗಿದೆ. ಈ ಮಧ್ಯೆ ಮಳೆ ಹೆಚ್ಚಾಗುತ್ತಿರುವುದರಿಂದ ಈ ಸಂತ್ರಸ್ತರ ಪಟ್ಟಿಯನ್ನೂ ಪರಿಷ್ಕರಿಸುವುದು ಅನಿವಾರ್ಯವಾಗಲಿದೆ.
ಆಗಸ್ಟ್ ತಿಂಗಳಿನ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ 50 ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು 3 ಸಾವಿರಕ್ಕೂ ಅಧಿಕ ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದರು. ಸೆಪ್ಟೆಂಬರ್ 5 ಕ್ಕೆ ಜಿಲ್ಲೆಯಲ್ಲಿ ಸಂತ್ರಸ್ತರ ಸಂಖ್ಯೆ 204 ಕ್ಕೆ ಇಳಿದಿದ್ದು ಈಗ ಸಿದ್ದಾಪುರ ಸಮೀಪದ ಕರಡಿಗೋಡು ಮತ್ತು ನೆಲ್ಲಿಹುದಿಕೇರಿಯಲ್ಲಿ ಮಾತ್ರ ಎರಡು ಸಂತ್ರಸ್ತ ಪರಿಹಾರ ಕೇಂದ್ರಗಳಿವೆ. ಮಳೆ ಬಿರುಸಾದರೆ ಪುನಃ ಜಿಲ್ಲಾಡಳಿತ ಸಂತ್ರಸ್ತರ ಪರಿಹಾರ ಕೇಂದ್ರಗಳನ್ನುತೆರೆಯಬೇಕಾಗುತ್ತದೆ. ಹಾಗಾಗದಿರಲಿ ಎಂದು ಆಶಿಸೋಣ.