ಪುಟ್ಟ ಜಿಲ್ಲೆ ಕೊಡಗು ಇಂದಿಗೂ ರೈಲ್ವೇ ಸೌಲಭ್ಯದಿಂದ ವಂಚಿತವಾಗಿರುವುದು ನಿಜಕ್ಕೂ ದುಃಖದ ಸಂಗತಿ. ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೂ ಹತ್ತಾರು ಸರ್ಕಾರಗಳು ನಮ್ಮನ್ನು ಆಳಿವೆ. ಅದು ಕಾಂಗ್ರೆಸ್ ಅಥವಾ ಬಿಜೆಪಿಯೇ ಆಗಿರಲಿ ಆದರೆ ಜಿಲ್ಲೆಯ ರೈಲ್ವೇ ಸಂಪರ್ಕಕ್ಕೆ ಗಂಭೀರ ಪ್ರಯತ್ನವೇ ನಡೆದಿಲ್ಲ.
ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ರೈಲ್ವೇ ಸಂಪರ್ಕ ಕಲ್ಪಿಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ. ಅಂದು 2009 ರಲ್ಲಿ ಕೇಂದ್ರ ರೈಲ್ವೇ ಸಹಾಯಕ ಸಚಿವರಾಗಿದ್ದ ವಿ ಮುನಿಯಪ್ಪ ಅವರು ಮೈಸೂರಿನಿಂದ ಕುಶಾಲನಗರದ ವರೆಗಿನ 88 ಕಿಲೋಮೀಟರ್ ಉದ್ದದ ರೈಲ್ವೇ ಹಳಿಯನ್ನು ನಿರ್ಮಿಸಲು ಸರ್ವೆ ಕಾರ್ಯಕ್ಕೂ ಆದೇಶಿಸಿದ್ದರು. ಅಂದಿನ ಯುಪಿಎ ಸರ್ಕಾರದ ಬಜೆಟ್ ನಲ್ಲಿ ಈ ವಿಷಯವನ್ನು ಒಳಪಟ್ಟಿದ್ದು ರಾಜ್ಯದ ಪತ್ರಿಕೆಗಳ ವರದಿಯಲ್ಲೂ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂದು ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿತ್ತು. ಸ್ವತಃ ಮುನಿಯಪ್ಪ ಅವರೆ ಕೊಡಗಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆಯನ್ನೂ ನೀಡಿದ್ದರು.
ಅಂದು ರಾಜ್ಯದ ಮುಖ್ಯ ಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ಕೇಂದ್ರದ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಉದ್ದೇಶಿತ ರೈಲ್ವೇ ಮಾರ್ಗ ಯೋಜನೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಲಾ ಶೇಕಡಾ 50 ರಷ್ಟು ವೆಚ್ಚ ಭರಿಸಬೇಕಿದ್ದು ರಾಜ್ಯ ಸರ್ಕಾರ ತನ್ನ ಖರ್ಚಿನಲ್ಲೇ ಭೂಮಿಯನ್ನೂ ಒದಗಿಸಬೇಕಿತ್ತು.
ಈ ಯೋಜನೆಗಾಗಿ ಮೈಸೂರಿನಿಂದ ಕುಶಾಲನಗರದವರೆಗೆ ಸರ್ವೆ ಕಾರ್ಯವನ್ನೂ ರೈಲ್ವೇ ಇಲಾಖೆ ಕೈಗೊಂಡಿತ್ತು. ಆದರೆ ಕಾಲ ಕ್ರಮೇಣ ಈ ಯೋಜನೆ ಕಾಗದದಲ್ಲೇ ಉಳಿಯಿತು. ನಂತರ ಮೈಸೂರು -ಕೊಡಗು ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ಅವರು ರಾಜ್ಯ ಮಟ್ಟದ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿಯೇ ಸಿದ್ದ ಎಂದು ಹೇಳಿದರಲ್ಲದೆ, ಇಲ್ಲದಿದ್ದರೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಮತ್ತು ರೈಲು ಬಾರದಿದ್ದರೆ ಮುಂದಿನ ಚುನಾವಣೆಗೂ ಸ್ಪರ್ದಿಸುವುದಿಲ್ಲ ಎಂದು ಘೋಷಿಸಿದರು.
ಇದಾಗಿ ವರ್ಷಗಳೇ ಉರುಳಿವೆ. ಮುಂದಿನ ಜುಲೈ 5 ರಂದು ಕೇಂದ್ರ ಸರ್ಕಾರ ರೈಲ್ವೇ ಬಜೆಟ್ ಮಂಡಿಸಲಿದೆ. ಸಂಸದ ಪ್ರತಾಪ್ ಸಿಂಹ ಅವರು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ರೂ. 1842 ಕೋಟಿ ರೂಪಾಯಿ ಯೋಜನೆಯ ನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ್ದಾರೆ. ಜನತೆ ಕೂಡ ಕಾತರದಿಂದ ಕಾಯುತ್ತಿದ್ದಾರೆ.
ಈ ಮಧ್ಯೆ ಮೈಸೂರಿನಿಂದ ಕೇರಳದ ತಲಚೇರಿಗೆ ರೈಲ್ವೇ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲು ಪುನಃ ಕೇರಳ ಸರ್ಕಾರ ಮುಂದಾಗಿದೆ. ಈ ಹಿಂದೆ ಸುಮಾರು ರೂ. 3778 ಕೋಟಿ ರೂಪಾಯಿಗಳ ಈ ಯೋಜನೆಗೆ ಕೇರಳ ಸರ್ಕಾರ ಮುಂದಾಗಿದ್ದು ಕೊಡಗಿನಲ್ಲಿ ಈ ಅರಣ್ಯ ನಾಶದ ಯೋಜನೆಗೆ ಪುನಃ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವರ್ಷ ಕೊಂಕಣ್ ರೈಲ್ವೇ ಕಾರ್ಪೊರೇಷನ್ ಅಧಿಕಾರಿಗಳು ಕೊಡಗಿನ ಗಡಿ ಭಾಗವಾದ ವೀರಾಜಪೇಟೆ ತಾಲ್ಲೂಕಿನ ಕುಟ್ಟ ಮತ್ತು ಬಾಡಗ ಗ್ರಾಮದಲ್ಲಿ ಉದ್ದೇಶಿತ ರೈಲ್ವೇ ಯೋಜನೆ ಸಂಬಂಧ ಗೂಗಲ್ ಮೂಲಕ ಜಿಪಿಎಸ್ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ವಿಷಯ ತಿಳಿದ ಬೆನ್ನಲ್ಲೇ ನೂರಾರು ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ತಡೆ ಒಡ್ಡಿದರು. ಅಷ್ಟೇ ಅಲ್ಲ ಸುಮಾರು 10 ರಿಂದ 15 ರಷ್ಟಿದ್ದ ಅಧಿಕಾರಿಗಳ ಮೇಲೆ ಹಲ್ಲೆಗೂ ಮುಂದಾಗಿದ್ದು ಅವರ ವಾಹನಗಳನ್ನೂ, ಗುರುತು ಪತ್ರಗಳನ್ನೂ ಕಸಿದುಕೊಂಡಿದ್ದರು. ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ ಎದುರಿಸಲಾಗದೇ ಆಗ ಹಿಂತಿರುಗಿದ್ದರು.

ರೈಲ್ವೇ ಯೋಜನೆ ಕುರಿತು ಸಂಸದ ಪ್ರತಾಪ್ ಸಿಂಹ ಅವರನ್ನು ಮಾತಾಡಿಸಿದಾಗ, ಮೈಸೂರು-ಕುಶಾಲನಗರ ರೈಲು ಯೋಜನೆಯ ಒಟ್ಟು ಉದ್ದ 88.5 ಕಿಲೋಮೀಟರ್ ಆಗಿದ್ದು ಯೋಜನೆಯ ವೆಚ್ಚ ರೂ. 650 ಕೋಟಿ ರೂಪಾಯಿಗಳಿಂದ ರೂ. 1854 ಕೋಟಿ ರೂಪಾಯಿಗಳಿಗೂ ಮತ್ತು ಉದ್ದವೂ ಕೂಡ 119 ಕಿಲೋಮೀಟರ್ ಗಳಿಗೆ ಏರಿಕೆಯಾಗಿದೆ ಎಂದರಲ್ಲದೆ, ಏನೇ ಆದರೂ ಮೊದಲ ಹಂತದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿಯೇ ಸಿದ್ದ ಎಂದು ಹೇಳಿದರು.
ವಿಸ್ತರಣೆಗೆ ವಿರೋಧವಿದೆ:
ಮೊದಲು ಕುಶಾಲನಗರದವರೆಗೆ ಇದ್ದ ಯೋಜನೆಯನ್ನು ನಂತರ ಮಡಿಕೇರಿಯವರೆಗೆ ವಿಸ್ತರಿಸಲಾಗಿದೆ. ಇದಕ್ಕೆ ಜಿಲ್ಲೆಯ ಪರಿಸರವಾದಿಗಳಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ. ಕುಶಾಲನಗರದಿಂದ ಮಡಿಕೇರಿ ವರೆಗೆ ದಟ್ಟ ಅರಣ್ಯ ಇದ್ದು ಇಲ್ಲಿಗೆ ಸಂಪರ್ಕ ಕಲ್ಪಿಸಹೊರಟರೆ ಸಾವಿರಾರು ಮರಗಳಿಗೆ ಕೊಡಲಿ ಹಾಕಬೇಕಾಗುತ್ತದೆ. ಹಾಗಾಗಿ ಜಿಲ್ಲೆಯ ಪರಿಸರವಾದಿಗಳು ಇದನ್ನು ಶತಾಯಗತಾಯ ವಿರೋಧಿಸುತಿದ್ದಾರೆ.
ಕನಿಷ್ಟ ಕುಶಾಲನಗರದವರೆಗಾದರೂ ಈ ಯೋಜನೆ ಜಾರಿಯಾದರೆ ಕೊಡಗಿಗೆ ದೇಶಾದ್ಯಂತ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಬೆಂಗಳೂರು -ಕುಶಾಲನಗರದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ ಈಗ 250 ಕ್ಕೂ ಅಧಿಕ ಸಾರಿಗೆ ಬಸ್ ಗಳು ಸಂಚರಿಸುತ್ತಿದ್ದು ಆರಾಮದಾಯಕ ಮತ್ತು ಮಿತವ್ಯಯದ ಪ್ರಯಾಣಕ್ಕಾಗಿ ಜನರು ರೈಲ್ವೇ ಕಡೆ ಮುಖ ಮಾಡಲಿದ್ದಾರೆ. ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಕುಶಾಲನಗರದಿಂದಲೇ ರೈಲು ಬುಕ್ ಮಾಡಬಹುದಾಗಿದೆ. ಕೊಡಗಿನಲ್ಲಿ ಬೆಳೆಯುವ ಕಾಫಿಯನ್ನು ಬಂದರಿಗೆ ಸಾಗಿಸಲೂ ಇದು ಬಹು ಉಪಯುಕ್ತವಾಗಿದೆ. ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರಲು ರಾಜಕಾರಣಿಗಳ ಇಚ್ಚಾಶಕ್ತಿ ಬಹು ಮುಖ್ಯವಾಗಿದೆ.
ಕಳೆದ ವರ್ಷದ ಭೀಕರ ಭೂ ಕುಸಿತ ಮತ್ತು ಮಳೆಯಿಂದಾಗಿ ಕೊಡಗಿನಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದ್ದು ರೈಲ್ವೇ ಯೋಜನೆ ಬಂದರೆ ಕ್ಷಿಪ್ರವಾಗಿ ಚೇತರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.