ಎರಡು ದಶಕಗಳ ಹಿಂದಿನವರೆಗೂ ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿದ್ದ ಮುಂಬಯಿ ಕರ್ನಾಟಕ (ಬೆಳಗಾವಿ,
ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು) ಕ್ರಮೇಣ ಬಿಜೆಪಿಯ ಮಡಿಲಿಗೆ ವಾಲುತ್ತಿದೆ. ಈ ನಾಲ್ಕು ಜಿಲ್ಲೆಗಳ ಪೈಕಿ ಧಾರವಾಡವನ್ನು ವಿಭಜಿಸಿ ಗದಗ ಮತ್ತು ಹಾವೇರಿ ಹಾಗೂ ವಿಜಯಪುರವನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಗಳನ್ನು ರಚಿಸಲಾಗಿದೆ. ಇದರಿಂದಾಗಿ ಸದ್ಯ ಏಳು ಜಿಲ್ಲೆಗಳಾಗಿವೆ.
ಕಾಂಗ್ರೆಸ್ಸಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಜನತಾ ಪಕ್ಷ, ಜನತಾ ದಳ ಅಸ್ತಿತ್ವಕ್ಕೆ ಬಂದವಾದರೂ ಆಂತರಿಕ ಕಲಹಗಳ ಪರಿಣಾಮವಾಗಿ ಆ ಪಕ್ಷಗಳ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಂಚಿಹೋದದ್ದು ಈಗ ಇತಿಹಾಸ.
2004ರ ವಿಧಾನಸಭೆ ಚುನಾವಣೆಯ ಕಾಲಕ್ಕೆ ಜನತಾದಳದ ಅನೇಕ ನಾಯಕರು ಕಾಂಗ್ರೆಸ್ ಮುಖ್ಯಮಂತ್ರಿ ಎಸ್. ಎಮ್. ಕೃಷ್ಣರ ಸೆಳೆತಕ್ಕೆ ಒಳಗಾದರೆ, ನಂತರ 2008ರ ಹೊತ್ತಿಗೆ ಇನ್ನು ಕೆಲವರು ಬಿಜೆಪಿಯತ್ತ ವಲಸೆ ಹೋದರು. ರಾಮಕೃಷ್ಣ ಹೆಗಡೆಯವರು ಇನ್ನೂ ಜೀವಂತವಾಗಿದ್ದಾಗಲೇ ಜನತಾದಳವು ಅವಸಾನಗೊಂಡಿತು. ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡರು ಜನತಾದಳ (ಜಾತ್ಯಾತೀತ) ಉಳಿಸಿಕೊಂಡು ಕುಟುಂಬ ರಾಜಕಾರಣವನ್ನು ಮುಂದುವರಿಸಿದ್ದು ಕಟು ವಾಸ್ತವ.
ಉತ್ತರ ಕರ್ನಾಟಕದ ಪ್ರಭಾವಿ ಸಮಾಜವಾದ ಲಿಂಗಾಯತರು ಜನತಾದಳದ ಮತಬ್ಯಾಂಕ್ ಆಗಿದ್ದು ಸುಳ್ಳೇನಲ್ಲ. ಕಾಂಗ್ರೆಸ್ ವಿರುದ್ಧವೇ ರಾಜಕೀಯ ಮಾಡುತ್ತ ಬಂದಿದ್ದ ಜನತಾದಳದ ನಾಯಕರು ಬಿಜೆಪಿ ಆಶ್ರಯ ಪಡೆದಾಗ, ಸಹಜವಾಗಿ ಲಿಂಗಾಯತರು ಬಿಜೆಪಿಯ ಮತಬ್ಯಾಂಕ್ ಆಗಿ ಪರಿವರ್ತನೆಯಾದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತುಸು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಸಮೀಪಕ್ಕೆ ಬಂದೂ ಅಧಿಕಾರದಿಂದ ವಂಚಿತರಾದ ಲಿಂಗಾಯತ ಸಮಾಜದ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿಯೇ ಗಟ್ಟಿಯಾಗಿಯೇ ನಿಲ್ಲುವ ಸೂಚನೆಗಳಿವೆ. ಮೈತ್ರಿ ಸರಕಾರದ ಹತ್ತು ತಿಂಗಳ ಆಡಳಿತ ಮತ್ತು ಮೈತ್ರಿ ಪಕ್ಷಗಳ ಕಚ್ಚಾಟದ ದುಷ್ಪರಿಣಾಮ ಪ್ರಸಕ್ತ ಚುನಾವಣೆಯ ಮೇಲೆ ಬೀರುವ ಎಲ್ಲ ಸಾಧ್ಯತೆಗಳೂ ಇವೆ.
ಮುಂಬಯಿ ಕರ್ನಾಟಕದಲ್ಲಿ ಜೆಡಿಎಸ್ ಅಸ್ತಿತ್ವ ಬಹುತೇಕ ಕಡೆ ಇಲ್ಲ. ಆದರೂ ವಿಜಯಪುರ ಮತ್ತು ಉತ್ತರ ಕನ್ನಡ ಮತಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಉಳಿದ ಕಡೆಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಅವಶ್ಯಕತೆಯೇ ಇಲ್ಲ. ಜೆಡಿಎಸ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಈ ಲೋಕಸಭೆ ಚುನಾವಣೆಯಲ್ಲಿ ಯಾವ ಪ್ರಮುಖ ಸಮಸ್ಯೆಗಳೂ ಚುನಾವಣಾ ವಿಷಯಗಳಾಗಿಲ್ಲ. ರಾಷ್ಟ್ರ ಮಟ್ಟದ ಭಾವನಾತ್ಮಕ ವಿಷಯಗಳನ್ನು ಮಾತ್ರ ಮತದಾರರು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆಯೇ ಹೊರತು ಮಹಾದಾಯಿ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ನನೆಗುದಿಗೆ ಬಿದ್ದ ರೈಲು ಯೋಜನೆಗಳ ಬಗ್ಗೆ ಮತದಾರರು ತಲೆಕೆಡಿಸಿಕೊಂಡಿಲ್ಲ. ಮತದಾರರು ಮತ್ತು ಹೋರಾಟಗಾರರಿಗೆ ಈ ಬಗ್ಗೆ ಅನಾಸಕ್ತಿ ಇರುವುದು ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ.
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಕಳೆದ ವರ್ಷ ಉಂಟಾದ ರಾಜಕೀಯ ತಿಕ್ಕಾಟ, ಬಂಡಾಯ ಇನ್ನೂ ಶಮನವಾಗದಿರುವುದು ಪಕ್ಷದ ರಾಜ್ಯ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಪ್ರದರ್ಶನ ಮಾಡುವುದು ಸಹ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ.
ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರ ಕೈ ಮೀರಿದ ಬೆಳವಣಿಗೆಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು ಸ್ಪಷ್ಟವಾಗತೊಡಗಿದೆ. ಜಿಲ್ಲೆಯ ನಾಯಕರ ಒಣಪ್ರತಿಷ್ಠೆ ಮತ್ತು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಗೆ ಕಾರಣವಾದರೂ ಅಚ್ಚರಿಯೇನಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು