ಕೃಷ್ಣಾ ನದಿ ತೀರದ ಜನತೆಯ ದಾಹ ನೀಗಿಸಲು ಕೊಯ್ನಾ ನೀರು ಬಿಡುಗಡೆಗಾಗಿ ‘ನೀರು ವಿನಿಮಯ ಒಪ್ಪಂದ’ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿ ಕರ್ನಾಟಕ ಸರಕಾರ ಸೋಮವಾರ ಸಂಜೆ ಮಹಾರಾಷ್ಟ್ರಕ್ಕೆ ಪತ್ರ ಬರೆದಿದೆ. ರಾಜ್ಯ ನೀರಾವರಿ ಇಲಾಖೆಯಿಂದ ಈ ಪತ್ರ ಹೋಗಿದ್ದು, ಮಹಾರಾಷ್ಟ್ರ ಯಾವ ರೀತಿಯಿಂದ ಪ್ರತಿಕ್ರಿಯಿಸುವುದೆಂಬುದು ಇನ್ನೂ ಗೊತ್ತಾಗಿಲ್ಲ. ಮಹಾರಾಷ್ಟ್ರದ ಕೊಯ್ನಾ ಜಲಾಶಯ, ಸಾಂಗ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಇಂದಿನವರೆಗೂ ಅಲ್ಲಿಯ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ.
ಈ ಮಧ್ಯೆ, ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಹಾಸರಾವ ಪಾಟೀಲ ಅವರು ಸ್ವತಃ ರಾಜಾಪುರ ಬ್ಯಾರೇಜಿಗೆ ಹೋಗಿ, ಗೇಟ್ ತೆರೆದು, 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆಗೊಳಿಸಿದ್ದು ಕೃಷ್ಣಾ ತೀರದ ಎರಡೂ ಬದಿಗಿರುವ ಕನ್ನಡ ಮತ್ತು ಮರಾಠಿ ಗ್ರಾಮಗಳ ಜನರಿಗೆ ಸಂತಸ ತಂದಿದೆ.
ಮಹಾರಾಷ್ಟ್ರದ ಟಾಕಳೆ ಮತ್ತು ಕರ್ನಾಟಕದ ಚಂದೂರಟೇಕ್ ಗ್ರಾಮಗಳ ಜನರು ತಮ್ಮಲ್ಲಿಗೆ ತಲುಪಿದ ರಾಜಾಪುರ ಬ್ಯಾರೇಜ್ ನೀರು ಮುಂದೆ ಹೋಗದಂತೆ ತಡೆಯಲು ಮಣ್ಣಿನ ಒಡ್ಡು ಹಾಕಿದ್ದಾರೆಂದು ಕೆಳಗಿನ ಭಾಗದ ಗ್ರಾಮಸ್ಥರು ಮಂಗಳವಾರ ಚಿಕ್ಕೋಡಿ ತಹಸಿಲ್ದಾರರಿಗೆ ತಕರಾರು ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜಂಟಿ ಯೋಜನೆಯಾದ ದೂಧಗಂಗಾ ಯೋಜನೆಯ ಕಾಳಮ್ಮವಾಡಿ ಜಲಾಶಯದಿಂದ ಕಳೆದ ವಾರ ಬಿಟ್ಟ ನೀರು ಕಾರದಗಾ, ಸದಲಗಾ, ಬೋರಗಾಂವ, ಗೋಸರವಾಡಾ, ಮಲ್ಲಿಕವಾಡಾ ಬ್ಯಾರೇಜಗಳನ್ನು ಸೋಮವಾರವೇ ದಾಟಿದೆ. ಬರುವ ಗುರುವಾರದವರೆಗೆ ಈ ನೀರು ಕಲ್ಲೋಳ ಬಳಿ ಕೃಷ್ಣೆಗೆ ಸೇರಲಿದೆ.
ಎಪ್ಪತ್ತರ ದಶಕದಲ್ಲಿ ಅಸ್ತಿತ್ವಕ್ಕೆ ಬಂದ ದೂಧಗಂಗಾ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕವು ತನ್ನ ಪಾಲಿನ 390 ಕೋಟಿ ರೂ.ಗಳನ್ನು ತೊಡಗಿಸಿದೆ. ಡಿಸೆಂಬರ್‌ನಿಂದ ಜೂನ್‌ವರೆಗೆ ಈ ಯೋಜನೆಯಿಂದ ಕರ್ನಾಟಕಕ್ಕೆಸುಮಾರು 5 ಟಿಎಂಸಿ ನೀರು ಸಿಗುತ್ತಿದೆ. ಈ ಪಾಲಿನ ಪೈಕಿ ಇನ್ನೂ 0.55 ಟಿಎಂಸಿ ನೀರು ನಮಗೆ ಬರಬೇಕಾಗಿದೆ.
ರಾಯಬಾಗ ,ಅಥಣಿ ತಾಲೂಕಿನ ಗ್ರಾಮಗಳಲ್ಲಿಯ ಕೊಳವೆಬಾವಿಗಳಲ್ಲೂ ನೀರು ಬರುತ್ತಿಲ್ಲ. ಉಗಾರದ ಬ್ಯಾರೇಜ್ ಬಿಕೊ ಎನ್ನುತ್ತಿದ್ದು, ಜಾನವಾರುಗಳಂತೂ ನೀರಿಲ್ಲದೆ ಒದ್ದಾಡುತ್ತಿವೆ. ರಾಯಬಾಗದ ಬಳಿ ಒಣಗಿದ ನದಿಯ ಒಡಲಲ್ಲೇ ಬಾವಿ ತೆಗೆದು ನೀರು ಸೇದಲು ಜನರು ಯತ್ನಿಸುತ್ತಿದ್ದಾರೆ.
ಮೈತ್ರಿ ಸರಕಾರದ ಅಂಗಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಪ್ರತಿಪಕ್ಷವಾದ ಬಿಜೆಪಿ ನಾಯಕರು ಕುಂದಗೋಳ, ಚಿಂಚೋಳಿ ಉಪಚುನಾವಣೆಗಳಲ್ಲಿ ಮುಳುಗಿಹೋಗಿದ್ದು, ಬರಗಾಲ, ನೀರಿನ ತೀವ್ರ ಅಭಾವದತ್ತ ಗಮನಹರಿಸಲೂ ಅವರಿಗೆ ಸಮಯವಿಲ್ಲದಂತಾಗಿದೆ. ಕೊಯ್ನಾ ನೀರಿನ ಬಿಡುಗಡೆ ಸಂಬಂಧ ಸಂಪೂರ್ಣ ಹೊಣೆಯನ್ನು ಹಿರಿಯ ಅಧಿಕಾರಿಗಳ ಮೇಲೆಯೇ ಹೊರಿಸಲಾಗಿದೆ. ತಮಗೂ ಒಂದು ಮಿತಿಯಿದ್ದು, ಮಹಾರಾಷ್ಟ್ರಸರಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಸಚಿವರು, ಶಾಸಕರು ಮಾತ್ರ ಮಾಡಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮುಂಗಾರು ಮಳೆ ವಿಳಂಬವಾದಲ್ಲಿ ಕೃಷ್ಣಾ ತೀರದ ಅನೇಕ ಗ್ರಾಮಗಳ ಜನರು ಗುಳೆ ಹೋಗುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ.