2019ರ ಆಗಸ್ಟ್ ಬಂದರೆ, ಬಹುನಿರೀಕ್ಷಿತ ಭೂಕಬಳಿಕೆ ನಿಷೇಧ ನ್ಯಾಯಾಲಯ ಸ್ಥಾಪನೆಯಾಗಿ ಮೂರು ವರ್ಷ ತುಂಬುತ್ತದೆ. ಆದರೆ, ಸುಮಾರು 100 ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇವುಗಳ ವಿಚಾರಣೆ ಹೈಕೋರ್ಟ್‌ನಲ್ಲಿ ಇನ್ನೂ ನಡೆಯಬೇಕಿದೆ.
ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2016ರಲ್ಲಿ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪಿಸಿತ್ತು. ನ್ಯಾಯಾಲಯ ಸ್ಥಾಪನೆಗೂ ಮುಂಚೆ ರಾಜ್ಯ ಸರ್ಕಾರ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ (Karnataka Land Grabbing Prohibition Act 2011) ಜಾರಿಗೊಳಿಸಿತ್ತು. ಕಾಯ್ದೆ 2011ರಷ್ಟು ಹಳೆಯದಾದರೂ, ರಾಷ್ಟ್ರಪತಿಗಳ ಅಂಕಿತ ದೊರೆತು ಅನುಷ್ಠಾನಕ್ಕೆ ಬಂದದ್ದು 2016ರಲ್ಲಿ.
ಮಾಹಿತಿ ಹಕ್ಕಿನಡಿಯಲ್ಲಿ ಪ್ರತಿಧ್ವನಿ ಪಡೆದ ಮಾಹಿತಿ ಪ್ರಕಾರ ಇದುವರೆಗೂ (ಫೆಬ್ರವರಿ 2019) ಭೂ ಕಬಳಿಕೆ ನ್ಯಾಯಾಲಯದಲ್ಲಿ 5380 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 2015 ಪ್ರಕರಣಗಳು ಇತ್ಯರ್ಥಗೊಂಡಿವೆ ಹಾಗೂ 3365 ಪ್ರಕರಣಗಳು ಬಾಕಿ ಇವೆ. ಇದುವರೆಗೂ ಈ ವಿಶೇಷ ನ್ಯಾಯಾಲಯ 25 ಪ್ರಕರಣಗಳಲ್ಲಿ ಆದೇಶ ಹೊರಡಿಸಿ ಭೂಕಬಳಿಕೆ ಮಾಡಿದವರಿಗೆ ಶಿಕ್ಷೆ ವಿಧಿಸಿದೆ.
ಈ ಮೂರು ವರ್ಷಗಳಲ್ಲಿ ವಿಶೇಷ ನ್ಯಾಯಾಲಯ ಹಲವಾರು ಸ್ವಪ್ರೇರಿತ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಇದೀಗ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿಶೇಷ ಕಾಯ್ದೆ ಹಾಗೂ ವಿಶೇಷ ನ್ಯಾಯಾಲಯದ ಚಟುವಟಿಕೆಗಳು ಹಲವಾರು ತಾಂತ್ರಿಕ ದೋಷಗಳಿಂದಾಗಿ ಹಿನ್ನಡೆ ಕಂಡಿದೆ. ಮಾಹಿತಿ ಹಕ್ಕಿನಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ ವಿಶೇಷ ನ್ಯಾಯಾಲಯದ ಸರಿ ಸುಮಾರು 100 ಪ್ರಕರಣಗಳ ವಿಚಾರಣೆಗೆ ಹೈ ಕೋರ್ಟ್ ತಡೆ ನೀಡಿದೆ. ಹೈ ಕೋರ್ಟ್ ನ ಈ ತಡೆಯಾಜ್ಞೆ2017 ರಿಂದ ಆರಂಭಗೊಂಡು, ಈ ವರ್ಷದ ಮಾರ್ಚ್ ವರೆಗೂ ಮುಂದುವರಿದಿದೆ. ತಡೆಯಾಜ್ಞೆ ನೀಡಲಾಗಿರುವ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿಕೊಂಡಿರುವ 37 ಪ್ರಕರಣಗಳೂ ಸೇರಿವೆ.
ಏಕೆ ತಡೆಯಾಜ್ಞೆ?
ತಡೆಯಾಜ್ಞೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಮೂಲಭೂತವಾಗಿ ಕಾಯ್ದೆಯನ್ನೇ ಪ್ರಶ್ನಿಸಿವೆ. ಅರ್ಜಿಗಳ ಪ್ರಕಾರ, ಭೂಕಬಳಿಕೆ ನಿಷೇಧ ಕಾಯ್ದೆ ಗೊಂದಲಕರ, ಕ್ಲಿಷ್ಟವಾಗಿರುವುದಲ್ಲದೆ, ಸಂವಿಧಾನದ ಕಲಂ 14, 20 ಮತ್ತು 21ನ್ನು ಉಲ್ಲಂಘಿಸಿವೆ. ಕಾಯ್ದೆಯಲ್ಲಿ ಯಾವುದೇ ಮನವಿ ಸಲ್ಲಿಸುವ ಅವಕಾಶ ನೀಡಲಾಗಿಲ್ಲ ಹಾಗೂ ಸ್ವಪ್ರೇರಣೆ ಪ್ರಕರಣಗಳ ಬಗ್ಗೆ ಯಾವುದೇ ವಿಧಾನಗಳನ್ನು ವಿವರಿಸಲಾಗಿಲ್ಲ. “ಉದಾಹರಣೆಗೆ, ಭೂಮಿಯ ಹಕ್ಕು ಈಗಾಗಲೇ ಕರ್ನಾಟಕ ಭೂಸುಧಾರಣಾ ಅಧಿನಿಯಮ (Karnataka Land Revenue Act) ಅಡಿಯಲ್ಲಿ ವಿಚಾರಣೆ ನಡೆದು ಪ್ರಕರಣ ಮುಕ್ತಾಯಗೊಂಡಿದೆ. ಅಂತಹ ಪ್ರಕರಣದಲ್ಲಿ ಮತ್ತೆ ಭೂಕಬಳಿಕೆ ನಿಷೇಧ ನ್ಯಾಯಾಯದಲ್ಲಿ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಇದಲ್ಲದೆ, ಈ ಕಾಯ್ದೆಯ ಸೆಕ್ಷನ್ 4, 5 ಮತ್ತು 9 (5) (ಬಿ) ಅಪರಾಧ ದಂಡಸಂಹಿತೆಗೆ (Criminal Code of Conduct – CrPC) ವಿರುದ್ಧವಾಗಿದೆ. ಇದೇ ರೀತಿಯ ಕಾರಣಗಳನ್ನು ಮುಂದಿರಿಸಿ, ಹಲವಾರು ಪ್ರಕರಣಗಳಲ್ಲಿನ ಆರೋಪಿಗಳು ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದಾರೆ,’’ ಎನ್ನುತ್ತಾರೆ ಹಿರಿಯ ವಕೀಲರೊಬ್ಬರು.
ವಿಶೇಷ ನ್ಯಾಯಾಲಯದ ನಿಲುವೇನು?
ಸ್ವಪ್ರೇರಿತ ಪ್ರಕರಣ ಸೇರಿದಂತೆ ಇಷ್ಟೊಂದು ಪ್ರಕರಣಗಳನ್ನು ಹೈಕೋರ್ಟ್‌ನಲ್ಲಿ ತಡೆಹಿಡಿಯಲಾಗಿರುವುದರಿಂದ ಮುಂದೇನು ಎಂದು ಯೋಚಿಸಲಾಗಿದೆಯೇ? ವಿಶೇಷ ನ್ಯಾಯಾಲಯದ ಅಧಿಕಾರಿಗಳ ಪ್ರಕಾರ, ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದರೂ ಭೂಕಬಳಿಕೆ ನಿಷೇಧ ನ್ಯಾಯಾಲಯ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ವಿಚಿತ್ರವೆಂದರೆ, ಸ್ವಪ್ರೇರಿತ ಪ್ರಕರಣಗಳಲ್ಲಿ ಭೂಕಬಳಿಕೆ ನಿಷೇಧ ನ್ಯಾಯಾಲಯವನ್ನು ಪ್ರತಿನಿಧಿಸುವುದು ಕಂದಾಯ ಇಲಾಖೆಯ ಅಧಿಕಾರಿಗಳು. ಇಂತಹ ಪ್ರಕರಣಗಳು ಹೆಚ್ಚಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಭೂಕಬಳಿಕೆಯ ಬಗೆಗಿನ ವರದಿಯನ್ನಾಧರಿಸಿ ದಾಖಲಾಗುತ್ತವೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಈ ಪ್ರಕರಣಗಳಲ್ಲಿ ಆರೋಪಿಗಳಾಗಿರುತ್ತಾರೆ. “ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣಗಳಲ್ಲೂ ಕಂದಾಯ ಅಧಿಕಾರಗಳು ಅರ್ಜಿಯಲ್ಲಿ ಪ್ರತಿವಾದಿಗಳಾಗಿರುತ್ತಾರೆಯೇ ಹೊರತು ಭೂಕಬಳಿಕೆ ನಿಷೇಧ ನ್ಯಾಯಾಲಯವಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ತಡೆಯಾಜ್ಞೆಗಳ ಸಂಬಂಧ ವಿಚಾರಣೆ ಮುಕ್ತಾಯ ಆಗುವವರೆಗೂ ಕಾಯಬೇಕು,’’ ಎನ್ನುತ್ತಾರೆ ಭೂಕಬಳಿಕೆ ನ್ಯಾಯಾಲಯದ ಹಿರಿಯ ಅಧಿಕಾರಿಯೊಬ್ಬರು.
ನಿವೃತ್ತ ಐಎಎಸ್ ಅಧಿಕಾರಿ ವಿ ಬಾಲಸುಬ್ರಮಣ್ಯನ್ ನೇತೃತ್ವದ ಕಾರ್ಯಪಡೆ ರಾಜ್ಯದಲ್ಲಿ 12 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿತ್ತು. ಇದಲ್ಲದೆ, ಎ ಟಿ ರಾಮಸ್ವಾಮಿ ವರದಿ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ 34,000 ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಈ ಎರಡು ವರದಿಗಳ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಡ ಹೆಚ್ಚಿತ್ತು.
ವಿ ಬಾಲಸುಬ್ರಮಣ್ಯನ್ ಅವರ ಪ್ರಕಾರ, ಈ ಕಾಯ್ದೆಯನ್ನು ಕೆಲವು ನೆರೆಯ ರಾಜ್ಯಗಳಲ್ಲಿರುವ ಕಾಯ್ದೆಯನ್ನು ಅನುಸರಿಸಿ ರಚಿಸಲಾಗಿದೆ. “ಆಂಧ್ರಪ್ರದೇಶದಲ್ಲಿ ಇಂತಹುದೇ ಕಾಯ್ದೆ 1982ರಲ್ಲೇ ಜಾರಿಗೆ ಬಂದಿತ್ತು. ನಮ್ಮ ತಂಡ ಸರ್ಕಾರದ ಮನವಿ ಮೇರೆಗೆ ಆ ಕಾಯ್ದೆ ಸೇರಿದಂತೆ ಇತರ ಕಾಯ್ದೆಗಳನ್ನು ಅಭ್ಯಸಿಸಿ ಈ ಕಾಯ್ದೆ ರೂಪಿಸಿತ್ತು. ಮನವಿ ಸಲ್ಲಿಸುವ ಅವಕಾಶ ಇಲ್ಲದಿರುವುದು ಕಣ್ತಪ್ಪಿನಿಂದ ಆಗಿರುವ ದೋಷವಲ್ಲ. ಭೂಕಬಳಿಕೆಯಂತಹ ಗಂಭೀರ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ ರಚಿಸುವಾಗ ಇಷ್ಟೂ ಅಧಿಕಾರ ಕೊಡದಿದ್ದಲ್ಲಿ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳವರೆಗೆ ಪ್ರಕರಣ ಬೆಳೆದು ಸರ್ಕಾರಿ ಭೂಮಿ ವಶಪಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಷ್ಟೊಂದು ಪ್ರಕರಣಗಳು ಹೈಕೋರ್ಟ್‌ನಲ್ಲಿ ತಡೆಯಾಗಿದ್ದಲ್ಲಿ, ಅಡ್ವೊಕೇಟ್ ಜನರಲ್ ಅವರೇ ಖುದ್ದು ಈ ಬಗ್ಗೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಬೇಕು,’’ ಎನ್ನುತ್ತಾರೆ ವಿ ಬಾಲಸುಬ್ರಮಣ್ಯನ್.
ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಅವರು ಹೈಕೋರ್ಟ್ ಮುಖ್ಯ ನಾಯಮೂರ್ತಿ ಆಗಿದ್ದಾಗ ಮೊತ್ತಮೊದಲ ತಡೆಯಾಜ್ಞೆ ಆದೇಶ ಹೊರಡಿಸಲಾಗಿತ್ತು. ಅವರ ನಂತರ ನ್ಯಾ.ದಿನೇಶ್ ಮಹೇಶ್ವರಿ, ನ್ಯಾ.ಎಲ್ ನಾರಾಯಣ ಸ್ವಾಮಿ ಅವರು (ಹಂಗಾಮಿ) ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಕಳೆದ ವಾರ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ವಕೀಲರೊಬ್ಬರ ಪ್ರಕಾರ, ಈ ಪ್ರಕರಣಗಳು ವಿಭಾಗೀಯ ಪೀಠದ ವ್ಯಾಪ್ತಿಗೆ ಬರುವುದರಿಂದ ಒಂದೋ ಮುಖ್ಯ ನಾಯಮೂರ್ತಿಗಳೇ ಈ ಪ್ರಕರಣಗಳ ವಿಚಾರಣೆ ನಡೆಸಬೇಕು ಅಥವಾ ನಂತರದ ವಿಭಾಗೀಯ ಪೀಠಕ್ಕೆ ವರ್ಗಾಯಿಸಬೇಕು.