`ಪರಿಸರ ಎಂದರೆ ಮರ, ಮರ ಎಂದರೆ ಪರಿಸರ’. ಕ್ಲೈಮೇಟ್ ಚೇಂಜ್ ನಿಂದ ನದಿಯ ಸಂರಕ್ಷಣೆಯವರೆಗೂ ಮರ ನೆಡುವುದೊಂದೇ ರಾಮಬಾಣ ಎಂದು ತಪ್ಪು ತಿಳಿದು ಹಾದಿ ತಪ್ಪುತ್ತಿದ್ದೇವೆ. ಇಶಾ ಫೌಂಡೇಶನ್ ನ ಜಗ್ಗಿ ವಾಸುದೇವ ನೇತೃತ್ವದಲ್ಲಿ `ಕಾವೇರಿ ಕೂಗು’ (ರಾಲಿ ಫಾರ್ ರಿವರ್ಸ್ ) ಎಂಬ ಅಭಿಯಾನ ಒಳ್ಳೆಯ ಉದ್ದೇಶ ಹೊಂದಿದ್ದರೂ ವೈಜ್ಞಾನಿಕವಾಗಿ ಇದೊಂದು ಅಪೂರ್ಣ ಕಾರ್ಯಕ್ರಮ. `ಕಾವೇರಿ ಕೂಗು’ ಯೋಜನೆಯಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಸಸಿಗಳನ್ನು ನೆಡಲಾಗುವುದು.

ಆದರೆ, ಕೇವಲ ಮರ ನೆಡುವುದರಿಂದ, ಆಗುವ ಉಪಯೋಗಗಳಿಗಿಂತ ಅಪಾಯವೇ ಹೆಚ್ಚು. ಎಲ್ಲಾ ಕಡೆಯೂ ಮರ ನೆಡುವುದಕ್ಕೆ ಆಗುವುದಿಲ್ಲ, ಯಾಕೆಂದರೆ ಆಯಾ ಜಾಗದ ಪರಿಸರ ವ್ಯವಸ್ಥೆ ಬೇರೆ ಇರುತ್ತದೆ. ಉದಾಹರಣೆಗೆ, ಗ್ರಾಸ್ ಲ್ಯಾಂಡ್ ಮತ್ತು ಶ್ರಬ್ಸ್ (Grasslands and Shrubs) – ಈ ಎರಡು ಕಡೆ ಮರ ನೆಟ್ಟರೆ ಅದು ಇತರ ಜೀವಿಗಳಿಗೆ ತೊಂದರೆಯನ್ನೇ ಉಂಟು ಮಾಡುತ್ತದೆ. ಯಾವ ಸ್ಥಳದಲ್ಲಿ ಮರ ನೆಡಬೇಕೋ ಅಲ್ಲಿಯೇ ನೆಡಬೇಕು. ಅದೂ ಕೂಡ ಸೂಕ್ಷ್ಮವಾಗಿ ಆ ಜಾಗದ ವೈಶಿಷ್ಟ್ಯತೆಯನ್ನು ಸಂಪೂರ್ಣವಾಗಿ ಅರಿತು, ನಂತರವೇ ನೆಡಬೇಕು. ನದಿಯ ದಂಡೆಯಲ್ಲಿ ಮರ ನೆಟ್ಟರೆ ಅದು ನೀರಿನ ಇತರ ಜೀವಿಗಳಾದ ಮೊಸಳೆ ಹಾಗು ಇನ್ನಿತರ ಪ್ರಾಣಿಗಳಿಗೆ ತೊಂದರೆ ಉಂಟು ಮಾಡಬಹುದು. ನೀರಿನ ಪ್ರಾಣಿಗಳನ್ನು ಇನ್ನೂ ಯಾರು ಕೂಡ ಪೂರ್ಣವಾಗಿ ಸಂಶೋಧಿಸಿಲ್ಲ. ಈ ಬಗ್ಗೆ ನಮಗೆ ಇರುವ ಮಾಹಿತಿ ಬಹಳ ಕಡಿಮೆ.
ಇಶಾ ಫೌಂಡೇಶನ್ ಪ್ರಕಾರ ಮರ ನೆಟ್ಟರೆ ಅದು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತದೆ. ಮಣ್ಣಿನ ಸವಕಳಿ ಮಾತ್ರವಲ್ಲ. ಇನ್ನೂ ಅನೇಕ ಪರಿಸರ ಹಾನಿಯನ್ನು ಕೇವಲ ನೈಸರ್ಗಿಕವಾಗಿ ಬೆಳೆದಿರುವ ಕಾಡು ಮಾತ್ರ ಪೂರ್ಣ ಪ್ರಮಾಣದಲ್ಲಿ ತಡೆಯಬಹುದು. ಮಣ್ಣಿನ ಸವಕಳಿ ತಡೆ ಮರಗಳಿಂದ ಸಾಧ್ಯವಾದರೂ ಅದು ಎಷ್ಟರ ಮಟ್ಟಿಗೆ ಸಾಧ್ಯ ಅನ್ನುವುದು ಇನ್ನೂ ಗೊತ್ತಿಲ್ಲ, ಮತ್ತು ಕೇವಲ ಮರಗಳಿಂದ ಮಾತ್ರ ಇದು ಸಾಧ್ಯವೇ ಅನ್ನುವುದು ಗೊತ್ತಿಲ್ಲ. ಏಕೆಂದರೆ, ಕಾಡು ಬಹಳ ಸಂಕೀರ್ಣ ವಿಷಯ.

ಇನ್ನೊಂದು, ಇಶಾ ಫೌಂಡೇಶನ್ ಪ್ರಕಾರ ಮರ ನೆಡುವುದರಿಂದ ರೈತರಿಗೆ ನೆರವಾಗಲಿದೆ. ಆದರೆ, `ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಅಂತ ಕರ್ನಾಟಕ ಸರ್ಕಾರ 2011ರಲ್ಲಿ ಜಾರಿಗೆ ತಂದಿತ್ತು. ಕೃಷಿಕರೊಬ್ಬರು ತಮ್ಮ ಕೃಷಿ ಭೂಮಿಯಲ್ಲಿ ಅರಣ್ಯದಲ್ಲಿ ಬೆಳೆಯಬಹುದಾದ ಮರಗಳನ್ನು ಈ ಯೋಜನೆಯಡಿ ಬೆಳೆಸಬಹುದು ಮತ್ತು ಪ್ರೋತ್ಸಾಹ ಧನವೂ ಪಡೆಯಬಹುದು. ಇದಕ್ಕಾಗಿ 2011 ರಿಂದ ಕರ್ನಾಟಕ ಸರ್ಕಾರ ರೂ. 11 ಕೋಟಿ ಖರ್ಚು ಮಾಡಿದೆ. ಆದರೆ, ವಾಸ್ತವದಲ್ಲಿ ಈ ಯೋಜನೆಯಡಿ ಹೆಚ್ಚಿನ ರೈತರು ಬೆಳೆದಿರುವುದು ಅಕೇಶಿಯಾ ಮತ್ತು ಸಿಲ್ವರ್ ಓಕ್. ಈ ಎರಡೂ ಮರಗಳೂ ಕೇವಲ ಟಿಂಬರ್ ಲಾಭಕ್ಕಾಗಿ ನೆಟ್ಟವುಗಳೇ ಹೊರತು ಅರಣ್ಯ ಭೂಮಿ ಹೆಚ್ಚಿಸುವ ಉದ್ದೇಶದಿಂದಲ್ಲ. ಅರಣ್ಯ ಭೂಮಿ ಹೆಚ್ಚಿಸಲು ಈ ಯೋಜನೆಯ ಮರು ಪರಿಶೀಲನೆ ನಡೆಸುವುದು ಇಂದಿನ ಅಗತ್ಯವೇ ಹೊರತು, ನದಿ ಪಾತ್ರದಲ್ಲಿ ಮರ ನೆಡುವುದಲ್ಲ.
ಹಾಗಾದರೆ ನದಿಗಳನ್ನು ಉಳಿಸುವುದು ಹೇಗೆ? ಯಾವ ವಿಧಾನದಲ್ಲಿ ನದಿಗಳು ಉಳಿಯುತ್ತವೆ?
ಮರಳು ಮಾಫಿಯಾ, ಒಂದರ ಹಿಂದೆ ಒಂದು ಅಣೆಕಟ್ಟುಗಳ ನಿರ್ಮಾಣ, ಅರಣ್ಯ ನಾಶ, ನದಿಜೋಡಣೆ ಹಾಗು ಇನ್ನು ಇತರೆ ಸಮಾನ ರೂಪದ ಯೋಜನೆಗಳು ನದಿಯ ಮೂಲ ಸ್ವರೂಪ ಕೆಡಲು ಮುಖ್ಯ ಕಾರಣಗಳು.
ಕಾವೇರಿ ನದಿಯನ್ನು ನಾವು ಉಳಿಸಬೇಕಾದರೆ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆಯುತ್ತಿರುವ ಅತಿರೇಕದ ಮರಳು ಮಾಫಿಯಾವನ್ನು (ಕಾನೂನು ಬಾಹಿರ) ತಕ್ಷಣ ನಿಲ್ಲಿಸಬೇಕು. ಇದಕ್ಕೆ ಬೇಲಿ ಹಾಕಿದರೆ ನದಿಯು ಸ್ವಲ್ಪ ಮಟ್ಟಿಗೆ ತಾನೇ ಪುನಃ ಚೇತನಗೊಳ್ಳುತ್ತದೆ. ಇತ್ತೀಚಿಗೆ ಬಂದಿರುವ ಹಲವು ಪತ್ರಿಕಾ ವರದಿಗಳ ಪ್ರಕಾರ ತಮಿಳುನಾಡಿನಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವು ಬಾರಿ ಹೈ ಕೋರ್ಟ್ ನಿರ್ದೇಶನ ನೀಡಿದರೂ, ಅಕ್ರಮ ಮರಳು ಗಣಿಗಾರಿಕೆ ಕಾವೇರಿ ನದಿ ಪಾತ್ರದ ಸುತ್ತ ನಡೆಯುತ್ತಲೇ ಇದೆ. ಇನ್ನು ಈ ಅಕ್ರಮ ಮರಳುಗಾರಿಕೆ ಕರ್ನಾಟಕ ಭಾಗದ ಕಾವೇರಿ ನದಿ ಪಾತ್ರದಲ್ಲಿಯೂ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಯಾವುದೇ ಹೋರಾಟ ನಡೆಯುತ್ತಿಲ್ಲದಿರುವುದು ವಿಷಾದಕರ.

ಕೊಡಗಿನ ಭೂಕುಸಿತ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ ಆಗಬೇಕು. ಎರಡು ವರ್ಷಗಳಿಂದ ಸತತವಾಗಿ ಬಂದಿರುವ ಮಳೆಯಿಂದ ಕೊಡಗಿನಲ್ಲಿ ಭೂಕುಸಿತದಿಂದ ಆಗಿರುವ ಭಾರಿ ಹಾನಿಗೆ ಪ್ರಮುಖ ಕಾರಣ ಅರಣ್ಯ ನಾಶ. ಈ ಹಿಂದೆಯೂ ಇದಕ್ಕಿಂತ ಹೆಚ್ಚು ಮಳೆ ಬಂದಿದ್ದರೂ ಈ ರೀತಿ ಹಾನಿಯಾಗಿರಲಿಲ್ಲ. ಆದರೆ ಈಗ ಆಗಿರುವ ದುರಂತದಿಂದ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ. ಭಾರಿ ಮಳೆ ಬಂದರೂ ಅರಣ್ಯ ಪ್ರದೇಶ ಆರೋಗ್ಯವಾಗಿದ್ದರೆ ಏನು ತೊಂದರೆ ಆಗಲಾರದು. ಹಾಗಾಗಿ ಕಾವೇರಿಯ ಸಂಗ್ರಹಣಾ ಪ್ರದೇಶದಲ್ಲಿ (Catchment Area) ಆಗುತ್ತಿರುವ ಅರಣ್ಯ ನಾಶವನ್ನು ನಿಲ್ಲಿಸಬೇಕು.
ಮೇಕೆದಾಟು ಯೋಜನೆಗೆ ಭಾರಿ ಪ್ರಮಾಣದಲ್ಲಿ ಒತ್ತಡ ಹೇರಲಾಗುತ್ತಿದೆ. ಈ ಯೋಜನೆಯಿಂದ ಸರಿ ಸುಮಾರು 48 ಚದರ ಕಿ ಮೀ. ಅರಣ್ಯ ಪ್ರದೇಶ ಸಂಪೂರ್ಣವಾಗಿ ನಾಶವಾಗಲಿದೆ. ಇದರಿಂದ ಕಾವೇರಿ ಸಮುದ್ರಕ್ಕೆ ಹರಿಯುವ ಪ್ರಮಾಣ ಕಮ್ಮಿಯಾಗುತ್ತದೆ ಮತ್ತು ಅನೇಕ ನೀರಿನ, ನೆಲದ ಜೀವಿಗಳಿಗೆ ಹಾನಿ ಆಗಲಿದೆ. ಈ ಯೋಜನೆಯ ವಿರುದ್ಧವೂ ಯಾವುದೇ ಫೌಂಡೇಶನ್ ರಚನಾತ್ಮಕ ಹೋರಾಟ ಹಮ್ಮಿಕೊಳ್ಳುತ್ತಿಲ್ಲ.
ಇವೆಲ್ಲಾ ಕೇವಲ ಮೇಲ್ನೋಟಕ್ಕೆ ಕಾಣಿಸುವ ಕೆಲವು ಅಂಶಗಳು ಮಾತ್ರ. ವೈಜ್ಞಾನಿಕವಾಗಿ ನದಿಗಳನ್ನು ಅರಿತು, ಅನೇಕ ನದಿ ಮತ್ತು ಅರಣ್ಯ ತಜ್ಞರನ್ನು ಸಂಪರ್ಕಿಸಿ ಮುಂದಿನ ಹೆಜ್ಜೆ ಇಡಬೇಕಾದ ತುರ್ತು ಅಗತ್ಯವಿದೆ. ಕಾವೇರಿ ಉಳಿವಿಗೆ ಮೊತ್ತ ಮೊದಲನೆಯದಾಗಿ ಮಾಡಲೇಬೇಕಾದ ಕೆಲಸಗಳೆಂದರೆ, ಅರಣ್ಯ ನಾಶ ತಡೆ, ಮರಳು ಗಣಿಗಾರಿಕೆ ತಡೆ, ಹಾಗೂ ಎಗ್ಗಿಲ್ಲದೇ ಕಟ್ಟಲಾಗುತ್ತಿರುವ ಅಣೆಕಟ್ಟುಗಳ ನಿರ್ಮಾಣ ತಡೆ. ಎಷ್ಟು ಬೇಗ ಇಂತಹ ತಡೆಗಳಿಗೆ ಹೋರಾಟ, ಕೂಗು ಹೆಚ್ಚುತ್ತದೋ ಅಷ್ಟೇ ಕಾವೇರಿಗೂ, ಕಾವೇರಿ ನಂಬಿರುವ ಜನರಿಗೂ ಒಳ್ಳೆಯದು.
ಲೇಖಕರು ಪರಿಸರ ಉತ್ಸಾಹಿ