ಉತ್ತರ ಕರ್ನಾಟಕ,ವಿಶೇಷವಾಗಿ ಮುಂಬಯಿ ಕರ್ನಾಟಕ, ಅಕ್ಷರಶಃ ತತ್ತರಿಸಿ ಹೋಗುತ್ತಿದೆ. ಕೇವಲ ಮೂರು ತಿಂಗಳ ಹಿಂದೆಯಷ್ಟೆ ಬರಗಾಲದ ದವಡೆಯಲ್ಲಿ ಸಿಲುಕಿ ನಲುಗಿ ಹೋಗಿದ್ದ ಬಹಳಷ್ಟು ತಾಲೂಕುಗಳು ಕುಡಿಯುವದಕ್ಕೂ ನೀರಿಲ್ಲದೇ ವಿಲವಿಲ ಒದ್ದಾಡಿ ಹೋಗಿದ್ದವು. ಒಂದೆರಡು ಟಿ ಎಮ್ ಸಿ ನೀರನ್ನಾದರೂ ಕೊಡಿ ಎಂದು ನೆರೆಯ ಮಹಾರಾಷ್ಟ್ರದ ಎದುರು ಕೈಕಟ್ಟಿ ನಿಲ್ಲುವ ದಯನೀಯ ಸ್ಥಿತಿ ಮುಂಬಯಿ ಕರ್ನಾಟಕಕ್ಕೆ ಒದಗಿತ್ತು. ಇಂದು ಅದೇ ಮಹಾರಾಷ್ಟ್ರ ಬಿಡುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಈ ಪ್ರದೇಶ ಗಡಗಡ ನಡುಗತೊಡಗಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಉಂಟಾಗಿರುವ ನೆರೆ ಹಾವಳಿ ಎರಡು ಪ್ರಕಾರದ್ದಾಗಿದೆ. ಒಂದು, ಮಹಾರಾಷ್ಟ್ರದ ಅತಿದೊಡ್ಡ ಜಲಾಶಯವಾದ ಸಾತಾರಾ ಜಿಲ್ಲೆಯ ಕೊಯ್ನಾ, ವಾರ್ಣಾ ಮತ್ತಿತರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿ ಹೊರಗೆ ಬಿಡಲಾಗುತ್ತಿರುವ ಅಪಾರ ಪ್ರಮಾಣದ (ಮಂಗಳವಾರ ಆಗಸ್ಟ್ 6 ವರೆಗೆ 4 ಲಕ್ಷ ಕ್ಯೂಸೆಕ್ಸ) ನೀರಿನಿಂದಾಗಿ ಕೃಷ್ಣಾ ತೀರದಲ್ಲಿ ಪ್ರವಾಹ ಸ್ಥಿತಿ. ಇನ್ನೊಂದು, ಬೆಳಗಾವಿ, ಖಾನಾಪುರ, ಗೋಕಾಕ ಸುತ್ತಮುತ್ತಲೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂಭವಿಸುತ್ತಿರುವ ಹಾನಿ.
2005-06 ರಲ್ಲಿ ಕರ್ನಾಟಕಕ್ಕೆ ಮುನ್ಸೂಚನೆ ನೀಡದೇ ಮಹಾರಾಷ್ಟ್ರ ಧಿಡೀರಾಗಿ ಮೂರುವರೆ ಲಕ್ಷ ಕ್ಯೂಸೆಕ್ಸ ದಷ್ಟು ನೀರು ಬಿಡುಗಡೆ ಮಾಡಿದ್ದರಿಂದ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಕೃಷ್ಣಾ ತೀರದ ಗ್ರಾಮಗಳು ತತ್ತರಿಸಿ ಹೋಗಿದ್ದವು. ಆಗಿನ ಪ್ರವಾಹದಲ್ಲಿ ಆದ ನಷ್ಟವೇ ರೂ. 126 ಕೋಟಿ.
14 ವರ್ಷಗಳ ಹಿಂದೆ ಉಂಟಾಗಿದ್ದ ನೆರೆಹಾವಳಿಯು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಮಹಾರಾಷ್ಟ್ರದ ಗಡಿಯಲ್ಲೂ ಉಂಟಾಗಿತ್ತು. ಮಿರಜ ಮತ್ತು ಸಾಂಗ್ಲಿ ನಗರಗಳೂ ಸಹ ನಲುಗಿ ಹೋಗಿದ್ದವು. ಆದರೆ, ಅಂದಿನ ನೆರೆಯಿಂದ ಮಹಾರಾಷ್ಟ್ರ ಪಾಠ ಕಲಿಯಿತು, ಕರ್ನಾಟಕ ಕಲಿಯಲಿಲ್ಲ.
ರವಿವಾರ ಆಗಸ್ಟ್ 4 ರಂದು ಈ ಲೇಖಕರು ಅಥಣಿ, ಚಿಕ್ಕೋಡಿ ತಾಲೂಕುಗಳ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಹಳ್ಳಿಗರು 2005 ರ ನೆರೆಯನ್ನು ನೆನಪಿಸಿಕೊಂಡರು. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬರುವ ನೀರು ಕರ್ನಾಟಕವನ್ನು ಪ್ರವೇಶಿಸುವುದೇ ರಾಜಾಪುರ ಜಲಾಶಯದ ಮೂಲಕವೇ. ಇದು ಕಾಗವಾಡ ತಾಲೂಕಿನ (ಅಥಣಿ ತಾಲೂಕನ್ನು ವಿಭಜಿಸಿ ಕಾಗವಾಡ ತಾಲೂಕನ್ನು ರಚಿಸಲಾಗಿದೆ) ಶಿರಗುಪ್ಪಿ ಸಮೀಪವಿರುವ ಜುಗುಳ, ಮಂಗಾವತಿ ಮತ್ತು ಶಹಾಪೂರ ಗ್ರಾಮಗಳ ಬಳಿಯಿದೆ. ಕೃಷ್ಣೆಗೆ ಮಹಾಪುರ ಬಂದರೆ ಮೊದಲು ಬಲಿಯಾಗುವ ಹಳ್ಳಿಗಳೆಂದರೆ ಇವೇ ಮೂರು. ಇವುಗಳನ್ನು ಸ್ಥಳಾಂತರ ಮಾಡುವ ಮೂಲಕ ಇಲ್ಲಿಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿತ್ತು. ಆದರೆ ದೂರದ ಮುಳವಾಡ ಮತ್ತು ಕುಸನಾಳ ಗ್ರಾಮಗಳ ಸ್ಥಳಾಂತರಕ್ಕೆ ಅಂದಿನ ಜನಪ್ರತಿನಿಧಿಗಳು ನಿರ್ಧರಿಸಿದ್ದರಿಂದ ಈ ಮೂರು ಹಳ್ಳಿಗಳು ಹಾಗೇ ಉಳಿದುಬಿಟ್ಟವು.

ಕೃಷ್ಣಾ ನದಿಯ ತೀರದ ರೈತರು, ಸಾಮಾನ್ಯ ಜನರು ನೀರಿಲ್ಲದಿದ್ದರೂ ಒದ್ದಾಡಬೇಕು, ಪ್ರವಾಹ ಬಂದರೂ ಒದ್ದಾಡಬೇಕು! ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಕುಡಿಯಲೂ ನೀರಿಲ್ಲದೇ ಪರಿತಾಪಿಸಿದಾಗ ಮಹಾರಾಷ್ಟ್ರ ತನ್ನ ಕೊಯ್ನಾ ಜಲಾಶಯದಿಂದ ಎರಡು ಟಿ ಎಮ್ ಸಿ ನೀರನ್ನೂ ಬಿಡಲು ಒಪ್ಪಲಿಲ್ಲ.”ನೀರು ವಿನಿಮಯ ಒಪ್ಪಂದ” ಕ್ಕೆ ಕರ್ನಾಟಕ ಸಹಿ ಹಾಕಿದಾಗಲೇ ನೀರು ಬಿಡುವುದಾಗಿ ಪಟ್ಟು ಹಿಡಿಯಿತು. ವಿಜಯಪುರದ ಜಮಖಂಡಿ ಬಳಿಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ನೀರು ಪೂರೈಸಬೇಕೆಂದು ಶರತ್ತು ವಿಧಿಸಿತು. ಈ ಸಂಬಂಧ ಒಪ್ಪಂದಕ್ಕೆ ಸಿದ್ಧವಿರುವದಾಗಿ ಕರ್ನಾಟಕ ಸರಕಾರ ಪತ್ರ ಬರೆದರೂ ಮಹಾರಾಷ್ಟ್ರವು ಮೊದಲು ಒಪ್ಪಂದ, ನಂತರವಷ್ಟೇ ನೀರು ಎಂದೇ ಹೇಳಿತು.
ಸೃಷ್ಠಿಯ ಚಕ್ರ ತಿರುಗತೊಡಗಿತು. ಮಹಾರಾಷ್ಟ್ರದಲ್ಲಿ ಜೂನ್ ತಿಂಗಳಲ್ಲಿ ಸತತವಾಗಿ ಮಳೆ ಸುರಿಯತೊಡಗಿತು. ಪರಿಣಾಮವಾಗಿ ರಾಜಾಪುರ ಡ್ಯಾಮಿನಿಂದ ಮಹಾರಾಷ್ಟ್ರ ಸರಕಾರ ಅನಿವಾರ್ಯವಾಗಿ ನೀರನ್ನು ಬಿಡಲೇಬೇಕಾಯಿತು. ಈ ನೀರು ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಹಳ್ಳಿಗಳನ್ನು ದಾಟಿ ವಿಜಯಪುರ ಜಿಲ್ಲೆಯ ಹಿಪ್ಪರಗಿ, ಆಲಮಟ್ಟಿಯನ್ನೂ ತಲುಪಿತು! ನಾವು ಕೇಳಿದಾಗ ಸಿಗದ ಜೀವಜಲವು ನಮ್ಮ ಬಾಯಲ್ಲೇ ಬಂದು ಬಿತ್ತು!
ಸದ್ಯ ಉಂಟಾಗಿರುವ ನೆರೆಹಾವಳಿಗೆ ಮುಕ್ಕಾಲು ಪಾಲು ಮಹಾರಾಷ್ಟ್ರ ಸರಕಾರವೇ ಹೊಣೆಯೆಂಬುದು ಸ್ಪಷ್ಟ. ಈಗ ನೆರೆಹಾವಳಿಯಿಂದ ಉಂಟಾದ ಪರಿಸ್ಥಿತಿಯನ್ನು ಎದುರಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲೇ ಸರಿ. ಮೊದಲೇ ಮಂತ್ರಿ ಮಂಡಳ ರಚನೆಯಾಗಿಲ್ಲ. ಬಹುತೇಕ ಜನಪ್ರತಿನಿಧಿಗಳು ಮತಕ್ಷೇತ್ರಗಳಲ್ಲಿ ಇಲ್ಲವೇ ಇಲ್ಲ. ಕೇವಲ ಅಧಿಕಾರಿಗಳನ್ನು ಅವಲಂಬಿಸಿಯೇ ಎಲ್ಲವೂ ನಡೆಯಬೇಕಾಗಿದೆ. ಮಳೆಗಾಲ ಮುಗಿದ ನಂತರ ನೆರೆಯ ಪರಿಣಾಮಗಳು ಕಾಣಲಾರಂಭಿಸುತ್ತವೆ. ನೆರೆಯ ಮಹಾರಾಷ್ಟ್ರದ ಜೊತೆಗೆ ಕರ್ನಾಟಕ ಸರಕಾರ ತುಸು ಬಿಗಿ ನಿಲುವಿನಿಂದಲೇ ವ್ಯವಹರಿಸಬೇಕಾಗಿದೆ.
ಮಹಾರಾಷ್ಟ್ರದಿಂದ ಹರಿದು ಬಂದ ಪ್ರವಾಹದ ನೀರಿನಿಂದಾಗಿಯೇ 2005 ರಲ್ಲಿ ರೂ. 130 ಕೋಟಿ ಹಾನಿ ಸಂಭವಿಸಿತ್ತು. ಈಗ ಉಂಟಾದ ಪ್ರವಾಹದ ಪರಿಣಾಮವಾಗಿ ಸುಮಾರು ಒಂದು ಸಾವಿರ ಕೋಟಿ ಹಾನಿಯಾಗಿದೆಯೆಂದು ಅಂದಾಜಿಸಲಾಗುತ್ತಿದೆ. ಈ ಹಾನಿಯನ್ನು ಮಹಾರಾಷ್ಟ್ರ ಸರಕಾರವೇ ಭರಿಸಬೇಕೆಂಬ ನಿಲುವನ್ನು ಯಡಿಯೂರಪ್ಪ ಅವರು ತಳೆಯಬೇಕು. ಅಲ್ಲದೇ ಕರ್ನಾಟಕದ ಅನೇಕ ಗಡಿ ಗ್ರಾಮಗಳನ್ನು ಸ್ಥಳಾಂತರಿಸಿ ಸಾವಿರಾರು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಮಹತ್ತರ ಜವಾಬ್ದಾರಿಯೂ ಅವರ ಮೇಲಿದೆ.