ನಿರೀಕ್ಷೆಯಂತೆ ದೆಹಲಿಯಲ್ಲಿ ಮೋದಿ, ಅಮಿತ್ ಶಾ ನೇತೃತ್ವದ ಬಿಜೆಪಿಯು ಆಮ್ ಆದ್ಮಿ ಪಾರ್ಟಿಯ ದಂಡನಾಯಕ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂದೆ ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿದೆ. ಇದರ ಜತೆಗೆ ಕಾಂಗ್ರೆಸ್ ಪಕ್ಷವೂ ಸಹ ಶಸ್ತ್ರ ತೊಡಲು ಹಿಂದೇಟು ಹಾಕಿದೆ. ಅಂದರೆ, ಕೇಜ್ರಿವಾಲ್ ಎದುರು ಅಷ್ಟೇನೂ ಜನಪರಿಚಿತವಲ್ಲದ ಅಭ್ಯರ್ಥಿಗಳನ್ನು ಈ ಎರಡು ರಾಷ್ಟ್ರೀಯ ಪಕ್ಷಗಳು ಕಣಕ್ಕಿಳಿಸಲು ಮುಂದಾಗಿವೆ.
ಹೊಸದೆಹಲಿ ವಿಧಾನಸಭಾ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಪ್ರತಿನಿಧಿಸುತ್ತಿದ್ದರು. ನಂತರ ಅರವಿಂದ ಕೇಜ್ರಿವಾಲ್ ಅವರು ಪ್ರತಿನಿಧಿಸುತ್ತಿದ್ದಾರೆ. ಇದೀಗ ಕೇಜ್ರಿವಾಲ್ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ರೊಮೇಶ್ ಸಬರ್ವಾಲ್ ಅವರನ್ನು ಕಣಕ್ಕಿಳಿಸುತ್ತಿದೆ. ಸಬರ್ವಾಲ್ ಈ ಹಿಂದೆ ವಿದ್ಯಾರ್ಥಿ ಮುಖಂಡರಾಗಿದ್ದವರು ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ಎಸ್ ಯುಐ) ನ ದೆಹಲಿ ಘಟಕದ ಅಧ್ಯಕ್ಷರಾಗಿದ್ದರು.
ಇದುವರೆಗೆ ದೆಹಲಿ ಘಟಕದ ಕಾರ್ಯಾಧ್ಯಕ್ಷರು ಅಥವಾ ಮಾಜಿ ಶಾಸಕರೊಬ್ಬರನ್ನು ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲಾಗುತ್ತದೆ ಎಂಬ ಸುದ್ದಿಗಳು ಹರಡಲಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಯಾರೊಬ್ಬರೂ ಸಹ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಸಬರ್ವಾಲ್ ಅವರನ್ನು `ಹರಕೆಯ ಕುರಿ’ಯನ್ನಾಗಿ ಮಾಡಲಾಗುತ್ತಿದೆ.
ಇನ್ನು ಭಾರತೀಯ ಜನತಾ ಪಕ್ಷ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಪಕ್ಷದ ದೆಹಲಿ ಘಟಕದ ಯುವ ಮೋರ್ಚಾದ ಅಧ್ಯಕ್ಷ ಸುನೀಲ್ ಯಾದವ್ ಅವರಿಗೆ ಟಿಕೆಟ್ ನೀಡುವ ಮೂಲಕ ಚುನಾವಣೆ ಕಣಕ್ಕೆ ಇಳಿಸಲಾಗುತ್ತಿದೆ. ಇವರೂ ಸಹ ಕಾಂಗ್ರೆಸ್ ಅಭ್ಯರ್ಥಿ ಸಬರ್ವಾಲ್ ರೀತಿಯಲ್ಲಿ ಪಕ್ಷದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಮೇಲೆ ಬಂದವರಾಗಿದ್ದು, ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಧುಮುಕುತ್ತಿದ್ದಾರೆ.
ಚುನಾವಣೆ ಕಣದಲ್ಲಿ ಇನ್ನೂ ಎಳಸಿನಂತಿರುವ ಈ ಇಬ್ಬರನ್ನು ಕಣಕ್ಕಿಳಿಸಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಆಮ್ ಆದ್ಮಿ ಪಕ್ಷದ ಪದಚ್ಯುತಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿವೆ. ಆದರೆ, ಚುನಾವಣೆ ಪೂರ್ವ ಸಮೀಕ್ಷೆಗಳ ಪ್ರಕಾರ ಕೇಜ್ರಿವಾಲ್ ಸೇರಿದಂತೆ ಅವರ ಪಕ್ಷವಾದ ಆಮ್ ಆದ್ಮಿ ಪಕ್ಷ 2015 ರಂತೆಯೇ ಭಾರೀ ಜಯಭೇರಿ ಬಾರಿಸಲಿದೆ. ಈ ವಿಚಾರ ಈಗಾಗಲೇ ದೆಹಲಿ ಮತದಾರರ ಮನಃಪಟಲದಲ್ಲಿ ಅಚ್ಚೊತ್ತಿದಂತಾಗಿದೆ. ಹೀಗಾಗಿ ಆಂತರ್ಯದಲ್ಲಿ ಇಲ್ಲಿ ಸೋಲು ಖಚಿತ ಎಂಬುದನ್ನು ಖಾತರಿಪಡಿಸಿಕೊಂಡೇ ಎರಡೂ ರಾಷ್ಟ್ರೀಯ ಪಕ್ಷಗಳು ಕೇಜ್ರಿವಾಲ್ ವಿರುದ್ಧ ಡಮ್ಮಿ ಕ್ಯಾಂಡಿಡೇಟ್ ಗಳನ್ನು ಕಣಕ್ಕಿಳಿಸುತ್ತಿವೆ ಎಂದೇ ಹೇಳಲಾಗುತ್ತಿದೆ.
ಕ್ಷೇತ್ರ ಪುನರ್ವಿಂಗಡಣೆ ನಂತರ ಹೊಸ ದೆಹಲಿ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಅದಕ್ಕೂ ಮುನ್ನ ಈ ಕ್ಷೇತ್ರದ ಬಹುತೇಕ ಭಾಗ ಗೋಲೆ ಮಾರ್ಕೆಟ್ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದವು. 2008 ರಲ್ಲಿ ನಡೆದ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಗೆಲುವು ಸಾಧಿಸಿದ್ದರು. ದೀಕ್ಷಿತ್ ಅವರಿಗೆ ಶೇ.52.2 ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ವಿಜಯ್ ಜಾಲ್ಲಿ ಶೇ.33.85 ರಷ್ಟು ಮತ ಗಳಿಸಿದ್ದರು.
ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಗಳಿಸಿದ ಜನಪ್ರಿಯತೆಯಿಂದಾಗಿ 2013 ರಲ್ಲಿ ಆಮ್ ಆದ್ಮಿ ಪಾರ್ಟಿಯು ದೆಹಲಿಯ ವಿಧಾನಸಭಾ ಚುನಾವಣೆ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡಿತು. ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ವಿರುದ್ಧ ಕಣಕ್ಕಿಳಿದು ಗೆಲುವಿನ ನಗೆ ಬೀರಿದ್ದರು.
ಈ ಕ್ಷೇತ್ರದಲ್ಲಿ ಕೇಜ್ರಿವಾಲ್ ಎರಡು ಬಾರಿ ಜಯ ಸಾಧಿಸಿದ್ದಾರೆ. 2013 ರ ಚುನಾವಣೆಯಲ್ಲಿ ಕೇಜ್ರಿವಾಲ್ ಶೇ.53.46 ರಷ್ಟು ಮತಗಳನ್ನು ಪಡೆದಿದ್ದರೆ, ಶೀಲಾದೀಕ್ಷಿತ್ ಅವರು ಕೇವಲ ಶೇ.22.23 ರಷ್ಟು ಮತಗಳನ್ನು ಗಳಿಸಿದ್ದರು. ಈ ಮೂಲಕ ಕೇಜ್ರಿವಾಲ್ ಅಂದಿನ ಹಾಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ವಿರುದ್ಧ ಬರೋಬ್ಬರಿ 25,864 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆಗಲೇ ಬಿಜೆಪಿ ಶರಣಾಗತಿಯಾಗಿತ್ತು. ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ ಅಭ್ಯರ್ಥಿ ವಿಜೇಂದರ್ ಗುಪ್ತ ಶೇ.21.68 ರಷ್ಟು ಮತಗಳನ್ನು ಗಳಿಸಿದ್ದರು.
ಮತ್ತೆ 2015 ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಶೀಲಾದೀಕ್ಷಿತ್ ಸ್ಪರ್ಧಿಸಲಿಲ್ಲ. ಏಕೆಂದರೆ, ಅದಾಗಲೇ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾದ ಗಾಳಿ ಬಲವಾಗಿ ಬೀಸತೊಡಗಿತ್ತು. ಈ ಗಾಳಿಯ ರಭಸ ಹೇಗಿತ್ತೆಂದರೆ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಧೂಳೀಪಟ ಮಾಡಿದ್ದಲ್ಲದೇ, ಏಕಪಕ್ಷೀಯವಾಗಿ ಚುನಾವಣೆ ಎಂಬಂತೆ ಭಾಸವಾಗಿತ್ತು.
ಈ ಚುನಾವಣೆಯಲ್ಲಿ ಕೇಜ್ರಿವಾಲ್ ಗೆ ಇನ್ನೂ ಹೆಚ್ಚಿನ ಮತಗಳು ಬಂದಿದ್ದವು. 2013 ರಲ್ಲಿ ಶೇ.53.46 ರಷ್ಟು ಮತಗಳನ್ನು ಗಳಿಸಿದ್ದ ಕೇಜ್ರಿವಾಲ್ 2015 ರಲ್ಲಿ ಶೇ.64.34 ರಷ್ಟು ಮತಗಳನ್ನು ಗಳಿಸಿ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
ಬಿಜೆಪಿಯ ನೂಪುರ್ ಶರ್ಮಾಗೆ ಶೇ.28.81 ರಷ್ಟು ಮತಗಳು ಬಂದಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಿರಣ್ ವಾಲಿಯಾ ಕೇವಲ ಶೇ.5.37 ರಷ್ಟು ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದರು.
ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ಹಲವಾರು ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಈ ಬಾರಿಯೂ ಜಯಭೇರಿ ಬಾರಿಸಲಿದೆ. 70 ಸ್ಥಾನಗಳ ದೆಹಲಿ ವಿಧಾನಸಭೆಗೆ ನಡೆಯಲಿರುವ ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 59 ರಿಂದ 62 ಸೀಟುಗಳಲ್ಲಿ ಗೆಲ್ಲಲಿದೆ. ಆದರೆ, ಕಳೆದ ಚುನಾವಣೆಗಿಂತ ಮೂರ್ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಲಿದ್ದರೂ, ಅಧಿಕಾರಕ್ಕೆ ಬರಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
ಇದನ್ನೇ ಎಚ್ಚರಿಕೆ ಗಂಟೆಯಾಗಿರಿಸಿಕೊಂಡಿರುವ ಕೇಜ್ರಿವಾಲ್ ಸ್ಥಳೀಯ ಮಟ್ಟದಲ್ಲಿ ಜನರಿಂದ ವಿರೋಧ ಕಟ್ಟಿಕೊಂಡಿರುವ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಿಲ್ಲ. ಈ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ಸಮೀಕ್ಷೆಗಳ ಭವಿಷ್ಯದ ಅಂಕಿಅಂಶಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ತವಕದಲ್ಲಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಾಗಿ ಬಿಜೆಪಿಗೆ. ಭಯ ಹುಟ್ಟಿರುವುದು. ಏಕೆಂದರೆ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಬೀಗುತ್ತಿತ್ತು. ಇಡೀ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂಬ ತಂತ್ರಗಳನ್ನು ಹೆಣೆದಿತ್ತಾದರೂ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತೀವ್ರ ಮುಖಭಂಗ ಅನುಭವಿಸಿತ್ತು. ಇದರ ಜತೆಗೆ ಇತ್ತೀಚೆಗೆ ಸಿಎಎ, ಎನ್ಆರ್ ಸಿ ಸೇರಿದಂತೆ ವಿವಿಧ ಕಾನೂನುಗಳನ್ನು ಪ್ರಸ್ತಾಪಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಇದರಿಂದ ಬಿಜೆಪಿಗೆ ಮತದಾರರಿಗೆ ಮುಖ ತೋರಿಸುವುದು ಕಷ್ಟವಾದಂತಾಗಿದೆ. ಏಕೆಂದರೆ, ಜನರಿಗೆ ತಲುಪುವಂತಹ ಮತ್ತು ಹೇಳಿಕೊಳ್ಳುವಂತಹ ಕಾರ್ಯಕ್ರಮಗಳನ್ನು ನೀಡಿಲ್ಲ. ದೆಹಲಿ ಮಟ್ಟಿಗೆ ಅಲ್ಲಿನ ಮತದಾರರನ್ನು ಸೆಳೆಯುವಂತಹ ವಿಚಾರಗಳೂ ಬಿಜೆಪಿಗರ ಕೈಲಿಲ್ಲ. ಇದಲ್ಲದೇ, ಕೇಜ್ರಿವಾಲ್ ಸರ್ಕಾರ ಆಡಳಿತ ವಿರೋಧಿ ಅಲೆಯೂ ಇಲ್ಲದಂತಾಗಿದೆ. ಹೀಗಾಗಿ, ಪ್ರತಿಷ್ಠೆಯ ಕಣವಾಗಿರುವ ದೆಹಲಿಯಲ್ಲಿ ಮತದಾರರನ್ನು ಸೆಳೆಯುವುದು ಹೇಗೆಂಬ ಚಿಂತೆ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಇದರ ಜತೆಗೆ ಆಮ್ ಆದ್ಮಿ ಪಾರ್ಟಿಯ ಜನಪ್ರಿಯತೆ ಮುಂದೆ ಈ ಬಾರಿಯೂ ಕಮಲ ಮುದುಡುತ್ತದೆ ಎಂಬ ಅಳುಕು ಕಾಡುತ್ತಿದೆ.