ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜೋಡುತ್ತೆಗಳಾಗಿದ್ದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್ ಭಿನ್ನ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯಗಳ ತೆಕ್ಕೆಯಲ್ಲಿ ಸಿಲುಕುವ ಮೂಲಕ ಪರೋಕ್ಷವಾಗಿ ಬಿಜೆಪಿ ಕೇಂದ್ರ ನಾಯಕತ್ವದ ಮುಂದೆ ನಿಂತಿದ್ದಾರೆ.
ಸ್ವಪಕ್ಷದ ಪ್ರಬಲ ಧ್ವನಿ ಹಾಗೂ ವಿರೋಧಿ ಪಾಳಯದ ಪ್ರಬಲ ತನಿಖಾ ಸಂಸ್ಥೆಗಳ ಹದ್ದಿನ ಕಣ್ಣಿಗೆ ಗುರಿಯಾಗಿರುವುದು ಸಹಜವಾಗಿ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈ ಮೇಲಾಗುವಂತೆ ಮಾಡಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇದರಿಂದ ರಾಜ್ಯ ರಾಜಕೀಯದ ಹೋರಾಟ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿಯಾಗಿ ಬದಲಾಗಲಿದೆ.
ಈಚೆಗೆ ಸಮ್ಮಿಶ್ರ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದಿದ್ದ ಕುಮಾರಸ್ವಾಮಿ ಹಾಗೂ ಅವರ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಮೇಲೆ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್ ಸೇರಿದಂತೆ ಯಾರೊಬ್ಬರೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲಿಲ್ಲ. “ಅಕ್ರಮ ಹಣ ಸಾಗಣೆ ಪ್ರಕರಣದ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ತೆಕ್ಕೆಯಲ್ಲಿರುವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಹಗೆ ಸಾಧಿಸಲಾಗುತ್ತಿದೆ. ಗಣೇಶನ ಹಬ್ಬಕ್ಕೂ ಮನೆಗೆ ಹೋಗಲು ಅನುಮತಿ ನೀಡದೇ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ” ಎನ್ನುವ ಮೂಲಕ ಕುಮಾರಸ್ವಾಮಿ ಅವರು ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ಜಾರಿ ನಿರ್ದೇಶನಾಲಯದ ಸಮನ್ಸ್ ನಂತರ ದೆಹಲಿಗೆ ತೆರಳುವ ಮುನ್ನ ಶಿವಕುಮಾರ್ ಅವರು ದೇವೇಗೌಡರನ್ನು ಭೇಟಿ ಮಾಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸರ್ಕಾರ ಉರುಳಲು ಕಾರಣ ಎಂದು ಬಹಿರಂಗವಾಗಿ ಜೆಡಿಎಸ್ ನಾಯಕರು ದೂರುತ್ತಿರುವಾಗ ಪಕ್ಷದ ಪರವಾಗಿ ನಿಲ್ಲದ ಡಿಕೆಶಿ, ದೇವೇಗೌಡರ ಮನೆಯ ಕದ ತಟ್ಟಲು ಕಾರಣವೇನು? ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಡಿಕೆಶಿಯವರ ರಾಜಕಾರಣ ಸಾರ್ವಜನಿಕವಾಗಿ ಯಾವ ರೀತಿಯ ಸಂದೇಶ ರವಾನಿಸಲಿದೆ?
ಇನ್ನು, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಕೆಲವು ಅಧಿಕಾರಿಗಳ ಫೋನ್ ಗಳನ್ನು ಅಕ್ರಮವಾಗಿ ಆಲಿಸಲು ಮಾಜಿ ಸಿಎಂ ಕುಮಾರಸ್ವಾಮಿ ಸೂಚಿಸಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಕಾವಲಿಗೆ ಒಳಗಾಗಿರುವ ಕುಮಾರಸ್ವಾಮಿ ಅವರನ್ನು ಅಷ್ಟು ಸುಲಭವಾಗಿ ಬಿಜೆಪಿಯ ಕೇಂದ್ರ ನಾಯಕತ್ವ ಬಿಟ್ಟುಕೊಡಲಾರದು. 2018ರಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶ ಹೊರಬಿದ್ದು ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಾಗಲೂ ಸರ್ಕಾರ ರಚಿಸಲಾಗಲಿಲ್ಲ. ಕೇಂದ್ರ ಬಿಜೆಪಿ ನಾಯಕರು ಕುಮಾರಸ್ವಾಮಿ ಸೆಳೆಯಲು ಸಾಕಷ್ಟು ಪ್ರಯತ್ನ ಪಟ್ಟರಾದರೂ ಎಚ್ ಡಿ ಕೆ ಬಿಜೆಪಿಯತ್ತ ವಾಲಲಿಲ್ಲ.
ಈ ಸಂದರ್ಭದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮೋದಿ-ಶಾ ಜೋಡಿಗೆ ಭಾರಿ ಹಿನ್ನಡೆಯುಂಟು ಮಾಡಿದ್ದವು. ಈ ಹೋರಾಟದಲ್ಲಿ ಮೋದಿ-ಶಾ ಎದುರಾಗಿ ನಿಂತು ಬಹಿರಂಗವಾಗಿ ಗುರುತಿಸಿಕೊಂಡವರು ಶಿವಕುಮಾರ್ ಹಾಗೂ ಕುಮಾರಸ್ವಾಮಿ. ಈ ಇಬ್ಬರನ್ನೂ ಹಣಿಯುವ ಮೂಲಕ ಒಕ್ಕಲಿಗ ಸಮುದಾಯದ ಮೇಲೆ ಈ ಇಬ್ಬರೂ ನಾಯಕರು ಸಾಧಿಸಿರುವ ಹಿಡಿತವನ್ನು ಸಡಿಲಿಸಿ, ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಯುವ ನಾಯಕತ್ವವನ್ನು ಬೆಳೆಸಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಕನಿಷ್ಠ ಪಕ್ಷ ಯಡಿಯೂರಪ್ಪ ಸರ್ಕಾರಕ್ಕೆ ಚ್ಯುತಿಯಾಗದ ರೀತಿಯಲ್ಲಿ ಕುಮಾರಸ್ವಾಮಿ ಅವರನ್ನು ಫೋನ್ ಕದ್ದಾಲಿಕೆ ಪ್ರಕರಣ ಮುಂದಿಟ್ಟುಕೊಂಡು ಕೇಂದ್ರ ಬಿಜೆಪಿ ನಿರ್ವಹಿಸಲಿದೆ. ಡಿಕೆಶಿ ಬಂಧಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದೇವೆ ಎಂದು ಬಿಜೆಪಿ ಬಿಂಬಿಸಲು ಮುಂದಾದರೂ ಆಶ್ಚರ್ಯವಿಲ್ಲ.

ಸಮಗ್ರವಾಗಿ ನೋಡುವುದಾದರೆ ದೇವೇಗೌಡ-ಶಿವಕುಮಾರ್ ಭೇಟಿ ಹಾಗೂ ಶಿವಕುಮಾರ್ ಬೆಂಬಲಿಸಿ ಕುಮಾರಸ್ವಾಮಿ ಟ್ವೀಟ್ ಮಾಡಿರುವ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಾತಿ ರಾಜಕಾರಣ ತೀವ್ರ ಸ್ವರೂಪ ಪಡೆಯುವ ಮುನ್ಸೂಚನೆಯಂತೆ ಭಾಸವಾಗುತ್ತಿದೆ. ರಾಜ್ಯದ ಎರಡು ಪ್ರಬಲ ಕೋಮುಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ದಶಕಗಳಿಂದ ರಾಜಕೀಯವಾಗಿ ಎದುರು ಬದುರು ನಿಂತು ಹೋರಾಟ ನಡೆಸುತ್ತಾ ಬಂದಿವೆ. ಈ ಎರಡೂ ಸಮುದಾಯಗಳಿಗೆ ಸೇರದ ಹಿಂದುಳಿದ ವರ್ಗಗಳ ನೇತಾರನಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.
ಸೈದ್ಧಾಂತಿಕವಾಗಿ ಬಿಜೆಪಿಯನ್ನು ಎದುರುಗೊಳ್ಳುವ ಚಾಕಚಕ್ಯತೆ ಹಾಗೂ ಜನಬಲ ಕಾಂಗ್ರೆಸ್ ನಲ್ಲಿ ಯಾವ ನಾಯಕನಿಗೂ ಇಲ್ಲ. ಇಲ್ಲಿಯವರೆಗೂ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಅಥವಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನುವ ವರದಿಗಳು ಹಬ್ಬಿದ್ದವು. ಈಗ ಡಿ ಕೆ ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ಬಲೆಗೆ ಸಿಲುಕಿರುವುದರಿಂದ ಅವರಿಗೆ ಪ್ರಮುಖ ಸ್ಥಾನ ನೀಡುವ ಮೂಲಕ ಮತ್ತೊಂದು ಅಸ್ತ್ರವನ್ನು ಬಿಜೆಪಿಗೆ ವರ್ಗಾಯಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡುವ ಸಾಧ್ಯತೆ ಕಡಿಮೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ಹಾದಿ ಸುಗಮವಾದಂತಿದೆ. ರಾಜ್ಯ ರಾಜಕೀಯವು ಪಕ್ಷಾತೀತವಾಗಿ ಹಲವು ಬದಲಾವಣೆಗೆ ಸಾಕ್ಷಿಯಾಗುತ್ತಿರುವುದು ಮಾತ್ರ ಸ್ಪಷ್ಟವಾಗಿದೆ.