ತನ್ನ ಪ್ರಕೃತಿ ಸೌಂದರ್ಯದಿಂದಲೇ ದೇಶಾದ್ಯಂತ ಹೆಸರುವಾಸಿ ಆಗಿರುವ ಪುಟ್ಟ ಜಿಲ್ಲೆಕೊಡಗು ಅಪರಿಮಿತ ಸಂಪತ್ತಿನ ಗಣಿ. ಆದರೆ ಮಾನವನ ದುರಾಸೆ ಹಾಗೂ ಸ್ವಾರ್ಥದಿಂದಾಗಿ ಇಲ್ಲಿನ ಸಂಪತ್ತು ನಶಿಸುತ್ತಲೇ ಬಂದಿದೆ. 1980-90 ರ ದಶಕದಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿದ್ದ ಅಪಾರ ಬೃಹತ್ ವೃಕ್ಷಗಳು ಕೇರಳದ ಮರ ವ್ಯಾಪಾರಿಗಳ ಕೊಡಲಿಗೆ ಬಲಿಯಾದವು. ಕೊಡಗಿನ ಕಾಫಿ ತೋಟಗಳ ಮಾಲೀಕರಿಗೆ ಲಕ್ಷಗಟ್ಟಲೇ ಹಣ ಸಿಕ್ಕಿತಾದರೂ ಈ ವೃಕ್ಷ ಸಂಪತ್ತಿನ ನಿಜವಾದ ಮೌಲ್ಯ ಅವರಿಗೆ ಆಗ ಗೊತ್ತಿರಲೇ ಇಲ್ಲ.
ಇವರಿಂದ ಮರ ಖರೀದಿಸಿದವರು ಅದನ್ನು ದುಪ್ಪಟ್ಟು ಬೆಲೆಗೆ ಕೇರಳದ ದೊಡ್ಡ ವ್ಯಾಪಾರಿಗಳಿಗೆ ಮಾರಿದ ನಿದರ್ಶನಗಳೇ ಸಾವಿರಾರು ಇವೆ. ಕೊಡಗಿನ ಖಾಸಗಿ ಜಮೀನುಗಳಲ್ಲಿ ಅಕ್ಷರಶಃ ಮರಗಳ ಲೂಟಿಯೇ ನಡೆದು ಹೋಯಿತು. ಮರ ವ್ಯಾಪಾರಿಗಳು ರಾತ್ರೋರಾತ್ರಿ ಕುಬೇರರಾದರು.
ನಂತರ ಎಚ್ಚತ್ತುಕೊಂಡ ಸರ್ಕಾರ ಮರಗಳನ್ನು ಕಡಿಯಲು ನಿರ್ಬಂಧ ವಿಧಿಸಿ ಎಕರೆಯೊಂದಕ್ಕೆ ಮೂರು ಮರಗಳನ್ನು ಮಾತ್ರ ಕಡಿಯಲು ಅನುಮತಿ ನೀಡುವ ನಿಯಮವನ್ನು ರೂಪಿಸಿತು. ಅಂದಿನಿಂದ ಇಂದಿನವರೆಗೂ ಈ ನಿಯಮವೇ ಜಾರಿಯಲ್ಲಿದೆ. ಆದರೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವಾಗ ಅಂತಹ ಜಮೀನುಗಳಲ್ಲಿ ಹೆಚ್ಚಿನ ಮರಗಳನ್ನು ಕಡಿಯುತ್ತಾರಾದರೂ ಕಳೆದ ತಿಂಗಳು ಬೆಳಕಿಗೆ ಬಂದ ಪ್ರಕರಣವೊಂದಲ್ಲಿ 800 ಕ್ಕೂ ಅಧಿಕ ಮರಗಳನ್ನು ಕಡಿದಿರುವುದು ಜಿಲ್ಲೆಯ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಾರ್ವಜನಿಕ ಆಕ್ರೋಶ, ಪ್ರತಿಭಟನೆಯ ನಂತರ ಸರ್ಕಾರ ಐಎಫ್‍ಎಸ್ ದರ್ಜೆಯ ಅಧಿಕಾರಿಯನ್ನೇ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಿದೆ.
ಆದರೆ, ಸರ್ಕಾರ ಅಮಾನತ್ತು ಮಾಡಿದ್ದು ಅರಣ್ಯ ಇಲಾಖೆ ಈ ಕುರಿತು ಎಫ್‍ಐಆರ್ (Forest Offence Case – FoC) ದಾಖಲಿಸಿದ್ದರೂ ನಿಜವಾದ ಆರೋಪಿಗಳು ಯಾರು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಮಡಿಕೇರಿ ಸಮೀಪದ ಕೆ ನಿಡುಗಣೆ ಗ್ರಾಮದಲ್ಲಿ ಒಟ್ಟು 88 ಎಕರೆ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲಾಗಿದ್ದು ಇದು ಕರ್ನಾಟಕ ಗೃಹಮಂಡಳಿಗೆ ಸೇರಿದ ಭೂಮಿಯಾಗಿದೆ.
ದಾಖಲೆಗಳ ಪ್ರಕಾರ ಈ ಭೂಮಿಯ ಮಾಲೀಕ ಕರ್ನಾಟಕ ಗೃಹ ಮಂಡಳಿ. ಮರ ಕಡಿತವಾದಾಗ ಭೂ ಮಾಲೀಕರೇ ಹೊಣೆ ಹೊರಬೇಕಾದದ್ದು ಅನಿವಾರ್ಯ. ಆದರೆ ಇಲ್ಲಿ ಅರಣ್ಯ ಅಧಿಕಾರಿಗಳು ಬರೇ ಡೆವಲಪರ್ ಹಾಗೂ ಕಾರ್ಮಿಕರ ಮೇಲೆ ಎಫ್ ಐ ಆರ್ ದಾಖಲಿಸಿ ತಿಪ್ಪೆ ಸಾರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಕುರಿತು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ತನಿಖೆ ಸರಿಯಾದ ಹಾದಿಯಲ್ಲಿ ನಡೆದಿದ್ದು ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಪ್ರಕರಣದ ತನಿಖೆಯ ನೇತೃತ್ವವನ್ನು ವಿರಾಜಪೇಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜ ಅವರು ವಹಿಸಿದ್ದು ಅಮಾನತ್ತುಗೊಂಡಿರುವ ಅಧಿಕಾರಿಯ ಸ್ಥಾನಕ್ಕೆ ಇನ್ನೂ ಯಾರನ್ನೂ ನೇಮಿಸಿಲ್ಲ. ಈ ನಡುವೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಬೆಂಗಳೂರಿಗೆ ವರ್ಗವಾಗಿದ್ದು ಇಲ್ಲಿಗೂ ನೇಮಕವಾಗಿಲ್ಲ.
ಮೂಲಗಳ ಪ್ರಕಾರ, ಈ ಜಾಗವನ್ನು ಲೇ ಔಟ್ ಆಗಿ ಪರಿವರ್ತಿಸಲು ಗೃಹ ಮಂಡಳಿ ಆಂಧ್ರ ಮೂಲದ ಡೆವಲಪರ್ ಒಬ್ಬರಿಗೆ ವಹಿಸಿತ್ತು. ಸದರಿ ಡೆವಲಪರ್ ಅವರು ಇಲಾಖೆಯ ಅನುಮತಿ ಪಡೆದು ಮರ ಕಡಿದು ನೆಲ ಸಮತಟ್ಟು ಮಾಡುತಿದ್ದರು. ಈ ಸಂದರ್ಭದಲ್ಲೇ ಇದು ಬೆಳಕಿಗೆ ಬಂದು ಕೆಲಸ ನಿಲ್ಲಿಸಲಾಗಿದೆ. ಇದು ಅನ್ ರೆಡೀಂ ಜಾಗ ಆಗಿರುವುದರಿಂದ ಇಲ್ಲಿನ ಮರಗಳು ಸಂಪೂರ್ಣ ಸರ್ಕಾರದ ಸ್ವತ್ತಾಗಿದೆ.
ಸುಮಾರು 800 ಮರಗಳನ್ನು ಕಡಿಯಲು ಡಿ.ಎಫ್.ಓ. ಅವರು ಅನುಮತಿ ನೀಡಿದ್ದಾರೆ. ಈ ಅನುಮತಿಯಂತೆಯೇ ಮರಗಳನ್ನು ಕಡಿಯಲಾಗಿದೆ. ಆದರೆ ಇಲ್ಲಿ ಮರಕಡಿದವರು ಯಾರು ಎಂಬುದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿದೆ. ಹಿರಿಯ ಅಧಿಕಾರಿ ಮರ ಕಡಿಯಲು, ಈ ಮರಗಳನ್ನು ಡಿಪೋಗೆ ಸಾಗಿಸಲು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಅನುಮತಿ ನೀಡಲಾಗಿದ್ದರೂ, ಇಲಾಖೆಯವರಾದರೂ ಮರ ಕಡಿಯಲು ಟೆಂಡರ್ ಪ್ರಕ್ರಿಯೆ ನಡೆಸಬೇಕು… ಆದರೆ ಇಲ್ಲಿ ಟೆಂಡರ್ ಕರೆಯಲಾಗಿಲ್ಲ. ಸರಕಾರಕ್ಕೆ ನಷ್ಟವಾಗದಂತೆ ಜಾಗದ ಮಾಲೀಕರೇ ತಮ್ಮ ಖರ್ಚಿನಲ್ಲಿ ಮರ ಕಡಿದು ಡಿಪೋಗೆ ಸಾಗಿಸಲು ಅವಕಾಶ ನೀಡಿದ್ದರು ಎನ್ನಲಾಗಿದ್ದರೂ, ಇದು ‘ಯಾವ ದಾಖಲೆಯಲ್ಲಿಯೂ ಇಲ್ಲ. ಕೆಲವು ಖಚಿತ ಮೂಲಗಳ ಪ್ರಕಾರ ಇಲ್ಲಿ ಮರ ಕಡಿದದ್ದು ಸಂಬಂಧಿಸಿದ ಅರಣ್ಯ ಇಲಾಖೆಯವರೇ ಎನ್ನಲಾಗಿದೆ.
ಮರ ಕಡಿಯಲು ಅನುಮತಿ ನೀಡಿದ್ದ ಜಾಗದ ಹೊರತಾಗಿ ಸನಿಹದ ಮತ್ತೊಂದು ಸರ್ವೆ ನಂಬರ್ ನ ಜಾಗದಲ್ಲೂ ಅನುಮತಿಗಿಂತ ಅಧಿಕವಾಗಿ ಸುಮಾರು 73 ಮರ ಗಳನ್ನು ಕಡಿಯಲಾಗಿದೆ. ಮತ್ತೊಂದು ಜಾಗದಲ್ಲಿ ಅನುಮತಿ ಹೊರತಾಗಿಯೂ ಮರ ಕಡಿದದ್ದು ಯಾವ ಆಧಾರದಲ್ಲಿ ಎಂಬದು ಮತ್ತೊಂದು ಪ್ರಶ್ನೆಯಾಗಿದೆ. ಇದು ಮಾತ್ರವಲ್ಲದೆ, ಪ್ರಕರಣ ಬಯಲಾದ ಬಳಿಕ ಇಲಾಖೆಯ ಸ್ಕ್ವಾಡ್ ಇನ್ನಷ್ಟು ಪರಿಶೀಲನೆ ನಡೆಸಿದ ಸಂದರ್ಭ ಮತ್ತೂ 50 ಮರಗಳನ್ನು ಅನಧಿಕೃತವಾಗಿ ಕಡಿಯಲು ನಂಬರ್ ಹಾಕಲಾಗಿತ್ತು ಎನ್ನಲಾಗಿದೆ.
ಜೂನ್ 5ರಂದು ಈ ಮರ ಹನನ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಎಫ್.ಐ.ಆರ್. ಆಗಿರುವುದು ಐದು ದಿನ ವಿಳಂಬವಾಗಿ. ಅದೂ ಎಫ್.ಐ.ಆರ್. ಆಗಿರುವುದು ಡೆವಲಪರ್ ಮೇಲೆ ಹಾಗೂ ಕೂಲಿ ಕೆಲಸಕ್ಕೆ ತೊಡಗಿಸಿಕೊಂಡಿದ್ದ ನಾಪೋಕ್ಲು ಮೂಲದ ವ್ಯಕ್ತಿಯೊಬ್ಬರ ಮೇಲೆ. ಟೆಂಡರ್ ಕರೆಯದೆ ಇಲಾಖೆ ಯವರು ಮರ ಕಡಿದದ್ದು ಮೊದಲ ತಪ್ಪು. ಇದರೊಂದಿಗೆ ಅನುಮತಿ ನೀಡದಿದ್ದ ಜಾಗದಲ್ಲಿ ಹೆಚ್ಚುವರಿ ಯಾಗಿ ಇನ್ನಷ್ಟು ಮರಗಳನ್ನು ಕಡಿದಿರುವದು ಎರಡನೆಯ ತಪ್ಪು. ಇದರಲ್ಲಿ ಸತ್ಯಾಂಶವೇನು ಎಂಬುದು ಇನ್ನಷ್ಟೂ ಹೊರಬರಬೇಕಿದೆ. ಸದ್ಯದ ಮಟ್ಟಿಗೆ ಇಲಾಖಾ ತನಿಖೆ ನಡೆಯುತ್ತಿದೆ. ಅರಣ್ಯ ಅಧಿಕಾರಿಗಳ ಪ್ರಕಾರ ಸದ್ಯದಲ್ಲೇ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಲಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇದರ ಮಾಲಿಕತ್ವ ಪಡೆದಿರುವ ಕರ್ನಾಟಕ ಗೃಹನಿರ್ಮಾಣ ಮಂಡಳಿ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ. ಈ ಪ್ರಕರಣದಲ್ಲಿ ಅಮಾನತ್ತುಗೊಂಡಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮಂಜುನಾಥ್ ಅವರನ್ನು ಅವರ ಹಿಂದಿನ ಕಾರ್ಯ ವ್ಯಾಪ್ತಿಯಾದ ಸಕಲೇಶಪುರದಲ್ಲಿ ಮರ ಕಡಿಯಲು ನಿಯಮ ಉಲ್ಲಂಘಿಸಿ ಅನುಮತಿ ನೀಡಿದ ಆರೋಪದಡಿಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.