ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಇದೀಗ ಬಹು ಚರ್ಚಿತ ವಿಚಾರ ಮತ್ತು ಅಷ್ಟೇ ಪೈಪೋಟಿಯ ವಿಚಾರವೂ ಆಗಿದೆ. ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಅದರಂತೆ ಎಐಸಿಸಿ ಪ್ರತಿನಿಧಿಗಳು ರಾಜ್ಯಕ್ಕೆ ಬಂದು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿಯನ್ನೂ ಸಲ್ಲಿಸಿದ್ದಾರೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಪ್ರದಾನವಾಗಿ ಕೇಳಿಬರುತ್ತಿರುವ ಹೆಸರು ಡಿ.ಕೆ.ಶಿವಕುಮಾರ್ ಅವರದ್ದು. ಉಳಿದಂತೆ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೆಸರುಗಳೂ ಕೇಳಿಬರುತ್ತಿವೆ.
ಆದರೆ, ಎಐಸಿಸಿ ಪ್ರತಿನಿಧಿಗಳು ನೀಡಿರುವ ವರದಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರೇ ಸೂಕ್ತ. ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ, ಡಿ.ಕೆ.ಶಿವಕುಮಾರ್ ಮೇಲಿನ ಆದಾಯ ತೆರಿಗೆ ದಾಳಿ, ಬಂಧನ ಪ್ರಕರಣವನ್ನು ಬದಿಗಿಟ್ಟು ಕಾಂಗ್ರೆಸ್ ವರಿಷ್ಠರು ನಿರ್ಧಾರ ಕೈಗೊಂಡರೆ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಹುದು. ಇದಕ್ಕೆ ಶಿವಕುಮಾರ್ ಸಮ್ಮತಿಸಿದರೆ ಅವರೇ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಹಿಡಿಯುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕರಿಸದಂತೆ ಹೇಗೆ ಹೆಚ್ಚಿನ ಶಾಸಕರು, ಯುವ ಮುಖಂಡರು ಅಭಿಪ್ರಾಯ ಪಟ್ಟಿದ್ದರೋ ಅದೇ ರೀತಿ ದಿನೇಶ್ ಗುಂಡೂರಾವ್ ಅವರಿಂದ ತೆರವಾಗುವ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಬೇಕು ಎಂದು ಯುವ ಸಮುದಾಯದಲ್ಲಿ ಒತ್ತಾಯವಿದೆ. ಮೇಲಾಗಿ ಇತರ ಆಕಾಂಕ್ಷಿಗಳ ಬದಲು ಶಿವಕುಮಾರ್ ಏಕೆ ಸೂಕ್ತ ಎಂಬ ವಾದವನ್ನೂ ಪಕ್ಷದ ಕೆಲ ಪ್ರಮುಖರು ಎಐಸಿಸಿ ಪ್ರತಿನಿಧಿಗಳ ಮುಂದಿಟ್ಟಿದ್ದು, ಅದನ್ನೇ ಅವರು ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಈಗ ಪ್ರತಿಪಕ್ಷವಾಗಿರುವುದರಿಂದ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಶಾಸಕಾಂಗ ಪಕ್ಷದ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಸರಿಸಮನಾಗಿ ಕೆಲಸ ಮಾಡಬೇಕು. ಉಪ ಚುನಾವಣೆ ಸೋಲು ಹೊರತುಪಡಿಸಿ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ವೇಗದಲ್ಲಿ ಕೆಲಸ ಮಾಡುವ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಇದ್ದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಚುರುಕಾಗುತ್ತದೆ. ಈ ಕಾರಣಕ್ಕೆ ಬಹುತೇಕರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ನಾಯಕತ್ವವನ್ನು ಬಯಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಕೊರತೆ ಇಲ್ಲ
ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇರುವವರು ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್. ಜತೆಗೆ ಎಲ್ಲೋ ಕೆಲವು ಕಡೆ ಕೃಷ್ಣಬೈರೇಗೌಡ ಅವರ ಹೆಸರೂ ಕೇಳಿಬರುತ್ತದೆ. ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ಇರುವುದು ಎಂ.ಬಿ.ಪಾಟೀಲ್ ಕಡೆಯಿಂದ. ಇನ್ನುಳಿದವರು ಎಐಸಿಸಿ ಮಟ್ಟದಲ್ಲಿ ತಮ್ಮದೇ ಆದ ಮೂಲಗಳಿಂದ ಲಾಬಿ ಮಾಡುತ್ತಿದ್ದಾರೆ.
ಈ ಪೈಕಿ ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು. ರಾಜ್ಯ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನವಿದೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಪಾಟೀಲ್ ಅವರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ಪೂರ್ಣವಾಗಿ ಸಿದ್ದರಾಮಯ್ಯ ಅವರ ಕೈಗೆ ನೀಡಿದಂತಾಗುತ್ತದೆ. ಸಹಜವಾಗಿಯೇ ಹಿರಿಯ ಕಾಂಗ್ರೆಸಿಗರು ತಿರುಗಿ ಬೀಳುತ್ತಾರೆ. ಇದು ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಕಷ್ಟವಾಗಬಹುದು. ಕೃಷ್ಣಬೈರೇಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವುದರಿಂದ ಅವರ ಆಯ್ಕೆ ಕಷ್ಟ ಎನ್ನಲಾಗುತ್ತಿದೆ.
ಇನ್ನು ಎಚ್.ಕೆ.ಪಾಟೀಲ್ ಅವರ ಬಗ್ಗೆ ಯಾವುದೇ ಆರೋಪ, ಅಸಮಾಧಾನಗಳು ಹೇಗೆ ಇಲ್ಲವೋ ಅದೇ ರೀತಿ ಅವರಿಗೆ ಬೆಂಬಲವೂ ಇಲ್ಲ. ಏಕೆಂದರೆ, ಅವರು ಎಲ್ಲರಿಂದಲೂ ಅಂತರ ಕಾಯ್ದುಕೊಳ್ಳುತ್ತಾರೆ. ಪಕ್ಷ ಸಂಘಟನೆಗೆ ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಹೋಗುವ ವ್ಯಕ್ತಿತ್ವ ಬೇಕೆ ಹೊರತು ಅಂತರ ಕಾಯ್ದುಕೊಳ್ಳುವವರು ಬೇಡ ಎಂಬುದು ಕೆಲವರ ಅಭಿಪ್ರಾಯ. ಮೇಲಾಗಿ 2018ರ ಬಳಿಕ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ನಡೆದ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಈ ಸೋಲಿನ ಹೊಣೆ ಎಚ್.ಕೆ.ಪಾಟೀಲರ ಮೇಲೂ ಇದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು ಯಶಸ್ಸು ಗಳಿಸುವರೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ.
ಉಳಿದಂತೆ ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್ ಇಬ್ಬರೂ ಸಿದ್ದರಾಮಯ್ಯ ಅವರ ಬದ್ಧ ವಿರೋಧಿಗಳು. ಹಿರಿಯ ಕಾಂಗ್ರೆಸ್ಸಿಗರಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಇದ್ದ ಅಸಮಾಧಾನದ ಪೈಕಿ ಸಿಂಹಪಾಲು ಇವರಿಬ್ಬರದ್ದೆ. ಮೇಲಾಗಿ ಇಬ್ಬರಿಗೂ ಸಂಘಟನೆಯ ವರ್ಚಸ್ಸು ಇಲ್ಲ. ಕಾರ್ಯಕರ್ತರ ಜತೆ ಸಂಪರ್ಕವೂ ಕಮ್ಮಿ. ಈ ಕಾರಣದಿಂದಲೇ ಸತತ ಗೆಲುವಿನಿಂದ ಕೆ.ಎಚ್.ಮುನಿಯಪ್ಪ ಸೋಲಿನ ಮುಖ ಕಾಣುವಂತಾಯಿತು. ಹರಿಪ್ರಸಾದ್ ರಾಜ್ಯಸಭೆ ಸದಸ್ಯರಾಗಿರುವುದರಿಂದ ಅವರಿಗೆ ಜನರೊಂದಿಗಿನ ಸಂಪರ್ಕ ಅಷ್ಟಕ್ಕಷ್ಟೆ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಎದುರುಹಾಕಿಕೊಂಡು ಪಕ್ಷ ಸಂಘಟನೆ ಮಾಡಲು ಇವರಿಂದ ಸಾಧ್ಯವಾಗದು ಎಂದು ಪಕ್ಷದ ನಾಯಕರೇ ಹೇಳುತ್ತಾರೆ.
ಡಿ.ಕೆ.ಶಿವಕುಮಾರ್ ಆಯ್ಕೆಗೆ ಇರುವ ಕಾರಣಗಳು
ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಪಕ್ಷಕ್ಕಾಗಿ ತಮ್ಮೆಲ್ಲಾ ವೈಯಕ್ತಿಕ ವೈಮನಸ್ಯ ಮರೆತು ಅವರು ಕೆಲಸ ಮಾಡುತ್ತಾರೆ. ಇದಕ್ಕೆ ಉದಾಹರಣೆ ಜೆಡಿಎಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ ಅವರ ನಡವಳಿಕೆ. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬದ್ಧ ವೈರವಿದ್ದರೂ ಹೈಕಮಾಂಡ್ ಸೂಚಿಸಿತು ಎಂಬ ಒಂದೇ ಕಾರಣಕ್ಕೆ ಎಲ್ಲವನ್ನೂ ಮರೆತು ಜತೆಯಾಗಿ ಕೆಲಸ ಮಾಡಿದರು. ಸರ್ಕಾರ ತೊಂದರೆಗೆ ಸಿಲುಕಿದಾಗ ರಕ್ಷಣೆಗೆ ನಿಂತರು.
ಇದು ಒಂದೆಡೆಯಾದರೆ ಈ ಹಿಂದೆ ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊಂದರೆ ಎದುರಿಸಿದಾಗ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆಸಿ ನೋಡಿಕೊಂಡಿದ್ದೇ ಶಿವಕುಮಾರ್. ಅದೇ ವೇಳೆ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೂ ಅದನ್ನು ಲೆಕ್ಕಿಸದೆ ಪಕ್ಷದ ಶಾಸಕರ ರಕ್ಷಣೆಗೆ ನಿಂತಿದ್ದರು. ಪಕ್ಷ ಮೊದಲು ಎಂಬ ನಡವಳಿಕೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮೀಪ ತಂದು ನಿಲ್ಲಿಸುತ್ತದೆ. ಮೇಲಾಗಿ ಶಿವಕುಮಾರ್ ಅವರ ಆಯ್ಕೆಗೆ ಹಿರಿಯ ಕಾಂಗ್ರೆಸ್ಸಿಗರ ವಿರೋಧವೂ ಇಲ್ಲ.
ಹಾಗೆ ನೋಡಿದರೆ ಶಿವಕುಮಾರ್ ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರಾಗಬೇಕಿತ್ತು. ಒಂದೆರಡು ಬಾರಿ ಅವಕಾಶ ಹತ್ತಿರ ಬಂದರೂ ಕಾರಣಾಂತರಗಳಿಂದ ಹುದ್ದೆ ಅವರ ಕೈತಪ್ಪಿತ್ತು. ಇದೀಗ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹುದ್ದೆ ಅವರ ಬಳಿ ಬರುವಂತಾಗಿದೆ. ಆದರೆ, ಇರುವ ಒಂದೇ ಒಂದು ಅಡ್ಡಿ ಎಂದರೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ದಾಖಲಿಸಿರುವ ಪ್ರಕರಣ. ಈಗಾಗಲೇ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹೀಗಾಗಿ ಮತ್ತೆ ಅಪಾಯ ಎದುರಾಗಬಹುದು ಎಂಬ ಅನುಮಾನ ಎಲ್ಲೋ ಒಂದು ಕಡೆ ಶಿವಕುಮಾರ್ ಅವರಿಗೂ ಇದೆ. ಎಐಸಿಸಿಗೂ ಇದೆ.
ಆದರೂ ಇದರಿಂದ ತೊಂದರೆಯಿಲ್ಲ ಎಂಬ ಅಭಿಪ್ರಾಯ ಪಕ್ಷದ ಒಂದು ವಲಯದಲ್ಲಿ ಕೇಳಿಬರುತ್ತಿದೆ. ಈ ರೀತಿ ಆರೋಪ ಇರುವಾಗ ಪ್ರತಿಪಕ್ಷ ನಾಯಕರಾದರೆ ವಿಧಾನಸಭೆಯಲ್ಲಿ ಮುಜುಗರ ಎದುರಿಸಬೇಕಾಗಬಹುದು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಜನರ ಮುಂದೆ ಹೋಗುವಂತಹದ್ದು. ಶಿವಕುಮಾರ್ ಅವರಿಗೆ ಜನಬೆಂಬಲಕ್ಕೇನೂ ಕೊರತೆ ಇಲ್ಲ. ಪ್ರಬಲ ಒಕ್ಕಲಿಗ ಸಮುದಾಯ ಅವರ ಬೆನ್ನ ಹಿಂದಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿರುವ ಒಕ್ಕಲಿಗ ಸಮುದಾಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರಭಾವ ಕಮ್ಮಿಯಾಗುತ್ತಿರುವ ಸಂದರ್ಭದಲ್ಲಿ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಆ ಭಾಗದಲ್ಲಿ ಪಕ್ಷ ಮತ್ತಷ್ಟು ಗಟ್ಟಿಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಶಿವಕುಮಾರ್ ಅವರಿಗೂ ಸಿದ್ದರಾಮಯ್ಯ ಅವರ ಬಗ್ಗೆ ಸ್ವಲ್ಪ ಮಟ್ಟಿನ ಅಸಮಾಧಾನ ಇದ್ದರೂ ಅದನ್ನು ಬಹಿರಂಗಗೊಳಿಸುವುದಿಲ್ಲ. ಪಕ್ಷಕ್ಕಾಗಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಅವರ ಮನಸ್ಥಿತಿ ಸಂಘಟನೆ ವಿಚಾರದಲ್ಲಿ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ.