ಶಿವಮೊಗ್ಗದಲ್ಲಿ ಕರೋನಾ ಛಾಯೆ ಇಲ್ಲ ಆದರೆ ಮಂಗನ ಕಾಯಿಲೆ ( ಕ್ಯಾಸನೂರು ಫಾರೆಸ್ಟ್ ಡಿಸೀಜ್) ಜಿಲ್ಲೆಯ ಮೂರು ತಾಲೂಕಿನ ಜನರನ್ನ ಕಾಡುತ್ತಿದೆ. ಐವರು ಈ ವರ್ಷ ಮೃತಪಟ್ಟಿದ್ದು ಮೂವರ ಸಾವನ್ನು ಅಧಿಕೃತ ಎಂದು ಜಿಲ್ಲಾಡಳಿತ ಒಪ್ಪಿಕೊಂಡಿದೆ. ಕರೋನಾ ಲಾಕ್‌ಡೌನ್ ನಡುವೆಯೂ ಮಂಗನ ಕಾಯಿಲೆಯನ್ನ ನಿಯಂತ್ರಣಕ್ಕೆ ತರಲಾಗುತ್ತಿಲ್ಲ. ಆರೋಗ್ಯ ಇಲಾಖೆಯ ಚಿತ್ತ ಸಂಪೂರ್ಣವಾಗಿ ಕರೋನಾ ಮೇಲಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.
ಮಂಗನ ಕಾಯಿಲೆ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ 28 ಜನರನ್ನ ಬಲಿತೆಗೆದುಕೊಂಡಿದ್ದು ನೂರಾರು ಜನರನ್ನ ಸೋಂಕಿತರನ್ನಾಗಿ ಮಾಡಿದೆ. ಈ ವರ್ಷ ಜಿಲ್ಲೆಯಲ್ಲಿ 4,500 ಜನರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು 139 ಜನರನ್ನ ಕೆಎಫ್‌ಡಿ ಸೋಂಕಿತರ ಎಂದು ಗುರುತಿಸಲಾಗಿದೆ. ಅವರಿಗೆಲ್ಲಾ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿದೆ. ಕ್ರಮವಾಗಿ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ 729 ಹಳ್ಳಿಗಳಿಂದ 2347 ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದೆ. 111 ಜನರಲ್ಲಿ ಕೆಎಫ್‌ಡಿ ಇರುವುದು ದೃಢಪಟ್ಟಿದ್ದು ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಸಾಗರದಲ್ಲಿ 574 ಹಳ್ಳಿಗಳಿಂದ 1903 ರಕ್ತದ ಮಾದರಿ ಸಂಗ್ರಹಿಸಲಾಗಿದ್ದು 27 ಜನರನ್ನ ಸೋಂಕಿತರು ಎಂದು ಗುರುತಿಸಲಾಗಿದೆ. ಇನ್ನು ಹೊಸನಗರ ತಾಲೂಕಿನಲ್ಲಿ ಓರ್ವ ಸೋಂಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜನವರಿ ತಿಂಗಳಲ್ಲಿ 20 ಪ್ರಕರಣಗಳು ಕಂಡು ಬಂದರೆ, ಫ್ರೆಬ್ರವರಿಯಲ್ಲಿ 55 ಮಾರ್ಚ್‌ನಲ್ಲಿ 53 ಹಾಗೂ ಈ ತಿಂಗಳ ಮೊದಲ ವಾರದಲ್ಲಿ 11 ಸೋಂಕಿತರನ್ನ ಗುರುತಿಸಲಾಗಿದೆ. ಕಳೆದ ವರ್ಷ ಅಂದರೆ 2019-20ಕ್ಕೆ ಹೋಲಿಸಿದರೆ ಈ ವರ್ಷ ಸಾವಿನ ಪ್ರಮಾಣ ಕಡಿಮೆ ಆದರೆ ಚುಚ್ಚುಮದ್ದು ನೀಡಿದರೂ ರೋಗ ನಿಯಂತ್ರಣ ಸಾಧ್ಯವಿಲ್ಲವೇಕೆ ಎಂಬ ಭಯ ಮೂಡಿದೆ.
ಕರೋನಾ ಲಾಕ್‌ಡೌನ್ ರೈತಾಪಿ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈಗಾಗಲೇ ಮಲೆನಾಡು ತಾಲೂಕುಗಳಲ್ಲಿ ಚಿಕ್ಕಮಗಳೂರೂ ಸೇರಿದಂತೆ ಹದವಾದ ಮಳೆಯಾಗಿದೆ. ಲಾಕ್‌ಡೌನ್ ಅಂತ ಮನೆಯಲ್ಲೇ ಕುಳಿತರೆ ಈ ವರ್ಷ ಬೆಳೆ ಕಾಣುವುದು ಕಷ್ಟ. ಕಾಡಿಗೆ ತೆರಳಿ ದರಗಲೆಗಳನ್ನ ಸಂಗ್ರಹಿಸಲು ರೈತರು ಮುಂದಾಗಿದ್ದಾರೆ. ಈ ಎಲೆಗಳನ್ನ ಕೊಟ್ಟಿಗೆಗೆ ಹಾಗೂ ಶುಂಠಿ ಬೆಳೆಗೆ ಮುಚ್ಚಲು ಬಳಸುತ್ತಾರೆ. ಈಗಾಗಲೇ ಮಲೆನಾಡಿನಲ್ಲಿ ಶುಂಠಿ ನೆಡುವ ಕೆಲಸ ಭರದಿಂದ ಸಾಗಿದೆ. ರೈತರು ದರಗಲೆಗಳಿಂದ ಹಿಡಿದು ಬೇಲಿಗೂಟಗಳವರೆಗೆ ಕಾಡನ್ನೇ ಅವಲಂಭಿಸಿರುವುದರಿಂದ ಕೆಎಫ್‌ಡಿ ಉಣುಗುಗಳು ಕಚ್ಚುವುದು ಸಾಮಾನ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೋಗ ನಿಯಂತ್ರಣ ಮಾಡದಿದ್ದರೆ ಕರೋನಾದಷ್ಟೇ ಅಪಾಯ. ಇವೆಲ್ಲಾ ಆಘಾತಕಾರಿ ಬೆಳವಣಿಗೆಗಳ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಕಾಡಿಗೆ ಪ್ರವೇಶವನ್ನ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗದ ಮೂರು ತಾಲೂಕುಗಳ 31 ಹಳ್ಳಿಗಳಲ್ಲಿ ಈ ನಿಷೇಧವಿದೆ. ಜನರು ಪುನಃ ಕೆಎಫ್‌ಡಿ ರೋಗದ ಬಗ್ಗೆ ತಾತ್ಸಾರ ಮಾಡುತ್ತಿದ್ದಾರೆ. ಇದರಿಂದಲೇ ಸಾವುಗಳು ಸಂಭವಿಸಿದ್ದು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೆಎಫ್‌ಡಿ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸುತ್ತಿದೆ. ರೋಗ ಬಾಧಿತ ಗ್ರಾಮಪಂಚಾಯಿತಿಗಳಲ್ಲಿ ಆಂಬುಲೆನ್ಸ್ ಹಾಗೂ ಸಿಬ್ಬಂದಿಗಳನ್ನ ನೇಮಕಮಾಡಲಾಗಿದೆ. ರಕ್ತದ ಮಾದರಿ ಪರೀಕ್ಷೆಗೆಂದು ನಮ್ಮಲ್ಲಿ ವೈರಾಣು ಪ್ರಯೋಗಾಲಯವೂ ಇದೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ ಕರೋನಾ ಭಯದಲ್ಲಿ ಕೆಎಫ್‌ಡಿಯನ್ನ ಲಘುವಾಗಿ ಪರಿಗಣಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತೆ. ಶಿವಮೊಗ್ಗ ವೈರಾಣು ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್‌ಕೆ ಕಿರಣ್ ಪ್ರಕಾರ ಶಿವಮೊಗ್ಗದಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ಕಾಯಿಲೆ ಸೋಂಕು ಇಲ್ಲ. ಮೃತಪಟ್ಟವರಲ್ಲಿ ಕೆಲವರು ಕೆಎಫ್‌ಡಿ ಹೊರತಾದ ಕಾಯಿಲೆಯಿಂದಲೂ ಬಳಲಿದ್ದರು. ಇಲಾಖೆಗಿರುವ ಹೊಸ ಸವಾಲು ಎಂದರೆ ಅದು ಲಾಕ್‌ಡೌನ್ ಅಂತ ಬೆಂಗಳೂರಿನಿಂದ ಹಳ್ಳಿಗಳಿಗೆ ಬಂದವರು. ಈ ಯುವಕ ಯುವತಿಯರು ಚುಚ್ಚುಮದ್ದು ಪಡೆದಿಲ್ಲ. ಕಾಡಿನಲ್ಲಿ ಬೇಕಾಬಿಟ್ಟಿ ಸುತ್ತುತ್ತಿದ್ದಾರೆಂಬ ಮಾಹಿತಿ ಇದೆ. ಇದು ಹೀಗೆ ಮುಂದುವರಿದರೆ ಹೊಸ ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಇನ್ನು ಕಳೆದ ವಿಧಾನಸಭಾ ಕಲಾಪದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಸಾಗರ ಶಾಸಕ ಹರತಾಳು ಹಾಲಪ್ಪ ಕರೋನಾ ಮರೆಯಲ್ಲಿ ಕೊಂಚ ವಿಶ್ರಾಂತಿಗೆ ಜಾರಿದಂತೆ ಕಾಣುತ್ತೆ. ಅಥವಾ ಕೆಎಫ್‌ಡಿ ಐದನೇ ಸಾವು ತೀರ್ಥಹಳ್ಳಿಯಲ್ಲಿ ಕ್ಷೇತ್ರದಲ್ಲಿ ಆಗಿರುವುದರಿಂದ ಧ್ವನಿ ಕ್ಷೀಣಿಸಿದ್ದಂತಿದೆ. ಲಾಕ್‌ಡೌನ್ ಹೆಸರಲ್ಲಿ ಕೆಎಫ್‌ಡಿ ಸಂಶೋಧನಾ ಕೇಂದ್ರದ ಕೆಲಸಗಳು ನೆನೆಗುದಿಗೆ ಬಿದ್ದಿವೆ. ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರ ಪುಣೆಗೆ ಈಗಾಗಲೇ ಶಿವಮೊಗ್ಗದಿಂದ ಒಂದು ತಂಡ ಭೇಟಿ ನೀಡಿದ ಪೂರ್ವಭಾವಿ ಮಾಹಿತಿ ಪಡೆದಿತ್ತು. ಆದರೆ ಕರೋನಾ ಹೆಸರಲ್ಲಿ ಎಲ್ಲವೂ ನಿಂತುಹೋಯ್ತು.
ಶಿವಮೊಗ್ಗದ ಜನರು ಕರೋನಾ ಸೋಂಕಿತರು ನಮ್ಮ ಜಿಲ್ಲೆಯಲಿಲ್ಲ ಎಂದು ಬೀಗುತ್ತಿರುವಾಗಲೇ ಕೆಎಫ್‌ಡಿ ಜನರ ನೆಮ್ಮದಿಯನ್ನ ಹಾಳುಗೆಡುವಿದೆ. ಚಿಕ್ಕಮಗಳೂರು ನಗರದ ಪಾಲಿಟೆಕ್ನಿಕ್ ಕಾಲೇಜು ಬಳಿಯಲ್ಲೊಂದು ಮಂಗ ಸತ್ತಿದ್ದು ಅದನ್ನ ನಗರಸಭೆಯವರು ಎತ್ತಿ ಬಿಸಾಡಿದ್ದಾರೆ. ಈ ವರ್ಷ ಎಂಟು ಕೆಫ್‌ಡಿ ಪ್ರಕರಣಗಳು ಚಿಕ್ಕಮಗಳೂರಿನಲ್ಲಿ ಕಂಡು ಬಂದಿದ್ದು ಎಲ್ಲರೂ ಗುಣಮುಖರಾಗಿದ್ದಾರೆ. ಸರ್ಕಾರ ಕೆಎಫ್‌ಡಿ ಸೋಂಕಿತರ ಉಚಿತ ಚಿಕಿತ್ಸೆಗಾಗಿ ಮಣಿಪಾಲ್‌ನ ಕೆಂಎಂಸಿ ಆಸ್ಪತ್ರೆಯನ್ನ ನಿಯೋಜಿಸಿದೆ. ಆದರೆ ಮೃತರಾದವರ ಪರಿಹಾರ ಹಣ ಮಾತ್ರ ಬೆರಳೆಣಿಕೆಯಷ್ಟು ಜನರಿಗೆ ಸಿಕ್ಕಿದೆ. ಕಳೆದ ವರ್ಷ ಸಾಗರದ ಅರಳಗೋಡಿನಲ್ಲಿ ಮರಣಮೃದಂಗ ಭಾರಿಸಿದ್ದ ಕೆಎಫ್‌ಡಿ ಈ ವರ್ಷವೂ ಒಬ್ಬರನ್ನ ಬಲಿತೆಗೆದುಕೊಂಡಿದೆ. ಒಟ್ಟಿನಲ್ಲಿ ಮಲೆನಾಡಿನಲ್ಲಿ ಕರೋನಾಕ್ಕಿಂತ ಕೆಎಫ್‌ಡಿ ಹೆಚ್ಚು ಭಯ ಮೂಡಿಸಿದೆ.