ಬೆಳಗಾವಿಯ ಸಕ್ಕರೆ ಕಾರ್ಖಾನೆ ಮಾಲೀಕರೀಗ ಸಹಕಾರಿ ಕ್ಷೇತ್ರದಲ್ಲಿ ದೇಶದ ಎರಡನೇ ಅತಿ ದೊಡ್ಡ ಮತ್ತು ರಾಜ್ಯದ ಮುಂಚೂಣಿ ಹಾಲು ಉತ್ಪಾದಕರ ಫೆಡರೇಷನ್ ಮುಖ್ಯಸ್ಥರು. ಅರ್ಥಾತ್ ಕೆಎಂಎಫ್ ಅಧ್ಯಕ್ಷರು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತಾದರೂ ಈ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಅಧ್ಯಕ್ಷರೂ ಆಗಿರುವ ಹಾಸನ ಹಾಲು ಒಕ್ಕೂಟದ ಎಚ್. ಡಿ. ರೇವಣ್ಣ ತಮ್ಮ ನಾಮಪತ್ರ ಹಿಂಪಡೆದ ಕಾರಣ ಬೆಳಗಾವಿಯ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬಾಲಚಂದ್ರ ಜಾರಕಿಹೊಳಿಗೆ ಉತ್ತಮ ಉಡುಗೊರೆಯೇ ಸಿಕ್ಕಿದಂತಾಗಿದೆ.
ದಶಕಕ್ಕೂ ಹೆಚ್ಚು ಕಾಲ ಎಚ್. ಡಿ. ರೇವಣ್ಣ ಹಿಡಿತದಲ್ಲಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು 2009ರಲ್ಲಿ ಬಿಜೆಪಿಯ ಗಾಲಿ ಸೋಮಶೇಖರ ರೆಡ್ಡಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅವರ ಅವಧಿ ಮುಗಿದ ನಂತರ 2014ರಲ್ಲಿ ಅದು ಕಾಂಗ್ರೆಸ್ ಪಾಲಾಯಿತು. ಇದೀಗ 2019ರಲ್ಲಿ ಮತ್ತೆ ಬಿಜೆಪಿಗೆ ಒಲಿದಿದೆ. ವಿಶೇಷವೆಂದರೆ, ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿಯುವ ಎರಡೂ ಸಂದರ್ಭದಲ್ಲೂ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದಾಗಲೇ ಅವರಿಗೆ ಕೆಎಂಎಫ್ ಅಧ್ಯಕ್ಷಗಿರಿ ಕೊಡಿಸುವ ಪ್ರಯತ್ನ ಆರಂಭವಾಯಿತು. ಇದಕ್ಕೂ ಮುನ್ನವೇ ಕೆಎಂಎಫ್ ಮಾಜಿ ಅಧ್ಯಕ್ಷರೂ ಆಗಿರುವ ಜೆಡಿಎಸ್ ನ ಎಚ್. ಡಿ. ರೇವಣ್ಣ ಮತ್ತು ಕಾಂಗ್ರೆಸ್ ಪಕ್ಷದ ಶಾಸಕ ಭೀಮಾ ನಾಯಕ್ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಭೀಮಾನಾಯಕ್ ಅವರ ಮನವೊಲಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಾಲಚಂದ್ರ ಜಾರಕಿಹೊಳಿಗೆ ಈ ಸ್ಥಾನ ಸಿಗುವಂತೆ ನೋಡಿಕೊಂಡರು.

ಬ್ರಾಂಡ್ ನಂದಿನಿಗಿರುವ ಪ್ರತಿಷ್ಟೆ:
ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಅಧ್ಯಕ್ಷರ ಆಯ್ಕೆ ರಾಜಕೀಯದ ಬಗ್ಗೆ ಹೇಳುವ ಮುನ್ನ ಸಂಸ್ಥೆ ಮತ್ತು ಆ ಸಂಸ್ಥೆಯ ನಂದಿನಿ ಬ್ರಾಂಡ್ ಬಗ್ಗೆ ಹೇಳಲೇ ಬೇಕು. ಹಾಲು ಉತ್ಪಾದಕರು, ಹೈನೋದ್ಯಮ ಕ್ಷೇತ್ರಕ್ಕೆ ಹೊರತಾದವರಿಗೆ ಕೆಎಂಎಫ್ ಪರಿಚಿತವಾಗಿರುವುದು ನಂದಿನಿ ಬ್ರಾಂಡ್ ನಿಂದ. ಸಹಕಾರ ಕ್ಷೇತ್ರದಲ್ಲಿ ಗುಜರಾತ್ ರಾಜ್ಯದ ಅಮುಲ್ ನಂತರ ಅತಿ ದೊಡ್ಡ ಹಾಲು ಮತ್ತು ಹಾಲು ಉತ್ಪನ್ನಗಳ ಬ್ರಾಂಡ್ ಈ ನಂದಿನಿ, ವಿಶೇಷವೆಂದರೆ, ರಾಜಕೀಯದ ಮಧ್ಯೆ ಸಹಕಾರ ಕ್ಷೇತ್ರದ ಸಂಸ್ಥೆಗಳು ಹಾಳಾಗುತ್ತಿದ್ದರೂ ಅಭಿವೃದ್ಧಿ ಮತ್ತು ಲಾಭದಲ್ಲಿ ಸಾಗುತ್ತಿರುವುದು ಕೆಎಂಎಫ್ ವೈಶಿಷ್ಠ್ಯ. ಇದಕ್ಕೆ ಹಾಲು ಉತ್ಪಾದಕರಿಗೆ ಸರ್ಕಾರದ ನೆರವಿನ ಜತೆಗೆ ನಂದಿನಿ ಬ್ರಾಂಡ್ ಉತ್ಪನ್ನಗಳ ಜನಪ್ರಿಯತೆಯೇ ಬಹುಮುಖ್ಯ ಕಾರಣ.
ವಿಶ್ವಬ್ಯಾಂಕ್ ನೆರವಿನೊಂದಿಗೆ ಡೈರಿ ಉದ್ಯಮವನ್ನು ಅಭಿವೃದ್ಧಿಗೊಳಿಸಲು 1975ರಲ್ಲಿ ಕರ್ನಾಟಕ ಡೈರಿ ಡೆವಲಪ್ ಮೆಂಟ್ ಕಾರ್ಪೋರೇಷನ್ ಎಂಬ ಹೆಸರಿನೊಂದಿಗೆ ಆರಂಭವಾದ ಸಂಸ್ಥೆಗೆ 1984ರಲ್ಲಿ ಕೆಎಂಎಫ್ ಎಂದು ಮರುನಾಮಕರಣ ಮಾಡಲಾಯಿತು. ಹೆಸರು ಬದಲಾದ ಬಳಿಕ ಅದೃಷ್ಟವೂ ಖುಲಾಯಿಸಿತು. 6.5 ಲಕ್ಷ ಲೀಟರ್ ಸಾಮರ್ಥ್ಯದೊಂದಿಗೆ ಆರಂಭವಾದ ಸಂಸ್ಥೆ ಈಗ ಪ್ರತಿನಿತ್ಯ 75 ಲಕ್ಷ ಲೀಟರ್ ಗೂ ಹೆಚ್ಚು ಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿದೆ. ಹಾಲು ಮಾತ್ರವಲ್ಲದೆ, ಹಾಲಿನ ಉತ್ಪನ್ನಗಳೂ ಇವುಗಳಲ್ಲಿ ಸೇರಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಲಕ್ಷಾಂತರ ಹೈನುಗಾರರಿಗೆ ಜೀವನಾಡಿಯಾಗಿದೆ.
ಕೆಎಂಎಫ್ ಎಂದರೆ ರೇವಣ್ಣ
ಹೌದು, ಹಾಗೊಂದು ಕಾಲವಿತ್ತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರತಿನಿತ್ಯ ಕೇವಲ 6.5 ಲಕ್ಷ ಲೀಟರ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೆಎಂಎಫ್ ಪ್ರಸ್ತುತ 75 ಲಕ್ಷ ಲೀಟರ್ ಗೂ ಹೆಚ್ಚು ಹಾಲು ಸಂಗ್ರಹಿಸುವಷ್ಟರ ಮಟ್ಟಿಗೆ ಬೆಳೆದಿದ್ದು, ನಂದಿನಿ ಬ್ರಾಂಡ್ ಉತ್ಪನ್ನಗಳು ಜನಪ್ರಿಯತೆ ಗಳಿಸಲು ಕಾರಣವಾಗಿದ್ದೇ ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ. ದಶಕಕ್ಕೂ ಹೆಚ್ಚು ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದ ರೇವಣ್ಣ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಾ ಹೊಸ ಜಿಲ್ಲಾ ಹಾಲು ಒಕ್ಕೂಟಗಳನ್ನು ಆರಂಭಿಸುವ ಮೂಲಕ ಕೆಎಂಎಫ್ ಬೆಳೆಯಲು ಕಾರಣರಾದರು. ಜಿಲ್ಲಾ ಹಾಲು ಒಕ್ಕೂಟಗಳು ಯಾವ ಪಕ್ಷದವರ ಕೈಯ್ಯಲ್ಲೇ ಇರಲಿ, ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವೇ ಇರಲಿ, ಕೆಎಂಎಫ್ ಮಾತ್ರ ರೇವಣ್ಣ ಅವರ ಹಿಡಿತದಲ್ಲಿತ್ತು. 2004ರಿಂದ 2008ರ ಅವಧಿಗೆ ಮೈತ್ರಿ ಸರ್ಕಾರಗಳಲ್ಲಿ ಅವರು ಸಚಿವರಾಗಿದ್ದಾಗಲೂ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ವ್ಯವಸ್ಥಾಪಕ ನಿರ್ದೇಶಕರ ಆಯ್ಕೆಯಿಂದ ಹಿಡಿದು ಸಣ್ಣ ಸಣ್ಣ ನಿರ್ಧಾರಗಳು ಕೂಡ ರೇವಣ್ಣ ಅವರ ಆಣತಿಯಂತೆ ನಡೆಯುತ್ತಿತ್ತು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಗಿಂತ ಅನುಭವ ಮುಖ್ಯ ಎಂಬ ಕಾರಣಕ್ಕೆ ಐಎಎಸ್ ಏತರರನ್ನು ಆ ಹುದ್ದೆಗೆ ಕುಳ್ಳಿರಿಸಿದ್ದಲ್ಲದೆ, ಅವರ ಮೂಲಕವೇ ಸಾಧನೆ ಮಾಡಿ ತೋರಿಸಿದರು. ಹೀಗಾಗಿ ಕೆಎಂಎಫ್ ಎಂದರೆ ರೇವಣ್ಣ ಎಂಬ ಹೆಸರು ಬಂದಿತ್ತು.
ಆದರೆ, 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರೇವಣ್ಣ ಅವರ ಅಧ್ಯಕ್ಷ ಕುರ್ಚಿ ಅಲುಗಾಡತೊಡಗಿತು. 2009ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಾಲಿ ಸೋಮಶೇಖರ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಈ ಸ್ಥಾನವನ್ನು ರೇವಣ್ಣ ಅವರಿಂದ ಕಸಿದುಕೊಂಡರು. 2014ರಲ್ಲಿ ಮತ್ತೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಿತಾದರೂ ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದುದರಿಂದ ಮತ್ತು ಸೋಮಶೇಖರ ರೆಡ್ಡಿ ಅವಧಿಯಲ್ಲಿ ಜಿಲ್ಲಾ ಹಾಲು ಒಕ್ಕೂಟಗಳ ಹಿಡಿತ ರೇವಣ್ಣ ಅವರ ಕೈಯಿಂದ ಸಂಪೂರ್ಣ ಜಾರಿದ್ದರಿಂದ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ.

ಮತ್ತೆ ಅಧ್ಯಕ್ಷರಾಗುವ ರೇವಣ್ಣ ಕನಸು ಈಡೇರಲಿಲ್ಲ
2019ರ ಜುಲೈ ಅಂತ್ಯಕ್ಕೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಲು ರೇವಣ್ಣ ಎಲ್ಲಾ ಸಿದ್ಧತೆ ನಡೆಸಿದ್ದರು. ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದರು. ಕಾಂಗ್ರೆಸ್ ನ ಭೀಮಾ ನಾಯಕ್ ಅವರು ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಕೆಎಂಎಫ್ ನಿರ್ದೇಶಕರಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯಕ್ ಆಯ್ಕೆಯಾಗುವ ಸಾಧ್ಯತೆಗಳಿದ್ದವು. ಇದನ್ನು ಮನಗಂಡ ರೇವಣ್ಣ ಅವರು ಕಾಂಗ್ರೆಸ್ ನ ನಾಲ್ವರು ನಿರ್ದೇಶಕರನ್ನು ಹೈಜಾಕ್ ಮಾಡಿ ತಮ್ಮತ್ತ ಸೆಳೆದುಕೊಂಡಿದ್ದರು.
ಅಷ್ಟರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ರೇವಣ್ಣ ಅವರ ನಡೆಯಿಂದ ಅಸಮಾಧಾನಗೊಂಡಿದ್ದ ಹಾಲಿ ಅಧ್ಯಕ್ಷ ನಾಗರಾಜ್ ಅವರು ಚುನಾವಣೆಗೆ ಎರಡು ದಿನ ಇದೆ ಎನ್ನುವಾಗ ಅದನ್ನು ಮುಂದೂಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಚುನಾವಣೆ ಮುಂದೂಡಿ ಮುಖ್ಯಮಂತ್ರಿಗಳು ಆದೇಶಿಸಿದ್ದರು. ಒಂದು ವೇಳೆ ನಿಗದಿಯಂತೆ ಜುಲೈ 29ಕ್ಕೆ ಚುನಾವಣೆ ನಡೆದಿದ್ದರೆ ರೇವಣ್ಣ ಮತ್ತೆ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು.
ಈ ಮಧ್ಯೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧ್ಯಕ್ಷ ಅಕಾಂಕ್ಷಿಯಾಗಿದ್ದ ಭೀಮಾ ನಾಯಕ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಆದರೆ, ಬಾಲಚಂದ್ರ ಜಾರಕಿಹೊಳಿ ಅವರನ್ನು ಈ ಸ್ಥಾನದಲ್ಲಿ ಕುಳ್ಳಿರಿಸಲು ನಿರ್ಧರಿಸಿದ್ದ ಯಡಿಯೂರಪ್ಪ, ಭೀಮಾನಾಯಕ್ ಮನವೊಲಿಸಿ ಅವರು ಕಣದಿಂದ ಹಿಂದೆ ಸರಿಯುವಂತೆ ನೋಡಿಕೊಂಡಿದ್ದರು. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಮತ್ತು ರೇವಣ್ಣ ಮಧ್ಯೆ ನೇರ ಪೈಪೋಟಿ ಕಾಣಿಸಿಕೊಂಡಿತ್ತು. ನಿರ್ದೇಶಕರನ್ನು ತಮ್ಮತ್ತ ಸೆಳೆದುಕೊಳ್ಳಲು ರೇವಣ್ಣ ಅವರು ಅಂತಿಮ ಹಂತದವರೆಗೆ ಕಸರತ್ತು ಮಾಡಿದ್ದರು. ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್ ನಿರ್ದೇಶಕರು ತಿರುಗಿಬಿದ್ದ ಕಾರಣ ಅದು ವಿಫಲವಾಗಿ ನಾಮಪತ್ರ ಹಿಂಪಡೆದು ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟರು.