ಬೆಂಗಳೂರು ನಗರದ ರಾಸಾಯನಿಕಯುಕ್ತ ಕೊಳಚೆ ನೀರು ಸಂಸ್ಕರಿಸುವ ಘಟಕಗಳನ್ನು ಸ್ಥಾಪಿಸುವ ಯೋಜನೆಯಲ್ಲಿ ಬೃಹತ್ ಭ್ರಷ್ಟಾಚಾರದ ದುರ್ಗಂಧ ಹೊರಬಿದ್ದಿದೆ. ಇದರ ಆರಂಭ ಎನ್ನುವಂತೆ ಕೆಂಗೇರಿಯಲ್ಲಿ ನಿರ್ಮಾಣಗೊಂಡ 60 ದಶಲಕ್ಷ ಲೀಟರ್ (60 ಎಂಎಲ್‌ಡಿ) ಕೊಳಚೆ ನೀರು ಸಂಸ್ಕರಣೆ ಘಟಕ ಕಾಮಗಾರಿ ಒಂದರಲ್ಲೇ ಸುಮಾರು ರೂ 80 ಕೋಟಿಯಷ್ಟು ಅವ್ಯವಹಾರ ಬೆಳಕಿಗೆ ಬಂದಿದೆ.
ಕೆಂಗೇರಿ ಘಟಕದ ಅವ್ಯವಹಾರದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರವಾದ ನಗರಾಭಿವೃಧ್ದಿ ಇಲಾಖೆ, ಆರೋಪಿತ ಸಂಸ್ಥೆಯಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿಯಿಂದಲೇ (ಬಿಡಬ್ಲ್ಯೂಎಸ್‌ಎಸ್‌ಬಿ) ಪ್ರತಿಕ್ರಿಯೆ ಕೇಳಿದೆ.
ಯೋಜನೆ ಏನು? 60 ಎಂಎಲ್‌ಡಿ ಸಾಮರ್ಥ್ಯದ ಕೆಂಗೇರಿ ಎಸ್‌ಟಿಪಿ ಕಾಮಗಾರಿಯನ್ನು ಸುಯೆಝ್ (Suez India Pvt Ltc) ಕಂಪನಿಗೆ ರೂ 150 ಕೋಟಿಗಳಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಅನುಮತಿ ಸಿಕ್ಕ ಕೆಲವೇ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸ್ಕರಣೆಗೊಳ್ಳುವ ನೀರಿನ ಗುಣಮಟ್ಟವನ್ನು ಹೆಚ್ಚಿಸಿದ್ದರಿಂದ ಬಿಡಬ್ಲ್ಯೂಎಸ್‌ಎಸ್‌ಬಿ ಸುಯೆಝ್ ಕಂಪನಿಗೆ 60 ಎಂಎಲ್‌ಡಿ ಯಿಂದ 80 ಎಂಎಲ್‌ಡಿಗೆ ಹೆಚ್ಚಿಸುವ ಹೊಸ ವೇರಿಯೇಷನ್ ಪ್ರಸ್ತಾಪ ನೀಡಿತು. ಯೋಜನೆಗೆ ಜೈಕಾ (Japan International Co-operation Agency) ಸಂಸ್ಥೆಯಿಂದ ಸಾಲ ಸ್ವೀಕರಿಸಿದ್ದರಿಂದ ಅದರ ಅನುಮತಿಯನ್ನೂ ಪಡೆಯಲಾಯಿತು. ಆದರೆ, ಅಂದಿನ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಹಾಗೂ ಈಗಿನ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ನೇತೃತ್ವದ ವೇರಿಯೇಷನ್ ಕಮಿಟಿ, ಹೊಸ ವೇರಿಯೇಷನ್ ಪ್ರಸ್ತಾಪ ಪಾರದರ್ಶಕತೆ ನಿಯಮಕ್ಕೆ (KTPP Act) ವಿರುದ್ಧ ಎಂದು ನಿರ್ಣಯಿಸಿ ಪ್ರಸ್ತಾಪ ತಿರಸ್ಕರಿಸಿತು.
ಅಕ್ರಮದ ಆರಂಭ

2016ರ ನಂತರ ಇದೇ ಯೋಜನೆಯಲ್ಲಿ ಭಾರಿ ಅವ್ಯವಹಾರಗಳು ನಡೆದಿದೆ ಎಂದು ದೂರಲಾಗಿದೆ. ಸುಯೆಝ್ ಕಂಪನಿ ತನ್ನ ಗುತ್ತಿಗೆಯನ್ನು ಬೇರೆ ಕಂಪನಿಗಳಿಗೆ ಉಪ ಗುತ್ತಿಗೆ ನೀಡಿತು. ವಿಜಯ್ ಭಾಸ್ಕರ್ ವರ್ಗಾವಣೆಯ ನಂತರ ಬಿಡಬ್ಲ್ಯೂಎಸ್‌ಎಸ್‌ಬಿ ಮಂಡಳಿ ಹೊಸ ವೇರಿಯೇಷನ್ (20 ಎಂಎಲ್‌ಡಿ) ಹೆಚ್ಚುವರಿ ಕಾಮಗಾರಿಯನ್ನು ಅಂಗೀಕರಿಸಿತು. ಇದರಿಂದ ಹೆಚ್ಚುವರಿ ರೂ 30 ಕೋಟಿಯನ್ನು ಸಚಿವ ಸಂಪುಟದ ಅನುಮೋದನೆ ಪಡೆಯದೆ ಬಿಡುಗಡೆಗೊಳಿಲಾಯಿತು.
ಇದಲ್ಲದೆ, ಕಾಮಗಾರಿಯಲ್ಲಿ ಅನೇಕ ಕಳಪೆ ಗುಣಮಟ್ಟದ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ
- ಸ್ಲಡ್ಜ್ ಡೈಜೆಸ್ಟರ್ (sludge digester): ಒಪ್ಪಂದದ ಪ್ರಕಾರ ಸುಯೆಝ್ ಕಂಪನಿ ರೂ 6 ಕೋಟಿ ಮೌಲ್ಯದ ಸ್ಲಡ್ಜ್ ಡೈಜೆಸ್ಟರ್ ಅಳವಡಿಸಬೇಕಾಗಿತ್ತು. ಆದರೆ, ಕಂಪೆನಿಯು ಸುಮಾರು ರೂ 5-6 ಲಕ್ಷ ಮೌಲ್ಯದ ಉಪಕರಣವನ್ನು ಅಳವಡಿಸಿದೆ.
- ಏರ್ ಬ್ಲೋವರ್ಸ್ (Air Blowers): ಕರಾರಿನಂತೆ ಕಂಪೆನಿಯು ನಿರ್ದಿಷ್ಟವಾದ ಸಿಮೆನ್ಸ್ ಅಥವಾ ಆಡೆನ್ (Siemens/Awden) ಕಂಪೆನಿಯ ಏರ್ ಬ್ಲೋವರ್ಸ್ ಅಳವಡಿಸಬೇಕಾಗಿತ್ತು. ಆದರೆ, ಕಂಪೆನಿಯು ಬೇರೊಂದು ಕಂಪೆನಿಯ (Salzier) ಏರ್ ಬ್ಲೋವರ್ಸ್ ಅಳವಡಿಸಿದೆ. ಅಳವಡಿಸಿದ ಉಪಕರಣಕ್ಕೂ ಕರಾರಿನಲ್ಲಿ ಉಲ್ಲೇಖಿಸಿದ ಉಪಕರಣಕ್ಕೂ ರೂ 18 ಕೋಟಿಯ ವ್ಯತ್ಯಾಸವಿದೆ.
- ಇದೇ ಸುಯೆಝ್ ಕಂಪೆನಿಗೆ ವೃಷಭಾವತಿ ಕಣಿವೆಯ ಎಸ್‌ಟಿಪಿ ಕಾಮಗಾರಿಯನ್ನೂ ನೀಡಲಾಗಿತ್ತು. ಈ ಕಾಮಗಾರಿ ಸಂಬಂಧ ಟೆಂಡರ್ ನಿಯಮದಂತೆ ತೆರಿಗೆ ಮೊತ್ತ ಸೇರಿದಂತೆ ಉಪಕರಣಗಳನ್ನು ಒದಗಿಸಲು ಸೂಚಿಸಲಾಗಿತ್ತು. ಆದರೆ, ಈ ಕಾಮಗಾರಿಯಲ್ಲಿ ಕಂಪೆನಿಗೆ ರೂ 200 ಕೋಟಿ ಪಾವತಿಸುವಾಗ ತೆರಿಗೆ ಹಣವನ್ನೂ ಸೇರಿಸಿ ಬಿಡಬ್ಲ್ಯೂಎಸ್‌ಎಸ್‌ಬಿ ಪಾವತಿಸಿದೆ. ಈ ತೆರಿಗೆ ಹಣವೇ ರೂ 16 ಕೋಟಿಯಾಗಿದ್ದು, ಇದನ್ನು ಹಿಂಪಡೆಯಲು ಬಿಡಬ್ಲ್ಯೂಎಸ್‌ಎಸ್‌ಬಿ ಯಾವುದೇ ಪ್ರಯತ್ನ ಮಾಡಿಲ್ಲ.

ಮೂಲಗಳ ಪ್ರಕಾರ, ಭ್ರಷ್ಟಾಚಾರ ನಿಗ್ರಹ ದಳ ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಅನುಮತಿ ಕೋರಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.
ಆದರೆ, ಬಿಡಬ್ಲ್ಯೂಎಸ್‌ಎಸ್‌ಬಿ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಭ್ರಷ್ಟಾಚಾರ ನಿಗ್ರಹ ದಳದ ಪತ್ರದಲ್ಲಿ ನಾಲ್ಕು ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಲಾಗಿದೆ. ಈ ಅಧಿಕಾರಿಗಳು: ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮ್ ಭಾನ್, ಉಪಾಧ್ಯಕ್ಷ ರಾಜೇಶ್ ಆದ್ಯಮ್ ಹಾಗೂ ಕರ್ನಾಟಕ ಯೋಜನಾ ಮುಖ್ಯಸ್ಥ ರಾಮ ರಾವ್.
“ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸುವಲ್ಲಿಯೇ dದೇಶದ ಸರಾಸರಿಗಿಂತ ಶೇಕಡ 350 ಹೆಚ್ಚಿನ ದರ ನಿರ್ಣಯಿಸಲಾಗಿದೆ ಎಂಬ ಆರೋಪ ಇದೆ. ಇಲಾಖಾ ನಿಯಮಾವಳಿಗಳನ್ನು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಕೈಗೊಂಡ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಆರೋಪಿಸಿಲಾಗಿದೆ. ರೂ 10 ಕೋಟಿಗೂ ಹೆಚ್ಚಿನ ಅಂದಾಜು ಪಟ್ಟಿ ಇದ್ದಲ್ಲಿ ಮುಖ್ಯ ಇಂಜಿನಿಯರ್ ಅಧ್ಯಕ್ಷತೆಯ ಸಮಿತಿ ರಚಿಸಬೇಕಾಗುತ್ತದೆ. ಈ ಸಮಿತಿ ಇದುವರೆಗೂ ರಚನೆ ಆಗಿಲ್ಲ. ಬಿಡಬ್ಲ್ಯೂಎಸ್‌ಎಸ್‌ಬಿಯ ಆಂತರಿಕ ಲೆಕ್ಕಪತ್ರ ಶೋಧನೆ ಸಮಿತಿ ತೆರಿಗೆ ಹಣ ಅಕ್ರಮ ಪಾವತಿ ಸಂಬಂಧ ವರದಿ ಮಾಡಿತ್ತು. ಆದರೆ, ಈ ಹಣ ವಸೂಲಿ ಸಂಬಂಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ,’’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರ ಪ್ರಕಾರ, ಎಸಿಬಿ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ಈ ಸಂಬಂಧ ಮಾಹಿತಿ ಕೇಳಿದ್ದರು. ಆದರೆ, ಆರೋಪಗಳು ಏನು ಎಂದು ಕೇಳಿದಾಗ ಎಸಿಬಿ ಕಡೆಯಿಂದ ಯಾವುದೇ ಪತ್ರ ಬಂದಿಲ್ಲ ಎಂದರು. “ಇದಾದ ನಂತರ ನಮಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ತನಿಖೆ ನಡೆಸಲು ಅನುಮತಿ ಕೋರಿ ಎಸಿಬಿ ಬರೆದ ಪತ್ರ ತಲುಪಿದೆ. ನಾವು ಈಗಾಗಲೇ ಈ ಬಗ್ಗೆ ಆಂತರಿಕ ವಿಚಾರಣೆ ನಡೆಸುತ್ತಿದ್ದೇವೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಎಸಿಬಿ ತನಿಖೆ ಬೇಕೆ ಬೇಡವೇ ಅಥವಾ ಇಲಾಖಾ ವಿಚಾರಣೆಯಷ್ಟೇ ಸಾಕೇ ಎಂಬ ಬಗ್ಗೆ ಬಿಡಬ್ಲ್ಯೂಎಸ್‌ಎಸ್‌ಬಿ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ,’’ ಎಂದು ತುಷಾರ್ ಗಿರಿನಾಥ್ ಹೇಳಿದರು.

ನಗರಾಭಿವೃಧ್ದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಛೇರಿಯ ಪತ್ರದ (ದಿನಾಂಕ 18-03-2019) ಪ್ರಕಾರ ಭ್ರಷ್ಟಾಚಾರ ನಿಗ್ರಹ ದಳ ತನಿಖೆಗೆ ಅನುಮತಿ ಕೋರಿ 12-03-2019 ಕ್ಕೆ ಪತ್ರ ಬರೆದಿದೆ. ಸಿದ್ದರಾಮಯ್ಯ ಸರ್ಕಾರ 2016 ರಲ್ಲಿ ಎಸಿಬಿ ರಚನೆ ಮಾಡಿದಾಗ ಯಾವುದೇ ಸರ್ಕಾರಿ ಅಧಿಕಾರಿಯ ಅಧಿಕೃತ ಸರ್ಕಾರಿ ಕಾರ್ಯದ ವಿರುದ್ಧ ತನಿಖೆ (ಎಫ್‌ಐಆರ್ ದಾಖಲಿಸುವ ಮೊದಲು) ನಡೆಸುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ ಎಂಬ ಅಂಶವನ್ನು ಸೇರಿಸಿತ್ತು. 2018 ರಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ (Prevention of Corruption Act) ತಿದ್ದುಪಡಿ ತಂದಿದೆ. ಇದರ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಯ ಅಧಿಕೃತ ಸರ್ಕಾರಿ ನಿರ್ಧಾರದ ವಿರುದ್ಧ ತನಿಖೆ ನಡೆಸುವ ಮೊದಲು ಪೂರ್ವಾನುಮತಿ ಕಡ್ಡಾಯಗೊಳಿಲಾಗಿದೆ. ಇದರಿಂದಾಗಿ, ಬೇರೆ ಪ್ರಕರಣಗಳಲ್ಲಿ cognisance offence ಬಗ್ಗೆ ದೂರು ಸ್ವೀಕರಿಸಿದ ತಕ್ಷಣ ಎಫ್‌ಐಆರ್ ದಾಖಲಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಹಲವು ಬಾರಿ ಹೇಳಿಸಿಕೊಂಡಿರುವ ಪೊಲೀಸ್ ಇಲಾಖೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾತ್ರ ಆರೋಪಿತರ ಮೇಲಧಿಕಾರಿಗಳ ಮುಂದೆ ಅನುಮತಿ ಕೋರಿ ನಿಲ್ಲುವಂತಾಗಿದೆ.
ಮುಂದೇನು?
ನಗರದ ಇನ್ನಿತರ ಕಡೆ ಸಾವಿರಾರು ಕೋಟಿ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಿಸುವ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ಬಿಡಬ್ಲ್ಯೂಎಸ್‌ಎಸ್‌ಬಿ ಅನುಷ್ಠಾನಗೊಳಿಸುತ್ತಿದೆ. ಇವುಗಳಲ್ಲಿ ರೂ 700 ಕೋಟಿ ವೆಚ್ಚದಲ್ಲಿ ವೃಷಭಾವತಿ ಕಣಿವೆ (150 ಎಂಎಲ್‌ಡಿ), ರೂ 400 ಕೋಟಿ ವೆಚ್ಚದಲ್ಲಿ ಕೆ ಸಿ ಕಣಿವೆ ಹಾಗೂ ರೂ 500 ಕೋಟಿ ವೆಚ್ಚದಲ್ಲಿ ಹೆಬ್ಬಾಳ ಕಣಿವೆ ಯೋಜನೆಗಳು ಪ್ರಮುಖವಾದವು. ನೊರೆ ಹಾಗೂ ಬೆಂಕಿಯಿಂದಾಗಿ ಬೆಳ್ಳಂದೂರು ಕೆರೆ ದೇಶಾದ್ಯಂತ ಸುದ್ದಿ ಮಾಡಿತ್ತು.
ಬಿಡಬ್ಲ್ಯೂಎಸ್‌ಎಸ್‌ಬಿ ನಿವೃತ್ತ ಮುಖ್ಯ ಇಂಜಿನಿಯರ್ ಎಂ ಎನ್ ತಿಪ್ಪೇಸ್ವಾಮಿ ಪ್ರಕಾರ, “ಮಳೆನೀರು ಕಾಲುವೆ ಮತ್ತು ಕೊಳಚೆ ನೀರು ಕಾಲುವೆಗಳಿಗೆ ಪ್ರತ್ಯೇಕ ವ್ಯವಸ್ಥೆ ಸಮರ್ಪಕವಾಗದ ಹೊರತು ಕೊಳಚೆ ನೀರು ಸಂಸ್ಕರಿಸುವ ಘಟಕಗಳ ನಿರ್ಮಾಣಕ್ಕೆ ಸುರಿಯುವ ಹಣ ವ್ಯರ್ಥ. ಬೆಂಗಳೂರು ನಗರದ ಶೇಕಡ 40ರಷ್ಟು ಕೊಳಚೆ ನೀರು ಮಳೆ ನೀರು ಕಾಲುವೆಯಲ್ಲಿ ಹರಿಯುತ್ತಿದೆ. ಕಳೆದ ಎಷ್ಟೋ ವರ್ಷಗಳಿಂದ ನಾನಿದನ್ನೂ ಹೇಳುತ್ತಲೇ ಬಂದಿದ್ದೇನೆ. ಆದರೆ ಅರ್ಥ ಮಾಡಿಕೊಂಡ ಕಾರ್ಯ ಪ್ರವೃತ್ತರಾಗಬೇಕಾದವರು ಬೇರೆಯದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ನನ್ನ ಪ್ರಕಾರ ಮಳೆ ನೀರು ಕಾಲುವೆಗಳ ನಿರ್ವಹಣೆಯೂ ಬಿಡಬ್ಲ್ಯೂಎಸ್‌ಎಸ್‌ಬಿಗೇ ಕೊಡಬೇಕು. ಆಗ ಕೊಳಚೆ ನೀರು ಮತ್ತು ಮಳೆ ನೀರು ಕಾಲುವೆಗಳ ದುರಸ್ತಿ ಸಾಧ್ಯ. ನಂತರವಷ್ಟೇ ಈ ಸಾವಿರಾರು ಕೋಟಿ ವೆಚ್ಚದ ಎಸ್‌ಟಿಪಿಗಳಿಂದ ಉಪಯೋಗ ನಿರೀಕ್ಷಿಸಬಹುದು.”