ಕುಡಿಯುವ ನೀರಿನ ಅತೀವ ಕೊರತೆ ಪರಿಸ್ಥಿತಿಯಿಂದಾಗಿ ರಾಜ್ಯ ಸರ್ಕಾರ ಹಲವು ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ “ತುರ್ತು ಪರಿಸ್ಥಿತಿ’’ ಘೋಷಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ ಮೇ 8, 2019 ರಿಂದ ಜುಲೈ 31 ರ ಅವಧಿಯನ್ನು “ತುರ್ತು ಪರಿಸ್ಥಿತಿ’’ ಅವಧಿ ಎಂದು ಘೋಷಿಸಿದೆ.
“ಪ್ರಸ್ತುತ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿಯು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ತೀವ್ರವಾಗಿರುವುದರಿಂದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತುರ್ತಾಗಿ ಕೈಗೊಂಡು, ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿರುತ್ತದೆ.’’ ಎಂದು ಅಧಿಸೂಚನೆ ಹೇಳಿದೆ.
ಈ ಕಾರಣದಿಂದ, ಕಂದಾಯ ಇಲಾಖೆಯು “ಬರ ಪೀಡಿತ’’ ಪ್ರದೇಶ ಎಂದು ಘೋಷಿಸಿರುವ/ಇನ್ನು ಮುಂದೆ ಘೋಷಿಸಬಹುದಾದ ಜಿಲ್ಲೆ ಮತ್ತು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ 08-05-2019 ರಿಂದ 31-07-2019 ವರೆಗಿನ ಅವಧಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999 ಕಲಂ 4 (ಎ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ “ತುರ್ತು ಪರಿಸ್ಥಿತಿ ಅವಧಿ’’ ಎಂದು ಘೋಷಿಸಿದೆ.
ಏನಿದರ ಅರ್ಥ?
ಈ ಅಧಿಸೂಚನೆಯ ಪ್ರಕಾರ ರಾಜ್ಯ ಹಣಕಾಸು ಅನುದಾನದಡಿ ಯಾವುದೇ ಟೆಂಡರ್ ಕರೆಯದೇ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದು. ಅಂದರೆ, ಬರಪೀಡಿತ ಎಂದು ಘೋಷಿಸಿರುವ ಅಥವಾ ಘೋಷಿಸಬಹುದಾದ ನಗರ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಸಂಬಂಧಿತ ತುರ್ತು ಕಾಮಗಾರಿಗಳನ್ನು ಕೈಗೊಂಡು ಬರಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಿಂದ ವಿನಾಯಿತಿ ನೀಡಲಾಗಿದೆ.
ಕುಡಿಯುವ ನೀರಿನ ಬಗ್ಗೆ ಮೇ ತಿಂಗಳಲ್ಲಿ ಸುದೀರ್ಘ ಸಭೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 2,999 ಹಳ್ಳಿಗಳು ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ ಎಂದಿದ್ದರು. ಪರಿಸ್ಥಿತಿಯನ್ನು ಎದುರಿಸಲು 2,000 ಟ್ಯಾಂಕರ್ ಗಳು ಹಾಗೂ 1,800 ಖಾಸಗಿ ಬೋರ್ ವೆಲ್ ಗಳ ಮೂಲಕ ನೀರು ಪೂರೈಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದೂ ಸರ್ಕಾರ ಹೇಳಿತ್ತು.
ಆಗ 176 ತಾಲೂಕುಗಳ ಪೈಕಿ 156 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಇದರ ಜೊತೆಗೆ 3,122 ಪ್ರದೇಶಗಳನ್ನೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳೆಂದು ಘೋಷಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಹಿತಿ ಪ್ರಕಾರ ಅಂತರ್ಜಲ ತೀವ್ರವಾಗಿ ಕುಸಿದ ಪ್ರದೇಶಗಳು – ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಂಗಾರಪೇಟೆ ಹಾಗೂ ಕೋಲಾರ. ಮಳೆಯ ಪ್ರಮಾಣ ಕುಂಠಿತವಾಗಿಯೇ ಇದ್ದರೆ, ಬರಪೀಡಿತ ಹಳ್ಳಿಗಳ/ಪ್ರದೇಶಗಳ ಸಂಖ್ಯೆ ಹೆಚ್ಚಲಿದೆ. ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆಂದೇ ಸರ್ಕಾರ ಪ್ರತಿದಿನ ರೂ 4.87 ಲಕ್ಷ ವ್ಯಯಿಸುತ್ತಿದೆ. ಈ ವೆಚ್ಚ ಅಗಾಧ ಪ್ರಮಾಣದಲ್ಲಿ ಹೆಚ್ಚಲಿದೆ.