ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ 1885ರಲ್ಲಿ ಉದಯವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್ ಪಾರ್ಟಿ) ಪಕ್ಷವನ್ನು ಸ್ವಾತಂತ್ರ್ಯಾನಂತರ ವಿಸರ್ಜಿಸಬೇಕು ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಆದರೆ, ಸ್ವಾತಂತ್ರ್ಯಾನಂತರ ಜವಹರಲಾಲ್ ನೆಹರೂ ಮೂಲಕ ಅದೇ ಕಾಂಗ್ರೆಸ್ ದೇಶದಲ್ಲಿ ಆಳ್ವಿಕೆ ಮುಂದುವರಿಸಿತು. ನೆಹರೂ ನಂತರ ಅವರ ಪುತ್ರಿ ಇಂದಿರಾ ಗಾಂಧಿ, ಬಳಿಕ ಇಂದಿರಾ ಪುತ್ರ ರಾಜೀವ್ ಗಾಂಧಿ, ಇದಾದ ನಂತರ ರಾಜೀವ್ ಪತ್ನಿ ಸೋನಿಯಾ ಗಾಂಧಿ, ನಂತರದಲ್ಲಿ ಈಗ ರಾಜೀವ್ ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಮಧ್ಯೆ ನೀಲಂ ಸಂಜೀವ ರೆಡ್ಡಿ, ಕೆ.ಕಾಮರಾಜ್, ಶಂಕರ ದಯಾಳ್ ಶರ್ಮಾ, ಪಿ.ವಿ.ನರಸಿಂಹರಾವ್, ಸೀತಾರಾಮ್ ಕೇಸರಿ ಮುಂತಾದವರು ಬಂದರಾದರೂ ಅಷ್ಟೇ ವೇಗದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ಅವರ ಕೈತಪ್ಪಿ ಮತ್ತೆ ನೆಹರೂ ಕುಟುಂಬದ ಪಾಲಾಯಿತು.
ಕುಟುಂಬ ರಾಜಕಾರಣದ ಕೂಗು ಮತ್ತು ಅದಕ್ಕೆ ವಿರೋಧ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದ ವಂಶವಾಹಿ ರಾಜಕಾರಣದಿಂದಾಗಿ. ಇದು ಸಾಕಷ್ಟು ವಾದ- ವಿವಾದಗಳಿಗೂ ಕಾರಣವಾಯಿತು. ಈ ಕುಟುಂಬ ರಾಜಕಾರಣಕ್ಕೆ ಎಷ್ಟು ವಿರೋಧ ವ್ಯಕ್ತವಾಯಿತೋ, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅದು ಅನಿವಾರ್ಯವೂ ಆಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕುಟುಂಬ ರಾಜಕಾರಣವನ್ನು ಕಟುವಾಗಿ ವಿರೋಧಿಸಿದವರೂ ಕೂಡ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ತಮ್ಮ ಕುಟುಂಬ ಸದಸ್ಯರನ್ನೇ ಪಕ್ಷದ ಉಸ್ತುವಾರಿಯಾಗಿ ನೇಮಿಸುವಂತಾಯಿತು.
ಹೌದು, ದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊರತುಪಡಿಸಿ ಬಹುತೇಕ ರಾಜಕೀಯ ಪಕ್ಷಗಳು ಕುಟುಂಬ ಆಧರಿತ ಪಕ್ಷವೇ ಆಗಿದೆ. ಕಾಂಗ್ರೆಸ್ ಜತೆಗೆ ಅದರಿಂದ ಒಡೆದು ಹೋಳಾದ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ), ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳ (ಜೆಡಿಎಸ್) ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್ ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ ಪಿ), ಬಿಹಾರದ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ)…. ಹೀಗೆ ಕುಟುಂಬದ ಹಿಡಿತದಲ್ಲಿರುವ ರಾಜಕೀಯ ಪಕ್ಷಗಳ ಸಾಲು ಬೆಳೆಯುತ್ತಲೇ ಇದೆ. ಅಷ್ಟೇ ಅಲ್ಲ, ಕುಟುಂಬ ರಾಜಕಾರಣ ಇಲ್ಲದಿದ್ದರೆ ಆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದು ಈಗಾಗಲೇ ಅನೇಕ ರಾಜ್ಯಗಳಲ್ಲಿ ಸಾಬೀತಾಗಿದೆ.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದವರಲ್ಲಿ ಹೆಚ್ಚು ಕಾಲ ಉಳಿದವರು ನೆಹರೂ ಕುಟುಂಬದವರು ಮಾತ್ರ. ನೆಹರೂ ಕುಟುಂಬ ಹೊರತಾಗಿ ಇತರರು ಪಕ್ಷದ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ್ದು, ಒಡೆದು ಹೋಳಾಗಿದ್ದೇ ಹೆಚ್ಚು ಹೊರತು ಗಟ್ಟಿಯಾಗಲೇ ಇಲ್ಲ. ಹೀಗಾಗಿ ಪಕ್ಷ ಉಳಿಸಿಕೊಳ್ಳಲು ನೆಹರೂ ಕುಟುಂಬವೇ ಇರಬೇಕು ಎಂಬುದು ಸಾಬೀತಾಗಿ ಅದರಂತೆ ಮುಂದುವರಿಯುತ್ತಿದೆ. ಇದೀಗ ರಾಹುಲ್ ಗಾಂಧಿ ತನಗೆ ಪಕ್ಷದ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳುತ್ತಿದ್ದರೂ ಅವರನ್ನು ಹೊರತುಪಡಿಸಿ ಬೇರೆಯವರು ಈ ಸ್ಥಾನಕ್ಕೆ ಬರಲು ಒಪ್ಪುತ್ತಿಲ್ಲ. ಬಂದರೂ ಕೆಲ ದಿನ ಮಾತ್ರ ಎಂಬುದು ಆಕಾಂಕ್ಷಿಗಳಿಗೂ ಗೊತ್ತು. ಹೀಗಾಗಿ ರಾಹುಲ್ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಇಲ್ಲವೇ ಪ್ರಿಯಾಂಕ ನೇತೃತ್ವ ವಹಿಸಬೇಕು ಎನ್ನುತ್ತಿದ್ದಾರೆ. ಪಕ್ಷ ಳಿಸಿಕೊಳ್ಳಲು ಕುಟುಂಬ ರಾಜಕಾರಣಕ್ಕೇ ಬೆಂಬಲ ನೀಡುತ್ತಿದ್ದಾರೆ.

ಇತರೆ ರಾಜ್ಯಗಳಲ್ಲಿ
ಅದೇ ರೀತಿ ತಮಿಳುನಾಡಿನಲ್ಲಿ ಡಿಎಂಕೆ. ಕರುಣಾನಿಧಿ ಬಳಿಕ ಅವರ ಪುತ್ರ ಸ್ಟಾಲಿನ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಸಿಂಹಪಾಲು ಪಡೆಯುವ ಮೂಲಕ ಮತ್ತೆ ಮುನ್ನಲೆಗೆ ಬಂದಿದೆ. ಈ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಅವರು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದ್ದರು. ಅವರ ನಂತರದಲ್ಲಿ ಜಯಲಲಿತಾ ಅದರ ನೇತೃತ್ವ ವಹಿಸಿ ಅಧಿಕಾರಕ್ಕೂ ಬಂದರು. ಜಯಲಲಿತಾ ನಿಧನಾನಂತರ ಆ ಪಕ್ಷದ ಸ್ಥಿತಿ ಏನಾಗಿದೆ ಎಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಆಂಧ್ರ ಪ್ರದೇಶದಲ್ಲಿ ಪ್ರಸ್ತುತ ಅಧಿಕಾರಕ್ಕೇರಿರುವ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರರೆಡ್ಡಿ ಪುತ್ರ ಜಗನ್ಮೋಹನ ರೆಡ್ಡಿ ಸ್ಥಾಪಿಸಿದ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಜಗನ್ ನಂತರ ಪ್ರಬಲ ನಾಯಕನೇ ಕಾಣಿಸುತ್ತಿಲ್ಲ. ತೆಲುಗು ದೇಶಂ ಪರಿಸ್ಥಿತಿಯೂ ಇದೇ ಆಗಿದ್ದು, ಚಂದ್ರಬಾಬು ನಾಯ್ಡು ಬಳಿಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಇನ್ನು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಬಳಿಕ ಸಮಾಜವಾದಿ ಪಕ್ಷಕ್ಕೆ ಅವರ ಪುತ್ರ ಅಖಿಲೇಶ್ ಯಾದವ್ ನಾಯಕ, ಅದೇ ರೀತಿ ಕಾನ್ಷಿರಾಮ್ ಸ್ಥಾಪಿಸಿದ ಬಿಎಸ್ ಪಿಯಲ್ಲಿ ಮಾಯಾವತಿ ನಂತರ ಯಾರು ಪಕ್ಷ ಮುನ್ನಡೆಸುವವರು ಎಂಬುದು ಸ್ಪಷ್ಟವಿಲ್ಲ. ಅಷ್ಟೇ ಅಲ್ಲ, ಅದು ಮತ್ತೆ ತಲೆ ಎತ್ತುವುದೇ ಎಂಬ ಅನುಮಾನವಿದೆ. ಬಿಹಾರದಲ್ಲಿ ಆರ್ ಜೆಡಿ ಪಕ್ಷಕ್ಕೆ ಲಾಲು ಪ್ರಸಾದ್ ಯಾದವ್ ಬಳಿಕ ಅವರ ಪುತ್ರ ತೇಜಸ್ವಿ ಯಾದವ್ ಹೆಸರು ಕೇಳಿಬರುತ್ತಿದೆಯೇ ಹೊರತು ಬೇರೆ ಯಾರೂ ಕಾಣಿಸುತ್ತಿಲ್ಲ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಜಮ್ಮು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೂ ಕುಟುಂಬವನ್ನೇ ನೆಚ್ಚಿಕೊಂಡಿದೆ. ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಶೇಕ್ ಅಬ್ದುಲ್ಲಾ ಬಳಿಕ ಫಾರೂಕ್ ಅಬ್ದುಲ್ಲಾ ನೇತೃತ್ವ ವಹಿಸಿದ್ದರೆ, ನಂತರದಲ್ಲಿ ಅವರ ಪುತ್ರ ಓಮರ್ ಅಬ್ದುಲ್ಲಾ ನಾಯಕತ್ವ ವಹಿಸಿಕೊಂಡಿದ್ದಾರೆ. ಪಿಡಿಪಿಯಲ್ಲಿ ಸ್ಥಾಪಕ ಮುಫ್ತಿ ಮೊಹಮ್ಮದ್ ಸಯೀದ್ ಉತ್ತರಾಧಿಕಾರಿಯಾಗಿದ್ದು ಅವರ ಪುತ್ರಿ ಮೆಹಬೂಬಾ ಮುಫ್ತಿ. ಎರಡೂ ಪಕ್ಷಗಳಲ್ಲಿ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಬಳಿಕ ಯಾರು ಎಂಬುದಕ್ಕೆ ಉತ್ತರ ಅವರ ಮಕ್ಕಳೇ ಆಗಿದೆ. ಒಡಿಶಾದಲ್ಲಿ ಬಿಜು ಪಟ್ನಾಯಕ್ ಸ್ಥಾಪಿಸಿದ ಬಿಜು ಜನತಾದಳಕ್ಕೆ ಅವರ ಪುತ್ರ ನವೀನ್ ಪಟ್ನಾಯಕ್ ಉತ್ತರಾಧಿಕಾರಿಯಾಗಿದ್ದು, ಅವರನ್ನು ಹೊರತಾಗಿ ಮುಂಚೂಣಿ ನಾಯಕರಿಲ್ಲ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನೇತೃತ್ವದ ಲೋಕತಾಂತ್ರಿಕ್ ಜನತಾದಳಕ್ಕೆ ಅವರ ನಂತರ ಉತ್ತರಾಧಿಕಾರಿಗಳು ಯಾರು ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ ಎಂಬುದು ಕುಟುಂಬ ರಾಜಕಾರಣದ ಅನಿವಾರ್ಯತೆಯನ್ನು ಹೇಳುತ್ತದೆ.
ಇದು ಕೇವಲ ಒಂದೆರಡು ಪಕ್ಷಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿರುವ ಬಹುತೇಕ ಎಲ್ಲಾ ನಾಯಕರಿಗೂ ಪಕ್ಷ ಕಟ್ಟಿ ಬೆಳೆಸಲು ತಮ್ಮ ಉತ್ತರಾಧಿಕಾರಿಗಳಾಗಿ ಕುಟುಂಬ ಸದಸ್ಯರನ್ನೇ (ಬಹುತೇಕ ಮಕ್ಕಳು) ನೇಮಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಕುಟುಂಬ ರಾಜಕಾರಣ ಮಾಡದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವಂತಾಗಿದೆ.

ರಾಜ್ಯ ರಾಜಕಾರಣಿಗಳದ್ದೂ ಅದೇ ಪರಿಸ್ಥಿತಿ
ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಜನತಾ ಪಕ್ಷ ಒಡೆದು ಹೋಳಾಗಿ ಜನತಾ ಪರಿವಾರ ಸೃಷ್ಟಿಯಾಯಿತು. ಅಖಿಲ ಭಾರತೀಯ ಪ್ರಗತಿಪರ ಜನತಾ ದಳ, ಜನತಾ ದಳ, ಲೋಕಶಕ್ತಿ, ಜಾತ್ಯತೀತ ಜನತಾದಳ, ಸಂಯುಕ್ತ ಜನತಾದಳ ಎಂದು ತುಂಡು ತುಂಡಾಯಿತು. ಪ್ರಗತಿಪರ ಜನತಾ ದಳ ಕೆಲವೇ ದಿನಗಳಲ್ಲಿ ಮಾಯವಾದರೆ, ಲೋಕಶಕ್ತಿ ಕೂಡ ಬಂದಷ್ಟೇ ವೇಗವಾಗಿ ಮಾಯವಾಯಿತು. ಸಂಯುಕ್ತ ಜನತಾದಳ ಹೆಸರಿಗೆ ಮಾತ್ರ ಉಳಿದುಕೊಂಡಿದೆ. ಪ್ರಸ್ತುತ ಶಕ್ತಿ ಉಳಿಸಿಕೊಂಡಿರುವುದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿರುವ ಜೆಡಿಎಸ್ ಮಾತ್ರ. ಅದೂ ದೇವೇಗೌಡರ ನಂತರ ಅವರ ಮಕ್ಕಳು ಪಕ್ಷದ ಮುಂಚೂಣಿ ಸ್ಥಾನದಲ್ಲಿರುವುದರಿಂದ. ಈ ಪಕ್ಷದ ಭವಿಷ್ಯದ ನಾಯಕರಾರು ಎಂಬ ಪ್ರಶ್ನೆ ಎದುರಾದಾಗ ಕಣ್ಣ ಮುಂದೆ ಬರುವುದು ದೇವೇಗೌಡರ ಮಕ್ಕಳಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ.
ರಾಜಕೀಯ ಪಕ್ಷಗಳದ್ದು ಈ ಪರಿಸ್ಥಿತಿಯಾದರೆ ರಾಜ್ಯದ ಪ್ರಮುಖ ರಾಜಕಾರಣಿಗಳದ್ದೂ ಇದೇ ಕಥೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಬೀದರ್ ನಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಬಳಿಕ ಅವರ ಪುತ್ರರಾದ ಅಜಯ್ ಸಿಂಗ್ ಮತ್ತು ವಿಜಯ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಎಸ್. ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್… ಹೀಗೆ ಕುಟುಂಬ ರಾಜಕಾರಣದ ಪಟ್ಟಿ ಬೆಳೆಯುತ್ತಲೇ ಇದೆ. ವಿಶೇಷವೆಂದರೆ, ಈ ನಾಯಕರಿಗೆ ತಮ್ಮ ರಾಜ್ಯ ಅಥವಾ ಕ್ಷೇತ್ರದಲ್ಲಿ ಪಕ್ಷ ಉಳಿಸಿಕೊಳ್ಳಲು ಮತ್ತು ಬೆಳೆಸಲು ಈ ರೀತಿ ಕುಟುಂಬ ರಾಜಕಾರಣ ಅನಿವಾರ್ಯವಾಗಿರುವುದು. ಅದರಲ್ಲಿಯೂ, ಮಕ್ಕಳ ಪೈಕಿ ಬಹುತೇಕರು ತಮ್ಮ ತಂದೆಯ ಹೆಸರಿನಿಂದಲೇ ಮುನ್ನಲೆಗೆ ಬಂದವರು.