ಆರ್ಡರ್ ತೆಗೆದುಕೊಂಡಿದ್ದ ಇನ್ನೂರು ಗಣಪತಿಗಳೂ ಸಿದ್ಧವಾಗಿದ್ವು, ನೂರಕ್ಕೂ ಅಧಿಕ ಮೂರ್ತಿಗಳು ಮಾರುಕಟ್ಟೆಗೆ ಹೊಗಬೇಕಿತ್ತು, ಮುದ್ದೆಯಾಗಿಬಿಟ್ಟವಲ್ಲ ಸಾರ್ ಎಂದು ಕುಂಬಾರಬೀದಿಯ ಮೊಗಸಾಲೆಯಲ್ಲಿ ಥಂಡಿಯಾದ ಮನೆಯಲ್ಲಿ ಕೂತು ಗಣೇಶ್ ರೋಧಿಸುತ್ತಿದ್ದರು. ಶಿವಮೊಗ್ಗದ ತುಂಗಾನದಿ ಸೃಷ್ಟಿಸಿದ ಪ್ರವಾಹ ಕುಂಬಾರ ಬೀದಿಯ ನಾಲ್ಕು ಕುಟುಂಬದವರನ್ನು ಕೂಡ ಬೀದಿಗೆ ತಂದಿದೆ.
ತುಂಗಾ ತೀರದಲ್ಲಿರುವ ಕುಂಬಾರಬೀದಿ ಮೊನ್ನೆ ಸುರಿದ ಮಳೆ ಹಾಗೂ ತುಂಗಾ ಜಲಾಶಯದ ಹೊರಹರಿವಿನಿಂದ ಜಲಾವೃತವಾಗಿತ್ತು. ಎರಡು ತಲೆಮಾರಿನಿಂದ ಶಿವಮೊಗ್ಗವೂ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಗೂ ಗಣೇಶನ ಮೂರ್ತಿ ಕಳಿಸುತ್ತಿದ್ದ ಕುಟುಂಬಗಳೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿವೆ. ಎರಡು ತಲೆಮಾರಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದ ಮಧ್ಯವಯಸ್ಸಿನ ಗಣೇಶ್ ಕೈ ಕೆಸರು ಮಾಡಿಕೊಂಡು ಮುದ್ದೆಯಾಗಿದ್ದ ಗಣೇಶನ ಮೂರ್ತಿಯ ಡೋಲಾಕಾರದ ಹೊಟ್ಟೆಗೆ ಮರುರೂಪ ನೀಡುತ್ತಿದ್ದರು. ಈ ಗಣೇಶನೇ ಇವರಿಗೆ ಈ ವರ್ಷದ ಆದಾಯ. ಆದರೆ, ಅದರಿಂದ ಎಷ್ಟು ಬರುತ್ತೆ ಎಂದು ಇವರಿಗೆ ಗೊತ್ತಿಲ್ಲ. ಗಣೇಶನ ಆರ್ಡರ್ ಪಡೆದ ಹಿಂದೂ ಮಹಾಸಭಾ ಕಾರ್ಯಕರ್ತರು ಎಷ್ಟು ನೀಡುತ್ತಾರೋ ಗೊತ್ತಿಲ್ಲ.
ತಮ್ಮ ವರ್ಷದ ಆದಾಯ ಮಣ್ಣಾದ ಬಗ್ಗೆ ಗಣೇಶ್ ಮನಕಲುಕುವಂತೆ ಹೇಳುತ್ತಾರೆ. ಸುಮಾರು ಮುನ್ನೂರು ಗಣೇಶನ ಮೂರ್ತಿಗಳಿಗೆ ಅಂತಿಮ ಹಂತದ ಕೆಲಸ ಬಾಕಿ ಇತ್ತು. ಪೇಂಟ್ ಬಳಿದೊಡನೆ ಅವುಗಳನ್ನೆಲ್ಲಾ ಭಕ್ತರಿಗೆ ಹಾಗೂ ಅಂಗಡಿಯವರಿಗೆ ರವಾನಿಸುವುದಿತ್ತು. ಆದರೆ, ಅವೆಲ್ಲಾ ನಿರ್ಜೀವವಾಗಿವೆ. ಗಣೇಶನ ತಯಾರಿಕೆಯಲ್ಲಿ ಬಳಸುವ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ತರಿಸಿಕೊಳ್ಳಲಾಗುತ್ತದೆ. ಹಾಗೆ ತರಿಸಿಕೊಂಡ ಮಣ್ಣಿಗೆ ತೊಂಬತ್ತು ಸಾವಿರ ತಗುಲಿತ್ತು. ಆದರೆ, ಆ ಹಣವೂ ಬಾರದಂತಾಯ್ತು, ಹಾಳಾದ ಮೂರ್ತಿಗಳನ್ನ ಸಾಗಿಸಿ ಮುಳುಗಿಸುವ ಬಾಡಿಗೆ ಹೊರೆಯೂ ತಲೆಮೇಲೆ ಬಂತು ಎನ್ನುತ್ತಾರೆ.

ಇವರ ಜೀವನವೇ ರೋಚಕ, ಬಿಬಿ ಸ್ಟ್ರೀಟ್ ಬದಿಯ ಕುಂಬಾರ ಬೀದಿ ಇವರ ಕಾಯಕಕ್ಕೇ ಇಟ್ಟ ಹೆಸರು. ವರ್ಷವಿಡೀ ಗಣೇಶನ ಮೂರ್ತಿ ತಯಾರು ಮಾಡುವುದೇ ಇವರ ಕೆಲಸ. ನಾಲ್ಕು ತಿಂಗಳ ಮೊದಲೇ ಕೆಲಸ ಆರಂಭಿಸುತ್ತಾರೆ. ಪ್ರತಿದಿನ ಗಣೇಶನ ಮೂರ್ತಿಗಳು ಸಿದ್ಧವಾಗುತ್ತಾ ಶೆಡ್ ಸೇರುತ್ತವೆ. ಅದರಲ್ಲೂ ಗಣೇಶ್ ಕುಟುಂಬ ಹಿಂದೂ ಮಹಾಸಭಾ ಗಣಪತಿಯ ಮೂರ್ತಿಯನ್ನ ವಿಶೇಷವಾಗಿ ಮಣ್ಣೆತ್ತಿನ ಹುಣ್ಣಿಮೆಯ ದಿನದಂದು ಪೂಜೆಯೊಂದಿಗೆ ಸಿದ್ಧಪಡಿಸಲು ಅಣಿಯಾಗುತ್ತಾರೆ. ಇದರ ಉಸ್ತುವಾರಿಯನ್ನು ತಲತಲಾಂತರದಿಂದಲೂ ಹೊತ್ತುಕೊಂಡಿರುವ ಇವರು ಮೂರ್ತಿಗೆ ಹಣ ಕೇಳುವುದಿಲ್ಲ. ಆದರೆ, ಹಿಂದೂ ಮಹಾಸಭಾದವರು ಉತ್ತಮ ಕಾಣಿಕೆಯನ್ನೇ ನೀಡುತ್ತಾರೆ. ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಉತ್ಸವ ಎಂದರೆ ಬೆಂಗಳೂರಿನಲ್ಲಿ ಕೂತ ಗೃಹಸಚಿವರಿಗೂ ನಡುಕ. ಅಲ್ಲದೇ, ಗಣೇಶ್ ಮಾಡುವ ಮೂರ್ತಿಗಳಿಗೆ ಚಿಕ್ಕಮಗಳೂರಿನಲ್ಲೂ ಬೇಡಿಕೆ ಇತ್ತು.
ಹದಿನೈದು ದಿನಗಳಲ್ಲಿ ಹಬ್ಬ ಬಂದೇ ಬಿಡ್ತು, ಅಷ್ಟು ಬೇಗನೆ ಗಣೇಶನ ಮೂರ್ತಿಗಳನ್ನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಸಿಗಬಹುದಾ ಎಂಬುದೂ ಗೊತ್ತಿಲ್ಲ. ಈ ನಷ್ಟವನ್ನು ಹೇಗೆ ಪರಿಗಣಿಸುತ್ತಾರೆ. ಶಾಸಕ ಕೆ ಎಸ್ ಈಶ್ವರಪ್ಪನವರು ಬಂದಿದ್ದರು, ಭರವಸೆ ನೀಡಿದ್ರು. ಆದರೆ ನಮಗೆ ಪರಿಹಾರ ಸಿಗತ್ತಾ ಎಂಬುದು ಗೊತ್ತಿಲ್ಲ. ವರ್ಷವಿಡೀ ನಮ್ಮ ಜೀವನ ಗಣೇಶನ ಮೂರ್ತಿಗೆ ಮೀಸಲು. ಮೊದಲೆಲ್ಲಾ ಮಡಕೆಗಳನ್ನು ಮಾಡಿ ಜೀವನ ಸರಿದೂಗಿಸುತ್ತಿದ್ದೆವು. ಆದರೀಗ ಮಡಕೆಗಳನ್ನು ಕೇಳುವವರೇ ಇಲ್ಲ. ಕುಂಬಾರಿಕೆಯಲ್ಲಿ ಹೊಸತನವನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ೨೦೦ ಮೂರ್ತಿಗಳನ್ನು ಮಾಡಿ ಎರಡು ಲಕ್ಷ ಹೊರೆ ಹೊತ್ತುಕೊಂಡೆ, ಎನ್ನುತ್ತಾ ಭಿನ್ನಗೊಂಡ ಮೂರ್ತಿಗಳನ್ನೆಲ್ಲಾ ಆಟೋದಲ್ಲಿ ಸಾಗಿಸಿದರು ಗಣೇಶ್.