ಲೋಕಸಭೆ ಚುನಾವಣೆಯ ಗಲಾಟೆಯಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಜಿಲ್ಲಾ ರಾಜಕೀಯದ ಮೇಲೆ ಪರಿಣಾಮ ಬೀರುವ ಸೂಚನೆಗಳಿವೆ!
ಬೆಳಗಾವಿ ಜಿಲ್ಲೆಯ ರಾಜಕೀಯದ ಮೇಲೆ ಪರಿಣಾಮ ಬೀರುವ ಎರಡು ಮಹತ್ವದ ಸಹಕಾರಿ ಸಂಸ್ಥೆಗಳೆಂದರೆ ಡಿಸಿಸಿ ಬ್ಯಾಂಕು ಮತ್ತು ಹಾಲು ಒಕ್ಕೂಟ (ಕೆಎಂಎಫ್). ಇವೆರಡೂ ಸಂಸ್ಥೆಗಳು ಜಿಲ್ಲೆಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತವೆ. ಜಿಲ್ಲೆಯ ಅನೇಕ ರಾಜಕಾರಣಿಗಳು ಇವೇ ಸಂಸ್ಥೆಗಳಿಗೆ ಪ್ರವೇಶ ಪಡೆದ ನಂತರವೇ ರಾಜಕೀಯ ರಂಗಕ್ಕೆ ಧುಮುಕಿದೆ ಉದಾಹರಣೆಗಳಿವೆ.
ಸದ್ಯ ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರು, ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ, ಏಪ್ರಿಲ್ 21ರಂದು ನಡೆದ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಪುತ್ರ ಅಮರನನ್ನು ಗೋಕಾಕದಿಂದ ಅವಿರೋಧವಾಗಿ ಆರಿಸಿಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು 14 ನಿರ್ದೇಶಕರ ಸ್ಥಾನಗಳ ಪೈಕಿ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂ ಏಳು ಸ್ಥಾನಗಳಿಗೆ ಇದೇ ರವಿವಾರ ಏಪ್ರಿಲ್ 28ರಂದು ಚುನಾವಣೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಗೊಂಡವರೆಂದರೆ ವಿವೇಕ ಪಾಟೀಲ (ರಾಯಬಾಗ), ಅಮರ ರಮೇಶ ಜಾರಕಿಹೊಳಿ (ಗೋಕಾಕ), ಮಲ್ಲಪ್ಪ ಪಾಟೀಲ (ಮೂಡಲಗಿ), ಸೋಮಲಿಂಗಪ್ಪ ಮುಗಳಿ (ಸವದತ್ತಿ), ಬಾಬೂರಾವ ವಾಗ್ಮೋಡಿ (ಕಾಗವಾಡ), ರಾಯಪ್ಪ ಡೋಂಗ (ಹುಕ್ಕೇರಿ), ಖಾನಪ್ಪಗೋಳ (ನಾಗನೂರ). ಇನ್ನು ಖಾನಾಪುರ, ರಾಮದುರ್ಗ, ಕಿತ್ತೂರು, ಬೈಲಹೊಂಗಲ, ಅಥಣಿ, ಚಿಕ್ಕೋಡಿ ಹಾಗೂ ಬೆಳಗಾವಿ ನಿರ್ದೇಶಕರ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.
ಸರಕಾರದಿಂದ ಒಬ್ಬರು ನಾಮನಿರ್ದೇಶನಗೊಳ್ಳಲಿದ್ದಾರೆ. ಸಹಕಾರ ಇಲಾಖೆಯ ಉಪನಿಬಂಧಕರು, ರಾಜ್ಯ ಕೆಎಂಎಫ್‌ನಿಂದ ಒಬ್ಬರು ನಿರ್ದೇಶಕರು, ಪಶುಸಂಗೋಪನಾ ಇಲಾಖೆಯ ನಿರ್ದೇಶಕರು ಹಾಗೂ ಎನ್‌ಡಿಡಿಬಿಯಿಂದ ಒಬ್ಬರು ಅಧ್ಯಕ್ಷ ಸ್ಥಾನದ ಚುನಾವಣೆಯ ಕಾಲಕ್ಕೆ ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟು 19 ಮತಗಳು.
ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಹಿಡಿತದಲ್ಲಿರುವ ಕೆಎಂಎಫ್‌ಗೆ ಸದ್ಯ ವಿವೇಕ ರಾವ್ ಪಾಟೀಲ ಅಧ್ಯಕ್ಷರಾಗಿದ್ದಾರೆ. ರಮೇಶ ಜಾರಕಿಹೊಳಿ ಅವರ ಪುತ್ರನ ಪ್ರವೇಶದಿಂದಾಗಿ ಕೆಎಂಎಫ್ ರಾಜಕೀಯದಲ್ಲಿ ಹೊಸ-ಹೊಸ ಬೆಳವಣಿಗೆಗಳು ನಡೆಯುವ ಎಲ್ಲ ಸಾಧ್ಯತೆಗಳಿವೆ. ಅಮರನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಲು, ಅಮರನ ಚಿಕ್ಕಪ್ಪ ಬಾಲಚಂದ್ರ ಪ್ರಯತ್ನಿಸುವುದು ಸಹಜವಾಗಿದೆ. ರಾಜಕೀಯ ಸಂಘರ್ಷದಲ್ಲಿ ಮುಳುಗಿರುವ ಚಿಕ್ಕಪ್ಪಂದಿರು ಅಮರನ ವಿಷಯದಲ್ಲಿ ಒಂದಾದರೂ ಅಚ್ಚರಿ ಇಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು