ವಿಶೇಷ ಸ್ಥಾನ ಮಾನ: ಭಾರತದ ತ್ರಿವರ್ಣ ಧ್ವಜದ ಜೊತೆ ಜೊತೆಗೆ ಜಮ್ಮು-ಕಾಶ್ಮೀರದ ಧ್ವಜವೂ ಹಾರಲಿದೆ. ಆಂತರಿಕ ಗಲಭೆಗಳೇನಾದರೂ ಜರುಗಿದರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ರಕ್ಷಣಾ ಪಡೆಗಳನ್ನು ಕಳಿಸಕೂಡದು. ಜಮ್ಮು-ಕಾಶ್ಮೀರಕ್ಕೆ ಸೇರಿಲ್ಲದ ಹೊರಗಿನವರಿಗೆ ಅಲ್ಲಿ ಜಮೀನು ಅಥವಾ ಆಸ್ತಿಪಾಸ್ತಿ ಖರೀದಿಸುವ ಹಕ್ಕು ಇರುವುದಿಲ್ಲ. (ರಾಜ್ಯದ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯ ಸ್ವರೂಪವನ್ನು ಬದಲಾಯಿಸುವ ಪ್ರಯತ್ನವನ್ನು ತಡೆಯುವುದು ಈ ಆಸ್ತಿಪಾಸ್ತಿ ಖರೀದಿ ನಿಷೇಧದ ಉದ್ದೇಶ).
ಸ್ವತಂತ್ರ ಭಾರತದ ಸರ್ಕಾರಗಳು ಒಂದರ ನಂತರ ಮತ್ತೊಂದು ಕಾಶ್ಮೀರ ವಿವಾದಕ್ಕೆ ಪರಿಹಾರ ಹುಡುಕುವ ಗಂಭೀರ ಪ್ರಯತ್ನ ನಡೆಸಿಲ್ಲ. ಅಂತಹ ಪ್ರಯತ್ನಗಳಿಗೆ ಪಾಕಿಸ್ತಾನ ಮನಸಾರೆ ಸಹಕಾರ ನೀಡಿಯೂ ಇಲ್ಲ. ದ್ವಿಪಕ್ಷೀಯ ಆವರಣಕ್ಕೆ ಸೀಮಿತ ಆಗಿದ್ದ ಈ ವಿವಾದವನ್ನು ವಿಶ್ವಸಂಸ್ಥೆಯ ವೇದಿಕೆಗೆ ಒಯ್ದ ಅಂದಿನ ಪ್ರಧಾನಿ ನೆಹರೂ ನಡೆಯಲ್ಲಿ ಸಮಸ್ಯೆಯ ಬೇರನ್ನು ಹುಡುಕುವುವವರಿದ್ದಾರೆ. ಆದರೆ ಅದು ವಿವಾದಿತ ವಾದ. ಅಂದಿನಿಂದ ಇಂದಿನ ತನಕ ಕಾಶ್ಮೀರವು ಉಭಯ ದೇಶಗಳ ನಡುವಣ ಚದುರಂಗ ಪಂದ್ಯ ಭೂಮಿ ಆಗಿ ಪರಿಣಮಿಸಿದೆ. ಯಥಾಸ್ಥಿತಿಯನ್ನು ಬದಲಿಸುವ ಇಚ್ಛಾಶಕ್ತಿ ತೋರಿದವರು ವಿರಳ. ಇಂದಿರಾಗಾಂಧಿ ಸರ್ಕಾರ ಬಾಂಗ್ಲಾ ಪರ ನಡೆಸಿದ 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಹಣಿದಿತ್ತು. ಆದರೆ ಪಾಕಿಸ್ತಾನವನ್ನು ಒಡೆದ ಆರೋಪವನ್ನು ಭಾರತ ಹೊರಬೇಕಾಯಿತು. ವಿಶೇಷವಾಗಿ ಪಾಕ್ ಸೇನೆ- ಜಿಹಾದಿಗಳ ಪ್ರತೀಕಾರ ತಹತಹ ಇಮ್ಮಡಿಸಿತು. ಭಾರತವನ್ನು ಸಾವಿರ ಗಾಯಗಳ ರಕ್ತಸ್ರಾವಗಳಿಗೆ ಗುರಿ ಮಾಡುವ ಪಣ ತೊಡಲಾಯಿತು. ಕಾಶ್ಮೀರ ಮತ್ತು ಪಂಜಾಬ್ ರಣಾಂಗಣ ಆದವು. 1980ರ ದಶಕದಲ್ಲಿ ಸಿಡಿದ ಈ ಸೇಡಿನ ಕಿಡಿಗಳು 1990ರ ಹೊತ್ತಿಗೆ ಭೀಕರ ಕೆನ್ನಾಲಿಗೆಗಳಾಗಿ ಕಣಿವೆಯನ್ನು ಆವರಿಸಿದ್ದವು. ಕಾಶ್ಮೀರಿ ಬ್ರಾಹ್ಮಣರು ತಮ್ಮ ನೆಲದಲ್ಲೇ ನಿರಾಶ್ರಿತರಾದರು.
ವಿದೇಶಗಳಲ್ಲಿ ಬೇಹುಗಾರಿಕೆ ನಡೆಸುವ ಭಾರತದ ‘RAW’ ಸಂಸ್ಥೆಯ ಮಾಜಿ ಮುಖ್ಯಸ್ಥ ಅಮರಜಿತ್ ಸಿಂಗ್ ದುಲಾತ್ ಅವರು ಕಾಶ್ಮೀರ ಸಮಸ್ಯೆಯನ್ನು ಆಳ ಕಣಿವೆಯ ಇಳಿಜಾರಿನಲ್ಲಿ ಉರುಳುತ್ತಿರುವ ಬಸ್ಸಿಗೆ ಹೋಲಿಸಿದ್ದಾರೆ. ಹಿಂಸೆ ಮತ್ತು ಅರಾಜಕತೆಯತ್ತ ಧಾವಿಸುತ್ತಿರುವ ಈ ಬಸ್ಸಿನ ಬ್ರೇಕುಗಳು ಕೆಲಸ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಬಸ್ಸಿನ ಸ್ಟೀಯರಿಂಗ್ ವೀಲ್ ಕೂಡ ಕಳೆದು ಹೋಗಿದೆ ಎನ್ನುತ್ತಾರೆ.
ಪ್ರತ್ಯೇಕತಾವಾದಿಗಳ ಪ್ರಕಾರ ಜಮ್ಮು-ಕಾಶ್ಮೀರದ ಜನರ ಸ್ವಯಂ ನಿರ್ಧಾರದ ಹಕ್ಕು ಪ್ರಶ್ನಾತೀತ. ಆ ಕುರಿತು ಯಾವುದೇ ಚೌಕಾಶಿ ಸಾಧ್ಯವಿಲ್ಲ. ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ಗೊತ್ತುವಳಿಗಳು ಸದಾ ಪ್ರಸ್ತುತ. ಜಮ್ಮು-ಕಾಶ್ಮೀರದಲ್ಲಿ ಅನುಗಾಲದ ಶಾಂತಿ ನೆಲೆಸಬೇಕಿದ್ದರೆ ಅವುಗಳನ್ನು ಜಾರಿಗೊಳಿಸುವುದು ಅತ್ಯಗತ್ಯ. ಇಲ್ಲವೇ ಭಾರತ-ಪಾಕಿಸ್ತಾನ ಹಾಗೂ ಕಾಶ್ಮೀರಿ ನಾಯಕತ್ವವನ್ನು ಒಳಗೊಂಡ ತ್ರಿಪಕ್ಷೀಯ ಮಾತುಕತೆ ಸಭೆಗಳನ್ನು ಜರುಗಿಸಬೇಕು ಎಂಬುದು ಪ್ರತ್ಯೇಕತಾವಾದಿಗಳ ಹಠ.
ಇಡೀ ದಕ್ಷಿಣ ಏಷ್ಯಾದ ಉದ್ದಗಲಕ್ಕೆ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವುದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕಟ್ಟರ್ ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ಅಂತಿಮ ಗುರಿ. ಈ ಗುರಿ ಈಡೇರಿಕೆ ಕಾಶ್ಮೀರದ ವಿಮೋಚನೆಯಿಂದಲೇ ಆರಂಭ ಆಗಬೇಕು ಎನ್ನುವುದು ಅವರ ಹಂಚಿಕೆ.
ಬೌದ್ಧ ಮತಾವಲಂಬಿಗಳೇ ಬಹುಸಂಖ್ಯೆಯಲ್ಲಿರುವ ಲದ್ದಾಖ್ ನ ಜನ ಕಾಶ್ಮೀರಿ ಆಡಳಿತ ಕುರಿತು ತೀವ್ರ ಅಸಮಾಧಾನ ಹೊಂದಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಕಾಶ್ಮೀರದ ಮುಸಲ್ಮಾನ ಪುರುಷರು ಅಪಹರಿಸಿ ಮತಾಂತರಿಸುತ್ತಾರೆ ಎಂಬುದು ಲದ್ದಾಖಿನ ಬೌದ್ಧರ ಬಹುಕಾಲದ ಆತಂಕ. ಲದ್ದಾಖನ್ನು ಶ್ರೀನಗರದ ಹಿಡಿತದಿಂದ ಪಾರು ಮಾಡುವ ಬಿಜೆಪಿಯ ಆಶ್ವಾಸನೆಯನ್ನು ಮೋದಿ ಸರ್ಕಾರ ಇದೀಗ ಈಡೇರಿಸಿದೆ.
ಜಮ್ಮು ಕಾಶ್ಮೀರದ ಮೂರು ಮುಖ್ಯ ಭೌಗೋಳಿಕ ಸೀಮೆಗಳು ಜಮ್ಮು, ಕಾಶ್ಮೀರ ಹಾಗೂ ಲದ್ದಾಖ್. ರಾಜ್ಯದ ಭೌಗೋಳಿಕ ವಿಸ್ತೀರ್ಣದ ಶೇ. 15.73ರಷ್ಟು ಕಾಶ್ಮೀರದ್ದಾದರೆ, ಅನುಕ್ರಮವಾಗಿ ಶೇ. 25.93 ಮತ್ತು ಶೇ. 58.33 ಜಮ್ಮು ಮತ್ತು ಲದ್ದಾಖಿನದು.
ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ನಂತರ ಭಾರತದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯ ರಾಜ್ಯ ಜಮ್ಮು-ಕಾಶ್ಮೀರ. 2011ರ ಜನಗಣತಿಯ ಪ್ರಕಾರ ಈ ರಾಜ್ಯದ ಶೇ. 68.3ರಷ್ಟು ಜನ ಮುಸ್ಲಿಂ ಧರ್ಮಾನುಯಾಯಿಗಳು. ಕಾಶ್ಮೀರ ಕಣಿವೆಯಲ್ಲಿ ಶೇ. 96.4ರಷ್ಟು ಮುಸಲ್ಮಾನರು, ಶೇ. 2.45ರಷ್ಟು ಹಿಂದುಗಳು, ಶೇ. 0.98ರಷ್ಟು ಸಿಖ್ಖರು ಇದ್ದಾರೆ. ಜಮ್ಮುವಿನಲ್ಲಿ ಹಿಂದೂಗಳು ಬಹುಸಂಖ್ಯಾತರು. ಇಲ್ಲಿ ಶೇ. 62.55ರಷ್ಟು ಹಿಂದೂಗಳಿದ್ದರೆ, ಶೇ. 33.45ರಷ್ಟು ಮುಸಲ್ಮಾನರಿದ್ದಾರೆ. ಸಿಖ್ಖರ ಪ್ರಮಾಣ ಶೇ. 3.3ರಷ್ಟು. ಲದ್ದಾಖಿನ ಲೆಹ್ ಸೀಮೆಯಲ್ಲಿ ಬೌದ್ಧರದೂ, ಕಾರ್ಗಿಲ್ ನಲ್ಲಿ ಮುಸಲ್ಮಾನರದೂ ಪ್ರಾಬಲ್ಯ. ಇಲ್ಲಿ ಮುಸಲ್ಮಾನರ ಪ್ರಮಾಣ ಶೇ. 46.4 ಮತ್ತು ಬೌದ್ಧರದು ಶೇ.39.7. ಹಿಂದೂಗಳು ಶೇ. 12.1ರಷ್ಟಿದ್ದಾರೆ. ಈವರೆಗೆ ಜಮ್ಮು ಕಾಶ್ಮೀರ ವಿಧಾನಸಭೆಯ ಒಟ್ಟು 87 ಸೀಟುಗಳ ಪೈಕಿ ಕಾಶ್ಮೀರ ಕಣಿವೆಯ ಸ್ಥಾನಗಳು 46. ಜಮ್ಮು ವಿಧಾನಸಭಾ ಕ್ಷೇತ್ರಗಳು 37 ಹಾಗೂ ಲದ್ದಾಖ್ ನವು 4.

ಸಂವಿಧಾನದ 370ನೆಯ ಅನುಚ್ಛೇದ ಏನು ಹೇಳುತ್ತದೆ?
ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ನೀಡುವ ಈ ಅನುಚ್ಛೇದವು ಈ ರಾಜ್ಯದ ಸಂಬಂಧದಲ್ಲಿ ಕಾನೂನು ರೂಪಿಸುವ ಸಂಸತ್ತಿನ ಅಧಿಕಾರಗಳನ್ನು ಸೀಮಿತಗೊಳಿಸುತ್ತದೆ. ಭಾರತದ ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಹಣಕಾಸು ಹಾಗೂ ಸಂಪರ್ಕ ವಿಷಯಗಳ ಕಾಯಿದೆ ಕಾನೂನುಗಳು ಮಾತ್ರವೇ ಈ ರಾಜ್ಯಕ್ಕೆ ಅನ್ವಯ ಆಗುತ್ತವೆ. ಆಸ್ತಿಪಾಸ್ತಿ ಒಡೆತನ, ಮೂಲಭೂತ ಹಕ್ಕುಗಳು ಮತ್ತು ನಾಗರಿಕತೆಯ ವಿಷಯಗಳ ಕುರಿತು ಜಮ್ಮು-ಕಾಶ್ಮೀರ ಪ್ರತ್ಯೇಕ ಕಾಯಿದೆ ಕಾನೂನು ರೂಪಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಜಮ್ಮು-ಕಾಶ್ಮೀರದ ಸಂವಿಧಾನರಚನಾ ಸಭೆಯು ತನ್ನದೇ ಪ್ರತ್ಯೇಕ ಸಂವಿಧಾನ ರಚಿಸಿಕೊಳ್ಳುವ ಸ್ವಾಯತ್ತಾಧಿಕಾರವನ್ನು ನೀಡುತ್ತದೆ. ರಾಜ್ಯ ಮತ್ತು ಕೇಂದ್ರದ ಅಧಿಕಾರ ವ್ಯಾಪ್ತಿಯನ್ನು ನಮೂದಿಸುವ ವಿಷಯಗಳ ಪಟ್ಟಿಗೆ ಕೇಂದ್ರ ಸರ್ಕಾರ ಯಾವುದೇ ತಿದ್ದುಪಡಿ ಮಾಡಬೇಕಿದ್ದರೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲೇಬೇಕು.
ಭಾರತದ ಸಂವಿಧಾನದಲ್ಲಿನ ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಸಾರುವ ಒಂದನೆಯ ಅನುಚ್ಛೇದ ಮತ್ತು 370ನೆಯ ಅನುಚ್ಛೇದಗಳು ಮಾತ್ರವೇ ಜಮ್ಮು-ಕಾಶ್ಮೀರಕ್ಕೆ ಅನ್ವಯ ಆಗುತ್ತವೆ. ಉಳಿದಂತೆ ಯಾವ ಅನುಚ್ಛೇದಗಳೂ ಅನ್ವಯಿಸುವುದಿಲ್ಲ. 1949ರ ಅಕ್ಟೋಬರ್ 17ರಂದು ಈ ಅನುಚ್ಛೇದಗಳನ್ನು ಸಂವಿಧಾನಕ್ಕೆ ಅಳವಡಿಸಲಾಯಿತು.
370ನೆಯ ಅನುಚ್ಛೇದ ಹಂಗಾಮಿ ಸ್ವರೂಪದ್ದು ಎಂಬುದು ಬಿಜೆಪಿಯ ವಾದ. ಆದರೆ ಈ ಅನುಚ್ಛೇದ ಕಾಯಂ ಸ್ವರೂಪದ್ದು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟುಗಳೇ ಹಲವು ಬಾರಿ ಹೇಳಿವೆ. ಅನುಚ್ಛೇದದ ತಲೆಬರೆಹ ಹಂಗಾಮಿ ಎಂದಿದ್ದರೂ, ಅದು ಕಾಯಂ ಸ್ವರೂಪದ್ದೇ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಕೂಡ ಸಾರಿತ್ತು.
370ನೆಯ ಅನುಚ್ಛೇದ ಕಾಲಾನುಕ್ರಮದಲ್ಲಿ ಹಲವು ಬಗೆಯಲ್ಲಿ ತೆಳುವಾಗಿದೆ. ಜಮ್ಮು-ಕಾಶ್ಮೀರದ ಸಂವಿಧಾನದ ಹಲವಾರು ಸಂಗತಿಗಳನ್ನು ಕೇಂದ್ರ ಸರ್ಕಾರ ರಾಷ್ಟ್ರಪತಿ ಆದೇಶಗಳ ಮೂಲಕ ಬದಲಾಯಿಸಿದೆ. ಈ ರಾಜ್ಯದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹುದ್ದೆಗಳನ್ನು ಅನುಕ್ರಮವಾಗಿ ರಾಜ್ಯಪಾಲ- ಮುಖ್ಯಮಂತ್ರಿ ಹುದ್ದೆಗಳನ್ನಾಗಿ ಬದಲಾಯಿಸಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಅಧಿಕಾರಗಳನ್ನು ಜಮ್ಮು –ಕಾಶ್ಮೀರಕ್ಕೂ ವಿಸ್ತರಿಸಲಾಗಿದೆ.
ಅನುಚ್ಛೇದ 35 ಎ ಎಂದರೇನು?
ರಾಜ್ಯದ ಕಾಯಂ ನಿವಾಸಿ ಯಾರು, ಯಾರು ಕಾಯಂ ನಿವಾಸಿ ಅಲ್ಲ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಈ ಅನುಚ್ಛೇದವು ಜಮ್ಮು-ಕಾಶ್ಮೀರದ ವಿಧಾನಸಭೆಗೆ ನೀಡುತ್ತದೆ. ರಾಜ್ಯ ಸರ್ಕಾರ ನೀಡುವ ವಿಶೇಷ ಹಕ್ಕುಗಳು ಮತ್ತು ವಿಶೇಷಾಧಿಕಾರಗಳಿಗೆ ಯಾರು ಅರ್ಹರು, ಯಾರು ಅರ್ಹರಲ್ಲ ಎಂದು ತೀರ್ಮಾನಿಸುವ ಅಧಿಕಾರವಿದು. ರಾಜ್ಯದ ಅನುದಾನಗಳು ಯಾರಿಗೆ ಸಿಗಬೇಕು, ರಾಜ್ಯದಲ್ಲಿ ಜಮೀನು ಮತ್ತು ಇತರೆ ಆಸ್ತಿಪಾಸ್ತಿಗಳನ್ನು ಯಾರೆಲ್ಲ ಖರೀದಿಸಲು ಅರ್ಹರು ಎಂಬುದನ್ನು ವಿಧಾನಸಭೆ ನಿರ್ಧರಿಸುತ್ತದೆ ‘’ಕಾಯಂ ನಿವಾಸಿ’’ ಅಲ್ಲವೆಂದು ವರ್ಗೀಕರಿಸಲಾದವರ ಹಕ್ಕುಗಳನ್ನು ನಿರ್ಬಂಧಿಸುವ ಅಧಿಕಾರವನ್ನು ವಿಧಾನಸಭೆ ಹೊಂದಿರುತ್ತದೆ.
ಈ ಅನುಚ್ಛೇದವನ್ನು ರದ್ದುಗೊಳಿಸುವುದು ಸರಳವಲ್ಲ. ರದ್ದುಗೊಳಿಸಲು ಜಮ್ಮು-ಕಾಶ್ಮೀರ ಸಂವಿಧಾನರಚನಾ ಸಭೆಯ ಅನುಮೋದನೆ ಅಗತ್ಯ. ಆದರೆ ಈ ಸಭೆ 1957ರಲ್ಲೇ ಅಸ್ತಿತ್ವ ಕಳೆದುಕೊಂಡಿದೆ. ರಾಜ್ಯ ವಿಧಾನಸಭೆಯು ಈ ಅನುಚ್ಛೇದ ಕುರಿತು ತೀರ್ಮಾನಿಸುವ ಅವಕಾಶ ಇದೆ. ಇದೀಗ ರಾಷ್ಟ್ರಪತಿ ಆಡಳಿತವಿರುವ ಹಿನ್ನೆಲೆಯಲ್ಲಿ ಈ ಅನುಚ್ಛೇದವನ್ನು ರದ್ದುಗೊಳಿಸಲು ರಾಜ್ಯಪಾಲರ ಒಪ್ಪಿಗೆಯೇ ಸಾಕು ಎನ್ನುವುದು ಬಿಜೆಪಿಯ ನಿಲುವು.
ರಾಜಕೀಯ ಸಾಧಕ ಬಾಧಕಗಳ ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಅಧಿಕಾರಗಳು ಮೊಟಕಾಗಲಿವೆ ಎಂದು ಪರಿಣಿತರು ಹೇಳುತ್ತಾರೆ.
370ನೆಯ ಅನುಚ್ಛೇದವನ್ನು ಸಂವಿಧಾನದಿಂದ ಇಡಿಯಾಗಿ ವಿಸರ್ಜಿಸಿದರೆ 35ಎ ತಂತಾನೇ ರದ್ದಾಗಲಿದೆ. ಈ ಕೆಲಸವನ್ನು ಆಗು ಮಾಡಲು ಸಂವಿಧಾನದ ಉಭಯ ಸದನಗಳಲ್ಲಿ ಮೂರನೆಯ ಎರಡರಷ್ಟು ಬಹುಮತ ಅತ್ಯಗತ್ಯ.
ಇನ್ನು ಮುಂದೆ ಜಮ್ಮು-ಕಾಶ್ಮೀರ ಎರಡು ರಾಜ್ಯಗಳಾಗಲಿದೆ. ಜಮ್ಮು-ಕಾಶ್ಮೀರ ಮತ್ತು ಲದ್ದಾಖ್. ಎರಡೂ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು. ಜಮ್ಮು-ಕಾಶ್ಮೀರವು ದೆಹಲಿ ಮತ್ತು ಪುದುಚೆರಿ ಮಾದರಿಯಲ್ಲಿ ರಾಜ್ಯ ವಿಧಾನಸಭೆಯನ್ನು ಹೊಂದಿರುತ್ತದೆ. ಚಂಡೀಗಢ, ದಾದ್ರಾ-ನಗರಹವೇಲಿ ಮಾದರಿಯಲ್ಲಿ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ ಲದ್ದಾಖ್.
ಸಂವಿಧಾನದ 370ನೆಯ ಅನುಚ್ಛೇದದ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಎಲ್ಲ ವಿಶೇಷ ಸ್ಥಾನಮಾನವೂ ಇಂದಿನಿಂದ ರದ್ದಾಗಲಿದೆ. ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಸಾರುವ ಒಂದನೆಯ ಖಂಡ ಮಾತ್ರ ಉಳಿಯಲಿದ್ದು, ಉಳಿದಂತೆ 370ನೆಯ ಇಡೀ ಅನುಚ್ಛೇದ ರದ್ದಾಗಲಿದೆ.
ವಿಶೇಷ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು-ಕಾಶ್ಮೀರ ಇದೀಗ ದೆಹಲಿಯಂತೆ ವಿಧಾನಸಭೆಯನ್ನು ಉಳ್ಳ ಕೇಂದ್ರಾಡಳಿತ ಪ್ರದೇಶ. ಸ್ವಾಯತ್ತತೆಯ ವಿಶೇಷ ಸ್ಥಾನಮಾನಗಳು ಒತ್ತಟ್ಟಿಗಿರಲಿ, ಪೂರ್ಣ ರಾಜ್ಯದ ಸ್ಥಾನಮಾನದಿಂದ ಕೂಡ ವಂಚಿತ. ಮುಸ್ಲಿಂ ಬಹುಸಂಖ್ಯಾತ ಎಂಬ ಯಾವ ಸ್ವರೂಪವನ್ನು ಕೊಂಚವೂ ಮುಕ್ಕಾಗದಂತೆ ಕಾಪಾಡಿಕೊಳ್ಳಬಯಸಿತ್ತೋ, ಅದೇ ಸ್ವರೂಪದ ಮೇಲೆ ಮೋದಿ ಸರ್ಕಾರ ಪ್ರಹಾರ ಮಾಡಿದೆ. ಕಾಶ್ಮೀರ ಕಣಿವೆಯ ಜನಸಂಖ್ಯಾ ಸ್ವರೂಪವನ್ನು ಬದಲಿಸುವುದೇ ಕಾಶ್ಮೀರ ಸಮಸ್ಯೆಗೆ ಪರಿಹಾರವೆಂಬುದು ಬಿಜೆಪಿ ಮತ್ತು ಅದರ ತಾಯಿ ಬೇರು ಆರ್.ಎಸ್.ಎಸ್.ನ ಅಚಲ ವಿಶ್ವಾಸ.