ಕಾಶ್ಮೀರ ಕಣಿವೆಯನ್ನು ಕದಗಳ ಹಿಂದೆ ಕೂಡಿ ಹಾಕಿ ಬೀಗ ಜಡಿದು, ಕಣ್ಣು ಕಟ್ಟಿ, ಕಿವಿ- ಬಾಯಿಗಳಿಗೆ ಬಿರಟೆ ಬಡಿದು ಅದರ ವಿಶೇಷ ಸ್ಥಾನಮಾನವನ್ನು ‘ಕಾಯಿದೆಬದ್ಧವಾಗಿ’ ಅಪಹರಿಸಿದೆ ಕೇಂದ್ರ ಸರ್ಕಾರ. ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನು ಪಳಗಿಸಿ ಮೂಗುದಾರ ತೊಡಿಸಿ ಹಿಂದು-ಹಿಂದಿ-ಹಿಂದುಸ್ತಾನದ ನೊಗಕ್ಕೆ ಬಿಗಿಯುವ ಸಂಘಪರಿವಾರದ ಏಳು ದಶಕಗಳ ಯೋಜನೆಯನ್ನು ಮೋದಿ-ಶಾ ಜೋಡಿ ಈಡೇರಿಸಿಕೊಟ್ಟಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿಕೆಯ 370ನೆಯ ಅನುಚ್ಛೇದವನ್ನು ರದ್ದು ಮಾಡಿರುವ ಕ್ರಮವನ್ನು ಅಲ್ಲಿನ ಜನ ಸಂತೋಷದಿಂದ ಸ್ವಾಗತಿಸಿದ್ದಾರೆ. ಕಣಿವೆ ಪ್ರಶಾಂತವಾಗಿದೆ ಎಂದು ಕೇಂದ್ರ ಸರ್ಕಾರ ಮೊದಲ ದಿನದಿಂದ ಈ ಹೊತ್ತಿನ ತನಕ ಪ್ರತಿಪಾದಿಸುತ್ತ ಬಂದಿದೆ. ಆದರೆ ಅಲ್ಲಿನ ಜನರ ಅಸಹಾಯಕತೆ, ಆಕ್ರೋಶ, ತಳಮಳ, ಅವರಲ್ಲಿ ಇನ್ನಷ್ಟು ಗಟ್ಟಿಗೊಳ್ಳುತ್ತಿರುವ ಪರಕೀಯ ಭಾವವನ್ನು, ಕ್ಷೋಭೆಯ ಸ್ಫೋಟಕ್ಕೆ ಮುನ್ನ ಕವಿಯುವ ದಟ್ಟ ಮೌನವನ್ನು, ಹೊರಜಗತ್ತಿನೊಂದಿಗೆ ಸಂಪರ್ಕ ಕಡಿಯಲಾಗಿರುವ ಸರ್ಕಾರದ ಅಮಾನವೀಯ ಕೃತ್ಯದ ದುರಂತ ಫಲಿತಗಳನ್ನು ಭಾರತದ ಬಹುಪಾಲು ರಾಷ್ಟ್ರೀಯ ಮಾಧ್ಯಮಗಳು, ಅದರಲ್ಲೂ ಟೆಲಿವಿಷನ್ ಸುದ್ದಿ ವಾಹಿನಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಕಾಶ್ಮೀರ ಶಾಂತವಾಗಿದೆ ಎಂಬ ಸುಳ್ಳನ್ನೇ ಬಿತ್ತರಿಸತೊಡಗಿವೆ. ಒಂದು ವಿಧದಲ್ಲಿ ಇದು ಭಾರತ ಮಾಡಿಕೊಳ್ಳುತ್ತಿರುವ ಆತ್ಮವಂಚನೆಯೂ ಹೌದು.
ಕಾಶ್ಮೀರದಲ್ಲಿ ಸಂಚಾರ ಮತ್ತು ಸಂಪರ್ಕ ಸಾಧನಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಲಾಗಿದೆ. ಸ್ಥಳೀಯ ಪತ್ರಿಕೆಗಳಂತೂ ಮುಚ್ಚಿಯೇ ಹೋಗಿವೆ. ಸ್ಥಳೀಯ ಅಸ್ಮಿತೆ ಅಸಂತೃಪ್ತಿ ಆಶೋತ್ತರಗಳ ಕೊರಳಾದ ಕಾಶ್ಮೀರಿ ಪತ್ರಕರ್ತರ ದನಿಯನ್ನು ದಮನ ಮಾಡಲಾಗಿದೆ. ಇಂತಹ ದುಸ್ಥಿತಿಯಲ್ಲೂ ‘ದಿ ವೈರ್’ ಸುದ್ದಿ ಜಾಲತಾಣದ ಸಿದ್ಧಾರ್ಥ ವರದರಾಜನ್ ಕಾಶ್ಮೀರದಲ್ಲಿ ವ್ಯಾಪಕವಾಗಿ ಸುತ್ತಾಡಿ ಅಲ್ಲಿನ ಬೇಗುದಿಯ ಕುರಿತು ಅಪರೂಪದ ವರದಿಗಳನ್ನು ಶೇಷಭಾರತಕ್ಕೆ ಮಾಡಿಕೊಟ್ಟಿದ್ದಾರೆ. ಎಲ್ಲ ಪ್ರಶಾಂತ ಎಂಬುದಾಗಿ ಸರ್ಕಾರ ಮತ್ತು ಸರ್ಕಾರವನ್ನು ಬೆಂಬಲಿಸುವ ಮಾಧ್ಯಮಗಳು ತಪ್ಪು ಚಿತ್ರ ನೀಡುತ್ತಿದ್ದಾಗ, ಅಲ್ಲಿನ ಜನರ ಮೇಲೆ ಪೆಲೆಟ್ ಗುಂಡುಗಳನ್ನು ಸಿಡಿಸಿ ನಲವತ್ತಕ್ಕೂ ಹೆಚ್ಚು ಮಂದಿ ನಾಗರಿಕರು ಗಾಯಗೊಂಡ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ದುಃಖ- ದುರಂತ-ಸಂಕಟಗಳನ್ನು ವಿಡಿಯೋ ಚಿತ್ರೀಕರಣದಲ್ಲಿ ತೋರಿಸಿಕೊಟ್ಟಿದ್ದಾರೆ. ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿ.ಬಿ.ಸಿ.) ಸುದ್ದಿ ಸಂಸ್ಥೆಯೂ ಈ ಕುರಿತು ವ್ಯಾಪಕ ವರದಿಗಾರಿಕೆ ಮಾಡಿದೆ. ಹಿಂದೂ ಪತ್ರಿಕೆಯ ಯುವ ವರದಿಗಾರ್ತಿ ವಿಜೇಯತಾ ಸಿಂಗ್ ಕೂಡ ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ.
ಇದೇ ತಿಂಗಳ ಒಂಬತ್ತರಂದು ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಜನಪ್ರತಿಭಟನೆ ನಡೆಯಿತೆಂದು ಬಿ.ಬಿ.ಸಿ., ರಾಯಿಟರ್ಸ್ ಹಾಗೂ ಅಲ್ ಜಝೀರಾ ಮಾಡಿರುವ ವರದಿಗಳು, ಬಿತ್ತರಿಸಿರುವ ವಿಡಿಯೋಗಳು ಕಟ್ಟುಕತೆ ಎಂದು ಕೇಂದ್ರ ಸರ್ಕಾರ ತಳ್ಳಿ ಹಾಕಿತ್ತು. ಗುಂಡುಗಳನ್ನು ಹಾರಿಸಿಲ್ಲ, ಪೆಲೆಟ್ ಗುಂಡುಗಳನ್ನೂ ಸಿಡಿಸಿರುವ ವರದಿಗಳನ್ನೂ ತಳ್ಳಿ ಹಾಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ಸಮರ್ಥಕರು ಬಿ.ಬಿ.ಸಿ.ಯನ್ನು ಫೇಕ್ ನ್ಯೂಸ್ ಎಂದು ಜರೆದಿದ್ದರು. ಭಾರತದಲ್ಲಿ ಬಿ.ಬಿ.ಸಿ. ಮತ್ತು ಅಲ್ ಜಝೀರಾ ಪ್ರಸಾರವನ್ನು ನಿಷೇಧಿಸುವಂತೆಯೂ ಆಗ್ರಹ ಮಾಡಲಾಗಿತ್ತು. ಈ ಹಿಂದೆ ಪಾಕಿಸ್ತಾನದಿಂದಲೂ ಬಿ.ಬಿ.ಸಿ. ಇಂತಹುದೇ ಟೀಕೆಯನ್ನು ಖಂಡನೆಯನ್ನು ಎದುರಿಸಿದ್ದುಂಟು. ಭಾರತ್ ಬ್ರಾಡಕಾಸ್ಟಿಂಗ್ ಕಾರ್ಪೊರೇಷನ್ ಎಂದು ಪಾಕಿಸ್ತಾನೀಯರು ಖಂಡಿಸಿದ್ದರು. ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ಟೀಕೆಗೊಳಗಾಗಿದೆ ಎಂಬ ಸಂಗತಿಯು ತನ್ನ ವಸ್ತುನಿಷ್ಠ ವರದಿಗಾರಿಕೆಗೆ ಸಂದ ಪಾರಿತೋಷಕ ಎಂಬ ಬಿ.ಬಿ.ಸಿ. ಹೇಳಿಕೆಯಲ್ಲಿ ಹೆಚ್ಚು ಉತ್ಪ್ರೇಕ್ಷೆ ಇರಲಾರದು.

ಶ್ರೀನಗರದಲ್ಲಿ ನಡೆದ ಜನ ಪ್ರತಿಭಟನೆಗಳ ಕುರಿತು ಬಿ.ಬಿ.ಸಿ. ಮತ್ತು ಅಲ್ ಜಝೀರ ಮಾಡಿರುವ ವರದಿಗಳು ಮತ್ತು ವಿಡಿಯೋ ಚಿತ್ರೀಕರಣ ಅಸಲಿಯೇ ವಿನಾ ನಕಲಿಯಲ್ಲ ಎಂಬುದನ್ನು Alt News ಕೂಡ ಪರೀಕ್ಷೆ ಮಾಡಿ ಹೇಳಿದೆ. ಸಂವಿಧಾನದ 370ನೆಯ ಅನುಚ್ಛೇದವನ್ನು ತೆಗೆದು ಹಾಕಿದ ನಡೆಯನ್ನು ವಿರೋಧಿಸಿ ಶ್ರೀನಗರದಲ್ಲಿ ಸಾವಿರಾರು ಕಾಶ್ಮೀರಿಗರು ಮೆರವಣಿಗೆ ಮತ್ತು ಸಭೆ ನಡೆಸಿದ ವಿಡಿಯೋ ಚಿತ್ರೀಕರಣವನ್ನು ಸೂಕ್ಷ್ಮ ತನಿಖೆಗೆ ಗುರಿಪಡಿಸಿದ ನಂತರ Alt News ಈ ಮಾತು ಹೇಳಿದೆ. ಪ್ರತಿಭಟನೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸಿರಲಿಲ್ಲ ಎಂಬ ಕೇಂದ್ರ ಗೃಹಮಂತ್ರಾಲಯದ ಹೇಳಿಕೆ ತಪ್ಪು. ಗುಂಪನ್ನು ಚೆದುರಿಸಲು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಲಾಯಿತು ಎಂಬ ಬಿ.ಬಿ.ಸಿ. ವರದಿಯನ್ನು ತಾಳೆ ನೋಡಲು ಸಾಧ್ಯವಾಗಿಲ್ಲ ಎಂದಿದೆ.
ಪ್ರತಿಭಟನೆ ನಡೆಯಲೇ ಇಲ್ಲ ಎಂಬುದಾಗಿ ಭಾರತ ಸರ್ಕಾರ ಹೇಳಿದೆಯಾದರೂ, ಸಾವಿರಾರು ಜನ ಪ್ರದರ್ಶನಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ ಮತ್ತು ಅಶ್ರುವಾಯು ಸಿಡಿಸಿದ್ದನ್ನು ತಾನು ಕಣ್ಣಾರೆ ಕಂಡಿರುವುದಾಗಿ ಬಿ.ಬಿ.ಸಿ ಸಮರ್ಥಿಸಿಕೊಂಡಿತು. ‘’ಕಾಶ್ಮೀರ ವಿದ್ಯಮಾನಗಳನ್ನು ತಪ್ಪಾಗಿ ಪ್ರತಿನಿಧಿಸಿದ್ದೇವೆ ಎಂಬ ಭಾರತ ಸರ್ಕಾರದ ದಾವೆಯನ್ನು ನಾವು ತೀವ್ರವಾಗಿ ಅಲ್ಲಗಳೆಯುತ್ತೇವೆ. ವಿದ್ಯಮಾನಗಳನ್ನು ನಾವು ನಿಖರವಾಗಿ ಮತ್ತು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಿದ್ದೇವೆ. ಇತರೆ ಬಾನುಲಿ ಸಂಸ್ಥೆಗಳಂತೆ ನಾವು ಕೂಡ ಕಾಶ್ಮೀರದಲ್ಲಿ ತೀವ್ರ ನಿರ್ಬಂಧಗಳ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅಲ್ಲಿ ನಡೆಯುತ್ತಿರುವುದನ್ನು ಇನ್ನು ಮುಂದೆಯೂ ವರದಿ ಮಾಡಲಿದ್ದೇವೆ’’ ಎಂದು ಬಿ.ಬಿ,ಸಿ, ಪ್ರತಿಪಾದಿಸಿತು.
ಪ್ರತಿಭಟನೆಯ ವಿಡಿಯೋ ಚಿತ್ರೀಕರಣವು ಕಟ್ಟುಕತೆಯಾಗಿದ್ದು, ಅದು ಸಾಚಾ ಎಂದು ಸಾಬೀತು ಮಾಡಬೇಕು ಎಂಬುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಶ್ರೀನಗರದ ಸೌರಾದಲ್ಲಿ ಶುಕ್ರವಾರದ ನಮಾಜಿನ ನಂತರ ಅಪರಾಹ್ಣ ಮೂರೂವರೆಯ ಹೊತ್ತಿನಲ್ಲಿ ಈ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಕಚ್ಚಾ ಚಿತ್ರೀಕರಣವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಬಿ.ಬಿ.ಸಿ. ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥರಾದ ನಿಕೋಲ ಕಾರೀಮ್ ಪ್ರತಿಕ್ರಿಯಿಸಿದ್ದರು.
ತಾನು ಉಗುಳಿದ್ದನ್ನು ತಾನೇ ನುಂಗಿದೆ ಕೇಂದ್ರ ಸರ್ಕಾರ. ಪೆಲೆಟ್ ಗುಂಡುಗಳನ್ನು ಹಾರಿಸಿದ್ದು ಮತ್ತು ಶ್ರೀನಗರದ ಸೌರದಲ್ಲಿ ಸಾವಿರಾರು ಮಂದಿ ಪ್ರತಿಭಟನಾ ಪ್ರದರ್ಶನ ನಡೆಸಿದ ಬಿ.ಬಿ.ಸಿ. ಮತ್ತು ಅಲ್ ಜಝೀರಾ, ರಾಯಿಟರ್ಸ್ ಸುದ್ದಿ-ವಿಡಿಯೋ ಚಿತ್ರೀಕರಣ ಕಟ್ಟುಕತೆಯೆಂಬ ತನ್ನ ಖಂಡನೆಯನ್ನು ವಾಪಸು ಪಡೆದಿದೆ. ಸರಿಯೆಂದು ತಡವಾಗಿಯಾದರೂ ಒಪ್ಪಿಕೊಂಡಿದೆ. ಮಾಹಿತಿಯ ಮುಕ್ತ ಹರಿವನ್ನು ಸರ್ಕಾರ ನಿಯಂತ್ರಿಸಬಯಸುತ್ತದೆ ಎಂಬುದು ಪುರಾವೆ ಸಹಿತ ಸಾಬೀತಾದಂತಾಗಿದೆ.
ಕಾಶ್ಮೀರ ಕಣಿವೆಯ ವಿದ್ಯಮಾನಗಳ ವರದಿಗಾರಿಕೆಯಲ್ಲಿ ರಾಷ್ಟ್ರೀಯ ಮಾಧ್ಯಮಗಳು ಅನುಸರಿಸುವ ಇಬ್ಬಗೆಯ ಮಾನದಂಡಗಳನ್ನು 1993ರಲ್ಲಿ ರಚಿಸಲಾದ Committee for Initiative in Kashmir ತನ್ನ ವರದಿಯಲ್ಲಿ ಎತ್ತಿ ತೋರಿದೆ. ಕಾಶ್ಮೀರದ ಹೊರಗಿನ ಸಮಾಜದ ಪಾಲಿಗೆ ಕಾಶ್ಮೀರ ಕುರಿತ ಮಾಹಿತಿ ಒದಗಿಸುವ ಏಕೈಕ ಸುದ್ದಿ ಮೂಲ ರಾಷ್ಟ್ರೀಯ ಮಾಧ್ಯಮಗಳು. ಆದರೆ ಅವು ಯಥಾಸ್ಥಿತಿವಾದಿಗಳು. ಬಹುಪಾಲು ಸರ್ಕಾರದ ಧೋರಣೆಗಳು ಮತ್ತು ನಿಲುವನ್ನೇ ಪ್ರತಿಬಿಂಬಿಸುತ್ತವೆ. ಕಾಶ್ಮೀರದ ಜನರ ಕುರಿತು ‘ನಾವು’ (ಶೇಷ ಭಾರತ) ಮತ್ತು ‘ಅವರು’ (ಕಾಶ್ಮೀರ) ಎಂಬ ಧೋರಣೆ ಅನುಸರಿಸುತ್ತ ಬಂದಿವೆ. ರಾಷ್ಟ್ರೀಯ ಮಾಧ್ಯಮಗಳ ವರದಿಗಾರಿಕೆಯು ಕಾಶ್ಮೀರಿಗಳಲ್ಲಿ ಹೆಚ್ಚು ಹೆಚ್ಚು ಪರಕೀಯ ಭಾವನೆಯನ್ನು ಮೂಡಿಸುತ್ತ ಬಂದಿವೆ. ಕಾಶ್ಮೀರಿ ಮುಸ್ಲಿಮರು ಕೃತಜ್ಞತೆಯಿಲ್ಲದವರು, ಪಾಕಿಸ್ತಾನಕ್ಕೆ ಸೇರಬಯಸುವವರು ಎಂಬ ಚಿತ್ರವನ್ನೇ ಶೇಷ ಭಾರತಕ್ಕೆ ಕಟ್ಟಿಕೊಡುತ್ತ ಬಂದಿದೆ ಎಂದು ವಿಮರ್ಶಿಸಿದೆ. ಆದರೆ ಸಮಿತಿಯ ಈ ಮಾತುಗಳು ರಾಷ್ಟ್ರೀಯ ಮಾಧ್ಯಮಗಳನ್ನು ತುಸುವಾದರೂ ಆತ್ಮವಿಮರ್ಶೆಗೆ ಹಚ್ಚಿಲ್ಲ. ಈಗಲೂ ಅದೇ ಧೋರಣೆ ಮುಂದುವರೆದಿದೆ.
ನರೇಂದ್ರ ಮೋದಿ ಸರ್ಕಾರದ ತೀವ್ರ ಸಮರ್ಥಕರಾದ ಹಿರಿಯ ಪತ್ರಕರ್ತೆ ಮತ್ತು ಖ್ಯಾತ ಅಂಕಣಕಾರ್ತಿ ತವ್ಲೀನ್ ಸಿಂಗ್ ಅವರ ಪ್ರಕಾರ ರಾಷ್ಟ್ರೀಯ ಮಾಧ್ಯಮಗಳು ಕಾಶ್ಮೀರ ಕಣಿವೆಯ ವಿದ್ಯಮಾನಗಳ ಕುರಿತು ಶೇಷ ಭಾರತಕ್ಕೆ ಪೂರ್ಣ ಸತ್ಯವನ್ನು ಹೇಳುವುದಿಲ್ಲ. ತಪ್ಪುದಾರಿ ಹಿಡಿದ ದೇಶಭಕ್ತಿಯೇ ಇದಕ್ಕೆ ಮೂಲ ಕಾರಣ ಎಂದು ಅವರು Kashmir- A Tragedy of Errors ಎಂಬ ತಮ್ಮ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮದ ಈ ಪ್ರವೃತ್ತಿಯ ಕಾರಣ ಕೇಂದ್ರ ಸರ್ಕಾರದ ಅಪಾಯಕಾರಿ ದೃಷ್ಟಿವಿಹೀನ ನೀತಿಗಳನ್ನು ವಿಮರ್ಶೆಯೇ ನಡೆಯುತ್ತಿಲ್ಲ. ಭದ್ರತೆ, ಬಂಡಾಯ, ವಿದೇಶಾಂಗ ನೀತಿ, ಮಾನವ ಹಕ್ಕುಗಳಂತಹ ವಿಷಯಗಳನ್ನು ರಾಷ್ಟ್ರೀಯ ಮಾಧ್ಯಮಗಳು ರಾಷ್ಟ್ರೀಯ ಭದ್ರತೆಯ ಕನ್ನಡಕದಿಂದಲೇ ನೋಡುತ್ತ ಬಂದಿವೆ. ಕಾಶ್ಮೀರದ ಜನರ ಆದ್ಯತೆಗಳು ಮತ್ತು ಆತಂಕಗಳನ್ನು ಕಡೆಗಣಿಸಿವೆ. ಅವರ ಸಂಘರ್ಷಗಳು ವೇದನೆಗಳು ಬವಣೆಗಳು ಕೇವಲ ಅಂಕಿ ಅಂಶಗಳಾಗಿ ಹೋಗಿವೆ. ಕಾಶ್ಮೀರದ ಹೋರಾಟವನ್ನು ತಪ್ಪಾಗಿ ಪ್ರತಿನಿಧಿಸಿ ಅನ್ಯಾಯ ಬಗೆಯಲಾಗುತ್ತಿದೆ. ಕಣಿವೆಯ ಕುರಿತ ರಾಷ್ಟ್ರೀಯ ಮಾಧ್ಯಮಗಳ ಸುದ್ದಿಗಳು ಮತ್ತು ವಿಶ್ಲೇಷಣೆಗಳು ಕೇಂದ್ರ ಸರ್ಕಾರದ ಇಲ್ಲವೇ ಸೇನಾ ಕಾರ್ಯಾಚರಣೆಯ ಪರವಾಗಿರುತ್ತವೆ. ಸರ್ಕಾರಕ್ಕೆ ಅನುಕೂಲ ಅಲ್ಲದ ಸುದ್ದಿಗಳಿಗೆ ಕಡಿಮೆ ಆದ್ಯತೆ ನೀಡಲಾಗುತ್ತದೆ ಎಂದು ಇತರೆ ಮಾಧ್ಯಮ ತಜ್ಞರು ವಿಶ್ಲೇಷಿಸಿದ್ದಾರೆ.