ಬ್ರಿಟಿಷರು ಭಾರತ- ಪಾಕಿಸ್ತಾನಕ್ಕೆ ನೀಡಿದ್ದ ಸ್ವಾತಂತ್ರ್ಯವು ಎರಡೂ ಭೂಭಾಗಗಳಲ್ಲಿನ ಸುಮಾರು 565 ಅರಸೊತ್ತಿಗೆಗಳಿಗೆ ನೀಡಿದ ಸ್ವಾತಂತ್ರ್ಯವೂ ಆಗಿತ್ತು. 1947ರ ಭಾರತ ಸ್ವಾತಂತ್ರ್ಯ ಕಾಯಿದೆಯ ಪ್ರಕಾರ ಭಾರತ ಇಲ್ಲವೇ ಪಾಕಿಸ್ತಾನದ ಜೊತೆ ವಿಲೀನಗೊಳ್ಳುವ ಇಲ್ಲವೇ ಸ್ವತಂತ್ರವಾಗಿ ಉಳಿಯುವ ಆಯ್ಕೆಯನ್ನು ಜಮ್ಮು-ಕಾಶ್ಮೀರವೂ ಸೇರಿದಂತೆ ಈ ಎಲ್ಲ ಅರಸೊತ್ತಿಗೆಗಳಿಗೆ ನೀಡಲಾಗಿತ್ತು. ಬಹುತೇಕ ಅರಸೊತ್ತಿಗೆಗಳನ್ನು ಸಾಮ-ದಾನ-ಭೇದ ದಂಡ ಪ್ರಯೋಗಿಸಿ ಭಾರತದೊಳಕ್ಕೆ ವಿಲೀನಗೊಳಿಸಿದ ಶ್ರೇಯಸ್ಸು ಅಂದಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲ್ ಅವರದು. ಮುಸ್ಲಿಮರೇ ಬಹುಸಂಖ್ಯಾತರಾದ ಕಾಶ್ಮೀರದ ಹಿಂದೂ ಮಹಾರಾಜ ಹರಿಸಿಂಗ್ ತನ್ನ ನಿರ್ಧಾರವನ್ನು ಮುಂದೂಡಿದ. ಸ್ವತಂತ್ರವಾಗಿ ಉಳಿಯುವುದು ಆತನ ಬಯಕೆಯಾಗಿತ್ತು. ತನ್ನ ರಾಜ್ಯವನ್ನು ಪೂರ್ವದ ಸ್ವಿಟ್ಜರ್ಲ್ಯಾಂಡ್ ಆಗಿ ರೂಪಿಸುವುದು ಆತನ ಹೆಬ್ಬಯಕೆಯಾಗಿತ್ತು. ಆತನ ಮಗ ಡಾ. ಕರಣ್ ಸಿಂಗ್ ಮಾಜಿ ಕೇಂದ್ರ ಮಂತ್ರಿ ಮತ್ತು ಹಾಲಿ ರಾಜ್ಯಸಭಾ ಸದಸ್ಯ.
ಮಹಾರಾಜ ಹರಿಸಿಂಗ್ ನನ್ನು ಮಣಿಸಿ ಇಡೀ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹಂಚಿಕೆ ಪಾಕಿಸ್ತಾನದ್ದಾಗಿತ್ತು. 1947ರ ಅಕ್ಟೋಬರ್ ತಿಂಗಳಲ್ಲಿ ಇದ್ಧಕ್ಕಿದ್ದಂತೆ ಕಾಶ್ಮೀರದ ಮೇಲೆ ದಾಳಿ ನಡೆಸಿತು. ಪಾಕಿಸ್ತಾನ ಕಳಿಸಿದ್ದ ಪಶ್ತೂನ್ ಗುಡ್ಡಗಾಡು ಜನರು ಮತ್ತು ಕ್ರೂರ ಜಿಹಾದಿಗಳು ಕಾಶ್ಮೀರದ ಮೇಲೆ ದಂಡೆತ್ತಿ ಬಂದರು. ಕಾಶ್ಮೀರಿಗಳ ಮಾನ-ಪ್ರಾಣ ಹರಣ ಮತ್ತು ಆಸ್ತಿಪಾಸ್ತಿ ನಾಶ ಮಾಡಿದರು. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರ ತಾತನೂ, ಫಾರೂಕ್ ಅಬ್ದಲ್ಲ ಅವರ ತಂದೆಯೂ ಆದ ಶೇಖ್ ಅಬ್ದುಲ್ಲ ಈ ದಾಳಿಯನ್ನು ದಾಖಲಿಸಿದ್ದಾರೆ. ಅವರದೇ ಮಾತುಗಳಲ್ಲಿ ಹೇಳುವುದಾದರೆ- ” ಪಾಕಿಸ್ತಾನದ ಹೆಸರಿನಲ್ಲಿ ಇಸ್ಲಾಮಿನ ಸೇವಕರೆಂದು ನಂಬಿಸಲು ಬಂದ ಆಕ್ರಮಣಕಾರರು ನಮ್ಮ ನಾಡಿಗೆ ಬೆಂಕಿ ಇಟ್ಟರು, ನಮ್ಮ ಮನೆಗಳನ್ನು ಹಳ್ಳಿಗಳನ್ನು ನಾಶ ಮಾಡಿದರು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದರು. ಈ ಪಾಕಿಸ್ತಾನ ಮೋಹಿಗಳು ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಿ ಭೋಗಿಸಿ ತಮ್ಮ ಪಾಶವಿಕ ಕಾಮಪಿಪಾಸೆ ತೀರಿಸಿಕೊಳ್ಳಲು ಮಸೀದಿಗಳನ್ನು ವ್ಯಭಿಚಾರ ಗೃಹಗಳನ್ನಾಗಿ ಮಾಡಿದ್ದರು”.
ಮಹಾರಾಜ ಹರಿಸಿಂಗ್ ಅಕ್ಟೋಬರ್ 24ರಂದು ನೆರವು ಕೋರಿ ಭಾರತ ಸರ್ಕಾರಕ್ಕೆ ಮೊರೆಯಿಟ್ಟ. ಭಾರತದೊಂದಿಗೆ ವಿಲೀನಗೊಳಿಸಲು ತಯಾರಿದ್ದರೆ ಮಾತ್ರವೇ ಸೇನೆಯ ನೆರವು ನೀಡುವುದಾಗಿ ನೆಹರೂ-ಪಟೇಲ್ ಹೇಳಿದರು. ಭವಿಷ್ಯತ್ತಿನಲ್ಲಿ ಶಾಂತಿ ನೆಲೆಸಿದ ಮೇಲೆ ಜನಮತ ಗಣನೆ ನಡೆಸಿ ತಮ್ಮ ರಾಜಕೀಯ ಸ್ಥಿತಿಗತಿಗಳನ್ನು ತಾವೇ ತೀರ್ಮಾನಿಸಿಕೊಳ್ಳುವ ಅಧಿಕಾರವನ್ನು ಕಾಶ್ಮೀರಿಗಳಿಗೆ ನೀಡಬೇಕೆಂಬ ಷರತ್ತಿನ ಮೇರೆಗೆ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ ಮಹಾರಾಜ ಸಹಿ ಹಾಕಿದ. ಭಾರತದ ಸೇನೆ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು ಭಾರತ ಅಂದು ಮಹಾರಾಜನ ನೆರವಿಗೆ ಧಾವಿಸದೆ ಹೋಗಿದ್ದಲ್ಲಿ ಜಮ್ಮು- ಕಾಶ್ಮೀರ ಪಾಕಿಸ್ತಾನಕ್ಕೆ ಶರಣಾಗತ ಆಗಿರುತ್ತಿತ್ತು. ಅಂದಿನ ಜಮ್ಮು-ಕಾಶ್ಮೀರದ ಜನ ಕೂಡ ಪಾಕಿಸ್ತಾನದ ಜೊತೆ ಸೇರುವ ಇರಾದೆ ಹೊಂದಿರಲಿಲ್ಲ. ಪಾಕಿಸ್ತಾನದ ಜೊತೆಗೆ ಸೇರುವುದೇ ಅಂದಿನ ಕಾಶ್ಮೀರದ ಜನಾಭಿಪ್ರಾಯ ಆಗಿದ್ದಲ್ಲಿ ಜನ ಪಾಕ್ ಜೊತೆ ಸಹಕರಿಸುತ್ತಿದ್ದರೇ ವಿನಾ ಪಾಕ್ ಆಕ್ರಮಣದ ವಿರುದ್ಧ ಸಿಡಿದೇಳುತ್ತಿರಲಿಲ್ಲ. ಕಾಶ್ಮೀರದ ಮೂರನೆಯ ಎರಡು ಭಾಗದಷ್ಟು ಭೂ ಪ್ರದೇಶ ಭಾರತೀಯ ಸೇನೆಯ ವಶವಾಯಿತು. ಉಳಿದ ಉತ್ತರದ ಸೀಮೆಯನ್ನು ಪಾಕಿಸ್ತಾನ ಮತ್ತು ಪೂರ್ವದ ಭಾಗಗಳನ್ನು ಚೀನಾ ದೇಶ ಆಕ್ರಮಿಸಿಕೊಂಡವು.

ಒಪ್ಪಂದದ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370ನೆಯ ಅನುಚ್ಛೇದದ ಅನುಸಾರ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಪ್ರದೇಶದಲ್ಲಿ ಒಟ್ಟಾರೆ ಶಾಂತಿ ಸ್ಥಾಪನೆ ಆದ ನಂತರ ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ಜನಮತಗಣನೆ ನಡೆಸುವ ಆಶ್ವಾಸನೆಯೂ ಭಾರತದಿಂದ ಮಹಾರಾಜನಿಗೆ ದೊರೆತಿತ್ತು. ಪ್ರದೇಶದಲ್ಲಿ ಶಾಂತಿ ನೆಲೆಸಲಿಲ್ಲ. ಜನಮತಗಣನೆ ಸತತ ಮುಂದಕ್ಕೆ ಹೋಯಿತು. 1987ರಲ್ಲಿ ಹಲವಾರು ಇಸ್ಲಾಮಿಕ್ ರಾಜಕೀಯ ಪಕ್ಷಗಳ ಒಕ್ಕೂಟವೊಂದರ ಸರ್ಕಾರ ರಚನೆಯ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ತಡೆಯಿತು. ಅಂದು ಹುಟ್ಟಿದ ಸಾಮೂಹಿಕ ಪ್ರತಿರೋಧ ದಿನದಿಂದ ದಿನಕ್ಕೆ ಬಲಿಯುತ್ತ ಪ್ರತ್ಯೇಕವಾದವನ್ನು ಬೆಳೆಸುತ್ತ ಹೋಯಿತು. ಪಾಕಿಸ್ತಾನಿ ಹಿತಾಸಕ್ತಿಗಳು ಕಾಶ್ಮೀರಕ್ಕೆ ಇಸ್ಲಾಮಿಕ್ ಜಿಹಾದಿಗಳನ್ನು ರಫ್ತು ಮಾಡಿ ಬೆಂಕಿ ಆರದಂತೆ ನೋಡಿಕೊಂಡವು.
ಭಾರತದ ವಶದಲ್ಲಿರುವ ಜಮ್ಮು- ಕಾಶ್ಮೀರದ ಶೇ. 60ರಷ್ಟು ಜನ ಮುಸ್ಲಿಮರು. ಹೀಗಾಗಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶದ ಏಕೈಕ ರಾಜ್ಯವಿದು. ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಪ್ರತಿಪಾದಿಸಿ ಮುಸ್ಲಿಮ್ ಜನಬಾಹುಳ್ಯದ ಸೀಮೆಗಳನ್ನು ಒಳಗೊಂಡ ಪಾಕಿಸ್ತಾನವನ್ನು ಪಡೆದುಕೊಂಡಿದ್ದರು ಜಿನ್ನಾ. ಈ ಸಿದ್ಧಾಂತದ ಪ್ರಕಾರ ಪಾಕಿಸ್ತಾನಕ್ಕೆ ಅಂಟಿದಂತೆಯೇ ಇರುವ ಮುಸ್ಲಿಮ್ ಬಾಹುಳ್ಯದ ಜಮ್ಮು-ಕಾಶ್ಮೀರ ಸ್ವಾಭಾವಿಕವಾಗಿ ತನಗೇ ಸೇರಬೇಕಾದ ಭೂಭಾಗ ಎಂಬುದು ಪಾಕಿಸ್ತಾನದ ಅಚಲ ನಂಬಿಕೆ.
ಮುಸ್ಲಿಮ್ ಜನ ಬಾಹುಳ್ಯದ ಪ್ರದೇಶಗಳ ಆಧಾರದ ಮೇಲೆ ಪಾಕಿಸ್ತಾನವನ್ನು ಪಡೆದರು ಮಹಮ್ಮದ್ ಅಲಿ ಜಿನ್ನಾ. ಈ ಸೂತ್ರದ ಮೇರೆಗೆ ಶೇ. 60ರಷ್ಟು ಮುಸಲ್ಮಾನ ಜನಸಂಖ್ಯೆ ಹೊಂದಿದ್ದು ತನ್ನ ಗಡಿಗೆ ಅಂಟಿದಂತಿರುವ ಕಾಶ್ಮೀರ ಇಡಿಯಾಗಿ ತನಗೇ ಸೇರಬೇಕೆಂಬುದು ಪಾಕಿಸ್ತಾನದ ಜಿದ್ದು.
ಇನ್ನೂ ಹಿಂದೆ ಕಾಶ್ಮೀರ:
ಎಂಟರಿಂದ 13ನೆಯ ಶತಮಾನದವರೆಗೆ ಈ ಕಾಶ್ಮೀರವನ್ನು ಆಳಿದ್ದು ಹಿಂದೂ ರಾಜ ವಂಶಗಳು. 13ನೆಯ ಶತಮಾನದ ಆರಂಭದ ಹೊತ್ತಿಗೆ ಕಾಶ್ಮೀರದ ಮುಂದಾಳು ಜನವರ್ಗ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿತ್ತು. 14ನೆಯ ಶತಮಾನದ ಅಂತ್ಯದ ವೇಳೆಗೆ ಈ ಪ್ರದೇಶದ ಬಹುಪಾಲು ಜನ ಮುಸಲ್ಮಾನರಾಗಿದ್ದರು. ಮುಂದಿನ ಐದು ಶತಮಾನಗಳ ಕಾಲ ಕಾಶ್ಮೀರ ಮುಸ್ಲಿಂ ಆಳ್ವಿಕೆಗೆ ಒಳಪಟ್ಟಿತ್ತು. 1819ರಲ್ಲಿ ಪಂಜಾಬಿನ ರಾಜಾ ರಣಜಿತ್ ಸಿಂಗ್ ಕಾಶ್ಮೀರವನ್ನು ಗೆದ್ದುಕೊಂಡ. ಸಿಖ್ಖರೊಂದಿಗೆ ನಡೆದ ಯುದ್ಧದಲ್ಲಿ ಗೆದ್ದ ಬ್ರಿಟಿಷರು ಈ ಭೂಭಾಗದ ಮೇಲೆ ಹಕ್ಕು ಸ್ಥಾಪಿಸಿದರು. 1846ರಲ್ಲಿ ಬ್ರಿಟಿಷರು ರಾಜಾ ಗುಲಾಬ್ ಸಿಂಗ್ ನನ್ನು ಕಾಶ್ಮೀರದ ಮಹಾರಾಜನನ್ನಾಗಿ ನೇಮಕ ಮಾಡಿದರು. 1947ರ ತನಕ ಇದೇ ಡೋಗ್ರಾ ಸಂತತಿ ಈ ಭಾಗವನ್ನು ಆಳಿತು. ಈ ಆಳ್ವಿಕೆಯಡಿ ಬಹುಸಂಖ್ಯಾತರಾಗಿದ್ದರೂ ಮುಸಲ್ಮಾನರು ದುಬಾರಿ ಕಂದಾಯ, ಬಿಟ್ಟಿ ಚಾಕರಿ ಹಾಗೂ ಭೇದಭಾವದ ಕಾನೂನುಗಳ ತೀವ್ರ ದಬ್ಬಾಳಿಕೆಗೆ ತುತ್ತಾಗಿದ್ದರು ಎಂದು ಇತಿಹಾಸ ದಾಖಲಿಸಿದೆ.