“ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಹ ಭಾರತದ ಸಂವಿಧಾನದ 21ನೇ ವಿಧಿಯನ್ನು ಅಮಾನತ್ತಿನಲ್ಲಿಡುವಂತಿಲ್ಲ” ಎಂಬುದಾಗಿ ವಿವಿಧ ಪ್ರಕರಣಗಳಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಈ ವಿಧಿಯು ಪ್ರತಿ ಪ್ರಜೆಗೆ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬದುಕುವ ಹಕ್ಕಿನ ಅವಿಭಾಜ್ಯ ಅಂಶವೆಂದು ಪರಿಗಣಿಸಲಾಗಿದೆ.
ಆದರೆ, ಸಂವಿಧಾನದ 370 ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು ಕೈಗೊಂಡಿರುವ ಕಟ್ಟುನಿಟ್ಟಿನ ಕಾನೂನು ಕ್ರಮಗಳು ವ್ಯಕ್ತಿಯ ಜೀವಿಸುವ ಹಕ್ಕಿಗೆ ಕುತ್ತು ತಂದಿದೆ. ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹೊರಜಗತ್ತಿಗೆ ತಿಳಿಬಾರದು ಎಂಬ ಉದ್ದೇಶದಿಂದ ಅಂತರ್ಜಾಲ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಸ್ಥಗಿತಗೊಳಿಸಿರುವ ಕಾರಣ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಪರೋಕ್ಷವಾಗಿ ಸಂವಿಧಾನದ 21ನೇ ವಿಧಿಯ ಅಡಿಯ ಹಕ್ಕನ್ನು ಸಹ ನಿರಾಕರಿಸಿದಂತಾಗಿದೆ.
ಜಮ್ಮು-ಕಾಶ್ಮೀರದ ಜನರು ಪ್ರತಿಯೊಂದು ಮೂಲಭೂತ ಹಕ್ಕು ಪಡೆಯಲು ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿಯುವಂತಾಗಿದ್ದು, ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವಾ ಸಂಸ್ಥೆಗಗಳಲ್ಲಿ ಅಂತರ್ಜಾಲ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಮರುಸ್ಥಾಪನೆಗೊಳಿಸುವಂತೆ ಕೋರಿ ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಡಾ. ಸಮೀರ್ ಕೌಲ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ಪ್ರಜಾಕಲ್ಯಾಣ ರಾಜ್ಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಆರೈಕೆ ಒದಗಿಸುವುದು “ಸರ್ಕಾರದ ಅತ್ಯಂತ ಆದ್ಯತೆಯ ಕೆಲಸ”. ಆದರೆ ಅಂತರ್ಜಾಲ ಸೇವೆಗಳನ್ನು ಸುಧೀರ್ಘಕಾಲ ಸ್ಥಗಿತಗೊಳಿಸಿರುವುದರಿಂದ ಈ ಸೇವೆಗಳಿಗೆ ತೊಡಕುಂಟಾಗಿದೆ. ನಾವು ಡಿಜಿಟಲ್ ಇಂಡಿಯಾ ಯುಗದಲ್ಲಿ ಬದುಕುತ್ತಿದ್ದು, ವೈದ್ಯಕೀಯ ಸೇವೆಗಳು ಸೇರಿದಂತೆ ಎಲ್ಲಾ ಸೇವೆಗಳು ಅಂತರ್ಜಾಲವನ್ನು ಅವಲಂಬಿಸಿರುವುದರಿಂದ, ಅಂತರ್ಜಾಲ ಸ್ಥಗಿತಗೊಳಿಸುವಿಕೆಯು ಈ ಎಲ್ಲಾ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಡಾ. ಕೌಲ್ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

2012 ರ ನಂತರ ಜಮ್ಮು-ಕಾಶ್ಮೀರದಲ್ಲಿ 180 ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದ್ದು, ಈ ಬಾರಿ 370ನೇ ವಿಧಿ ರದ್ದುಗೊಳಿಸುವಿಕೆ ನಿರ್ಧಾರ ಕೈಗೊಳ್ಳುವ ಮೊದಲೇ ಅಂತರ್ಜಾಲ, ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ತಿಂಗಳಿಗೂ ಹೆಚ್ಚು ಕಾಲ ಕಣಿವೆ ರಾಜ್ಯದಲ್ಲಿ ಹಿಂದೆಂದೂ ಕಾಣದ ಸಂಪರ್ಕ ದಿಗ್ಬಂಧನ ವಿಧಿಸಿದಂತಾಗಿದೆ ಎಂಬ ಅಂಶವನ್ನೂ ತಿಳಿಸಲಾಗಿದೆ.
ಸಂವಿಧಾನದ 21ನೇ ವಿಧಿ ಅನ್ವಯ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಹಕ್ಕು ಮೂಲಭೂತ ಹಕ್ಕಿನ ಭಾಗವಾಗಿರುವುದರಿಂದ ಸರ್ಕಾರವು ವೈದ್ಯಕೀಯ ಸೇವಾ ಸಂಸ್ಥೆಗಳಲ್ಲಿನ ಸಂಪರ್ಕ ಸೇವೆಗಳನ್ನು ಪ್ರತಿಬಂಧಿಸುತ್ತಿರುವುದು ಮೂಲಭೂತ ಹಕ್ಕಗಳ ಗಂಭೀರ ಉಲ್ಲಂಘನೆಯಾಗಿದೆ. ಅಲ್ಲದೆ, ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಛಾಪ್ಟರ್ 4 ಮತ್ತು ಅಂತರರಾಷ್ಟ್ರೀಯ ಒಪ್ಪಂದದ ಬಾಧ್ಯತೆಗಳ ವಿರುದ್ಧವಾಗಿದೆ ಎಂಬ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವುದರಿಂದಾಗಿ ಸರ್ಕಾರಿ ಪ್ರಾಯೋಜಿತ ಆಯುಷ್ಮಾನ್ ಭಾರತ ಮತ್ತಿತರ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನೆ ಪಡೆಯಲಾಗದೆ ಬಡ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಔಷಧ, ಶಸ್ತ್ರಚಿಕಿತ್ಸಾ ಸಲಕರಣೆಗಳು, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸಾ ಉಪಕರಣಗಳನ್ನು ಆನ್ ಲೈನ್ ಬುಕಿಂಗ್ ಮೂಲಕ ತರಿಸಿಕೊಳ್ಳಲು ಅಡಚಣೆಯಾಗಿದೆ. ಪ್ರಯೋಗಾಲಯಗಳಲ್ಲಿ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಲು ತೊಂದರೆಯಾಗಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲು ತೊಡಕಾಗಿದೆ ಎಂಬುದಾಗಿ ಪಿಐಎಲ್ ನಲ್ಲಿ ವಿವರಿಸಲಾಗಿದೆ.
ಅಂತರ್ಜಾಲ ಮತ್ತೊ ಮೊಬೈಲ್ ಸೇವೆಗಳನ್ನು ಮರುಸ್ಥಾಪಿಸದಿದ್ದಲ್ಲಿ ಈ ಸೇವೆಗಳ ಅಗತ್ಯವಿರುವ ರೋಗಿಗಳ ಆರೋಗ್ಯದ ಮೇಲೆ ಸುಧಾರಿಸಲಾಗದ ಪರಿಣಾಮ ಬೀರಲಿದೆ. ಅಲ್ಲದೆ, ಇದೇ ರೀತಿ ಈ ಸೇವೆಗಳ ಸ್ಥಗಿತಗೊಳಿಸುವಿಕೆ ಮುಂದುವರಿದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳಲ್ಲಿ ದುರಂತ ಪರಿಣಾಮಗಳುಂಟಾಗಲಿವೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ಪಿಐಎಲ್ ನಲ್ಲಿ ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಸಂಪರ್ಕ ಸಚಿವಾಲಯ, ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯನ್ನು ಎದುರುದಾರರನ್ನಾಗಿ ಮಾಡಲಾಗಿದ್ದು, ವೈದ್ಯಕೀಯ ಸಂಸ್ಥೆಗಳಲ್ಲಿ ಅಂತರ್ಜಾಲ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಮರುಸ್ಥಾಪಿಸುವಂತೆ ಹಾಗೂ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಮೊಬೈಲ್ ಫೋನ್ ಸೇವೆಗಳನ್ನು ಸಹ ಪುನಃಸ್ಥಾಪಿಸುವಂತೆ ನಿರ್ದೇಶಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ಸ್ಥಿತಿ ಇದಾದರೆ, ಅತ್ತ ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಭಾರತವು ಕಾಶ್ಮೀರ ಕುರಿತಾದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಮತ್ತು ಇತರ ರಾಜತಾಂತ್ರಿಕ ಪ್ರತಿನಿಧಿಗಳು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದಾಗಿ ಭಾರತದ ವಿರುದ್ಧ ಎತ್ತಿದ ಆಕ್ಷೇಪ ಮತ್ತು ಆತಂಕಗಳಿಗೆ ತಕ್ಕ ಉತ್ತರ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ವಿಜಯ್ ಠಾಕುರ್ ಸಿಂಗ್ ಅವರು, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಜಾತ್ಯತೀತ ರಾಜ್ಯ ವ್ಯವಸ್ಥೆ ಬಗ್ಗೆ ಅಚಲ ನಂಬಿಕೆ ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಮ್ಮ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯು ಮೂಲಭೂತ ಹಕ್ಕುಗಳ ರಕ್ಷಕನಂತೆ ಕೆಲಸ ಮಾಡುತ್ತಿದೆ. ನಮ್ಮ ಮುಕ್ತ ಮಾಧ್ಯಮ ವ್ಯವಸ್ಥೆ, ಸ್ಪಂದನಶೀಲ ನಾಗರಿಕ ಸಮಾಜ ಮತ್ತು ನಿಷ್ಪಕ್ಷಪಾತ ಮಾನವ ಹಕ್ಕುಗಳ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗಗಳ ಮಾನವ ಹಕ್ಕುಗಳ ರಕ್ಷಣೆಗೆ ಪರಿಣಾಮಕಾರಿ ಚೌಕಟ್ಟು ರೂಪಿಸಿವೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಸವಾಲಿನ ಪರಿಸ್ಥಿತಿಗಳ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಮೂಲಭೂತ ಸೇವೆಗಳು, ಅಗತ್ಯವಸ್ತುಗಳ ಸರಬರಾಜು ಮತ್ತಿತರ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.