ಅರಣ್ಯ ಪ್ರದೇಶದಲ್ಲಿ, ಕಾವೇರಿ ನದಿ ಪಾತ್ರ ಪ್ರದೇಶದಲ್ಲಿ 253 ಕೋಟಿ ಸಸಿ ಗಿಡ ನೆಡುವ ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್ ನ ಯೋಜನೆ ಬಗ್ಗೆ ರಾಜ್ಯ ಸರ್ಕಾರದ ಬಳಿ ಮಾಹಿತಿಯೇ ಇಲ್ಲವೇ? ಹೀಗೊಂದು ಅನುಮಾನಕ್ಕೆ ಹಲವಾರು ಕಾರಣಗಳಿವೆ.
ಇಶಾ ಫೌಂಡೇಶನ್ ನ `ಕಾವೇರಿ ಕೂಗು’ (Cauvery Calling) ಯೋಜನೆಯ ಬಗ್ಗೆ ವಿವರ ಒದಗಿಸುವಂತೆ ಪ್ರತಿಧ್ವನಿ ಮಾಹಿತಿ ಹಕ್ಕಿನಡಿ ಅರ್ಜಿ ದಾಖಲಿಸಿತ್ತು. ಈ ಬಗ್ಗೆ ಲಿಖಿತ ಮಾಹಿತಿ ಇನ್ನೂ ಒದಗಿಸಲಾಗಿಲ್ಲ. ಆದರೆ, ಹಣಕಾಸು ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ ಸರ್ಕಾರದ ಬಳಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದಲ್ಲದೇ, `ಕಾವೇರಿ ಕೂಗು’ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ಹಣಕಾಸು ಬಿಡುಗಡೆ ಮಾಡಲಾಗಿದೆಯೇ ಎಂದೂ ಕೂಡ ಮಾಹಿತಿ ಹಕ್ಕಿನಡಿಯ ಅರ್ಜಿಯಲ್ಲಿ ಕೇಳಲಾಗಿದೆ.
ಈ ನಡುವೆ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂಬ ಅನುಮಾನ ದಟ್ಟವಾಗಲು ಇನ್ನೊಂದು ಕಾರಣವೂ ಇದೆ. ಇಶಾ ಫೌಂಡೇಶನ್ ‘ಕಾವೇರಿ ಕೂಗು’ ಅಭಿಯಾನದಡಿ ಸಾರ್ವಜನಿಕರಿಂದ ಪ್ರತಿ ಸಸಿಗೆ ರೂ.42 ಸಂಗ್ರಹಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ವಕೀಲ ಎ. ವಿ. ಅಮರ್ ನಾಥನ್ ಸೆಪ್ಟಂಬರ್ 12ರಂದು ಕರ್ನಾಟಕ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ವಿಭಾಗೀಯ ಪೀಠ ಸೆಪ್ಟಂಬರ್ 17ರಂದು (ಮಂಗಳವಾರ) ಇಶಾ ಫೌಂಡೇಶನ್ ಗೆ ನೋಟಿಸ್ ನೀಡಿದೆ. ಅಲ್ಲದೆ, ಇದರ ಬಗ್ಗೆ ಮೂರು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೂ ಸೂಚಿಸಿದೆ.
Also Read: ಕೇವಲ ಮರ ನೆಟ್ಟರೆ ‘ಕಾವೇರಿ ಕೂಗು’ ನಿಲ್ಲುವುದೇ?
ಅರ್ಜಿಯ ಪ್ರಕಾರ, ಜನರಿಂದ ಪ್ರತಿ ಸಸಿಗೆ ರೂ. 42 ಪಡೆದು, ಕಾವೇರಿಯನ್ನು ಉಳಿಸಲು 253 ಕೋಟಿ ಸಸಿಗಳನ್ನು ನೆಡಲು ಫೌಂಡೇಶನ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿ ಸಸಿಗೆ ರೂ. 42 ರೂ ಸಂಗ್ರಹಿಸಿದರೆ, ಒಟ್ಟು ರೂ 10,626 ಕೋಟಿ ಸಂಗ್ರಹವಾಗುತ್ತದೆ. ಸರ್ಕಾರಿ ಭೂಮಿಯಲ್ಲಿ ಯೋಜನೆಗಳನ್ನು ಕೈಗೊಳ್ಳಲು, ಖಾಸಗಿ ಸಂಸ್ಥೆ ಇಷ್ಟು ದೊಡ್ಡದ ಮೊತ್ತವನ್ನು ಸಾರ್ವಜನಿಕವಾಗಿ ಸಂಗ್ರಹಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತನಿಖೆ ನಡೆಸಿಲ್ಲ ಎಂಬುದು ಅರ್ಜಿಯಲ್ಲಿ ಮಾಡಲಾಗಿರುವ ಆಕ್ಷೇಪ.

ಅರ್ಜಿದಾರರ ಇತರ ಆಕ್ಷೇಪಣೆಗಳು:
ಇಶಾ ಫೌಂಡೇಶನ್ ಇದನ್ನು ‘ಕಾವೇರಿ ಕೂಗು’ ಎಂಬ ಸಾರ್ವಜನಿಕ ಹೊಣೆಗಾರಿಕೆಯ ಕರೆ ಕೊಟ್ಟಿದೆ. ಈ ಯೋಜನೆಯಡಿ ಕಾವೇರಿ ನದಿ ವ್ಯಾಪ್ತಿಯ 639 ಕಿ. ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಉದ್ದೇಶಿಸಿದೆ. ಕಾವೇರಿ ನದಿ ಜಲಾಶಯನ ಪ್ರದೇಶವನ್ನು ಅಧ್ಯಯನ ಮಾಡಿದ್ದರಿಂದ, ಕಾವೇರಿ ಕೂಗು ಎಂಬ ಯೋಜನೆಯನ್ನು ಮಾಡಿಕೊಳ್ಳಲಾಗಿದೆ ಎಂದು ಇಶಾ ಫೌಂಡೇಶನ್ ಹೇಳಿಕೊಂಡಿದೆ. ಅಲ್ಲದೆ, 02.09.2019ರಂದು ಜಗ್ಗಿ ವಾಸುದೇವ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲದಿಂದ ಬೈಕ್ ಜಾಥಾ ಆಯೋಜಿಸಲಾಗಿತ್ತು. 08.09.2019ರಂದು ಬೆಂಗಳೂರಿನಲ್ಲಿ ಕೂಡ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು.
ಕರ್ನಾಟಕದ ಹಳ್ಳಿಯೊಂದರ ಬಡ ಮಹಿಳೆ ಸಾಲು ಮರದ ತಿಮ್ಮಕ್ಕ ಕಳೆದ ಹಲವು ದಶಕಗಳಿಂದ ತನಗೆ ದೊರೆಯುತ್ತಿರುವ ಕಡಿಮೆ ಆದಾಯದಿಂದಲೇ ಸಾಕಷ್ಟು ಮರಗಳನ್ನು ನೆಟ್ಟಿದ್ದಾರೆ. ಅವರು ಸಾರ್ವಜನಿಕರಿಂದ ಯಾವುದೇ ಹಣವನ್ನು ಸಂಗ್ರಹಿಸಲಿಲ್ಲ. ಜಾದವ್ ಪಾಯೆಂಗ್ (Jadav Payeng) ಎನ್ನುವ ಪರಿಸರವಾದಿ ರಾಜಸ್ಥಾನದಲ್ಲಿ ನೀರಿನ ಕೊರತೆ ಇದ್ದ ಕಾರಣ ಅರಣ್ಯವನ್ನು ಸೃಷ್ಟಿಸಿದ್ದರು.
ಶ್ರೀ ಸತ್ಯ ಸಾಯಿಬಾಬಾ ಅವರು ಹಣವನ್ನು ಪಡೆಯದೇ ಆಂಧ್ರ ಪ್ರದೇಶದಿಂದ ಚೆನ್ನೈಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಬೆಂಗಳೂರಿನ ವಕೀಲರ ಸಂಘ ಯಾವುದೇ ರೀತಿಯ ಹಣವನ್ನು ಪಡೆಯದೇ ನಗರದಲ್ಲಿ ಅನೇಕ ಮರಗಳನ್ನು ನೆಟ್ಟಿದ್ದಾರೆ. ಇಂತಹದೇ ಮಾರ್ಗದಲ್ಲಿ ಕೆಲಸ ಮಾಡುವ ಹಲವಾರು ಸಂಸ್ಥೆಗಳು ಹಾಗೂ ಸಂಘಟನೆಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇಶಾ ಫೌಂಡೇಶ್ ಸಂಸ್ಥೆ ಕಾವೇರಿ ನದಿ ಜಲಾಯನ ಪ್ರದೇಶದಲ್ಲಿ ಅಧ್ಯಯನಗಳನ್ನು ನಡೆಸಿದ್ದೇವೆ ಎಂದು ಹೇಳಿದೆ. ಆದರೆ ಅಧ್ಯಯನ ನಡೆಸಿದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಹಾಗೂ ಇದರ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಇಂತಹ ಯಾವುದೇ ಪ್ರಕ್ರಿಯೆಯೂ ನಡೆದಿಲ್ಲ. ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯದೆ, ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಭೂಮಿಯಲ್ಲಿ ಯಾವುದೇ ಕೆಲಸವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಯೋಜನೆಯ ವರದಿಯನ್ನು ಪರಿಶೀಲಿಸಿದ ನಂತರವೇ ಅನುಮೋದನೆ ನೀಡಬೇಕು.
ಸರ್ಕಾರಿ ಭೂಮಿಯಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಹಣ ಸಂಗ್ರಹಿಸಲು ಈ ಖಾಸಗಿ ಸಂಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ. ಯಾವುದೇ ನಿಬಂಧನೆಗಳಿಲ್ಲದೆ ಚಟುವಟಿಕೆಗಳನ್ನು ನಡೆಸಿದರೆ ಕಾನೂನು ಬಾಹಿರವಾಗುತ್ತದೆ. ಈ ಅರ್ಜಿ ಇತ್ಯರ್ಥವಾಗುವ ತನಕ ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ಇಶಾ ಫೌಂಡೇಶನ್ ನ ‘ಕಾವೇರಿ ಕೂಗು’ ಯೋಜನೆಯಡಿ ಯಾವುದೇ ಹಣ ಸಂಗ್ರಹ ಮಾಡದಂತೆ ತಡೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಚಾರಣೆಯನ್ನು ನ್ಯಾಯಪೀಠ ಅಕ್ಟೋಬರ್ 22ಕ್ಕೆ ಮುಂದೂಡಿದೆ.