ಇತ್ತೀಚಿನ ದಿನಗಳವರೆಗೆ ಜಾರಿ ನಿರ್ದೇಶನಾಲಯ (ಇಡಿ) ಎಂದರೇನು ಅಂತಹದ್ದೊಂದು ತನಿಖಾ ಸಂಸ್ಥೆ ಇದೆ ಎಂಬುದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ, ಈಗ ಇಡಿ ಹೆಸರೆತ್ತಿದರೆ ವೈಟ್ ಕಾಲರ್ ಆರೋಪಿಗಳೆಲ್ಲಾ ಪತರಗುಟ್ಟುತ್ತಿದ್ದಾರೆ. ಇಡಿ ತನಿಖೆ ಮಾಹಿತಿ ಹೊರಬರುತ್ತಿದ್ದಂತೆ ಆರ್ಥಿಕ ಅಪರಾಧಗಳಿಗೆ ಇಷ್ಟೊಂದು ಮಹತ್ವವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ಆರ್ಥಿಕ ಅಪರಾಧಗಳ ಕುರಿತಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಅಕ್ರಮ ಹಣ, ಆಸ್ತಿ ಗಳಿಕೆ ವಿಚಾರದಲ್ಲಿ ಹೊಸ ಮಾದರಿ.ಯ ಅಪರಾಧಗಳ ಮೇಲೆ ಬೆಳಕು ಚೆಲ್ಲುತ್ತಿದೆ.
ಮಾಡಿದ ಆಸ್ತಿಗೆ ತೆರಿಗೆ ಕಟ್ಟಿದರೆ ಅದು ಸಕ್ರಮವಾಯಿತು ಎಂಬ ವಾತಾವರಣವಿತ್ತು. ಅದೇ ಧೈರ್ಯದ ಮೇಲೆಯೇ ಡಿ. ಕೆ. ಶಿವಕುಮಾರ್ ಅವರು ತಮ್ಮ ಆಸ್ತಿ 800 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಅದಕ್ಕೆ ತೆರಿಗೆಯನ್ನೂ ಪಾವತಿಸಿದ್ದರು. ತೆರಿಗೆ ಪಾವತಿಸಿದ ಮೇಲೆ ಅದು ಅಕ್ರಮ ಹೇಗಾದೀತು ಎಂಬ ಪ್ರಶ್ನೆಯೊಂದಿಗೆ ಅವರು ಧೈರ್ಯವಾಗಿ ಇಡಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಆರಂಭದಲ್ಲಿ ನಡೆದ ವಿಚಾರಣೆ ಶಿವಕುಮಾರ್ ಅವರು ಎಷ್ಟು ಆಸ್ತಿ ಗಳಿಸಿದ್ದಾರೆ ಎಂಬ ಕುರಿತು ಇತ್ತು. ಹೀಗಾಗಿ ಗಳಿಸಿದ ಆಸ್ತಿಗೆ ತೆರಿಗೆ ಕಟ್ಟಿದ್ದೇನೆ. ಹೀಗಾಗಿ ಸುಲಭವಾಗಿ ಇಡಿ ಕುಣಿಕೆಯಿಂದ ಹೊರಬರುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ, ಯಾವಾಗ ಇಡಿ ಕಸ್ಟಡಿ ಅವಧಿ ಮುಗಿದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತೋ ತನಿಖೆಯ ಸ್ವರೂಪವೇ ಬದಲಾಯಿತು. ಆರ್ಥಿಕ ಅಪರಾಧಗಳು ದಾಖಲೆಗಳ ಮೇಲೆ ನಡೆಯುವುದರಿಂದ ಸುಲಭವಾಗಿ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು.
ಡಿ. ಕೆ. ಶಿವಕುಮಾರ್ ಪ್ರಕರಣದಲ್ಲಿ ಇದುವರೆಗೆ ಅವರ ಆಸ್ತಿಯ ಮೊತ್ತ, ಬ್ಯಾಂಕ್ ವಹಿವಾಟುಗಳ ಮೇಲೆಯೇ ವಿಚಾರಣೆ ನಡೆಯುತ್ತಿತ್ತು. ಇವೆಲ್ಲವೂ ದಾಖಲೆ ಹೊಂದಿರುವ ವಹಿವಾಟು ಮತ್ತು ತೆರಿಗೆ ಪಾವತಿಯಾಗಿದೆ ಎಂಬ ಕಾರಣಕ್ಕೆ ವಿಚಾರಣೆ ಅಷ್ಟಕ್ಕೆ ಕೊನೆಗೊಳ್ಳುತ್ತದೆ. ಶಿವಕುಮಾರ್ ಶೀಘ್ರ ಇಡಿ ಕುಣಿಕೆಯಿಂದ ಹೊರಬರುತ್ತಾರೆ ಎಂಬ ನಿರೀಕ್ಷೆ ಆರಂಭವಾಗತೊಡಗಿತು. ಆದರೆ, ಗುರುವಾರ ಇಡಿ ಪರ ವಕೀಲರು ಕೋರ್ಟ್ ನಲ್ಲಿ ಮಂಡಿಸಿದ ವಾದ ಪ್ರಕರಣ ಅಷ್ಟೊಂದು ಸಲೀಸಲ್ಲ. ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.

ಇಡಿ ವಾದವೇನು?
ಅಕ್ರಮ ಹಣ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ ಕಾಯ್ದೆ) ಅಡಿ ಇದೀಗ ಇಡಿ ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿದೆ. ಈ ತನಿಖೆಗೂ ಆದಾಯ ತೆರಿಗೆ ಪಾವತಿಗೂ ಸಂಬಂಧ ಇಲ್ಲ. ಅಂದರೆ, ತಾನು ಘೋಷಿಸಿದ ಆಸ್ತಿಗೆ ಆದಾಯ ತೆರಿಗೆ ಪಾವತಿಸಲಾಗಿದೆ ಎಂದ ಮಾತ್ರಕ್ಕೆ ಸಂಕಷ್ಟದಿಂದ ಪಾರಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ, ಇಡಿ ಹೇಳುವ ಪ್ರಕಾರ ತೆರಿಗೆ ಕಟ್ಟಿದ ಮಾತ್ರಕ್ಕೆ ಅದು ಆದಾಯ ತೆರಿಗೆ ವ್ಯಾಪ್ತಿಗೆ ಬರಬಹುದು. ಆದರೆ, ಆ ಹಣ ಅಕ್ರಮವಾಗಿ ಗಳಿಸಿದ್ದರೆ ಸಕ್ರಮವಾಗಲು ಸಾಧ್ಯವಿಲ್ಲ. ಹಾಗೇನಾದರೂ ಆಗುವುದಿದ್ದರೆ ಭ್ರಷ್ಟಾಚಾರದ ಮೂಲಕ ಹಣ ಗಳಿಸಿ ಅದಕ್ಕೆ ತೆರಿಗೆ ಪಾವತಿಸಿದರೆ ಆಗ ಭ್ರಷ್ಟಾಚಾರ ಆರೋಪವೇ ಇರುವುದಿಲ್ಲ. ಹೀಗಿರುವಾಗ ಅಕ್ರಮ ಗಳಿಕೆ ಎಂಬ ಶಬ್ಧವೇ ಅಪ್ರಸ್ತುತವಾಗುತ್ತದೆ.
ಇನ್ನು ಶಿವಕುಮಾರ್ ಎಷ್ಟು ಆಸ್ತಿ ಘೋಷಣೆ ಮಾಡಿದ್ದಾರೆ ಎಂಬುದು ಅಪ್ರಸ್ತುತ. ಗಳಿಸಿದ ಹಣ ಮತ್ತು ಆಸ್ತಿಯ ಮೂಲ ಪತ್ತೆ ಮಾಡುವುದು (ಕಷ್ಟಪಟ್ಟು ಸಂಪಾದಿಸಿದ್ದೇ, ಅಡ್ಡದಾರಿ ಹಿಡಿದು ಸಂಪಾದಿಸಿದ್ದೇ) ನಮ್ಮ ಕೆಲಸ. ಅದಕ್ಕಾಗಿ ಹಣಕಾಸು ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್ಎ) ಯಡಿ ತನಿಖೆ ನಡೆಸಲಾಗುತ್ತಿದೆ ಎಂಬುದು ಇಡಿ ವಾದ.
ಆದಾಯವಲ್ಲ, ಆದಾಯದ ಮೂಲ ಬೇಕು
1997ರಿಂದ 2017ರವರೆಗೆ ಅವರು ಕೃಷಿ ಆದಾಯ 1.38 ಕೋಟಿ ರೂ. ಹಾಗಿದ್ದರೆ 800 ಕೋಟಿ ಎಲ್ಲಿಂದ ಸಂಪಾದಿಸಿದರು. ಕೃಷಿ ಭೂಮಿಯಲ್ಲಿ ಚಿನ್ನ ಬೆಳೆದರೇ ಎಂಬುದು ನನ್ನ ಆಸ್ತಿಯ ಮೂಲ ಕೃಷಿ ಆದಾಯ ಎಂಬ ಶಿವಕುಮಾರ್ ವಾದಕ್ಕೆ ಇಡಿ ಅಧಿಕಾರಿಗಳ ತಿರುಗೇಟು. ಅದರೆ, ಕೃಷಿಯಲ್ಲಿ ಹೇಗೆ ಅಷ್ಟೊಂದು ಸಂಪಾದಿಸಿದೆ ಎಂಬುದನ್ನು ಶಿವಕುಮಾರ್ ಸರಿಯಾಗಿ ವಿವರಿಸಬೇಕು. ಇಲ್ಲವಾದಲ್ಲಿ ಅದು ಅಕ್ರಮ ಗಳಿಕೆ. ಇದು ಪಿಎಂಎಲ್ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ಇಡಿ ತನಿಖಾಧಿಕಾರಿಗಳ ಈ ವಾದವೇ ಈಗ ಶ್ರೀಮಂತರ ನಿದ್ದೆಗೆಡಿಸಿದೆ. ಕೇಂದ್ರ ಸರ್ಕಾರ ಅಥವಾ ಇಡಿ ಅಧಿಕಾರಿಗಳ ತನಿಖೆ ರಾಜಕೀಯ ಪ್ರೇರಿತವಾಗಿದ್ದರೆ ಭಯವಿಲ್ಲ. ಆದರೆ, ತನ್ನ ಅಧಿಕಾರ ಬಳಸಿ ತನ್ನ ತನಿಖೆಯನ್ನು ಸಾರ್ವತ್ರಿಕವಾಗಿ ವಿಸ್ತರಿಸಿದರೆ ಆಗ ಸಾವಿರಾರು ಮಂದಿ ಡಿ. ಕೆ. ಶಿವಕುಮಾರ್ ಎದುರಿಸಿದ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ.
2005ರಲ್ಲಿ ಜಾರಿ ನಿರ್ದೇಶನಾಲಯ ಆರಂಭವಾಗಿದ್ದರೂ ಅದಕ್ಕೆ ಮೈಕೈ ತುಂಬಿ ಹಲ್ಲು ಮತ್ತು ಶಕ್ತಿ ಬಂದಿದ್ದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ. ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಜಾರಿ ನಿರ್ದೇಶನಾಲಯಕ್ಕೆ ಹೆಚ್ಚು ಶಕ್ತಿ ನೀಡಿದ ಬಳಿಕ ಧಿಗ್ಗನೆ ಎದ್ದ ಇಡಿ ಕೆಲವೇ ವರ್ಷಗಳಲ್ಲಿ ಸಿಬಿಐಗಿಂತಲೂ ಕಠಿಣ ತನಿಖಾ ಸಂಸ್ಥೆಯಾಗಿದೆ. ಅಷ್ಟೇ ಅಲ್ಲ, ಸಿಬಿಐ ತನಿಖೆ ಮುಗಿಸಿ ಆರೋಪಪಟ್ಟಿ ಸಲ್ಲಿಸುವ ಮೊದಲೇ ಅದೇ ಪ್ರಕರಣದಲ್ಲಿ ಇಡಿ ತನಿಖೆ ಮುಕ್ತಾಯಗೊಳಿಸಿ ಆರೋಪಪಟ್ಟಿ ಸಲ್ಲಿಸುತ್ತದೆ.

ತನಿಖೆ ಸಾರ್ವತ್ರಿಕವಾಗುವುದೇ?
ಇಡಿ ತನಿಖೆ, ತನಿಖೆಯ ವೇಗ, ಆರೋಪಿಗಳನ್ನು ಸಿಕ್ಕಿಹಾಕಿಸುವ ರೀತಿ ಎಲ್ಲವನ್ನೂ ಗಮನಿಸಿದರೆ ಈ ರೀತಿಯ ತನಿಖಾ ಸಂಸ್ಥೆಗಳು ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಎನಿಸುತ್ತದೆ. ಎಷ್ಟು ಗಳಿಸಿದರೂ ತೆರಿಗೆ ಪಾವತಿಸಿದರೆ ಅದು ಅಪರಾಧವಲ್ಲ ಎಂಬ ನಿಯಮವನ್ನು ಸುಳ್ಳು ಮಾಡಿ ಎಷ್ಟು ಗಳಿಸಿದೆ ಎಂಬುದಕ್ಕಿಂತ ಸಕ್ರಮವಾಗಿ ಎಷ್ಟು ಗಳಿಸಿದೆ ಎಂಬುದಷ್ಟೇ ಮುಖ್ಯ ಎನ್ನುವ ಇಡಿ ವಾದ ಅಕ್ರಮ ವ್ಯವಹಾರಸ್ಥರನ್ನು ಮಟ್ಟ ಹಾಕಲು ಸಾಕು.
ಆದರೆ, ಈ ರೀತಿಯ ತನಿಖೆ ಸಾರ್ವತ್ರಿಕವಾಗುವುದೇ ಅಥವಾ ರಾಜಕೀಯ ಕಾರಣಗಳಿಗಾಗಿ ಮಾತ್ರ ಬಳಕೆಯಾಗುವುದೇ ಎಂಬುದೇ ದೊಡ್ಡ ಪ್ರಶ್ನೆ. ಹಾಗೆ ನೋಡಿದರೆ ಇಡಿ ಪಾಲಿಗೆ ಡಿ. ಕೆ. ಶಿವಕುಮಾರ್ ಅವರದ್ದು ದೊಡ್ಡ ಪ್ರಕರಣವೇ ಅಲ್ಲ. ಲಕ್ಷಾಂತರ, ಸಾವಿರಾರು ಕೋಟಿ ರೂ. ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ ಹೀಗೆ ಸಾಕಷ್ಟು ಪ್ರಕರಣಗಳು ಇಡಿ ಮುಂದೆ ಇದೆ. ಆದರೆ, ಅವರೆಲ್ಲರೂ ಇಡಿ ತನಿಖೆ ಆರಂಭಿಸುವ ಮುನ್ನವೇ ವಿದೇಶಕ್ಕೆ ಪರಾರಿಯಾಗಿ ರಕ್ಷಣೆ ಪಡೆದುಕೊಂಡಿದ್ದಾರೆ. ಆದರೆ, ತಾವು ಘೋಷಿತ ಆಸ್ತಿಗೆ ತೆರಿಗೆ ಪಾವತಿಸಿದ್ದೇವೆ. ಹೀಗಾಗಿ ಸಂಪಾದಿಸಿದ್ದೆಲ್ಲಾ ಸಕ್ರಮ ಎಂದು ಬೀಗುತ್ತಿದ್ದ ಪಿ. ಚಿದಂಬರಂ, ಡಿ. ಕೆ. ಶಿವಕುಮಾರ್ ಅಂಥವರು ಇಡಿ ಹೆಣೆದ ಕುಣಿಕೆಯಲ್ಲಿ ಸಿಕ್ಕಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಈ ರೀತಿ ಅಕ್ರಮ ಮಾರ್ಗಗಳಿಂದ ಹಣ ಗಳಿಸಿ ಅದಕ್ಕೆ ತೆರಿಗೆ ಪಾವತಿಸಿ ದೊಡ್ಡವರಾದ ಅದೆಷ್ಟೋ ಮಂದಿ ಈಗಲೂ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೀಗುತ್ತಿದ್ದಾರೆ. ಇವರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಸೇರಿದವರೂ ಇದ್ದಾರೆ. ಇತರೆ ತನಿಖಾ ಸಂಸ್ಥೆಗಳಂತೆ ಇಡಿ ಕೂಡ ಸರ್ಕಾರದ ಮರ್ಜಿಗೆ ಸಿಗದೆ ಸ್ವತಂತ್ರವಾಗಿ ತನಿಖೆ ನಡೆಸಿ ಅಕ್ರಮದ ಬುಡಕ್ಕೆ ಕೈಹಾಕಿದರೆ ದೇಶದ ಆರ್ಥಿಕ ವ್ಯವಸ್ಥೆಯೇ ಬದಲಾಗುತ್ತದೆ. ಅಕ್ರಮಗಳೆಲ್ಲವೂ ಬೆಳಕಿಗೆ ಬಂದು ಅಕ್ರಮವಾಗಿ ವ್ಯಕ್ತಿಗಳ ಬಳಿ ಸಂಗ್ರಹವಾಗಿರುವ ಲಕ್ಷಾಂತರ ಕೋಟಿ ರೂ. ಸರ್ಕಾರದ ಬೊಕ್ಕಸ ಸೇರುತ್ತದೆ. ಅದಲ್ಲದೆ, ಇಡಿ ಕೂಡ ಸರ್ಕಾರದ ಕೈಗೊಂಬೆಯಾದರೆ ಕೆಲವೇ ದಿನಗಳಲ್ಲಿ ಅದರ ಪರಿಸ್ಥಿತಿಯೂ ಹತ್ತರೊಟ್ಟಿಗೆ ಹನ್ನೊಂದು ಎಂಬಂತಾಗುತ್ತದೆ.