ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ನಡೆಸಿದ ಅತ್ಯಾಚಾರ ಘಟನೆಯಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಜಿಲ್ಲೆಗೆ ಭೇಟಿ ನೀಡಿತ್ತು. ಎರಡು ಮಹಿಳಾ ಆಯೋಗಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆದರೆ, ಆಯೋಗಗಳ ಪ್ರತಿನಿಧಿಗಳು ನೀಡಿರುವ ಸಲಹೆಗಳು ಗೊಂದಲಕ್ಕೆ ಕಾರಣವಾಗಿವೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಭೇಟಿ ನೀಡಿ ಪದವಿ ಮತ್ತು ಪಿಯು ಕಾಲೇಜಿನಲ್ಲಿ ಪ್ರೇಮ ವ್ಯವಹಾರದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಎಂದು ಕಾಲೇಜಿನ ಪ್ರಾಚಾರ್ಯರು ಮತ್ತು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬಹಳಷ್ಟು ಸಂದರ್ಭಗಳಲ್ಲಿ ಕಾಲೇಜಿನ ಪ್ರಾಂಶುಪಾಲರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಸ್ಪರ ಪ್ರೇಮದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಆಡಿ ಗದರಿಸುವುದುಂಟು. ಆದರೆ, ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾದ ಪೊಲೀಸರು ಈ ಕೆಲಸವನ್ನು ಮಾಡುವುದಾದರು ಹೇಗೆ ಎಂಬುದು ಪೊಲೀಸರಿಗೆ ಪೀಕಲಾಟವಾಗಿದೆ.
ಕಾಲೇಜಿನ ಪ್ರೇಮಿಗಳನ್ನು ಪತ್ತೆ ಹಚ್ಚುವುದಾದರು ಹೇಗೆ ಎನ್ನುವುದರ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರು ಏನಾದರು ಸಲಹೆ ನೀಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ಗ್ಯಾಂಗ್ ರೇಪ್ ಮಾಡಿದ ಆರೋಪಿಗಳ ಮುಖಗಳನ್ನು ನೋಡಿದಾಗ ಮುಗ್ಧರಂತೆ ಕಾಣುತ್ತಾರೆ. ಆದರೆ, ಅವರೊಳಗೆ ಅಂತಹ ಕ್ರೌರ್ಯ ತುಂಬಿರುತ್ತೆ ಎಂದು ತಿಳಿದಿಲ್ಲ ಕೂಡ ಆಯೋಗದ ಅಧ್ಯಕ್ಷೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಫೋನ್ ಮೇಲೆ ಕಣ್ಣು:
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸುವ ಬಗ್ಗೆ ಕೂಡ ದೂರುಗಳಿದ್ದು, ಮೊಬೈಲ್ ಉಪಯೋಗಿಸಿ ಅಶ್ಲೀಲ ವಿಡಿಯೊಗಳನ್ನು ನೋಡುವುದರಿಂದ ವಿದ್ಯಾರ್ಥಿಗಳು ನೀತಿಗೆಡುತ್ತಿದ್ದಾರೆ ಎಂಬುದು ಅವರ ಆತಂಕ. ಆಯೋಗದ ಅಧ್ಯಕ್ಷೆಯ ಆತಂಕ ಸರಿಯೇ ಇರಬಹುದು. ಆದರೆ, ನಿಯಂತ್ರಣ ಹೇಗೆ ಮತ್ತು ಮಾಡಬೇಕಾದವರು ಯಾರು ಎಂಬುದು ಚರ್ಚಾಸ್ಪದ.
ಸುರಕ್ಷತೆಯ ದೃಷ್ಟಿಯಿಂದ ತಮ್ಮ ಹೆಣ್ಣು ಮಕ್ಕಳಿಗ ತಂದೆ ತಾಯಂದಿರು ಮೊಬೈಲ್ ನೀಡುತ್ತಾರೆ. ಅದು ಸರಿಯಲ್ಲ ಎನ್ನಲು ವಿದ್ಯಾ ಸಂಸ್ಥೆಗಾಗಲಿ ಆಯೋಗಕ್ಕಾಗಲಿ ಅಧಿಕಾರ ಇದೆಯೇ ಎಂಬುದು ಪ್ರಶ್ನೆ. ಇದೇ ವಿವೇಕಾನಂದ ಕಾಲೇಜಿನಲ್ಲಿ ದಶಕಗಳ ಹಿಂದೆ ಹೆಣ್ಣು ಮಕ್ಕಳಿಗೆ ಲಂಗ ದಾವಣಿ ಡ್ರೆಸ್ ಕೋಡ್ ಆಗಿತ್ತು. ಉದ್ದ ಲಂಗ ಬಿಟ್ಟು ಚೂಡಿದಾರ್ ಇತ್ಯಾದಿಗೆ ಅವಕಾಶ ಇರಲಿಲ್ಲ. ಫೀಸ್ ಕಟ್ಟಿ ಕಾಲೇಜಿಗೆ ಕಳುಹಿಸುತ್ತಿದ್ದೇವೆ, ಡ್ರೆಸ್ ಕೋಡ್ ಬೇಡ ಎಂದು ಪೋಷಕರು, ವಿದ್ಯಾರ್ಥಿಗಳು ಪ್ರತಿಭಟಿಸಿದ ನಂತರ ನಿಯಮ ಸಡಿಲಿಕೆ ಆಯ್ತು.
ಇನ್ನು ಮೊಬೈಲ್ ಫೋನ್ ವಿಚಾರದಲ್ಲಿ ಪುತ್ತೂರು ಪೊಲೀಸ್ ಉಪವಿಭಾಗದಲ್ಲಿ ಈಗಾಗಲೇ ಪೊಲೀಸರು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಮೊಬೈಲ್ ತಪಾಸಣೆಯಲ್ಲಿ ತೊಡಗಿದ್ದಾರೆ. ಇನ್ನು ವಿದ್ಯಾರ್ಥಿಗಳು ಕಾಲೇಜಿಗೆ ಮೊಬೈಲ್ ತರದೆ, ಹತ್ತಿರದ ಅಂಗಡಿಯಲ್ಲಿ ರಾಶಿ ಹಾಕುವುದುಂಟು. ಅಂತಹ ಮೊಬೈಲ್ ಸಂಗ್ರಹಿಸಲು ಅಂಗಡಿಗಳಿಗೆ ಕೂಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಲೇಜುಗಳಿಗೆ ಈ ಸೂಚನೆ ನೀಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುತ್ತೇನೆ ಎಂಬ ಉತ್ತಮ ಅಂಶವೊಂದನ್ನು ಕೂಡ ನಾಗಲಕ್ಷ್ಮೀಬಾಯಿ ಹೇಳಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನಿನ ಪರಿಚಯ ಇರುತ್ತದೆ. ಆದರೆ, ಅಪರಾಧಗಳನ್ನು ಮಾಡಿದಾಗ ಎಂತಹ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂಬ ಗಂಭೀರತೆಯನ್ನು ಅವರಲ್ಲಿ ಮೂಡಿಸಬೇಕಾಗುತ್ತದೆ. ಇಂತಹ ಅಪರಾಧಗಳಲ್ಲಿ ಜೀವಾವಧಿ ಅಥವ ಗಲ್ಲು ಶಿಕ್ಷೆಯಾದರೆ ಹೆತ್ತವರ ಪಾಡೇನು ಎಂದು ಕಳಕಳಿ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷೆ, ಇತರರಿಗೆ ಪಾಠವಾಗಲು ಶಿಕ್ಷೆ ನೀಡುವುದು ಅನಿವಾರ್ಯ ಎಂದಿದ್ದಾರೆ.
ವಿದ್ಯಾರ್ಥಿಗಳು ದಾರಿ ತಪ್ಪುವುದನ್ನು ನಿಯಂತ್ರಿಸುವ ಜವಾಬ್ದಾರಿ ಕಾಲೇಜಿಗೂ ಇದೆ, ಶಿಕ್ಷಕರಿಗೂ ಇದೆ. ತರಗತಿ ನಡೆಸುವುದಷ್ಟೇ ಕಾಲೇಜುಗಳ ಕೆಲಸ ಅಲ್ಲ. ಸಭ್ಯತೆ ಮತ್ತು ಸುಸಂಸ್ಕ್ರತಿಯನ್ನು ಅವರಲ್ಲಿ ಬೆಳೆಸಬೇಕೆಂಬ ಕಿವಿ ಮಾತನ್ನು ಅವರು ನೀಡಿದ್ದಾರೆ.
ಈ ಮಧ್ಯೆ, ಇದೇ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆ ನಡೆಸಲು ಪುತ್ತೂರಿಗೆ ಆಗಮಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಅವರು ಅತ್ಯಾಚಾರ ಪ್ರಕರಣದ ನೈಜ ಅಪರಾಧಿಗೆ 24 ಗಂಟೆಯೊಳಗೆ ಶಿಕ್ಷೆ ನೀಡುವ ಕಾನೂನು ವ್ಯವಸ್ಥೆ ಬರಬೇಕು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಆರೋಪಿಗೆ 24 ಗಂಟೆಯೊಳಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಪರಾಮರ್ಶೆ ನಡೆಸಿದೆ ಎಂದಿದ್ದಾರೆ ಶ್ಯಾಮಲಾ ಕುಂದರ್.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಡಿ ರೂಪಿಸಲಾದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಡಿಯಲ್ಲೇ ಅಪರಾಧ ತೀರ್ಮಾನ ಮತ್ತು ದಂಡನೆ ನೀಡಲಾಗುತ್ತದೆ. ಹೆಚ್ಚಿನ ಹೊಣೆಗಾರಿಕೆ ಇರುವ ಮಹಿಳಾ ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಯ ಸದಸ್ಯರು, ಅಧ್ಯಕ್ಷರು ಕಾನೂನಿನ ಚೌಕಟ್ಟು ಮೀರಿದ ಶಿಸ್ತು ಕ್ರಮಕ್ಕೆ ಮುಂದಾಗುವುದು ಉತ್ತಮ ಬೆಳವಣಿಗೆಯಲ್ಲ.