ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಗೊತ್ತುವಳಿಯ ಮೇಲಿನ ಚರ್ಚೆಗೆ ಹೊಸತಿರುವು ಬಂದಿದ್ದು ದೋಸ್ತಿ ಪಕ್ಷಗಳ ನಾಯಕರು ಕ್ರಿಯಾಲೋಪಗಳನ್ನು ಎತ್ತುವ ಮೂಲಕ ಕಾಲಹರಣ ತಂತ್ರದಲ್ಲಿ ತೊಡಗಿದ್ದು ಸ್ಪಷ್ಟವಾಗುತ್ತಿದೆ. ಈ ತಂತ್ರಕ್ಕೆ ಪ್ರತಿತಂತ್ರವಾಗಿ ಬಿಜೆಪಿ ನಾಯಕರು ರಾಜಭವನದ ಬಾಗಿಲು ತಟ್ಟಿದ್ದಾರೆ.
24 ಗಂಟೆಗಳಲ್ಲಿ ವಿಶ್ವಾಸಮತ ಯಾಚಿಸುವಂತೆ ಸ್ಪೀಕರ್ ಗೆ ಸೂಚಿಸಬೇಕೆಂದು ರಾಜ್ಯಪಾಲ ವಜೂಭಾಯಿವಾಲಾ ಅವರನ್ನು ಬಿಜೆಪಿ ಮನವಿ ಮಾಡಿದ್ದು ರಾಜ್ಯಪಾಲರು ತಮ್ಮ ವಿಶೇಷ ಅಧಿಕಾರಿಯನ್ನು ವಿಧಾನಸಭೆಗೆ ಕಳಿಸುವ ಮೂಲಕ ಕಲಾಪಗಳು ಸಾಗುವ ರೀತಿಯ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ. ಸ್ಪೀಕರ್ ಅವರಿಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲವಾದರೂ ರಾಜ್ಯಾಂಗ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳಿಕೆಯನ್ನು ವಿಧಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಹುದಾಗಿದೆ.
ರಾಜ್ಯಾಂಗ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ ಪ್ರಸಂಗಗಳು ವಿವಿಧ ರಾಜ್ಯಗಳಲ್ಲಿ ನಡೆದಿವೆ. 1967 ರ ಮಾರ್ಚ್ 7 ರಂದು ಪಂಜಾಬ್ ವಿಧಾನಸಭಾಧ್ಯಕ್ಷರು ಎರಡು ತಿಂಗಳವರೆಗೆ ಸದನವನ್ನು ಮುಂದೂಡಿದರು. ಇದರಿಂದ ಅಲ್ಲಿ ರಾಜ್ಯಾಂಗ ಬಿಕ್ಕಟ್ಟು ಉಂಟಾದಾಗ ಮಾರ್ಚ 12 ರಂದು ಪಂಜಾಬ್ ರಾಜ್ಯಪಾಲರಾಗಿದ್ದ ಕನ್ನಡಿಗ ಡಾ.ಡಿ.ಸಿ.ಪಾವಟೆ ಅವರು ವಿಧಾನ ಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಳಿಕೆ ವಿಧಿಸಿದರು.
ಬಾಕಿಯಿರುವ ಮಸೂದೆಗಳ ಬಗ್ಗೆ ರಾಜ್ಯಪಾಲರು ವಿಧಾನಸಭೆಗೆ ಸೂಚನೆ, ಸಂದೇಶಗಳನ್ನು ಕಳಿಸಬಹುದಾಗಿದೆ. ಕಳೆದ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಹಣಕಾಸು ಮಸೂದೆಗೆ ಸರಕಾರ ಇನ್ನೂ ಒಪ್ಪಿಗೆ ಪಡೆದಿಲ್ಲ. ಪಡೆಯದಿದ್ದರೆ ಸರಕಾರವು ಒಂದು ರೂಪಾಯಿಯನ್ನೂ ಖರ್ಚು ಮಾಡಲು ಸಾಧ್ಯವಿಲ್ಲ. ನೌಕರರ ಸಂಬಳವನ್ನೂ ಮಾಡುವಂತಿಲ್ಲ. ಹೀಗಾದರೆ ರಾಜ್ಯಾಂಗ ಬಿಕ್ಕಟ್ಟು ಸೃಷ್ಠಿಯಾಗುವದು ನಿಶ್ಚಿತ.
ಸದ್ಯ ವಿಶ್ವಾಸಮತಯಾಚನೆ ಗೊತ್ತುವಳಿಯ ಮೇಲಿನ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ಸದನದಲ್ಲಿ ಬಂದು (ಕಪ್ಪು ಕೋಟಿನ ಅಧಿಕಾರಿ) ಕುಳಿತಿರುವ ಅಧಿಕಾರಿ ಇಂದು ಸಂಜೆ ರಾಜ್ಯಪಾಲರಿಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ. ನಂತರ ಮುಂದಿನ ಬೆಳವಣಿಗೆಗಳು ದೋಸ್ತಿ ಸರಕಾರಕ್ಕೆ ಕಂಟಕಪ್ರಾಯವಾಗಬಹುದು.
” ವಿಶ್ವಾಸ ಮತವನ್ನು ಇಂದೇ ಮುಗಿಸಿ” ಎಂದು ರಾಜ್ಯಪಾಲರು ಸ್ಪೀಕರ್ ಗೆ ತಿಳಿಸಿದ್ದು ಅಚ್ಚರಿಯ ಬೆಳವಣಿಗೆಯಾಗಿದೆ. ಆದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಡುವಣ ಶೀತಲ ಸಮರದಲ್ಲಿ ಏನಾದರೂ ಆಗಬಹುದಾಗಿದೆ.
ರಾಜ್ಯಪಾಲರ ಮಧ್ಯಪ್ರವೇಶವು ರಾಷ್ಟ್ರಪತಿ ಆಳಿಕೆಗೆ ಹಾದಿ ಮಾಡಿಕೊಡಬಹುದೆ?