Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕಾನೂನು ವಿಶ್ಲೇಷಕರನ್ನೇ ಗೊಂದಲಕ್ಕೆ ತಳ್ಳಿದ ಶಾಸಕರ ಅನರ್ಹತೆ ಆದೇಶ

ಕಾನೂನು ವಿಶ್ಲೇಷಕರನ್ನೇ ಗೊಂದಲಕ್ಕೆ ತಳ್ಳಿದ ಶಾಸಕರ ಅನರ್ಹತೆ ಆದೇಶ
ಕಾನೂನು ವಿಶ್ಲೇಷಕರನ್ನೇ ಗೊಂದಲಕ್ಕೆ ತಳ್ಳಿದ ಶಾಸಕರ ಅನರ್ಹತೆ ಆದೇಶ
Pratidhvani Dhvani

Pratidhvani Dhvani

July 28, 2019
Share on FacebookShare on Twitter

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲು ಕಾರಣರಾದ ಮಿತ್ರಪಕ್ಷಗಳ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಲಾಗಿದೆ. ಕಳೆದ ಶುಕ್ರವಾರ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್, ಭಾನುವಾರ ಉಳಿದ 14 ಶಾಸಕರನ್ನು (ಕಾಂಗ್ರೆಸ್ ನ 11 ಮತ್ತು ಜೆಡಿಎಸ್ ನ 3) ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದಾರೆ. ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನೀಡಿದ ಆದೇಶ, ತಮಿಳುನಾಡಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ನೀಡಿದ ಆದೇಶಗಳನ್ನು ಪ್ರತಿಪಾದಿಸಿರುವ ಸ್ಪೀಕರ್, ತಮ್ಮ ತೀರ್ಮಾನಕ್ಕೆ ಇದನ್ನೇ ಪ್ರಮುಖವಾಗಿ ಪರಿಗಣಿಸಿದ್ದಾರೆ. ಈ ಶಾಸಕರನ್ನು ಅನರ್ಹಗೊಳಿಸುವಾಗ 15ನೇ ವಿಧಾನಸಭೆಗೆ (2023ರವರೆಗೆ) ಇವರು ಪ್ರವೇಶಿಸುವಂತಿಲ್ಲ ಎಂದು ಸ್ಪೀಕರ್ ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಏಕೆಂದರೆ, ಅನರ್ಹಗೊಂಡ ಶಾಸಕರ ಅನರ್ಹತೆ ಆ ಅವಧಿಗೆ ಮಾತ್ರ ಅನ್ವಯವಾಗುತ್ತದೆ. ಉಪ ಚುನಾವಣೆ ನಡೆದರೆ ಅನರ್ಹಗೊಂಡವರು ಮತ್ತೆ ಸ್ಪರ್ಧಿಸಬಹುದು ಎಂದು ಈ ಹಿಂದೆಯೇ ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಇನ್ನೊಂದೆಡೆ, ಶಾಸಕರ ರಾಜಿನಾಮೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ಮತ್ತು ರಾಜಿನಾಮೆ ನೀಡಿದ ಶಾಸಕರನ್ನು ಸದನಕ್ಕೆ ಬಲವಂತವಾಗಿ ಕರೆತರದಂತೆ ಕೋರ್ಟ್ ನಿರ್ದೇಶನ ನೀಡಿದೆ. ಹೀಗಿರುವಾಗ ಸ್ಪೀಕರ್ ಅವರು 17 ಶಾಸರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿ ಆದೇಶ ಹೊರಡಿಸಿರುವುದು ಹೊಸ ರೀತಿಯ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.
ಸ್ಪೀಕರ್ ಅವರು ರಾಜಿನಾಮೆ ನೀಡಿದ್ದ 17 ಶಾಸಕರನ್ನು ಅನರ್ಹಗೊಳಿಸಿರುವುದರಿಂದ ಅವರ ರಾಜಿನಾಮೆ ಈಗ ಅಪ್ರಸ್ತುತ. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ದೂರು ನೀಡುವ ಮುನ್ನವೇ ಶಾಸಕರು ರಾಜಿನಾಮೆ ನೀಡಿರುವುದರಿಂದ ರಾಜಿನಾಮೆ ವಿಚಾರವನ್ನು ಪರಿಗಣಿಸದೆ ಅನರ್ಹಗೊಳಿಸಿದ ಬಗ್ಗೆ ಕಾನೂನು ವಿಶ್ಲೇಷಕರಲ್ಲೇ ವಿಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

ಸ್ಪೀಕರ್ ಆದೇಶ ಸರಿಯಲ್ಲ ಎನ್ನುವವರ ವಾದ:

1. ಸದನಗಳ ಸದಸ್ಯರ ರಾಜಿನಾಮೆ, ಅನರ್ಹತೆ ಪ್ರಕರಣಗಳ ವಿಚಾರಣೆಯನ್ನು ವಿಳಂಬ ಮಾಡುವುದರಿಂದ ಸಮಸ್ಯೆಯಾಗುತ್ತದೆ. ಹೀಗಾಗಿ ಕಾಲಮಿತಿಯಲ್ಲಿ ಅವುಗಳನ್ನು ಇತ್ಯರ್ಥಗೊಳಿಸಬೇಕು ಎಂದು ರಾಜ್ಯಸಭೆ ಸದಸ್ಯರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದ್ದರು. ಜತೆಗೆ, ಅನರ್ಹತೆ ವಿಚಾರದಲ್ಲಿ ಪ್ರತಿವಾದಿಗಳಿಗೆ (ಶಾಸಕರು) ತಮ್ಮ ಅಭಿಪ್ರಾಯ ತಿಳಿಸಲು ಏಳು ದಿನಗಳ ಕಾಲಾವಕಾಶ ನೀಡಬೇಕು ಎಂಬುದನ್ನು ನಿಯಮಾವಳಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದೂ ಅವರು ತಿಳಿಸಿದ್ದರು. ಆದರೆ, ವೆಂಕಯ್ಯ ನಾಯ್ಡು ಅವರ ಆದೇಶವನ್ನು ಉಲ್ಲೇಖಿಸಿದ್ದರೂ ಈ ಪ್ರಕರಣದಲ್ಲಿ ಅನರ್ಹತೆ ಕುರಿತಂತೆ ಶಾಸಕರಿಗೆ ಅಭಿಪ್ರಾಯ ತಿಳಿಸಲು ಸ್ಪೀಕರ್ ಕೇವಲ ಮೂರು ದಿನ ಮಾತ್ರ ಕಾಲಾವಕಾಶ ನೀಡಿದ್ದಾರೆ. ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂಬ ಶಾಸಕರ ಪರ ವಕೀಲರ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಇಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ ಎಂಬ ಆಧಾರದ ಮೇಲೆ ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ.

2. ತಮ್ಮ ರಾಜಿನಾಮೆ ಶೀಘ್ರ ಅಂಗೀಕರಿಸಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ರಾಜಿನಾಮೆ ನೀಡಿದ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ ಎಂದು ಸೂಚಿಸಿತ್ತು. ಆದರೂ ಆ ಶಾಸಕರು ಸದನಕ್ಕೆ ಬಾರದೆ ವಿಪ್ ಉಲ್ಲಂಘಿಸಿದ್ದಾರೆ. ಇದರಿಂದ ಸರ್ಕಾರ ಉರುಳುವಂತಾಗಿದೆ ಎಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೂರು ಆಧರಿಸಿ ಸ್ಪೀಕರ್ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಶಾಸಕರನ್ನು ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೆ, ಅವರು ಸದನಕ್ಕೆ ಬಾರದೇ ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ (ಅನರ್ಹತೆ) ಕೈಗೊಂಡಾಗ ಅದು ಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾದ ನಿರ್ಣಯವಾಗುತ್ತದೆ. ಈ ಆಧಾರದ ಮೇಲೂ ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಬಹುದು.

3. ಕಾಂಗ್ರೆಸ್ ನ ಇಬ್ಬರು ಶಾಸಕರನ್ನು ಹೊರತುಪಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನ 16 ಶಾಸಕರು ರಾಜಿನಾಮೆ ನೀಡಿದ ಮೇಲೆ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಈ ಪೈಕಿ 8 ಶಾಸಕರ ರಾಜಿನಾಮೆ ಸಮರ್ಪಕವಾಗಿಲ್ಲ ಎಂದು ಹೇಳಿದ ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಅವರಿಗೆ ಮತ್ತೆ ಸಮರ್ಪಕ ರಾಜಿನಾಮೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿತ್ತು. ಸಾಮಾಜಿಕ ನ್ಯಾಯ ತತ್ವದಡಿ ಸ್ಪೀಕರ್ ಅವರು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಬೇಕು. ಅಂದರೆ ಮೊದಲು ರಾಜಿನಾಮೆ ಪ್ರಕರಣ ಇತ್ಯರ್ಥಪಡಿಸಬೇಕು. ರಾಜಿನಾಮೆ ನೀಡಿದ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂಬ ಅಂಶವನ್ನು ಸ್ಪೀಕರ್ ಪರಿಗಣಿಸಬೇಕಿತ್ತು. ಆದರೆ, ತಮ್ಮ ಮುಂದೆ ಮೊದಲು ಬಂದಿರುವ ರಾಜಿನಾಮೆಯನ್ನು ಇತ್ಯರ್ಥಗೊಳಿಸದೆ ಸ್ಪೀಕರ್ ನಂತರದ ದೂರು ಆಧರಿಸಿ ಅನರ್ಹಗೊಳಿಸಿದ್ದಾರೆ ಎಂಬ ವಾದದೊಂದಿಗೆ ಶಾಸಕರು ಸುಪ್ರೀಂ ಮೆಟ್ಟಿರಲು ಸಾಧ್ಯವಿದೆ.

4. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಅವರಿಗೆ ಅಧಿಕಾರ ಇದೆಯಾದರೂ ಅನರ್ಹತೆ ಅವಧಿ ನಿರ್ಧರಿಸಲು ಅವಕಾಶವಿಲ್ಲ. ಚುನಾವಣಾ ಆಯೋಗದ ಪ್ರಕಾರ ಅನರ್ಹತೆ ಆದೇಶ ಅನರ್ಹಗೊಂಡ ಶಾಸಕರು ಆಯ್ಕೆಯಾದ ಅವಧಿಗೆ ಅನ್ವಯವಾಗುತ್ತದೆ. ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಮರು ಚುನಾವಣೆ ನಡೆದಾಗ ಅನರ್ಹಗೊಂಡವರು ಸ್ಪರ್ಧಿಸಬಹುದು. ಆದರೆ, ಸ್ಪೀಕರ್ ಅವರು ಅನರ್ಹಗೊಂಡ ಶಾಸಕರು 15ನೇ ವಿಧಾನಸಭೆಗೆ ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ. ಸ್ಪೀಕರ್ ಅವರ ತೀರ್ಮಾನ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ವಾದದೊಂದಿಗೆ ಕೋರ್ಟ್ ನಲ್ಲಿ ಪ್ರಶ್ನಿಸಬಹುದು.

ಸ್ಪೀಕರ್ ಆದೇಶ ಬೆಂಬಲಿಸುವವರ ವಾದ:

1. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎರಡೂ ಪಕ್ಷಗಳ ಶಾಸಕರು (ಜೆಡಿಎಸ್ ಮತ್ತು ಕಾಂಗ್ರೆಸ್) ಸೇರಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಬೆಂಬಲ ಸಿಕ್ಕಿದ್ದರಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ ಸರ್ಕಾರದ ಬಗ್ಗೆ ಶಾಸಕರಿಗೆ ವಿಶ್ವಾಸ ಇಲ್ಲದೇ ಇದ್ದರೆ ಮೊದಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಬೇಕು. ಆದರೆ, ಶಾಸಕರು ಆ ರೀತಿ ಮಾಡದೆ ರಾಜಿನಾಮೆ ನೀಡುವ ಮೂಲಕ ಶಾಸಕಾಂಗ ಪಕ್ಷದ ಸಭೆಯ ನಿರ್ಧಾರಕ್ಕೆ ವಿರುದ್ಧವಾಗಿ ಸರ್ಕಾರ ಕೆಡವಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹಗೊಳಿಸಲು ಸೂಕ್ತ ಪ್ರಕರಣ.

2. ಒಂದು ಪಕ್ಷದ ಶಾಸಕರೆಲ್ಲರೂ ಸೇರಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ. ತನ್ನ ಶಾಸಕರು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ನೀಡುವ ಅಧಿಕಾರವನ್ನು ಸಂವಿಧಾನದ 10ನೇ ಶೆಡ್ಯೂಲ್ ಶಾಸಕಾಂಗ ಪಕ್ಷದ ನಾಯಕನಿಗೆ ನೀಡಿದೆ. ಈ ವಿಪ್ ಉಲ್ಲಂಘಿಸಿದರೆ ಅದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಅದರನ್ವಯ ಅನರ್ಹಗೊಳಿಸಲು ನಿಯಮದಲ್ಲಿ ಅವಕಾಶವಿದೆ. ಶಾಸಕರು ರಾಜಿನಾಮೆ ನೀಡಿದ್ದರೂ ಅದು ಅಂಗೀಕಾರವಾಗದಿದ್ದರೆ ಸದನದ ಸದಸ್ಯರೇ ಆಗಿರುತ್ತಾರೆ. ಹೀಗಾಗಿ ವಿಪ್ ಉಲ್ಲಂಘನೆ ಆಧಾರದ ಮೇಲೆ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿಯಾಗಿದೆ.

3. ಶಾಸಕರ ವಿರುದ್ಧದ ಅನರ್ಹತೆ ದೂರು ಆಧರಿಸಿ ವಿಚಾರಣೆ ಆರಂಭಿಸಿದ್ದ ಸ್ಪೀಕರ್ ಎಲ್ಲಾ 16 ಶಾಸಕರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ನೀಡುವಂತೆ ಕೋರಿದ್ದರು. ಆದರೆ, ಯಾವುದೇ ವಿವರಣೆ ನೀಡದ ಶಾಸಕರು ಮತ್ತೆ ನಾಲ್ಕು ವಾರ ಕಾಲಾವಕಾಶ ಕೋರಿದ್ದರು. ಇದನ್ನು ಸ್ಪೀಕರ್ ತಿರಸ್ಕರಿಸಿದ್ದರೂ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಶಾಸಕರು ಆರಂಭಿಕ ವಿಚಾರಣೆ ಎದುರಿಸಿ ಕಾಲಾವಕಾಶ ಕೇಳಿದ್ದರೆ ಆಗ ಸ್ಪೀಕರ್ ಸಮಯ ಕೊಡದಿದ್ದರೆ ಸಾಮಾಜಿಕ ನ್ಯಾಯ ಪಾಲಿಸಿಲ್ಲ ಎಂದು ಹೇಳಬಹುದಿತ್ತು. ಮೇಲಾಗಿ ನಿಯಮಾವಳಿಗಳಡಿ ಅರ್ಜಿ ಇತ್ಯರ್ಥಕ್ಕೆ ಸ್ಪೀಕರ್ ಅವರಿಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ.

4. ಅನರ್ಹತೆ, ಯಾವ ಅವಧಿಗೆ ಶಾಸಕರನ್ನು ಅನರ್ಹಗೊಳಿಸಬೇಕು ಎಂಬುದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟ ಸಂಗತಿ. ಅನರ್ಹತೆ ಅವಧಿ ಇಂತಿಷ್ಟೇ ಇರಬೇಕು ಎಂದು ಯಾವುದೇ ನಿಯಮ ಇಲ್ಲ. ಚುನಾವಣಾ ಆಯೋಗದ ಪ್ರಕಾರ ಅನರ್ಹತೆ ಶಾಸಕರು ಆಯ್ಕೆಯಾಗಿರುವ ಅವಧಿಗೆ ಅನ್ವಯವಾಗುತ್ತದೆ. ಅಂದರೆ, ಪ್ರಸ್ತುತ ಅನರ್ಹಗೊಂಡಿರುವ ಶಾಸಕರು 2018-2023ರ ಅವಧಿಯ 15ನೇ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಸ್ಪೀಕರ್ ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿದ್ದಾರೆ.

ಈ ಎರಡು ರೀತಿಯ ವಾದ-ಪ್ರತಿವಾದಗಳಿಂದಾಗಿ ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದೊಮ್ಮೆ ಸ್ಪೀಕರ್ ಅವರು ಕಾಲಮಿತಿ ನಿಗದಿ ಮಾಡದೆ ಅನರ್ಹಗೊಳಿಸಿದ್ದರೆ ಶಾಸಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಉಪ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರುತ್ತಿದ್ದರು. ಆದರೆ, ಅನರ್ಹಗೊಂಡವರು 15ನೇ ವಿಧಾನಸಭೆಗೆ ಪ್ರವೇಸಿಸುವಂತಿಲ್ಲ ಎಂದು ಹೇಳಿರುವುದು ಸ್ಪೀಕರ್ ಆದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಬಲ ತಂದುಕೊಟ್ಟಿದೆ. ಇಲ್ಲಿ ಸ್ಪೀಕರ್ ಅವರ ನಿರ್ಣಯ ನಿಯಮಗಳಿಗಿಂತ ಈ ಹಿಂದೆ ಸ್ಪೀಕರ್ ಅಥವಾ ರಾಜ್ಯಸಭೆ ಅಧ್ಯಕ್ಷರು ನೀಡಿದ ಆದೇಶಗಳನ್ನು ಆಧರಿಸಿರುವುದರಿಂದ ನ್ಯಾಯಾಲಯದಲ್ಲಿ ಯಾವ ರೀತಿ ಇತ್ಯರ್ಥಗೊಳ್ಳಬಹುದು ಎಂಬುದನ್ನು ಕಾದು ನೋಡಬೇಕು.

RS 500
RS 1500

SCAN HERE

don't miss it !

ಉಗ್ರ ಕಸಬ್ಗೂ ಇಷ್ಟು ಭದ್ರತೆ ಕೊಟ್ಟಿರಲಿಲ್ಲ : ಆದಿತ್ಯ ಠಾಕ್ರೆ
ದೇಶ

ಉಗ್ರ ಕಸಬ್ಗೂ ಇಷ್ಟು ಭದ್ರತೆ ಕೊಟ್ಟಿರಲಿಲ್ಲ : ಆದಿತ್ಯ ಠಾಕ್ರೆ

by ಪ್ರತಿಧ್ವನಿ
July 3, 2022
ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ
ಸಿನಿಮಾ

ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ

by ಪ್ರತಿಧ್ವನಿ
June 29, 2022
ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ
ದೇಶ

ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ

by ಪ್ರತಿಧ್ವನಿ
July 2, 2022
ಬಿಜೆಪಿ ಸಂಭ್ರಮಾಚರಣೆಗೆ ಫಡ್ನವೀಸ್ ಗೈರು
ದೇಶ

ಬಿಜೆಪಿ ಸಂಭ್ರಮಾಚರಣೆಗೆ ಫಡ್ನವೀಸ್ ಗೈರು

by ಪ್ರತಿಧ್ವನಿ
July 1, 2022
ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?
ದೇಶ

ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?

by ಪ್ರತಿಧ್ವನಿ
July 1, 2022
Next Post
ತಮ್ಮ ಹಗ್ಗದಿಂದ ತಾವೇ ಹೆಡೆಮುರಿ ಕಟ್ಟಿಸಿಕೊಂಡರೇ ಸ್ಪೀಕರ್

ತಮ್ಮ ಹಗ್ಗದಿಂದ ತಾವೇ ಹೆಡೆಮುರಿ ಕಟ್ಟಿಸಿಕೊಂಡರೇ ಸ್ಪೀಕರ್

ಶಾಸಕರ ಅನರ್ಹತೆ: ವಿಶ್ವಾಸಮತದ ಜತೆಗೆ ಸರ್ಕಾರಕ್ಕೂ ‘ಶ್ವಾಸ’

ಶಾಸಕರ ಅನರ್ಹತೆ: ವಿಶ್ವಾಸಮತದ ಜತೆಗೆ ಸರ್ಕಾರಕ್ಕೂ ‘ಶ್ವಾಸ’

ಹೊಸ ಬಜೆಟ್  ಮಂಡಿಸುವ ಸೂಚನೆ ನೀಡಿದ ಹೊಸ ಸಿಎಂ 

ಹೊಸ ಬಜೆಟ್ ಮಂಡಿಸುವ ಸೂಚನೆ ನೀಡಿದ ಹೊಸ ಸಿಎಂ 

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist