ಕಾಣೆಯಾದವರ ಬಗೆಗಿನ ಪ್ರಕಟಣೆಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಇನ್ನೂ ನಿಂತಿಲ್ಲ. ಹಾಗೆಯೇ, ಕಾಣೆಯಾದವರ ಕುರಿತ ದೂರುಗಳು ಕೂಡ ಪೊಲೀಸ್ ಠಾಣೆಗಳಿಗೆ ಎಡತಾಕುವುದು ತಪ್ಪಿಲ್ಲ. ಆದರೆ, ಹೀಗೆ ಕಾಣೆಯಾದ ಎಷ್ಟು ಮಂದಿಯನ್ನು ಪೊಲೀಸರು ಪತ್ತೆ ಮಾಡಿದರು ಮತ್ತು ಎಷ್ಟು ಕೇಸುಗಳನ್ನು ಪತ್ತೆಯಾಗಲಿಲ್ಲವೆಂದು ಮುಗಿಸಿದರು ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕಾಡುತ್ತಲೇ ಇದೆ. ಇಂಥದ್ದೇ ಕೇಳ್ವಿಯ ಜಾಡು ಹಿಡಿದ ಮದ್ರಾಸ್ ಹೈಕೋರ್ಟ್, ಲಲಿತಕುಮಾರಿ ಎಂಬುವವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ, ಪೊಲೀಸರು ಮತ್ತು ಸರ್ಕಾರಗಳ ಎದುರು ಕೆಲವು ಗಂಭೀರ ಪ್ರಶ್ನೆಗಳನ್ನು ಇಟ್ಟಿದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಹೇಳುವಂತೆ, ಭಾರತದಲ್ಲಿ ಪ್ರತಿದಿನ ನಾಪತ್ತೆ ಆಗುತ್ತಿರುವ ಮಹಿಳೆಯರ ಸಂಖ್ಯೆ ಸರಾಸರಿ 270. ಹಾಗೆಯೇ, ಪ್ರತಿದಿನ ಕಾಣೆಯಾಗುತ್ತಿರುವ ಮಕ್ಕಳ ಸರಾಸರಿ ಸಂಖ್ಯೆ 170. ಈ ಆಘಾತಕಾರಿ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಈ ಕುರಿತು ಆಡಿರುವ ಮಾತುಗಳು ಗಮನಾರ್ಹ ಎನಿಸಿವೆ.
ಇದುವರೆಗೂ ಕಾಣೆಯಾದವರ ಬಗೆಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದರೆ, ಅವರನ್ನು ಹುಡುಕುವ ಕೆಲಸವನ್ನಷ್ಟೆ ಮಾಡಲಾಗುತ್ತಿತ್ತು. ಸಿಕ್ಕಿದರೆ ಸಿಕ್ಕಿದರೆಂದೂ, ಸಿಕ್ಕಿಲ್ಲವಾದರೆ ಸಿಕ್ಕಲ್ಲವೆಂದೂ ಕೇಸು ಮುಗಿಸುವ ಪರಿಪಾಠವಿತ್ತು. ಇದೇ ಪದ್ಧತಿ ಈಗಲೂ ಇದೆ. ಆದರೆ, ಮದ್ರಾಸ್ ಹೈಕೋರ್ಟ್ ಮಾತಿನಂತೆ, ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ, ಕಾಣೆಯಾದವರ ಕುರಿತ ದೂರುಗಳನ್ನು ಇದರಡಿ ತಂದರೆ ಪೊಲೀಸ್ ತನಿಖೆ ಕಡ್ಡಾಯ ಆಗಲಿದ್ದು, ಕಾಣೆಯಾದವರ ಕುರಿತ ಬಹುತೇಕ ದೂರುಗಳನ್ನು ಆಶಾದಾಯಕ ಅಂತ್ಯ ಕಾಣಿಸಬಹುದು. ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿ ದೊರಕಿಸಬಹುದು.
ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಕಾಣೆಯಾದವರ ದೂರುಗಳ ಕುರಿತು ವಿಚಾರಣೆ ನಡೆಸಲು ಅವಕಾಶವಿಲ್ಲ ಎಂಬುದನ್ನು ಉಲ್ಲೇಖಿಸಿದ ಮದ್ರಾಸ್ ಹೈಕೋರ್ಟ್, ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ, ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ ಕಾಣೆಯಾದವರ ಕುರಿತ ಪ್ರಕರಣಗಳಲ್ಲಿ ವಿಚಾರಣೆ ಕಡ್ಡಾಯ ಮಾಡುವ ಕುರಿತು ಪ್ರತಿಕ್ರಿಯಿಸುವಂತೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎನ್ ಕಿರುಬಕಾರನ್ ಮತ್ತು ನ್ಯಾಯಮೂರ್ತಿ ಅಬ್ದುಲ್ ಕ್ಯೂ ಅವರಿದ್ದ ಪೀಠದಿಂದ ಇಂಥದ್ದೊಂದು ಮಹತ್ವದ ನಿರ್ದೇಶನ ಹೊರಬಿದ್ದಿದೆ. ಇದುವರೆಗೂ ಐಪಿಸಿ ಅಡಿ ಇದ್ದ ಕಾಣೆಯಾದವರ ಕುರಿತ ಕೇಸುಗಳಲ್ಲಿ ‘ಅಪಹರಣ’ ಎಂದು ದೂರುದಾರರು ಉಲ್ಲೇಖಿಸಿದರೆ ಮಾತ್ರ ತನಿಖೆ ಕಡ್ಡಾಯ ಮಾಡಲಾಗುತ್ತಿತ್ತು. ಅಪಹರಣ ಎಂದು ಉಲ್ಲೇಖಿಸದ ಕೇಸುಗಳು ಕೇವಲ ಹುಡುಕಾಟಗಳಲ್ಲಿ ಕೊನೆಯಾಗುತ್ತಿದ್ದವು. ಇದಕ್ಕೆ ಮೂಲ ಕಾರಣ, ಕಾಣೆಯಾದವರನ್ನು ಹುಡುಕಿಕೊಡುವ ಕೆಲಸವನ್ನು ‘ಪೊಲೀಸರ ಸಮುದಾಯ ಸೇವೆ’ ಎಂದಷ್ಟೇ ಗುರುತಿಸಲಾಗುತ್ತಿರುವುದು.
ಈ ವೇಳೆ, ತಮಿಳುನಾಡು ಪೊಲೀಸರ ತನಿಖಾ ವೈಖರಿ ಕುರಿತೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಈ ಹಿಂದೆಯೇ ಸಾಕಷ್ಟು ಬಾರಿ, ಕಾಣೆಯಾದವರ ಕುರಿತು ಕೇಸುಗಳನ್ನು ಅಪರಾಧ ದಂಡ ಸಂಹಿತೆಯಂತೆ ನೋಡಬೇಕೋ ಬೇಡವೋ ಎಂದು ನೋಡಿಕೊಂಡು ಕೂರುವುದು ಬೇಡವೆಂದು ಪೊಲೀಸರಿಗೆ ಕೋರ್ಟ್ ಸಾಕಷ್ಟು ಸಾರಿ ಎಚ್ಚರಿಸಿತ್ತು. “ದೂರು ಪಡೆದು ರಶೀದಿ ಕೊಟ್ಟು ಕಳಿಸುವಷ್ಟಕ್ಕೆ ಕೆಲಸ ಮುಗಿಯಿತೆಂದು ಸುಮ್ಮನಾಗುವುದಲ್ಲ, ಎಫ್‌ಐಆರ್ ದಾಖಲಿಸಬೇಕು. ಕೇಸು ಮುಂದುವರಿಸಬೇಕು,” ಎಂಬುದು ಕೋರ್ಟ್ ಚಾಟಿ.
ತಮಿಳುನಾಡು ಪೊಲೀಸರು ವಿರುದ್ಧ ಚಾಟಿ ಬೀಸಿದ ನಂತರ, ಕಾಣೆಯಾದವರ ಕುರಿತು ಕೇಸರು ದಾಖಲಿಸುವ ಮತ್ತು ಆ ಕೇಸುಗಳನ್ನು ನಿಭಾಯಿಸುವ ವಿಷಯದಲ್ಲಿ ಕೆಲವು ಅತ್ಯಗತ್ಯ ಬದಲಾವಣೆ ಆಗಬೇಕೆಂದು ಅಭಿಪ್ರಾಯಪಟ್ಟ ಕೋರ್ಟ್, ಕೇಂದ್ರ ಕಾನೂನು ಸಚಿವಾಲಯ, ತಮಿಳುನಾಡು ಗೃಹ ಇಲಾಖೆ, ತಮಿಳುನಾಡು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಈ ಕೆಳಗಿನ ಪ್ರಶ್ನೆಗಳನ್ನು ನೋಟಿಸ್ ರೂಪದಲ್ಲಿ ಕಳಿಸಲು ಸೂಚಿಸಿದೆ.
- ಇಂಡಿಯನ್ ಪೀನಲ್ ಕೋಡ್ (ಐಪಿಸಿ) ಅಡಿ, ಕಾಣೆಯಾದವರ ಕುರಿತ ಪ್ರಕರಣಗಳ ತನಿಖೆಗೆ ಅವಕಾಶ ಇದೆಯೇ?
- ಐಪಿಸಿಯಲ್ಲಿ ಆ ಅವಕಾಶ ಇಲ್ಲವಾದರೆ ಮತ್ಯಾವ ಕಾಯ್ದೆಯಲ್ಲಿ ಅದಕ್ಕೆ ಅವಕಾಶವಿದೆ?
- ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ, ಕಾಣೆಯಾದವರ ಕುರಿತ ಪ್ರಕರಣಗಳಲ್ಲಿ ತನಿಖೆ ಕಡ್ಡಾಯ ಮಾಡುವಂತೆ ಅವಕಾಶ ಕಲ್ಪಿಸಬಾರದೇಕೆ?
- ಸಿಆರ್‌ಪಿಸಿ ಸೆಕ್ಷನ್ 174ನ್ನು ಸರ್ಕಾರ ಯಾವಾಗ ತಿದ್ದುಪಡಿ ಮಾಡಬಹುದು?
- ತಮಿಳುನಾಡು ಮತ್ತು ಇಡೀ ದೇಶದಲ್ಲಿ ಇದುವರೆಗೂ ಎಷ್ಟು ನಾಪತ್ತೆ ಪ್ರಕರಣ ದಾಖಲಾಗಿವೆ?
- ಇದುವರೆಗೂ ಎಷ್ಟು ಮಂದಿಯನ್ನು ಸಂರಕ್ಷಿಸಲಾಗಿದೆ ಅಥವಾ ಪತ್ತೆ ಮಾಡಲಾಗಿದೆ?
- ಎಷ್ಟು ಕೇಸುಗಳನ್ನು ಮುಕ್ತಾಯಗೊಳಿಸಲಾಗಿದೆ?
- ಎಷ್ಟು ಕೇಸುಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿದೆ?
- ಕಳೆದ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಎಷ್ಟು ಕೇಸುಗಳಲ್ಲಿ ಸಿಎಸ್‌ಆರ್ (ಕಮ್ಯುನಿಟಿ ಸರ್ವಿಸ್) ಎಂದು ದಾಖಲಿಸಲಾಗಿದೆ?
- ಸಿಎಸ್‌ಆರ್ ದಾಖಲಾದ ನಂತರದಲ್ಲಿ ಎಷ್ಟು ಕೇಸುಗಳನ್ನು ಮುಕ್ತಾಯ ಮಾಡಲಾಗಿದೆ?
- ಎಷ್ಟು ಕೇಸುಗಳು ಸಿಎಸ್‌ಆರ್‌ನಿಂದ ಎಫ್‌ಐಆರ್ ಆಗುವ ಹಂತಕ್ಕೆ ತಲುಪಿ ತನಿಖೆ ನಡೆದಿದೆ?