ಕೊಡಗು ಜಿಲ್ಲೆ ಅಸಂಖ್ಯಾತ ವನ್ಯಜೀವಿಗಳ ತವರೂರು. ಇಂದು ಕೊಡಗು ಹೊಂದಿರುವ ವಿಫುಲ ಅರಣ್ಯ ಸಂಪತ್ತಿನ ಕಾರಣದಿಂದಾಗಿ ಸಹಸ್ರಾರು ಪ್ರಾಣಿಗಳೂ ಬದುಕುತ್ತಿವೆ. ಈ ವನ್ಯ ಜೀವಿಗಳಲ್ಲಿ ಆನೆಗಳಿಗೆ ಮೇವು ವಿಪುಲವಾಗಿ ಬೇಕು, ಮತ್ತು ಅಷ್ಟೊಂದು ಮೇವು ಉತ್ಪಾದಿಸುವ ಅರಣ್ಯವೂ ಬೇಕು. ಆದರೆ ಅರಣ್ಯ ನಾಶ ,ಜಲಮೂಲಗಳ ನಾಶ ಮತ್ತು ಮೇವಿನ ಕೊರತೆಯಿಂದಾಗಿ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಸಂತತಿಯೂ ಹೆಚ್ಚಿರುವುದರಿಂದ ಮಾನವ-ಕಾಡಾನೆ ಸಂಘರ್ಷ ಉಂಟಾಗಿದೆ.
ಕೊಡಗಿನಲ್ಲಂತೂ ಕಾಡಾನೆಗಳ ಹಾವಳಿ ಇತ್ತೀಚೆಗೆ ತಾರಕಕ್ಕೇರಿದೆ ಎಂದು ಅರಣ್ಯ ಇಲಾಖೆ ನೀಡಿರುವ ಅಂಕಿ ಅಂಶಗಳೇ ಖಚಿತಪಡಿಸಿವೆ. ಕಾಡಾನೆಗಳ ಹಿಂಡು ಊರಿನೊಳಗೆ ಪ್ರವೇಶಿಸಿ ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡುತ್ತವೆ. ಇಷ್ಟು ಬೆಳೆ ಬೆಳೆಯಲು ರೈತ ವರ್ಷವಿಡೀ ಕಷ್ಟಪಟ್ಟಿರುತ್ತಾನೆ.
ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ ಕಾಡಾನೆಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 74. ಜಿಲ್ಲೆಯಲ್ಲಿ 2008-09 ರಲ್ಲಿ 7 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದರು. 2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲೇ ಗರಿಷ್ಟ ಪ್ರಮಾಣದ ಒಟ್ಟು 13 ಸಾವುಗಳು ಸಂಭವಿಸಿವೆ. ಮೃತಪಟ್ಟವರ ಸಂಖ್ಯೆ ಇಷ್ಟಾಗಿದ್ದರೆ ಕಾಡಾನೆಗಳ ದಾಳಿಯಿಂದ ಅಂಗವೈಕಲ್ಯಕ್ಕೊಳಗಾದವರ ಸಂಖ್ಯೆಯೂ ನೂರಕ್ಕೂ ಅಧಿಕ. ಕೊಡಗಿನ ಶೇಕಡಾ 50 ರಷ್ಟು ಕಾಫಿ ತೋಟ ಮತ್ತು ಕೃಷಿ ಪ್ರದೇಶಗಳು ಇಂದು ಕಾಡಾನೆ ಹಾವಳಿಗೆ ಒಳಗಾಗಿವೆ.
ಕಳೆದ 5 ವರ್ಷಗಳ ಹಿಂದೆ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಪ್ಪಿಸಲೆಂದೇ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಂಡು ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್ ಆರ್ ಟಿ) ಸ್ಥಾಪಿಸಿತು. ಈ ತಂಡಗಳು ಕಾಡಾನೆಗಳ ಹಾವಳಿ ಅಧಿಕವಾಗಿರುವ ಸ್ಥಳಗಳಲ್ಲಿ ರಾತ್ರಿ ಊರಿನಳಗೆ ನುಗ್ಗದಂತೆ ಕಾವಲು ಕಾಯುವುದು, ಒಂದು ವೇಳೆ ನುಗ್ಗಿದರೆ ಸುಡುಮದ್ದುಗಳ ಮೂಲಕ ಕಾಡಿನೊಳಕ್ಕೆ ಅಟ್ಟುವ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಿರುವ ಸಿದ್ದಾಪುರ, ತಿತಿಮತಿ, ಶ್ರೀಮಂಗಲ, ಮಾಲ್ದಾರೆ ಮುಂತಾದೆಡೆಗಳಲ್ಲಿ ಆರ್‌ಅರ್‌ಟಿ ಕಾರ್ಯನಿರ್ವಹಿಸುತಿದ್ದು, 50 ಕ್ಕೂ ಅಧಿಕ ಸಿಬ್ಬಂದಿಗ ಹೊಂದಿದೆ.

ಅದರೆ ಅರ್‌ಅರ್‌ಟಿ ಕೂಡ ಕಾಡಾನೆಗಳು ಊರಿನೊಳಗೆ ನುಗ್ಗುವುದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗಿಲ್ಲ. ಕೆಲವೆಡೆ ಕಾಡಾನೆಗಳು ಕಾಫಿ ತೋಟವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡು ಬಿಟ್ಟಿವೆ. ಸಿದ್ದಾಪುರ ಟಾಟಾ ಕಾಫಿ ತೋಟದ ಕರಡಿಬೆಟ್ಟ ವಿಭಾಗದಲ್ಲಿ ಹೀಗೇ ಆಗಿದ್ದು ಹಗಲು ಹೊತ್ತಿನಲ್ಲಿ ಕಾರ್ಮಿಕರು ಕೆಲಸ ಮಾಡಲೂ ಭಯಪಡುತ್ತಿದ್ದಾರೆ. ಕಳೆದ 3 ತಿಂಗಳ ಹಿಂದೆ ಹಾಡ ಹಗಲೇ ಒಂಟಿ ಸಲಗವೊಂದು ಕಾರ್ಮಿಕನೊಬ್ಬನನ್ನು ತುಳಿದು ಕೊಂದಿತ್ತು.
ಕಾಡಾನೆಗಳ ಹಾವಳಿ ಅಧಿಕವಾಗಿರುವ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅರಣ್ಯ ಇಲಾಖೆ ಮೊದಲು ಮಾನವ ಪ್ರಾಣ ಹಾನಿಗೆ ಪರಿಹಾರವಾಗಿ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುತಿತ್ತು ಇದೀಗ ಅದನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿದೆ. ಆದರೆ ಉಪಟಳದಿಂದ ಬೇಸತ್ತಿರುವ ಗ್ರಾಮಸ್ಥರು ಆನೆಯೊಂದನ್ನು ನಾವೇ ಕೊಂದು ಸರ್ಕಾರಕ್ಕೇ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಸ್ವೀಕರಿಸುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರತಿಧ್ವನಿಯೊಂದಿಗೆ ಮಾತನಾಡಿದ ಸಿದ್ದಾಪುರ ಸಮೀಪದ ಮಾಲ್ದಾರೆಯ ಕಾಫಿ ಬೆಳೆಗಾರ ಮೋಹನ್ ಅಯ್ಯಪ್ಪ, “ಒಂದೇ ರಾತ್ರಿಯಲ್ಲಿ ಬಾಳೆ, ತೆಂಗು , ಕಾಫಿ ಎಲ್ಲವನ್ನೂ ನಾಶ ಮಾಡುತ್ತಿವೆ ಈ ಆನೆಗಳು. ನಮಗೂ ಇದನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಇನ್ನು ನಾವು ದಯಾ ಮರಣಕ್ಕೆ ಅರ್ಜಿ ಹಾಕಬೇಕಿದೆ ಎಂದು,’’ ದುಗುಡ ವ್ಯಕ್ತಪಡಿಸಿದರು. ತಮ್ಮ ನಾಲ್ಕು ಎಕರೆ ಕಾಫಿ ತೋಟದಲ್ಲಿ ಅರ್ಧಕ್ಕರ್ದ ಕಾಫಿ ಗಿಡಗಳು ಕಾಡಾನೆಗಳ ಹಾವಳಿಗೆ ತುತ್ತಾಗಿಯೇ ನಾಶವಾಗಿ ಹೋಗಿವೆ ಎಂದು ಹೇಳಿದ ಅವರು ಅರಣ್ಯ ಇಲಾಖೆ ನೀಡುವ ಅರೆ ಕಾಸಿನ ಪರಿಹಾರಕ್ಕೆ ನೂರಾರು ಕಂಬ ಸುತ್ತಬೇಕಿದೆ ಎಂದರು. ಆನೆಗಳು 50 ಸಾವಿರ ರೂಪಾಯಿಯಷ್ಟು ಬೆಳೆ ನಾಶ ಮಾಡಿದ್ದರೆ ಅದನ್ನು ಕಾಫಿ ಮಂಡಳಿಯವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ನಷ್ಟದ ಅಂದಾಜು ಮಾಡಿಸಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕಿದೆ. ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಮೂರು- ನಾಲ್ಕು ಸಾವಿರ ಪರಿಹಾರ ನೀಡುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮತ್ತೋರ್ವ ಕಾಫಿ ಬೆಳೆಗಾರ ಶ್ರೀಮಂಗಲದ ಹರೀಶ್ ಮಾದಪ್ಪ ಅವರು ಪ್ರತಿಧ್ವನಿ ಜತೆ ಮಾತನಾಡಿ ತಿತಿಮತಿ -ನೋಕ್ಯದಲ್ಲಿ ಕಾಡಾನೆಗಳ ಹಾವಳಿ ತಡೆಗಾಗಿ ಅರಣ್ಯ ಇಲಾಖೆ 4.5 ಕಿಮೀ ಉದ್ದಕ್ಕೂ ಅರಣ್ಯದ ಅಂಚಿಗೆ ರೈಲ್ವೇ ಹಳಿಗಳ ಬೇಲಿ ನಿರ್ಮಿಸಿದೆ. ಆದರೆ ನಿರ್ಮಿಸಿದ ಎರಡೇ ವಾರದಲ್ಲಿ ಕಾಡಾನೆಗಳು ಅವುಗಳನ್ನು ಮುರಿದು ಹಾಕಿ ಊರಿನೊಳಗೆ ಬಂದಿವೆ ಎಂದರು. ಇಲ್ಲಿ ಬರೇ ಕಾಡಾನೆಗಳ ಕಾಟವಲ್ಲ ಜತೆಗೇ ಹುಲಿ ಕಾಟವೂ ಇದೆ. ನಾಗರ ಹೊಳೆ ಅರಣ್ಯದಂಚಿನಲ್ಲಿ ಶ್ರೀಮಂಗಲ ಇರುವುದರಿಂದ ಮುದಿಯಾದ ಬೇಟೆಯಡಲು ಶಕ್ತಿ ಇಲ್ಲದ ಹುಲಿಗಳು ಊರಿನೊಳಗೆ ನುಗ್ಗಿ ಹಸುಗಳನ್ನು ಕೊಲ್ಲುತ್ತಿವೆ ಎಂದು ಹೇಳಿದರು.
ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅದ್ಯಕ್ಷ ಕರ್ನಲ್ (ನಿವೃತ್ತ) ಚೆಪ್ಪುಡೀರ ಮುತ್ತಣ್ಣ ಕಾಡಾನೆಗಳ ಸಂತತಿ ಇಂದು ಹೆಚ್ಚಾಗಿದ್ದು ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದಲ್ಲೇ ಸುಮಾರು 10 ಸಾವಿರ ಆನೆಗಳಿದ್ದು ಇದು ಏಷ್ಯಾದಲ್ಲೇ ಅತ್ಯಧಿಕ ಎಂದರು. “ಕಾಡಾನೆಗಳ ಓಡಾಟಕ್ಕೆ ಒಂದು ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಸಂಪರ್ಕ ಕಲ್ಪಸಲು ಎಲಿಫೆಂಟ್ ಕಾರಿಡಾರ್ ನಿರ್ಮಿಸಿದರೆ ಮಾತ್ರ ಕಾಡಾನೆ ಹಾವಳಿ ಕಡಿಮೆ ಆಗಲಿದೆ. ಈ ಮೂರೂ ರಾಜ್ಯಗಳಲ್ಲಿ ಕಾರಿಡಾರ್ ನಿರ್ಮಿಸಲು 12 ಸಾವಿರ ಚದರ ಕಿಲೋಮೀಟರ್ ಅರಣ್ಯ ಇದೆ. ಈ ಕುರಿತು ಸೊಸೈಟಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದೆ. ಕಾಡಾನೆ ಹಾವಳಿ ಕಡಿಮೆ ಆಗಬೇಕಾದರೆ ಆನೆಗಳಿಗೆ ಬೇಕಾದ ಅರಣ್ಯ ಮತ್ತು ಮೇವು ಅರಣ್ಯದಲ್ಲೇ ಅಭಿಸುವಂತೆ ಮಾಡಬೇಕು. ಅರಣ್ಯದ ಸುತ್ತಲೂ ಕಂದಕ ನಿರ್ಮಿಸೋದು ಮತ್ತು ರೈಲ್ವೇ ಬೇಲಿ ಹಾಕುವುದರಿಂದ ಕಾಡಾನೆಗಳ ಹಾವಳಿ ಕಡಿಮೆ ಅಗುವುದಿಲ್ಲ,’’ ಎಂದು ಅವರು ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆ ಇಂದು ಬರೇ ಕಾಡಾನೆಗಳನ್ನು ನಿರ್ವಹಿಸುತ್ತಿದೆ, ಆದರೆ ಅರಣ್ಯವನ್ನು ಸರಿಯಾಗಿ ನಿರ್ವಹಿಸಿ ಆನೆಗಳ ಅವಶ್ಯಕತೆಗೆ ತಕ್ಕಂತೆ ಗಿಡ , ಸೊಪ್ಪು , ಹುಲ್ಲು ಬೆಳೆಸುವ ಅವಶ್ಯಕತೆ ಇದೆ ಎಂದೂ ಅವರು ಹೇಳಿದರು.
ಒಟ್ಟಿನಲ್ಲಿ ಕೊಡಗಿನ ರೈತರು ಕಾಡಾನೆಗಳೊಂದಿಗೆ ವರ್ಷವಿಡೀ ಜೂಟಾಟ ಆಡಿಕೊಂಡೇ ನೆಮ್ಮದಿ ಕಳೆದುಕೊಂಡು ಬದುಕುವ ಅನಿವಾರ್ಯತೆ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತ ಗಮನ ಹರಿಸುವವೇ ?